ಹೊಲಗೇರಿ ಇದ್ದ ಕಡೆಗೆ ಊರಿನ ಜನ ಬಂದರೆ ಹೊರತು- ಊರು ಇದ್ದ ಕಡೆ ಹೊಲಗೇರಿ ಎಂದಿಗೂ ಹೋಗಿಲ್ಲ

Date:

ಹೊಲ ಮಾದಿಗರು ಕಟ್ಟಿದ ಸಾಮ್ರಾಜ್ಯ ಬುದ್ಧ ಹೇಳಿದ ಆಸೆಯ ನಿರಾಕರಿಸಿದ ಸಾಮ್ರಾಜ್ಯ - ಬಸವ ಹೇಳಿದ ಕಾಯಕವೇ ಕೈಲಾಸದ ಸಾಮ್ರಾಜ್ಯ ಹಾಗೂ ಬಾಬಾ ಸಾಹೇಬರು ಹೇಳಿದ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಸಮ ಸಂಸ್ಕೃತಿ ಸಿದ್ಧಾಂತದ ಭಾರತದ ನಿಜ ಧರ್ಮ ಸಾಮ್ರಾಜ್ಯ. ಈ ನಿಜ ಧರ್ಮ ಸಾಮ್ರಾಜ್ಯಕ್ಕೆ ಎಂದಿಗೂ ಅಳಿವಿಲ್ಲ. ಅದು ಚಿರನೂತನ

ಇಂತಹ ಮಾನವ ವಿರೋಧಿ, ಧರ್ಮವಿರೋಧಿ, ಆ ಮೂಲಕ ರಾಷ್ಟ್ರ ವಿರೋಧಿ ಗಾದೆಗಳನ್ನು ಸೃಷ್ಟಿ ಮಾಡಿದವರು ಬೇರ್ಯಾರೂ ಅಲ್ಲ ದೇವರು ಹಾಗೂ ಪುರಾಣದ ಹೆಸರಲ್ಲಿ ತೀರ್ಥವನ್ನೇ ತಮ್ಮ ಬಂಡವಾಳವನ್ನಾಗಿಸಿ ಕೊಂಡು, ಆ ಮೂಲಕ ತಮಗೆ ತಾವೇ ಮೇಲ್ಜಾತಿ ಅಥವಾ ಸ್ಪೃಶ್ಯರು ಎಂದು ಸ್ವಘೋಷಿಸಿಕೊಂಡು, ಶತಶತಮಾನಗಳಿಂದ ಪುರಾಣ ನಿಶ್ಚಿತ ಅಜ್ಞಾನದಿಂದ ಕುಂತಲ್ಲೇ ಕುಳಿತು ಹೊಟ್ಟೆ ತುಂಬ ಉಂಡು, ಉಂಡ ಹೊಟ್ಟೆಯನ್ನು ಸವರಿಕೊಂಡು ಮಲಗಿದವರು – ಇವರ ಸ್ವಾರ್ಥ ಸಾಧನೆಗಾಗಿಯೇ ಭಾರತದ ಬಲಿಷ್ಠ ಜನ ವರ್ಗವನ್ನು ಅಜ್ಞಾನದಿಂದ ಮಲಗಿಸಿದವರು ಸೃಷ್ಟಿಸಿದ ಗಾದೆಗಳು ಇವು.

ಹುಟ್ಟದ ಯೋನಿಗಳಿಲ್ಲ- ಮೆಟ್ಟದ ಭೂಮಿಗಳಿಲ್ಲ- ಹಟ್ಟು ಉಣ್ಣದ ವಸ್ತುಗಳಿಲ್ಲ ಎಂಬ ಒಬ್ಬ ಶೂದ್ರ ಸಮುದಾಯದ ಕನಕನ ಮಾತು ಈ ಪಂಡಿತ ಪಾಮರರು ಎಂದು ಸ್ವಾಘೋಷಿಸಿಕೊಂಡಿರುವ ನಿಜ ರೂಪದ ಪಾರಂಪರಿಕ ಅಜ್ಞಾನಿಗಳಿಗೆ ತಿಳಿಯದಿರುವುದೇ ಬಹುದೊಡ್ಡ ದುರಂತ. ಹಾಗೂ ಇದೇ ಭಾರತ ದೇಶದ ಸಾಂಸ್ಕೃತಿಕ ದೌರ್ಬಲ್ಯದ ವಾಸ್ತವ. ಇವರ ಪಾರಂಪರಿಕವಾಗಿ ಮುಚ್ಚಿದ ಕಣ್ಣಿನ ಅಜ್ಞಾನಕ್ಕೆ ಅರಿವು ಮೂಡಿಸಿ ಈ ನೆಲದ ಜನರ ತತ್ವ ಸಿದ್ಧಾಂತಗಳ ಜ್ಞಾನದ ಕಣ್ಣನ್ನು ತೆರೆಸಲು ಕಾಲಕಾಲಕ್ಕೆ ಉದಯಿಸಿದ ಜ್ಞಾನವಂತರಾದ ಬಸವಣ್ಣ – ಬಸವಾದಿ ಶರಣ- ಶರಣಿಯರು, ತತ್ವಪದಕಾರರು, ಸೂಫಿಗಳು, ಸಂತರು ಆ ಮೂಲಕ ಇವರೆಲ್ಲರ ವಾರಸುದಾರರಾಗಿ ಈ ಮಣ್ಣಿನಲ್ಲಿ ಜನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹ, ಚಿಂತನೆ ಹೋರಾಟ ಹಾಗೂ ಭಾರತ ಭಾರತೀಯರಿಗಾಗಿಯೇ ಅವರು ರಚಿಸಿದ ಸ್ವಾತಂತ್ರ್ಯ ಸಮಾನತೆ ಭಾತೃತ್ವ ಹಿನ್ನೆಲೆಯ ಸಂವಿಧಾನದ ಜನಮುಖಿ ಚಿಂತನೆಯ ಜ್ಞಾನದ ತಿರುಳನ್ನೇ ಇವರ ಪಾರಂಪರಿಕವಾಗಿ ಮುಚ್ಚಿದ ಕಣ್ಣಿನಿಂದ ನೋಡುತ್ತಿರುವ ಇವರ ಅಜ್ಞಾನದ ಪಾರಂಪರಿಕ ಅಲಿಖಿತ ಸಂವಿಧಾನದ ಅಂಧಕಾರದಲ್ಲಿ ಇವರನ್ನು ಮುಳುಗಿಸಿದೆ. ಇದಕ್ಕೆ ಕಾರಣ ಇವರು ಲಿಖಿತ ಸಂವಿಧಾನದ ವ್ಯಾಪ್ತಿಗೆ ರಾಷ್ಟ್ರ ಹಾಗೂ ರಾಷ್ಟ್ರದ ಜನರನ್ನು ಅತಿಯಾಗಿ ಪ್ರೀತಿಸುವ ಹಿನ್ನೆಲೆಯಿಂದ ಮುಕ್ತವಾಗಿ ಬಂದರೆ ತಮ್ಮ ಪಾರಂಪರಿಕ ಪಂಡಿತ ಪಾಮರಿಕೆಯ ಹಾಗೂ ಆ ಮೂಲಕ ದೇವರ ಹೆಸರಿನ ಸ್ಪೃಶ್ಯತೆಯ ವಾರಸುದಾರಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಬಹುದೊಡ್ಡ ಆತಂಕವು ಇವರಲ್ಲಿ ಪ್ರತಿಕ್ಷಣ ಕಾಡುತ್ತಿದೆ.

ಊರು ಇದ್ದ ಮೇಲೆ ಹೊಲಗೇರಿ ಇರಬೇಕು… ಎಂಬ ಮಾತು ಗಾದೆ ಮಾತು ಎಂದು ಹೇಳುವವರು ಅನೇಕರಿದ್ದಾರೆ. ವೃತ್ತಿ ಆಧಾರದ ಮೇಲೆ ಗಾದೆಗಳಿವೆ, ಪ್ರಕೃತಿಯ ಆಧಾರದ ಮೇಲೆ ಗಾದೆಗಳಿವೆ, ಬದುಕಿನ ಸಾಧಕ ಬಾಧಕಗಳ ಮಜಲುಗಳನ್ನು ನಿರ್ವಹಿಸುವ ಕುರಿತು ಗಾದೆಗಳಿವೆ ಇದು ಒಪ್ಪಿಕೊಳ್ಳೋಣ. ಆದರೆ ಮನುಷ್ಯನನ್ನೇ ಮನುಷ್ಯನನ್ನಾಗಿ ಕಾಣದ ರೀತಿಯಲ್ಲಿ ಸೃಷ್ಟಿಯಾದ ಗಾದೆಗಳನ್ನು ಯಾರು, ಯಾಕಾಗಿ, ಯಾವ ಸಂದರ್ಭದಲ್ಲಿ ಸೃಷ್ಟಿಸಿದರು ಎಂಬುದನ್ನು ನಾವು ಇಂದು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಉತ್ತರ ನಾನು ತಲೆಯಿಂದ ಹುಟ್ಟಿದವನು, ನೀನು ಪಾದದಿಂದ ಹುಟ್ಟಿದವನು ಎನ್ನುವ ಬಹುದೊಡ್ಡ ಮಾನವ ವಿರೋಧಿ ಅಜ್ಞಾನದ ನೀತಿ ಹಾಗೂ ಆ ನೀತಿ ಆಧಾರದ ಮೇಲೆಯೇ ಅನೈತಿಕವಾಗಿ ಬದುಕು ರೂಪಿಸಿಕೊಂಡವರು ಸೃಷ್ಟಿಸಿದ ಕಟ್ಟುಕಥೆ ಎಂಬುದರ ವಾಸ್ತವವನ್ನು ಅರಿಯಬೇಕಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜ್ಞಾನ ಹಾಗೂ ದುಡಿಮೆಯ ಮೂಲಕ ಊರು ಆ ಮೂಲಕ ರಾಷ್ಟ್ರ ಕಟ್ಟಿದ ಹೊಲೆಯರು, ಪಾರಂಪರಿಕ ಅಂಧಕಾರದ ಅಜ್ಞಾನಿಗಳು ಹೇಳುವ ಹಾಗೆ ಎಂದೆಂದಿಗೂ ಸಹ ಹೊಲಸಿನ ಜನಾಂಗವಲ್ಲ, ಬದಲಿಗೆ ಇಂದು ಅವರು ಕರೆಯುವ ರೀತಿಯಲ್ಲಿ ಅಸ್ಪೃಶ್ಯ ಜನಾಂಗವಲ್ಲ. ಬದಲಿಗೆ ಇವರು ದುಡಿದು ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಊರನ್ನು ಬಲಿಷ್ಠವಾಗಿ ಕಟ್ಟಿದ ಸ್ಪೃಶ್ಯರು ಹಾಗೂ ಬಹುದೊಡ್ಡ ಆಸೆಯನ್ನು ನಿರಾಕರಿಸಿ – ಕಾಯಕ ಹಾಗೂ ಶ್ರಮ ತತ್ವ ಸಿದ್ಧಾಂತದ ಪಾಲನೆಯ ಮೂಲಕ ಬಲಿಷ್ಠ ರಾಷ್ಟ್ರವನ್ನು ಕಟ್ಟಿದವರು. ಏಕೆಂದರೆ ಇವರು ತಮ್ಮ ಸಾಧನೆಗಾಗಿ ಸಾಮ್ರಾಜ್ಯವನ್ನು ಕಟ್ಟಿದರೂ ಸಹ ನಾವು ಕಟ್ಟಿ ಬೆಳೆಸಿದವು ಎಂದು ಹೇಳಿಕೊಳ್ಳಲೇ ಇಲ್ಲ- ಹಾಗೆಯೇ ತಾವು ತಮ್ಮಂತೆ ಶ್ರಮದಿಂದ ಕಟ್ಟಿದ ಸಾಮ್ರಾಜ್ಯವನ್ನು ಅಧರ್ಮದ ಕುತಂತ್ರದ ಸ್ವಾರ್ಥಪರ ಸಾಧನೆಗಾಗಿ ಅಳಿಯಲಿಲ್ಲ.

ಹೊಲ ಮಾದಿಗರು ಕಟ್ಟಿದ ಸಾಮ್ರಾಜ್ಯ ಬುದ್ಧ ಹೇಳಿದ ಆಸೆಯ ನಿರಾಕರಿಸಿದ ಸಾಮ್ರಾಜ್ಯ – ಬಸವ ಹೇಳಿದ ಕಾಯಕವೇ ಕೈಲಾಸದ ಸಾಮ್ರಾಜ್ಯ ಹಾಗೂ ಬಾಬಾ ಸಾಹೇಬರು ಹೇಳಿದ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಸಮ ಸಂಸ್ಕೃತಿ ಸಿದ್ಧಾಂತದ ಭಾರತದ ನಿಜ ಧರ್ಮ ಸಾಮ್ರಾಜ್ಯ. ಈ ನಿಜ ಧರ್ಮ ಸಾಮ್ರಾಜ್ಯಕ್ಕೆ ಇಂದಿಗೂ ಅಳಿವಿಲ್ಲ. ಅದು ಚಿರನೂತನ.

ಊರು ಇದ್ದ ಮೇಲೆ ಹೊಲಗೇರಿ ಇರಬೇಕು- ಊರು ಹೊಲಗೇರಿ ಒಂದ್ ಮಾಡಕ್ಕಾಗುತ್ತಾ..!

ಹೀಗೆ ಹೇಳುವ ಮೂರ್ಖರಿಗೆ ಇವರು ಹೇಳಿಕೊಳ್ಳುವ ವೈದಿಕರು ಹಾಗೂ ಪ್ರಬಲ ಕೋಮಿನ ಜನ ವರ್ಗದವರೇ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ವೈಭವವಾಗಿ ವಾಸಿಸುವ ಊರನ್ನು- ಊರಿನಲ್ಲಿರುವ ಹೊಲಗೇರಿಯ ಜನರ ಬೆವರಿನಿಂದ ನಿರ್ಮಾಣ ಮಾಡಿಸಿಕೊಂಡಿದ್ದು ಎಂಬ ಸಣ್ಣ ಅರಿವು ಇಲ್ಲದಿರುವುದು ಇವರ ಪಾರಂಪರಿಕ ಧಾರ್ಮಿಕ ಹಿನ್ನೆಲೆಯ ಜಾತಿಯ ಅಜ್ಞಾನಕ್ಕೆ ಹಿಡಿದ ಕೈಗಡಿಯಾಗಿದೆ. ಧರ್ಮದ ಅಮಲು ಹಾಗೂ ಜಾತಿಯ ಅಫೀಮು ಪಾರಂಪರಿಕವಾಗಿ ಹೆಚ್ಚಾದಾಗ ಬುದ್ಧಿ ಸೀಮಿತವಿಲ್ಲದೆ ಅಜ್ಞಾನಕ್ಕೆ ಗುರಿಯಾಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.

ಇವರು ಸೃಷ್ಟಿಸಿದ ಧರ್ಮಪ್ರಭುತ್ವದ ಸಂಕೋಲೆಯಲ್ಲಿ ಸಿಲುಕಿ ಇವರ ಆಳ್ ಮಕ್ಕಳಾಗಿ – ತೊತ್ತುಗಳಾಗಿ- ಇಟ್ಟಿಬಿಟ್ಟಿ ಚಾಕ್ರಿ ಮಾಡುವವರಾಗಿ – ಇವರ ಮನೆತನದ ಪಾರಂಪರಿಕ ಜೀತದಾಳುಗಳಾಗಿ ಈ ರಾಷ್ಟ್ರ ನನ್ನದು ಎನ್ನುವ ಏಕೈಕ ಕಾರಣಕ್ಕಾಗಿ, ಹಾಗೂ ನಾವು ದುಡಿಯದೇ ಯಾರ ಅಂಗಿನಲ್ಲೂ ಬದುಕಬಾರದು ಎಂಬ ಪಾರಂಪರಿಕ ಛಲದಿಂದಾಗಿ ಯಾವ ಫಲಾಪೇಕ್ಷೆಯನ್ನು ಬಯಸದೆ ದುಡಿದು – ತಮ್ಮ ಮೂಳೆಗಳನ್ನೇ ಊರು ಹಾಗೂ ಅಗ್ರಹಾರದ ಮನೆಗಳ ಹೊಸಲಿನ ಹಸಿದು ತೋರಣವನ್ನಾಗಿ ಕಟ್ಟಿ ತಂಗೊಳಿಸುವಂತೆ ಮಾಡಿದರು. ಊರಿನಲ್ಲಿ ವಾಸಿಸುವವರು ಎಂದು ಮೆರೆಯುತ್ತಿರುವ ಅಜ್ಞಾನಿಗಳನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಶ್ರೀಮಂತರಾಗಿ ಮಾಡಿಸಿದ್ದು ಇದೆ ಹೊಲಗೇರಿಯ ಜನರೆಲ್ಲವೇ…..! ಈ ಪ್ರಶ್ನೆಗೆ ನಿಮ್ಮಂಥ ಜಾತಿ ಹಾಗೂ ಧರ್ಮದ ಅಜ್ಞಾನಿಗಳಿಂದ ವಸ್ತುನಿಷ್ಠವಾಗಿ – ಪುರಾಣವನ್ನು ಸಂಪೂರ್ಣವಾಗಿ ಬದಿಗಿರಿಸಿ ಉತ್ತರವನ್ನು ನೀಡಲು ಸಾಧ್ಯವೇ …?‌

ಊರು ಕಟ್ಟಿದವನು ಹೊಲೆಯ, ಇದು ಸತ್ಯ- ಇದೆ ವಾಸ್ತವ. ಆದರೆ ನೀವು ಧಾರ್ಮಿಕ ಹಿನ್ನೆಲೆಯಿಂದ ಶ್ರೇಷ್ಠತೆಯಿಂದ ಬದುಕಲು ಸೃಷ್ಟಿಸಿದ ಸಸ್ಯಹಾರ ಶ್ರೇಷ್ಠ- ಮಾಂಸ ಆಹಾರ ಕನಿಷ್ಠ ಎಂಬ ಆಹಾರ ಪದ್ಧತಿಯ ಶ್ರೇಷ್ಠ ಕನಿಷ್ಠತೆಯ ಹಿನ್ನೆಲೆಯ ಕುತಂತ್ರಕ್ಕೆ ಬಹುದೊಡ್ಡ ನೆಲ ಮೂಲ ಸಂಸ್ಕೃತಿಯ ಶ್ರಮಿಕ ವರ್ಗವನ್ನು ಬಲಿಯಾಗಿಸಿ ಊರಿನಿಂದ ಆಚೆ ಕೇರಿಯಲ್ಲಿ ಅಸ್ಪೃಶ್ಯರಂತೆ ವಾಸಿಸಲು ಅನೇಕ ನಿರ್ಬಂಧನೆಗಳನ್ನು ಸೃಷ್ಟಿಸಿ ನಿರ್ದೇಶನ ಮಾಡಿದ್ದೆ ನಿಮ್ಮ ಪುರಾಣದ ಕಥೆಯಿಂದ ಅಲ್ಲವೇ. ಈ ಹಿನ್ನೆಲೆಯಿಂದಲೇ ಶತಶತಮಾನಗಳಿಂದಲೂ ಶಿಕ್ಷಣವನ್ನು ಏಕೈಕ ತಮ್ಮ ಸ್ವತ್ತಾಗಿಸಿಕೊಂಡಿದ್ದ ನೀವು – ಬಹುದೊಡ್ಡ ಭಾರತದ ಜನ ಸಮುದಾಯಕ್ಕೆ ಶಿಕ್ಷಣವನ್ನೇ ನೀಡದೆ ಭಾರತವನ್ನು ಅಂಧಕಾರದಲ್ಲಿ ಮುಳುಗಿಸಿದ್ದು ನಿಮ್ಮ ಅಜ್ಞಾನವಲ್ಲವೇ..? ಪಾರಂಪರಿಕವಾಗಿ ನಿಮ್ಮ ಈ ಅಜ್ಞಾನವನ್ನು ಯಾರಾದರೂ ಹೀಗೆ ಮಾಡಿದ್ದಕ್ಕಾಗಿ ನಿಮ್ಮನ್ನು ಜ್ಞಾನವಂತರು ಎಂದು ಹೇಳುವುದಕ್ಕೆ ನಿದರ್ಶನ ಇದೆಯೇ…? ತಿಳಿಸಿ.

ನಿಮ್ಮ ಈ ಅಧರ್ಮ ಪದ್ದತಿಯ ಜಾತಿ ಕೇಂದ್ರಿತ ಕೊಳಕು ಮನಸ್ಸಿನ ಅಂಧಕಾರದಲ್ಲಿ ಮುಳುಗಿದ್ದ ಪಾರಂಪರಿಕ ಅಜ್ಞಾನಿಗಳಾದ ನೀವು ಈ ದೇಶಕ್ಕೆ ಆಗಮನ ಮಾಡಿದವರು ಎಂಬುದನ್ನು ಮರೆಯಬಾರದು. ‘ಅತಿಥಿ ದೇವೋ ಭವ’ ಎಂಬ ಮಾತನ್ನು ನೀವು ಸೃಷ್ಟಿ ಮಾಡಿದ್ದೀರಿ ಅಷ್ಟೇ, ಆದರೆ ನೀವು ಈ ದೇಶಕ್ಕೆ ಅತಿಥಿಗಳಾಗಿ ಆಗಮನ ಮಾಡಿದಾಗ ನಿಮ್ಮನ್ನು ಸತ್ಕರಿಸಿದವರು ಇದೇ ಭಾರತ ಮೂಲ ನಿವಾಸಿಗಳು ಎಂಬುದನ್ನು ಚಾಂತ್ರಿಕವಾಗಿ ಬರೆಯಬೇಡಿ. ಆದರೆ ಊಟ ಹಾಕಿದ ಮನೆಗೆ ಬೆಂಕಿ ಹಾಕಿದವರು ಇದೇ ಬುದ್ದಿವಂತರು – ಜ್ಞಾನವಂತರು ಪಂಡಿತರು ಎಂದೆಲ್ಲಾ ಹೇಳಿಕೊಳ್ಳುವ ಜನ ವರ್ಗ ಎಂಬುದನ್ನು ಮರೆಯಬೇಡಿ.

ಹೀಗೆ ದುಡಿದು ತಿಥಿಗಳಿಗೆ ಊಟ ಹಾಕಿ ಜಾಗ ಕೊಟ್ಟವರನ್ನೇ ಅಸ್ಪೃಶ್ಯನಾಗಿಸಿ, ಅವರಿಂದ ದುಡಿಸಿಕೊಂಡು ಉಂಡಾ ನೀವೇ ಸ್ಪೃಶ್ಯರಾದದ್ದು ಎಂಬುದಕ್ಕೆ ನಿಮ್ಮಲ್ಲಿ ಉತ್ತರವೇ ಇದೆ. ಆದರೆ ಹೇಳಲು ಮಾತ್ರ ನಿಮ್ಮ ಪಾರಂಪರಿಕ ಅಜ್ಞಾನ ಅಡ್ಡಿ ಬರುತ್ತಿದೆ

ಇದೆ ಹೊಲಗೇರಿಯ ಹೊಲದಲ್ಲಿ ಕೆಲಸ ಮಾಡುವ ಶ್ರಮಜೀವಿ ನೆಲ ಮೂಲ ಸಂಸ್ಕೃತಿಯ ಜನ ವರ್ಗ, ಆಸೆಯನ್ನು ನಿರಾಕರಿಸಿ ಕಾಯಕವನ್ನೇ ನಂಬಿ ದುಡಿದು ಅರವಟ್ಟೆಯಾದರೂ ಉಂಡ ಜನರಿಂದಲೇ ನೀವು ಬೃಹತ್ ಬೃಹತ್ ದೇವಾಲಯಗಳನ್ನು ಕಟ್ಟಿಸಿಕೊಂಡದ್ದು – ಈ ದೇವಾಲಯಗಳನ್ನು ನಿರ್ವಹಣೆ ಮಾಡಲು ನಿಮ್ಮಲ್ಲಿ ಶಕ್ತಿ ಇಲ್ಲದ ಕಾರಣಕ್ಕಾಗಿ ಅಲ್ಲವೇ ಈ ಜನ ವರ್ಗದವರ ಪವಿತ್ರ ಭಾರತ ಮಾತೆಯರನ್ನು ದೇವದಾಸಿಯನ್ನಾಗಿ ಮಾಡಿಸಿಕೊಂಡದ್ದು – ಬೃಹತ್ ಬೃಹತ್ ಕೆರೆಗಳನ್ನು ನಿರ್ಮಿಸಿಕೊಂಡು ಕೆರೆಯ ಮುಂದಿನ ಭೂಮಿಯನ್ನು ಅಕ್ಷರ ಬಲ್ಲದ ರಾಜ ಮಹಾರಾಜರನ್ನು ಅಕ್ಷರವನ್ನು ತಮ್ಮ ಸೊತ್ತಾಗಿಸಿಕೊಂಡಿದ್ದ ಕಾರಣಕ್ಕಾಗಿ ಮನಬಂದಂತೆ ಹೊಗಳಿ ಬರೆದು – ನಿಮ್ಮ ಹೊಗಳುತನಕ ಕುತಂತ್ರ ಬುದ್ಧಿಯಿಂದಲೇ ತಾನೇ ನೀವು ಬರೆಸಿಕೊಂಡದ್ದು. ಆದರೆ ಹೀಗೆ ಬರೆಸಿಕೊಂಡ ಫಲವತ್ತಾದ ಭೂಮಿಯಲ್ಲಿ ದುಡಿದವರು ಯಾರು..? ನೀವ ಹಾಗೆ ನಿಮ್ಮಂತಹ ಊರಿನ ಜನರೇ… ಹೇಳಿ…? ಆ ಭೂಮಿಯಲ್ಲಿ ಪಾರಂಪರಿಕವಾಗಿ ಹೊಲವನ್ನು ಉಳುತಿದ್ದವರು ನೀವು ಹೇಳಿದ ಮಾದರಿಯಲ್ಲಿಯೇ ಊರು ಹೊಲಗೆರೆಯನ್ನು ಒಂದು ಮಾಡಲಾಗದ ಹೊಲಗೇರಿ ಜನರು ತಾನೇ. ಇವರು ತಮ್ಮ ಬೆವರಿನ ಪ್ರತಿ ಕಣಕಣಗಳಲ್ಲೂ ಬೆಳೆದ ಒಂದೊಂದು ಅನ್ನದ ಅಗಳುಗಳನ್ನು ನೀವು ತಿಂದು ಹೊಟ್ಟೆ ಸವರಿಕೊಂಡು ಮಲಗಿದವರು. ಇಂತಹ ಸ್ವಾರ್ಥ ಪರ ಬದುಕನ್ನೇ ಕಟ್ಟಿಕೊಂಡು ಇಂದಿಗೂ ಅದನ್ನೇ ಬಯಸುವವರು ಊರು- ಹೊಲಗೇರಿ ಒಂದ್ ಮಾಡಕ್ಕೆ ಆಗುತ್ತಾ ಅನ್ನೋ ಮಾತನ್ನು ಹೇಳ್ತಾ ಇದ್ದಾರೆಂದರೆ. ಇದು ಭಾರತದ ಬಹುದೊಡ್ಡ ದುರಂತ. ಇಂತಹ ಅಜ್ಞಾನಿಗಳಿಂದ ದೇಶದ ಅಭಿವೃದ್ಧಿಯನ್ನು ಕಾಣಲು ಎಂದಿಗೂ ಸಾಧ್ಯವಿಲ್ಲ.

ಇವತ್ತು ಭಾರತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ- ಪ್ರೀತಿಯಿಂದ- ಸ್ವಾಭಿಮಾನದಿಂದ ಹಾಗೂ ಅಷ್ಟೇ ಗೌರವದಿಂದ ಆಚರಿಸುತ್ತಿದೆ. “ಈ ಸ್ವಾತಂತ್ರ್ಯ ಆಚರಣೆ ಕೇವಲ ಭೌತಿಕವಾದುದ್ದು- ಭಾರತಕ್ಕೆ ಇನ್ನೂ ಸಹ ಬೌದ್ಧಿಕವಾದ ಸ್ವಾತಂತ್ರ್ಯ ಬಂದೇ ಇಲ್ಲ” ಎಂಬುವುದಕ್ಕೆ ಈ ಬುದ್ಧಿವಂತರು ಎಂದು ಪಾರಂಪರಿಕವಾಗಿ ಹೇಳಿಕೊಂಡು ಬರುತ್ತಿರುವ ಪಾರಂಪರಿಕ ಅಜ್ಞಾನಿಗಳ ಮಾತುಗಳೇ ನಿದರ್ಶನವಾಗಿವೆ. ಇಂದಿಗೂ ಈ ಮಾನವ ವಿರೋಧಿ ಮಾತುಗಳನ್ನು ಗಾದೆಯ ಮಾತು ಎಂದು ಹೇಳುತ್ತಿರುವುದರ ಹಿಂದೆ ಸದೃಢ ಭಾರತವನ್ನು ಸಂವಿಧಾನಾತ್ಮಕವಾಗಿ ಕಟ್ಟುವ ಉದ್ದೇಶವಿಲ್ಲ- ಬದಲಿಗೆ ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಹಿನ್ನೆಲೆಯ ಅಸ್ಪೃಶ್ಯತೆಯ, ಕೋಮು ದ್ವೇಷವನ್ನು ಹುಟ್ಟಾಕಿ ಭಾರತವನ್ನು ಹೊಡೆದಾಡುವ, ನಿರಾಕರಿಸಿ ಮತ್ತದೇ ರಾಜಪ್ರಭುತ್ವದ ವೈದಿಕ ಸಂವಿಧಾನದ ಅಡಿಯಲ್ಲಿಯೇ ಭಾರತವನ್ನು ಬಲಹೀನವಾಗಿ ಕಟ್ಟುವ ಅರ್ಥವಿದೆ. ಇಂತಹ ಮಾತನ್ನು ಒಡಲಾಳದಿಂದ ಹೇಳಿದರೆ ತಮ್ಮೆಲ್ಲರಿಗೂ ಬುದ್ಧಿವಂತರೆಂದು ಹೇಳಿಕೊಳ್ಳುವವರ ಮಾತಿಗೆ ಉತ್ತರ ಸ್ಪಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಪ್ರಶ್ನೆ ಉಂಟಾದಾಗ ನೀವೇ ಹೇಳಿ ಈ ದೇಶದ ಬುದ್ಧಿವಂತರು ದುಡಿದು ಈ ಭಾರತ ಭೂಮಿಯಲ್ಲಿ ಯಾವುದೇ ಅಸಹಿಷ್ಣುತೆಯನ್ನು ಮಾತನಾಡದೆ – ಶತಶತಮಾನಗಳಿಂದಲೂ ತನ್ನ ಮೇಲೆ ಆಗುತ್ತಿರುವಂತಹ ಅಸಹಿಷ್ಣುತೆಯನ್ನೇ ಸಹಿಸಿಕೊಂಡು ನಾಯಿ ಹಂದಿಗಳಿಗಿಂತಲೂ ಕೀಳಾಗಿ ಅಸ್ಪೃಶ್ಯರಾದರು ಸಹ ತನ್ನ ತಾಯಿ ನೆಲಕ್ಕಾಗಿ ಕೇರಿಯಲ್ಲಿ ಉಳಿದು ದುಡಿಯುತ್ತಿರುವವರೂ ಅಥವಾ ಅಮ್ಮ ಬದುಕಿಗೆ ಕಿಂಚಿತ್ತು ತೊಡಕಾದರೂ ಸಹ ಅಸವಿಷ್ಣುತೆಯೆಂದು ಬೊಗಳೆ ಬಿಡುವ, ದುಡಿಸಿಕೊಂಡು ಸುಖ ಜೀವನ ನಡೆಸಿ ದೇವರು ಧರ್ಮದ ಮೂಲಕ ತಮಗೆ ತಾವೇ ಸ್ಪೃಶ್ಯರಾದವರೂ ಎಂಬುದನ್ನು ವಸ್ತುನಿಷ್ಠವಾಗಿ ನೀವೇ ಉತ್ತರ ಕೊಡಿ.

ನಿಮಗೆ ಒಂದು ಗಾದೆ ಮಾತಿನಿಂದಲೇ ಉತ್ತರ ಕೊಡುತ್ತೇನೆ. ನಮ್ಮ ಊರಿನಲ್ಲಿ ನಡೆಯುವ ಐತಿಹಾಸಿಕ ಹೊನ್ನದೇವಿ ಜಾತ್ರೆಯ ರಥೋತ್ಸವದ ಸಂದರ್ಭದಲ್ಲಿ ನಮ್ಮ ಜನದಾಡುವ ಮಾತು “ತೇರು ಅರಿದ್ಮೇಲೆ -ಜಾತ್ರೆ ಅಳಿತು ” ಎಂಬುದು . ತುಂಬಾ ಅರ್ಥವನ್ನು ಕೊಡುವ ಈ ಗಾದೆ “ಹೊಲೆರು ಉತ್ತಿ-ಬಿತ್ತಿದ ಮೇಲೆ ಊರು ಉಂಡಿತು” ಎಂಬ ಗಾದೆ ಮಾತುಗಳೇ ಇಂದಿನ ಚರಿತ್ರೆಗೆ ಪೂರಕವಾಗಿದೆ. ಈ ಮಾತಿನ ರೂಪದಲ್ಲಿಯೇ ನಿಜ ಚರಿತ್ರೆಯ ಅರ್ಥ ಇದೆ. ಈ ಕಾರ್ಯವನ್ನು ಹೊಲೆಯರು ಹಾಗೂ ಮಾದಿಗರು ಮಾಡುತ್ತಿದ್ದ ಕಾರಣಕ್ಕಾಗಿಯೇ ಒಂದಷ್ಟು ಊರಿನ ಜಾತ್ರೆಗಳಲ್ಲಿ ಅನೇಕ ಕಟ್ಟುಪಾಡುಗಳ ನಡುವೆಯೂ ಇವರಿಗೂ ದೇವರ ರಥವನ್ನು ಎಳೆಯುವ, ದೇವರಿಗೆ ಪ್ರಥಮ ವಿಳ್ಳೆ ಕೊಡುವ, ಪ್ರಥಮ ಮಂಗಳಾರತಿ ಮಾಡುವ ಇತ್ಯಾದಿ ಇತ್ಯಾದಿ ಕೆಲವೇ ಕೆಲವು ಪ್ರಮುಖ ಸ್ಥಾನವನ್ನು ನೀಡಿ ದೇವರ ಹೆಸರಿನಲ್ಲಿ ನಮ್ಮನ್ನು ಅಂಧಕಾರದಲ್ಲಿ ಮುಳುಗಿಸಿ – ಇವರ ಮುಳುಗುವಿಕೆಯ ಆದರದ ಮೇಲೆ ಮೇಲೆ ತೇಲಿ ದವರು ಇವರು. ಇವರು ನೀಡಿದ ಇವುಗಳ ಕೊಡುಗೆಯ ಹಿಂದೆಯೂ ಸಹ ಸಹ ಹೊಲಗೇರಿಯ ಜನರ ಬೆವರಿನ ಚರಿತ್ರೆಯ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಅಂಧಕಾರದ ಅಸ್ಪೃಶ್ಯತೆಯ ಚರಿತ್ರೆಯ ಮಜಲುಗಳು ಅಡಗಿದೆ ಎಂಬುವುದನ್ನು ಅರಿಯಬೇಕಾಗಿದೆ.

ಬಹು ಮುಖ್ಯವಾಗಿ ಚಾರಿತ್ರಿಕವಾಗಿ ನಾವು ಅರಿಯಬೇಕಾದ ಸತ್ಯ ಅಂಶವೆಂದರೆ “ಹೊಲಗೇರಿ ಇದ್ದ ಕಡೆಗೆ ಊರಿನ ಜನ ಬಂದರೆ ಹೊರತು- ಊರು ಇದ್ದ ಕಡೆ ಹೊಲಗೇರಿ ಎಂದಿಗೂ ಹೋಗಿಲ್ಲ” ಎಂಬುವುದು.

ಭೂಮಿಯ ಪಾರಂಪರಿಕ ಒಡೆಯರಾಗಿದ್ದ ಮೂಲ ಕೃಷಿ ಕಸುಬನ್ನೆ ಆಧಾರವನ್ನಾಗಿಸಿಕೊಂಡಿದ್ದ ಹೊಲದಲ್ಲಿ ದುಡಿಯುವ ಹೊಲೆಯರು ಸಮೃದ್ಧವಾಗಿ ಬೆಳೆಯುತ್ತಿದ್ದ ಫಲವತ್ತಾದ ಫಸಲಿನ ಭೂಮಿಗೆ ಬಂದು ಧಾರ್ಮಿಕ ಹಿನ್ನೆಲೆಯ ಪುರಾಣಗಳನ್ನು ಸೃಷ್ಟಿಸಿ ಊರನ್ನು ಕಟ್ಟಿ, ಗುಡಿ ಕಲ್ಯಾಣಿ, ಕರೆಕಟ್ಟೆ ಗಳನ್ನು ದೇವರ ಹೆಸರಿನಲ್ಲಿ ಪ್ರಮುಖವನ್ನು ತಮ್ಮ ತೋಳ್ ತೆಕ್ಕೆಗೆ ತೆಗೆದುಕೊಂಡು ಈ ಸ್ಥಳದ ಮೂಲನಿವಾಸಿ ಜನರಿಂದಲೇ ಇವೆಲ್ಲವನ್ನೂ ನಿರ್ಮಿಸಿಕೊಂಡು “ಊರು ಒಕ್ಕಲ್ ನವರಿಗಿಂತ -ಸೇರು ಒಕಲ್ಲವರು ಹೆಚ್ಚಾದಂತೆ ” ಅಥವಾ” ಹತ್ತಿದ್ದ ಏಣಿಯನ್ನೇ ಒದ್ದನಂತೆ” ಎಂದು ತಮ್ಮ ಅನುಭವದಿಂದಲೇ ಹೊಲೆಯರು ಇಂದಿಗೂ ಹೇಳುವ ಪಾರಂಪರಿಕ ಗಾದೆ ಮಾತಿನಂತೆಯೇ ಹೊರತು ಬೇರೇನೂ ಅಲ್ಲ. ಈ ಐತಿಹಾಸಿಕ ಹಾಗೂ ಪಾರಂಪರಿಕ ಗಾದೆ ಮಾತಿನಲ್ಲಿಯೇ ಬುದ್ಧಿವಂತರು ಎಂದು ಹೇಳಿಕೊಳ್ಳುವವರ ಕುತಂತ್ರದ, ಜನ ವಿರೋಧಿ ಆ ಮೂಲಕ ಧರ್ಮವಿರೋಧಿ – ಇದರ ಮುಂದುವರೆದ ಭಾಗವೇ ರಾಷ್ಟ್ರ ವಿರೋಧಿ ನೀತಿಯ ಚರಿತ್ರೆ ಅಡಗಿದೆ.

ಇದನ್ನು ಓದಿ ಮಣಿಪುರದಿಂದ ’ಈ ದಿನ’ ವರದಿ- 6 | ಕದನ ಕೇಂದ್ರದಲ್ಲಿ ಮಣಿಪುರಿ ಮಹಿಳೆಯರೂ ಆರೋಪಿಗಳು!

