ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಸೋಮವಾರ ಉತ್ತರ ಪ್ರದೇಶದ ಅಮೇಥಿಗೆ ತಲುಪಿದೆ. ಈ ಹಿಂದೆ, ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ಮತ್ತು ಕಳೆದ ಚುನಾವಣೆಯಲ್ಲಿ ಸೋಲನುಭವಿದ್ದ ಕ್ಷೇತ್ರದಲ್ಲಿ ರಾಹುಲ್ ಯಾತ್ರೆಗೆ ಭಾರೀ ಜನಸಮೂಹ ಭಾಗಿಯಾಗಿತ್ತು. ಅಮೇಥಿಯ ಲಾಲ್ಗಂಜ್ನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ದಲಿತರು, ಹಿಂದುಳಿದವರು ಹಾಗೂ ರಾಷ್ಟ್ರಪತಿಯನ್ನೂ ಸಹ ‘ಆಹ್ವಾನಿಸದ’ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಕೈಗಾರಿಕೋದ್ಯಮಿಗಳು ಮತ್ತು ಅಮಿತಾಭ್ ಬಚ್ಚನ್ ಅವರನ್ನು ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನಿಸುವ ಮೂಲಕ ದೇಶದ 73% ಜನರಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ. ರಾಷ್ಟ್ರಪತಿ ಅವರನ್ನೂ ಆಹ್ವಾನಿಸಿಲ್ಲ. ಇದು ಅವರಿಗೆ ಮಾಡಿದ ಅವಮಾನ” ಎಂದು ಕಿಡಿಕಾರಿದ್ದಾರೆ.
“ಈಗ ಈ ದೇಶ ನಿಮ್ಮದಾಗಿಲ್ಲ. ಇದು ಬಿಜೆಪಿಗರ ಭಾರತವಾಗಿದೆ. ನೀವು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಬೇಕಷ್ಟೇ. ಆದರೆ, ಬಿಜೆಪಿಗರು ಮಾಡುವುದೆಲ್ಲ ಹೆಲಿಕಾಪ್ಟರ್ ಸವಾರಿ ಮತ್ತು ಹಣ ಗಳಿಸುವುದು,” ಎಂದು ವಾಗ್ದಾಳಿ ನಡೆಸಿದರು.
“ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲಾಗಿದೆ. ಮೋದಿ ಸರ್ಕಾರ ರೈತರನ್ನು ತಡೆಯಲು ಬ್ಯಾರಿಕೇಡ್ಗಳನ್ನು ಹಾಕಿದೆ. ಬೃಹತ್ ಗೋಡೆಗಳನ್ನು ನಿರ್ಮಿಸಿದೆ. ಅವರು ಏನು ಕೇಳುತ್ತಿದ್ದಾರೆ. ಅವರು ಕೇಳುತ್ತಿರುವುದು MSP ಮಾತ್ರ; ಇದು ದೊಡ್ಡ ವಿಷಯವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಂಎಸ್ಪಿಗೆ ಕಾನೂನಾತ್ಮಕ ಖಾತರಿ ಕೊಡುತ್ತೇವೆ” ಎಂದರು.
ನ್ಯಾಯ್ ಯಾತ್ರೆ ಅಮೇಥಿಯಲ್ಲಿದ್ದ ಸಮಯದಲ್ಲಿಯೇ ಅಮೇಥಿಯ ಬಿಜೆಪಿ ಸಂಸದೆ, ಸಚಿವೆ ಸ್ಮೃತಿ ಇರಾನಿ ಕೂಡ ಅದೇ ನಗರದಲ್ಲಿದ್ದರು. “ರಾಹುಲ್ ಗಾಂಧಿ ಅವರಿಗೆ ಗೆಲ್ಲುವ ವಿಶ್ವಾಸವಿದ್ದರೆ, ಅಮೇಥಿಯಿಂದ ಸ್ಪರ್ಧಿಸಲಿ” ಎಂದು ಸವಾಲು ಹಾಕಿದರು.
“2019ರಲ್ಲಿ ಅವರು (ರಾಹುಲ್ ಗಾಂಧಿ) ಅಮೇಥಿಯನ್ನು ಬಿಟ್ಟು ಹೋದರು. ಈಗ ಅವರಿಗೆ ಆತ್ಮವಿಶ್ವಾಸವಿದ್ದರೆ ವಯನಾಡಿಗೆ ಹೋಗದೆ ಅಮೇಥಿಯಲ್ಲೇ ಸ್ಪರ್ಧಿಸಲಿ. ಅಮೇಥಿಯಲ್ಲಿ ಸತತ ಮೂರು ಚುನಾವಣೆಗಳನ್ನು ಗೆದ್ದಿದ್ದರೂ, ಕ್ಷೇತ್ರಕ್ಕೆ ರಾಹುಲ್ ಗಾಂಧಿ ಕೊಡುಗೆ ತೀರಾ ಕಡಿಮೆ” ಎಂದು ಆರೋಪಿಸಿದರು.
2019ರಲ್ಲಿ ಮತದಾರರು ಬದಲಾವಣೆ ಬಯಸಿದರು. ಹೀಗಾಗಿ, ರಾಹುಲ್ ಗಾಂಧಿಯನ್ನು ಸೋಲಿಸಿದರು. ಅಮೇಥಿಯ ಜನರ ಮನಸ್ಥಿತಿಯನ್ನು ಗ್ರಹಿಸಿದ ಗಾಂಧಿ ಕುಟುಂಬವು 2024ರ ಚುನಾವಣೆಗೆ ಮುಂಚಿತವಾಗಿ ರಾಯ್ಬರೇಲಿಯಿಂದ ದೂರವಿರಲು ನಿರ್ಧರಿಸಿದೆ” ಎಂದರು.
ಅಂದಹಾಗೆ, ರಾಹುಲ್ ಈ ಬಾರಿ ಅಮೇಥಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬೆಳವಣಿಗೆಗಳು ಸೂಚಿಸುತ್ತಿವೆ.