- ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾತನಾಡಿದ್ದ ಸಚಿವರ ಹಳೆಯ ವಿಡಿಯೋ ವೈರಲ್
- ಎಫ್ಐಆರ್ ದಾಖಲಿಸಲು ಪೊಲೀಸರಿಂದ ನಿರಾಸಕ್ತಿ : ದೂರುದಾರೆ ಪಿ. ಯಶೋಧಾ ಆರೋಪ
ನಟ ಉಪೇಂದ್ರ ಅವರು ನೀಡಿದ್ದ ‘ಊರಿದ್ದ ಮೇಲೆ ಹೊಲೆಗೇರಿ ಇರುತ್ತೆ’ ಎಂಬ ಹೇಳಿಕೆ ವಿವಾದ ಸೃಷ್ಟಿಸಿ, ಎರಡು ಎಫ್‌ಐಆರ್ ದಾಖಲಾದ ಸುದ್ದಿಯ ನಡುವೆಯೇ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ವಿರುದ್ಧವೂ ‘ಹೊಲೆಗೇರಿ’ ಪದ ಬಳಕೆಯ ಆರೋಪ ಕೇಳಿ ಬಂದಿದೆ.
‘ಹೊಲೆಗೇರಿ’ ಪದ ಬಳಸುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ತೋಟಗಾರಿಗೆ ಹಾಗೂ ಗಣಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಬಗ್ಗೆ ಈ ದಿನ.ಕಾಮ್ ರಾಜಾಜಿನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, ‘ಹೊಲೆಗೇರಿ ಪದ ಬಳಸಿದ್ದಾರೆ ಎಂದು ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಠಾಣೆಗೆ ದೂರು ನೀಡಲಾಗಿದೆ. ಆದರೆ, ಅವರು ಸಚಿವರಾದ ಕಾರಣ ಅವರ ಮೇಲೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಾಗಿದೆ. ಆದ್ದರಿಂದ ಅವರ ವಿರುದ್ಧದ ದೂರನ್ನು ಪಡೆಯಲಾಗಿದ್ದು, ಅದನ್ನು ವರ್ಗಾವಣೆ ಮಾಡುವ ಬಗ್ಗೆ ಮಾಹಿತಿ ಪಡೆಯಲು ಠಾಣಾಧಿಕಾರಿಗಳು ವಿಧಾನಸೌಧ ಠಾಣೆಗೆ ತೆರಳಿದ್ದಾರೆ’ ಎಂದು ತಿಳಿಸಿದ್ದಾರೆ.
ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಸಕ್ತಿ : ಪಿ. ಯಶೋಧಾ ಆರೋಪ
‘ಮಲ್ಲಿಕಾರ್ಜುನ್ ಅವರು ಹೊಲೆಗೇರಿ ಪದ ಬಳಸಿರುವುದು ನಿಜ. ವಿಡಿಯೋ ದಾಖಲೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲು ಹೋದಾಗ, ಪೊಲೀಸರು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ದೂರುದಾರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿಯ ರಾಜ್ಯಾಧ್ಯಕ್ಷೆ ಪಿ ಯಶೋಧಾ ಆರೋಪಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಅವರು, ‘ಎಫ್ಐಆರ್ ದಾಖಲಿಸಲು ವಿಧಾನಸೌಧ ಠಾಣಾ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನಿಮ್ಮ ದೂರನ್ನು ತೆಗೆದುಕೊಳ್ಳುತ್ತೇವೆ. ಪ್ರಾಥಮಿಕ ತನಿಖೆಯ ನಂತರವಷ್ಟೇ ಎಫ್ಐಆರ್ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಸಚಿವರಿಗೊಂದು, ಜನಸಾಮಾನ್ಯರಿಗೊಂದು ನ್ಯಾಯವೇ? ಆದ್ದರಿಂದ ಎಫ್‌ಐಆರ್ ದಾಖಲಿಸಿಕೊಳ್ಳಬೇಕೆಂಬುದು ನಮ್ಮ ಆಗ್ರಹ. ಒಂದು ವೇಳೆ ಮಾಡದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ತಿಳಿಸಿದ್ದಾರೆ.
ಯಾವಾಗ ನೀಡಿದ್ದ ಹೇಳಿಕೆ?
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ವಿಡಿಯೋ ಸಂದರ್ಶನ ನಡೆಸಿದ್ದರು.
ಈ ಸಂದರ್ಶನದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ನಗರದ ಅಶೋಕ್ ಥಿಯೇಟರ್ ಬಳಿ ನಿರ್ಮಾಣಗೊಂಡಿರುವ ಅಂಡರ್‌ಪಾಸ್ ಬಗ್ಗೆ ಅಭಿಪ್ರಾಯ ಕೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಲ್ಲಿಕಾರ್ಜುನ ಅವರು, “ಹಲವು ಬಾರಿ ನಾನು ಪ್ರಶ್ನೆ ಮಾಡಿದ್ದೆ, ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ಊರನ್ನು ಹೊಲೆಗೇರಿ ಮಾಡಬೇಡಿ ಎಂದು ಹೇಳಿದ್ದೆ” ಎಂದು ಹೇಳಿದ್ದರು.
ಉಪೇಂದ್ರ ಅವರ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ, ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ಹೇಳಿಕೆ ತಿರುಚಿದ್ದಾರೆ’ ಎಂದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಇದು ಸುದ್ದಿಯಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ‘ಈ ಹೇಳಿಕೆಯನ್ನು ತಿರುಚಿದ್ದಾರೆ, ನಾನು ಆ ರೀತಿಯಾಗಿ ಹೇಳಿಲ್ಲ’ ಎಂದು ತಿಳಿಸಿದ್ದಾರೆ.
“ಉಪೇಂದ್ರ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ. ಆ ವಿಡಿಯೋದಲ್ಲಿ ಗಾದೆ ಮಾತನ್ನು ನಾನು ಬಳಸಿಲ್ಲ. ಒಳ್ಳೇಯ ಕೆಲಸ ಮಾಡಿ ಹೊಲಸು ಮಾಡಬೇಡಿ ಎಂದು ಹೇಳಿದ್ದೇನೆ ಅಷ್ಟೇ. ಅದನ್ನು ನೀವು ಮತ್ತು ಸಾಮಾಜಿಕ ಜಾಲತಾಣದಲ್ಲಿ ತಿರುಚಿದ್ದೀರಿ” ಎಂದು ಸಚಿವರು ದಾವಣಗೆರೆಯಲ್ಲಿ ತಿಳಿಸಿದ್ದಾರೆ.