- ‘ಮಗ್ ಶಾಟ್’ ಫೋಟೋ ಬಿಡುಗಡೆ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
- ಮಾಜಿ ಅಧ್ಯಕ್ಷರ ಬಂಧನ; ಅಮೆರಿಕದ ಇತಿಹಾಸದಲ್ಲೇ ಮೊದಲ ಪ್ರಕರಣ
2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಕ್ರಮ ಎಸಗಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಜಾರ್ಜಿಯಾ ಜೈಲಿನಲ್ಲಿ ಬಂಧಿಸಿ, ಕೂಡಲೇ ಬಿಡುಗಡೆ ಮಾಡಲಾಗಿದೆ.
ಇದು ಅಮೆರಿಕದ ಇತಿಹಾಸದಲ್ಲೇ ಮೊದಲ ಪ್ರಕರಣವಾಗಿದ್ದು, ಬಂಧನದ ಅರ್ಧ ಗಂಟೆಯ ಬಳಿಕ 200,000 ಡಾಲರ್ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.
ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗಾಗಿಸಲು ಇತರೆ 18 ಮಂದಿ ಜತೆ ಸೇರಿಕೊಂಡು ಪಿತೂರಿ ನಡೆಸಿದ್ದರು ಎಂಬ ಆರೋಪ ಟ್ರಂಪ್ ಮೇಲಿದೆ.
ಟ್ರಂಪ್ ಅವರು ಬಂಧನದ ಬಳಿಕ ಅಟ್ಲಾಂಟಾದ ಫುಲ್ಟೋನ್ ಕೌಂಟಿ ಜೈಲಿನಲ್ಲಿ ಸರಿಸುಮಾರು 20 ನಿಮಿಷ ಕಳೆದರು. ಬಳಿಕ ಬಿಡುಗಡೆಯಾಗಿ ಬೆಂಗಾವಲು ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.
ಈ ಪ್ರಕರಣದಲ್ಲಿ ಉಳಿದ ಆರೋಪಿಗಳಂತೆಯೇ ಶರಣಾಗತರಾದ 77 ವರ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಂಧನ ಪ್ರಕ್ರಿಯೆ ವೇಳೆ ‘ಮಗ್ ಶಾಟ್’ (ಭುಜದ ಮೇಲಿನ ಮುಖದ ಚಿತ್ರ) ಫೋಟೋ ತೆಗೆಸಿಕೊಳ್ಳುವಂತಾಗಿದೆ. ಅಮೆರಿಕದ ಇತಿಹಾಸದಲ್ಲಿ ಹಾಲಿ ಅಥವಾ ಯಾವುದೇ ಮಾಜಿ ಅಧ್ಯಕ್ಷರು ಈ ರೀತಿ ಜೈಲಿಗೆ ಹೋಗಿದ್ದು ಹಾಗೂ ಮಗ್ ಶಾಟ್ ಫೋಟೋ ತೆಗೆದಿರುವುದು ಮೊದಲ ಪ್ರಕರಣವಾಗಿದೆ.
‘ಮಗ್ ಶಾಟ್’ ಫೋಟೋವನ್ನು ನಿಯಮಾನುಸಾರ ಪೊಲೀಸರು ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಲ್ಲದೇ, ಸುದೀರ್ಘ ಸಮಯದ ಬಳಿಕ ತನ್ನದೇ ಟ್ವಿಟರ್ ಖಾತೆಯಲ್ಲಿ ಮೊದಲ ಟ್ವೀಟ್ ಮಾಡಿರುವ ಟ್ರಂಪ್ ‘ಮಗ್ ಶಾಟ್’ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಚುನಾವಣಾ ಹಸ್ತಕ್ಷೇಪ! ಎಂದಿಗೂ ಶರಣಾಗಬೇಡಿ!’ ಎಂದು ಒಕ್ಕಣೆ ಕೂಡ ಹಾಕಿದ್ದಾರೆ.
‘ಮಗ್ ಶಾಟ್’ ಫೋಟೋದಲ್ಲಿ ಟ್ರಂಪ್ ಅವರು, ಕಡು ನೀಲಿ ಸೂಟ್, ಬಿಳಿ ಅಂಗಿ ಮತ್ತು ಕೆಂಪು ಟೈ ತೊಟ್ಟಿದ್ದು, ಕ್ಯಾಮೆರಾ ಕಡೆ ಮುಖ ಗಂಟಿಕ್ಕಿಕೊಂಡು ನೋಡುತ್ತಿರುವುದು ಸೆರೆಯಾಗಿದೆ.
ಫುಲ್ಟೋನ್ ಕೌಂಟಿ ಜೈಲಿನಲ್ಲಿ ಟ್ರಂಪ್ ಅವರಿಗೆ ಕೈದಿ ಸಂಖ್ಯೆ ‘PO1135809’ ನೀಡಲಾಗಿತ್ತು. ಅವರ ಎತ್ತರ 6.3 ಅಡಿ, ತೂಕ 97 ಕೆಜಿ ಎಂದು ನಮೂದಿಸಲಾಗಿದ್ದು, ಅವರ ಕೂದಲಿನ ಬಣ್ಣವನ್ನು ಹೊಂಬಣ್ಣ ಅಥವಾ ‘ಸ್ಟ್ರಾಬೆರ್ರಿ’ ಎಂದು ಪೊಲೀಸರು ಉಲ್ಲೇಖಿಸಿದ್ದರು.
ಬಂಧನಗೊಂಡು ಬಿಡುಗಡೆಯಾದ ಬಳಿಕ ಮಾತನಾಡಿದ ಡೊನಾಲ್ಡ್ ಟ್ರಂಪ್, ‘ಇದು ಅಮೆರಿಕಕ್ಕೆ ದುಃಖದ ದಿನ. ಇಲ್ಲಿ ನಡೆದಿರುವುದು ನ್ಯಾಯದ ಅಣಕ. ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಫುಲ್ಟೋನ್ ಕೌಂಟಿ ಜಿಲ್ಲಾ ಅಟಾರ್ನಿ ಫಾನಿ ವಿಲ್ಲಿಸ್ ಅವರು ಕೋರ್ಟ್‌ಗೆ ಶರಣಾಗಲು ಟ್ರಂಪ್ ಹಾಗೂ ಇತರೆ 18 ಮಂದಿಗೆ ಶುಕ್ರವಾರ ಮಧ್ಯಾಹ್ನದ ಗಡುವು ನೀಡಿದ್ದರು. ಈವರೆಗೆ ಟ್ರಂಪ್ ಮತ್ತು ಇತರ 11 ಮಂದಿ ಶರಣಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ.