- ಕೇಂದ್ರ ಸರ್ಕಾರದ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಯಾಗದಂತೆ ಕ್ರಮವಹಿಸಬೇಕು.
- ಗದಗ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸಿಐಟಿಯು ದಿಂದ ಧರಣಿ
ನೈಜ ಸಮಸ್ಯೆಗಳಿಗೆ ಪರಿಹಾರ ಸಿಗುವ ಬದಲಾಗಿ ಕಲ್ಯಾಣ ಮಂಡಳಿಗೆ ಹೊರೆಯಾಗುವ ರೀತಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಘೋಷಿಸಿ ನೂರಾರು ಕೋಟಿ ಕಲ್ಯಾಣ ಮಂಡಳಿ ನಿಧಿಯನ್ನು ದುರುಪಯೋಗ ಮಾಡಿದ್ದಾರೆ ಎಂದು ಕಾರ್ಮಿಕ ಮುಖಂಡ ಮಾರುತಿ ಚಟಗಿ ಆರೋಪಿಸಿದರು.
ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಗದಗ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಧರಣಿಯಲ್ಲಿ ಮಾತನಾಡಿದ ಅವರು, “ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ತಮ್ಮ ಜತೆ ಎರಡು ಬಾರಿ ಚರ್ಚೆ ನಡೆಸಲಾಗಿದೆ. ಇತ್ತೀಚಿಗೆ ಮಂಡಳಿಯ ನೂತನ ಕಾರ್ಯದರ್ಶಿಗಳು ಕೂಡ ವಿಸ್ತೃತವಾದ ಚರ್ಚೆಯನ್ನು ಕಾರ್ಮಿಕ ಪ್ರತಿನಿಧಿಗಳ ಜತೆ ನಡೆಸಿದ್ದಾರೆ. ಆದರೆ ಹಲವು ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿ ಕಟ್ಟಡ ಕಾರ್ಮಿಕರಿಗಾಗಿ ಇರುವ ಎರಡು ಕಾನೂನುಗಳನ್ನು ಎರಡು ಕಾರ್ಮಿಕ ಸಂಹಿತೆಗಳಲ್ಲಿ ಕಡಿತಗೊಳಿಸಿದೆ. ಇದರಿಂದಾಗಿ ಭವಿಷ್ಯದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿ, ಕೆಲಸಗಳ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಯಾಗದಂತೆ ಕ್ರಮವಹಿಸಬೇಕಿದೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ ? ಗದಗ | ನೀರು, ಕರೆಂಟ್ ಕೇಳಿದ್ರ, ನಿಮ್ಜಾಗ ಎಲ್ಲೈತಿ ಅಂತ ಹೇಳ್ತಾರ; ಅಲೆಮಾರಿಗಳ ಗೋಳು ಕೇಳೋರಾರು?
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಸಂಘಟನೆಯ ಮುಖಂಡರಾದ ಮುತ್ತಪ್ಪ ಚಲವಾದಿ, ಮೆಹಬೂಬ ಹವಾಲ್ದಾರ್, ಪೀರು ರಾಠೋಡ,ಅಂದಪ್ಪ ಕುರಿ, ಸುಶೀಲಾ ಚಲವಾದಿ, ಫಕ್ಕೀರೇಶ ಹುಳ್ಯಾಳ, ಗರೀಬಸಾಬ ನಮಾಜಿ, ಶಿವರಾಜ ವಸ್ತ್ರದ, ಹನಮಂತ ಮಲ್ಲಾಡದ, ಆಸ್ಕಾರ ಗೋಣಾಳ, ಗಾಳೆಪ್ಪ ಹೊಸಮನಿ, ಮಂಜುನಾಥ ಪವಣ, ನಿಂಗಪ್ಪ ವಡ್ಡರ, ಹನಮಂತ ಗುಂಜಾಳ, ರಾಘವೇಂದ್ರ ಮಾದರ, ನಿಂಗಮ್ಮ ತಡಹಾಳ, ಶಾರದಾ ನಂಜಪ್ಪನವರ, ವಿಜಯಲಕ್ಷ್ಮಿ ಕಟ್ಟಿಗಾರ, ವಿನಾಯಕ ಪವಾರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.