ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ಬಹುಭಾಷಾ ನಟ ಕಿಶೋರ್ ಕುಮಾರ್, ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದು, “ನೀವು ಸಾರ್ವಜನಿಕ ಜೀವನಕ್ಕೆ ಮಾತ್ರವಲ್ಲ, ಮನುಷ್ಯನಾಗಿರಲೇ ಅಯೋಗ್ಯ” ಎಂದು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಮೋದಿಯವರ ವಿರುದ್ಧ ಪೋಸ್ಟ್ ಹಾಕುತ್ತಿರುವ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧ ವ್ಯಕ್ತಿಗಳನ್ನು ಪಡೆದುಕೊಂಡಿರುವ ನಟ ಕಿಶೋರ್, ಮತ್ತೊಮ್ಮೆ ಬಹಳ ಖಾರವಾಗಿ ಪೋಸ್ಟ್ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.
ಪ್ರಧಾನಿ ಮೋದಿ ಸಮಾವೇಶ ಹಾಗೂ ಸಂದರ್ಶನದಲ್ಲಿ ಆಡಿದ ಮಾತುಗಳ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಬಹುಭಾಷಾ ನಟ, “ಮೋದಿ ಮನುಷ್ಯನಾಗಿರಲು ಅಯೋಗ್ಯ” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ‘ಹಿಂದೂ ಧರ್ಮದ ಮಾನವನ್ನು ವಿಶ್ವದಲ್ಲಿ ಹರಾಜು ಹಾಕಿದ ವ್ಯಕ್ತಿ ಮೋದಿ” ಎಂದು ಕಿಶೋರ್ ಕುಮಾರ್ ಸುದೀರ್ಘ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
“ನಾನು ಹಿಂದೂ ಹೆಸರನ್ನೂ ಹೇಳಿಲ್ಲ, ಮುಸಲ್ಮಾನರನ್ನೂ ಹೆಸರಿಸಿಲ್ಲ. ಯಾವೊತ್ತಿಂದ ನಾನು ಹಿಂದೂ-ಮುಸ್ಲಿಮ್ ರಾಜಕಾರಣ ಮಾಡಲು ತೊಡಗುತ್ತೇನೆಯೋ ಅಂದಿನಿಂದ ನಾನು ಸಾರ್ವಜನಿಕ ಬದುಕಿನಲ್ಲಿರುವ ಅರ್ಹತೆಯೇ ನನಗಿಲ್ಲ” ಎಂದು ಮೇ 14ರ ಸಂದರ್ಶನದಲ್ಲಿ ತಿಳಿಸಿದ್ದರು. ಆದರೆ ಮರುದಿನ ನಡೆದಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ, ಮತ್ತದೇ ಹಿಂದೂ-ಮುಸ್ಲಿಮ್ ಭಾಷಣಗೈದಿದ್ದರು. ಈ ವಿಡಿಯೋವನ್ನು ಕಿಶೋಕ್ ಹಂಚಿಕೊಂಡಿದ್ದಾರೆ.
ಕಿಶೋರ್ ಕುಮಾರ್ ಪೋಸ್ಟ್‌ನಲ್ಲಿ ಏನಿದೆ?
“ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ, ಮನುಷ್ಯನಾಗಿರಲೇ ಅಯೋಗ್ಯ. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವ ಕಂಡ ಅತೀ ಸುಳ್ಳುಗಾರ, ಅತೀ ಪುಕ್ಕಲು, ಅತೀ ನಿಕೃಷ್ಠ, ಅತೀ ದುರಹಂಕಾರಿ, ಅತೀ ಕ್ರೂರ, ಅತೀ ಮೂರ್ಖ, ಅತೀ ಸಂವೇದನಾಹೀನ, ಅತೀ ಘನತೆಹೀನ, ಅತೀ ಆತ್ಮರತಿಲೋಲ, ಅತೀ ಜನವಿರೋಧಿ, ಅತೀ ಹೊಲಸು ನಾಲಿಗೆಯ, ಅತೀ ಸಂಕುಚಿತ ದೃಷ್ಟಿಯ ಅತೀ ಅಪಾಯಕಾರಿ ” ಎಂದು ಮೋದಿ ಅವರನ್ನು ಟೀಕಿಸಿದ್ದಾರೆ.
View this post on Instagram
“ಅತೀ ಭ್ರಷ್ಟ ನಿರಂಕುಶ ಪ್ರಭುತ್ವವಾದಿ ಎಂದು ಆಧಾರಸಹಿತ ಆ ಮನುಷ್ಯನೇ (?) ಹೇಳಿಬಿಡುತ್ತಾನೆ ಬೇಕಿದ್ದರೆ ಅವನ ನಡೆ ನುಡಿಯನ್ನು ನೋಡಿ. 10 ವರ್ಷ ಅಧಿಕಾರವಿದ್ದೂ ಮಾಡಿದ ಕೆಲಸದ ಬಗ್ಗೆ, ರೈತರ, ಸೈನಿಕರ, ಮಹಿಳೆಯರ, ಮಕ್ಕಳ, ಆಸ್ಪತ್ರೆ ಕಾಲೇಜುಗಳ ಅಭಿವೃದ್ಧಿಯ ಬಗ್ಗೆ ಮಾತಾಡಲು ಯೋಗ್ಯತೆಯಿಲ್ಲದೇ. ಬರೀ ಸುಳ್ಳು, ದ್ವೇಷ ಕಾರುವುದು.. ಮುಸ್ಲಿಂ ತೆರಿಗೆಯಂತೆ , ನುಸುಳುಕೋರರಂತೆ, ಪಾಕಿಸ್ಥಾನವಂತೆ, ರೂಮು ಕಿತ್ಕೊತಾರಂತೆ, ಎಮ್ಮೆ ಕಿತ್ಕೊತಾರಂತೆ, ಸೈಕಲ್ ಕಿತ್ಕೊತಾರಂತೆ, ವೋಟು ಜಿಹಾದ್ ಅಂತೆ ಮಂದಿರಕ್ಕೆ ಬೀಗವಂತೆ… ಬರೀ ತಲೆಬುಡವಿಲ್ಲದ ಮಾತುಗಳು. ಮುಸ್ಲಿಂ ಭಯೋತ್ಪಾದಕರು ಇಸ್ಲಾಂನ ಮಾನ ಕಳೆದಂತೆ ಅಧಿಕಾರಕ್ಕಾಗಿ ಹಿಂದೂ ಬಣ್ಣ ಬಳಿದುಕೊಂಡ ಈ ಢೋಂಗಿ ಮನುಷ್ಯ ಹಿಂದೂ ಧರ್ಮದ ಮಾನ ವಿಶ್ವದಾದ್ಯಂತ ಮೂರು ಕಾಸಿಗೆ ಹರಾಜು ಹಾಕಿಬಿಟ್ಟ’ ಎಂದು ಕಿಶೋರ್ ಜರೆದಿದ್ದಾರೆ.
ಸದ್ಯ ಕಿಶೋರ್ ಕುಮಾರ್ ಅವರ ಪೋಸ್ಟ್ ಅನ್ನು ಹಲವು ಮಂದಿ ಹಂಚಿಕೊಂಡಿದ್ದಾರೆ. ಅಲ್ಲದೇ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಇದಕ್ಕೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬ, “ಸುಳ್ಳುಬುರುಕ. ಗಟಾರದಲ್ಲಿ ಗ್ಯಾಸ್ ಉತ್ಪತ್ತಿ, ಯಾವುದೋ ಅಂಧಕಾಲದಲ್ಲಿ ಡಿಜಿಟಲ್ ಕ್ಯಾಮೆರಾ, ರೈಲ್ವೆ ಸ್ಟೇಷನ್‌ನಲ್ಲಿ ಟೀ ಮಾರುವಿಕೆ , ಯಪ್ಪಾ ಒಂದಾ ಎರಡಾ, ಉದ್ಯೋಗ ಕೇಳಿದ್ರೆ ಪಕೋಡಾ ಮಾರಿ, ರೈತರ ಪರ ಅನ್ನೋದು, ಅದೇ ರೈತರು ಬರಬಾರದು ಅಂತ ಮುಳ್ಳು ತಂತಿ ಹಾಕಿಸಿ, ಟಿಯರ್ ಗ್ಯಾಸ್ ಹಾಕೋದು. ಎಲ್ಲರೂ ಒಂದೇ ಅನ್ನೋದು, ಬಳಿಕ ಅನ್ಯಕೋಮಿನ ಮೇಲೆ ದ್ವೇಷ ಭಾಷಣ ಮಾತಾಡೋದು” ಎಂದು ತಿಳಿಸಿದ್ದಾರೆ.
“ಮೋದಿ ತುಂಬಾ ಕನ್‌ಫ್ಯೂಸ್ ಆಗಿದ್ದಾರೆ. ನಾನೆಂದೂ ಇವರಂಥ ಕೊಳಕು ವ್ಯಕ್ತಿಯನ್ನು ನೋಡಿಲ್ಲ. ಭಾರತಕ್ಕಾಗಿ ನೀವು ನಿಂತಿರೋದನ್ನು ನೋಡಿ ಖುಷಿಯಾಗುತ್ತಿದೆ. ಹೆಚ್ಚಿನ ಸೆಲೆಬ್ರಿಟಿಗಳು ಇದನ್ನು ಪ್ರಶ್ನೆ ಮಾಡುವ ಧೈರ್ಯ ಹೊಂದಿಲ್ಲ. ಲವ್ ಯು ಸರ್” ಎಂದು ಇನ್ನೊಬ್ಬರು ಕಿಶೋರ್ ಕುಮಾರ್ ಬರಹಕ್ಕೆ ಬೆಂಬಲ ಸೂಚಿಸಿದ್ದರೆ, ಮೋದಿ ಹಾಗೂ ಸಂಘಪರಿವಾರದ ಬೆಂಬಲಿಗರು ವಿರೋಧ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದಾರೆ.
