ಬಿಜೆಪಿಯಲ್ಲಿ ಮುಖಕ್ಕೆ ಮಂಗಳಾರತಿ ಮಾಡಿ ಮೂಲೆಗುಂಪು ಮಾಡಿದಾಗ ರತ್ನಗಂಬಳಿ ಹಾಸಿ ಸ್ವಾಗತಿಸಿ ರಾಜಕೀಯ ಜೀವದಾನ ನೀಡಿದ್ದ ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ದ್ರೋಹ ಬಗೆದಿದ್ದಾರೆ. ಅವರ ನಡೆ ಉಪ್ಪುತಿಂದ ಮನೆಗೆ ದ್ರೋಹ ಬಗೆದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಕಿಡಿಕಾರಿದ್ದಾರೆ.
ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿ ದೊಡವಾಡ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಯುದ್ಧದಲ್ಲಿದ್ದು ತಮ್ಮ ಸೈನ್ಯವನ್ನೇ ತಾವು ಸೋಲಿಸಲು ಕುತಂತ್ರ ಮಾಡಿದಂತೆ, ಜಗದೀಶ ಶೆಟ್ಟರ್ ಕಾಂಗ್ರೆಸ್ ಮಾಡಿದ ಉಪಕಾರಕ್ಕೆ ದ್ರೋಹ ಬಗೆದಿದ್ದಾರೆ. ಇಂಥವರು ಯಾವ ಪಕ್ಷದಲ್ಲಿದ್ದರೂ ದ್ರೋಹ ಬಗೆಯುವುದು ಖಚಿತ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಗದೀಶ್ ಶೆಟ್ಟರ್ ಸೋತರೂ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಕಾಂಗ್ರೆಸ್ ನೀಡಿತ್ತು. ರಾಜಕಾರಣಿಗಳು ಮುಂದಿನ ಪೀಳಿಗೆಗೆ ಉತ್ತಮ ನಡೆಯನ್ನು ಉಳಿಸಿ ಹೋಗಬೇಕು. ಆದರೆ, ಶೆಟ್ಟರ್ ಅವರದ್ದು ಉತ್ತಮ ರಾಜಕಾರಣಿಯ ನಡೆ ಅಲ್ಲ” ಎಂದು ಕಿಡಿಕಾರಿದ್ದಾರೆ.