ಕನ್ನಡ ಭಾಷೆಯ ಪ್ರಥಮ ನಿಘಂಟು ಎನಿಸಿಕೊಂಡಿರುವ ಕಿಟಲ್ ಅವರು ಅತ್ಯಂತ ಶ್ರಮದಿಂದ ನಾಡಿನಾದ್ಯಂತ ಕ್ಷೇತ್ರಕಾರ್ಯ ಮಾಡಿ ರಚಿಸಿರುವ ಕನ್ನಡ ನಿಘಂಟು ಡಿಕ್ಷನರಿಯಲ್ಲಿ ಹೊಲೆಯ ಎಂಬ ಪದಕ್ಕೆ ಹೊಲಸು – ಕೀಳು – ಅಸ್ಪೃಶ್ಯ- ಕೇರಿಯಲ್ಲಿ ವಾಸ ಮಾಡುವವ- ಅಜ್ಞಾನಿ ಎಂದೆಲ್ಲ ಬರೆದಿದ್ದಾರೆ ಎಂದು ದಾಖಲಿಸಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಆದರೆ ನನ್ನ ಪ್ರಶ್ನೆ ಇದಲ್ಲ, ಕಿಟಲ್ ಅವರಿಗೆ ಹೊಲೆಯರು ಕೀಳು ಜಾತಿಯವರು- ಅಸ್ಪೃಶ್ಯರು- ಕೇರಿಯಲ್ಲಿ ವಾಸ ಮಾಡುವವರು – ಹೊಲಸು ತಿನ್ನುವವರು ಎಂದು ಹೇಳಿದವರು ಯಾರು…? ಎಂಬುದು. ಹೀಗೆ ಹೇಳಿದವರು ಸಹ ಇದೆ ಪಾರಂಪರಿಕ ಅಜ್ಞಾನಿಗಳಾದರೂ ತಮಗೆ ತಾವೇ ಬಹು ಬುದ್ದಿವಂತರು ಎಂದು ಹೇಳಿಕೊಂಡವರೇ ಎಂಬುದನ್ನು ಮರೆಯಬಾರದು. ಇವರು ಪಾರಂಪರಿಕ ಬಹು ಬುದ್ದಿವಂತರೇ ಆಗಿದ್ದರೆ ಜರ್ಮನಿಯ ಅನ್ಯಭಾಷಿಕ ಕಿಟಲ್ ಕನ್ನಡದ ಡಿಕ್ಷನರಿಯನ್ನು ಹೊರ ತಂದಂತೆ – ಇವ್ರ್ಯಾಕೆ ಹೊರ ತರಲು ಸಾಧ್ಯವಾಗಲಿಲ್ಲ? ಏಕೆಂದರೆ, ಇವರು ಧರ್ಮ ಅಂಧಕಾರದ ಅಜ್ಞಾನಿಗಳೆ ಹೊರತು – ವಾಸ್ತವ ಬದುಕಿನ ಜ್ಞಾನಿಗಳಲ್ಲ ಎಂಬುವುದೇ ಆಗಿತ್ತು. ಇದುವರೆಗೂ ಇವರಿಗೆ ಈವರೆಗೂ ಸಹ ಜನಪ್ರಭುತ್ವ ಅಥವಾ ಪ್ರಜಾಪ್ರಭುತ್ವ ಎಂಬುದರ ಅರಿವೇ ಇಂದಿಗೂ ಆಗದಿರುವುದು ಕಾರಣವಾಗಿದೆ. ಇವರಿನ್ನು ತಮ್ಮ ಅಜ್ಞಾನದ ರಾಜಪ್ರಭುತ್ವದ ಹೊಗಳಿಕೆಯ- ಆ ಮೂಲಕ ಏಕಮುಖವಾದಂತ ಸಮಗ್ರ ಮೀಸಲಾತಿಯನ್ನು ಪಡೆದು, ಬಹುಜನರ ಬೆವರನ್ನು ತಾವು ಬಳಸಿಕೊಂಡು- ತಮ್ಮ ಬೆರಳೆಣಿಕೆಯಷ್ಟಿರುವ ಜನರು ಸೃಷ್ಟಿಸಿದ ತೀರ್ಥವನ್ನು ಅವರೆಲ್ಲರಿಗೂ ಕುಡಿಸಿ ಜೀವಿಸಲು ಹಂಬಲಿಸುತ್ತಿರುವುದೇ ಇದಕ್ಕೆ ಕಾರಣ.

ಈ ಮಾದರಿಯಲ್ಲಿ ನಾವು ನಮ್ಮ ಚರಿತ್ರೆಯನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಂಡು ಆ ಮೂಲಕ ಇತಿಹಾಸವನ್ನು ಮರೆಯದೆ ಇತಿಹಾಸವನ್ನು ನಿರ್ಮಿಸಬೇಕಾಗಿದೆ. ಇದೆ ಭಾರತದ ಚರಿತ್ರೆ ರಚನೆಗೆ ಅಂಬೇಡ್ಕರ್ ಅವರು ಹೇಳಿದ ದಿವ್ಯವಾಣಿ.

ಎನ್‌ ಚಿನ್ನಸ್ವಾಮಿ ಸೋಸಲೆ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸತ್ಯಶೋಧನೆ | ಮಂಗಳೂರಿನ ಸೇಂಟ್‌ ಜೆರೋಸಾ ಶಾಲೆ ಹಿಂದೂ ವಿರೋಧಿಯೇ?

ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ,...

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಸ್ವಾಯತ್ತತೆ ಉಳಿಸಿಕೊಳ್ಳಲೋ, ಸ್ವಪ್ರತಿಷ್ಠೆ ಪ್ರದರ್ಶಿಸಲೋ?

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು. ಹಾಗೇ ಅದು ನಿಷ್ಪಕ್ಷಪಾತವಾಗಿ...

ಕರಾವಳಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಯಾಕಿಲ್ಲ? ಶಾಸಕರು ಹೋರಾಡುತ್ತಿರುವುದು ಯಾವ ವಿಚಾರಕ್ಕೆ?

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಬೇಕು ಎಂಬ ಕೂಗು...

ಹೊಸ ಓದು | ಓದಲೇಬೇಕಾದ ಬಿ.ಟಿ. ಜಾಹ್ನವಿಯವರ ‘ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ’

ಮುಗ್ಧತೆಯ ನಾಶ ಮತ್ತು ಅರಿವಿನ ಸ್ಫೋಟಗಳನ್ನು ಇಲ್ಲಿನ ಹಲವು ಕತೆಗಳಲ್ಲಿ ಗುರುತಿಸಬಹುದು....