“ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್‌ಡ್ರೈವ್ ಈ ಕುಟುಂಬದ ಆಸ್ತಿ. ತೆನೆಹೊತ್ತ ಮಹಿಳೆ ಈಗ ಪೆನ್‌ಡ್ರೈವ್ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಜನ ಹಾಡಿ, ಹೊಗಳುತ್ತಿದ್ದಾರೆ” ಎಂದು ಸಂಸದ ಡಿ ಕೆ ಸುರೇಶ್ ಲೇವಡಿ ಮಾಡಿದರು.
ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ, ‘ಡಿ.ಕೆ ಬ್ರದರ್ಸ್ 420’ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
“ದೇವೇಗೌಡರ ಕುಟುಂಬವನ್ನ ಇಡೀ ಪ್ರಪಂಚ ಕೊಂಡಾಡುತ್ತಿದೆ ಎಂದು ಜನರು ಹೇಳಿದ ಮಾತನ್ನಷ್ಟೇ ನಾನು ಹೇಳುತ್ತಿದ್ದೇನೆ. ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರೆ ನಾಲ್ಕು ಮಾತು ನಮ್ಮನ್ನು ಬೈದುಕೊಳ್ಳಲಿ. ಆದರೆ ನನಗೆ ಈ ರಾಜ್ಯದ ಹೆಣ್ಣು ಮಕ್ಕಳ ಮಾನವನ್ನು ಕಾಪಾಡುವ ಕೆಲಸ ಮೊದಲು ಆಗಬೇಕಿದೆ” ಎಂದರು.
“ಮಾಜಿ ಪ್ರಧಾನಿಗಳು ಸಣ್ಣ, ಸಣ್ಣ ವಿಚಾರಕ್ಕೂ ಮಾಧ್ಯಮಗೋಷ್ಠಿ ನಡೆಸಿ ಹೇಳಿಕೆ ನೀಡಿ, ಪಿಟಿಷನ್ ಬರೆಯುತ್ತಾರಲ್ಲವೇ? ಅದೇ ರೀತಿ ಈ ವಿಚಾರವಾಗಿಯೂ ಹೇಳಿಕೆ ನೀಡಲಿ ಹಾಗು ನೂಲಿನಂತೆ ಸೀರೆ ಎನ್ನುವ ಮಾತನ್ನು ಅರ್ಥೈಸಲಿ. ಮೈತ್ರಿಯಲ್ಲಿ ಪ್ರಧಾನಿ ಮೋದಿ ಅವರೂ ಪಾಲುದಾರರು. ಅವರು ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಬೇಕು. ಬಿಜೆಪಿ ಮಾತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ದೇಶದ ಪ್ರಧಾನಮಂತ್ರಿ ಎನ್ ಡಿಎ ಮುಖ್ಯಸ್ಥರು. ತಮ್ಮ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ಆದ ಕಾರಣ ಅವರು ಸ್ಪಷ್ಟೀಕರಣ ಕೊಡಬೇಕಾಗುತ್ತದೆ” ಎಂದರು.
“ಮೋದಿ ಅವರು ಕರ್ನಾಟಕದ ಬೇರೆ, ಬೇರೆ ವಿಚಾರಗಳನ್ನು ತೆಗೆದುಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಾರೆ. ಆದರೆ ಈ ವಿಚಾರದ ಕುರಿತು ಏಕೆ ಮಾತನಾಡುತ್ತಿಲ್ಲ. ಇದಕ್ಕೆ ನೇರ ಹೊಣೆಗಾರರು ಪ್ರಧಾನಮಂತ್ರಿಗಳು. ಸೆಕ್ಸ್ ಹಗರಣದ ಬಗ್ಗೆ ಪ್ರಧಾನಿ ಅವರಿಗೆ ಈ ಮೊದಲೇ ತಿಳಿದಿತ್ತಲ್ಲವೇ? ಪಕ್ಷದ ಸ್ಥಳೀಯ ಮುಖಂಡರು ಪತ್ರ ಬರೆದು ಈ ಮೊದಲೇ ತಿಳಿಸಿದ್ದಾರಲ್ಲವೇ? ಸ್ಕ್ರೀನಿಂಗ್ ಕಮಿಟಿಯಲ್ಲಿಯೂ ಇದರ ಬಗ್ಗೆ ಚರ್ಚೆಯಾಗಿದೆ. ಕುಮಾರಸ್ವಾಮಿ ಅವರೂ ಸಹ ಟಿಕೆಟ್ ಕೊಡುವುದು ಬೇಡ ಎಂದು ಹೇಳಿದ್ದಾರೆ. ಆದರೂ ಟಿಕೆಟ್ ಕೊಟ್ಟು, ಪ್ರಚಾರವನ್ನೂ ಮಾಡಿದ್ದಾರೆ” ಎಂದು ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದರು.
ಪೆನ್‌ಡ್ರೈವ್ ರೂವಾರಿ ಕಾರ್ತಿಕ್ ಅವರು ಮಲೇಷ್ಯಾಕ್ಕೆ ಪರಾರಿಯಾಗಲು ರಾಜ್ಯ ಸರ್ಕಾರ ಕಾರಣ ಎನ್ನುವ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರಿಸಿದ ಸಂಸದರು, “ಕುಮಾರಸ್ವಾಮಿ ಅವರು ಅಂತಾರಾಷ್ಟ್ರೀಯ ಏಜೆನ್ಸಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಎಲ್ಲ ಮಾಹಿತಿಯೂ ಅವರಿಗೆ ಗೊತ್ತಿರುತ್ತದೆ. ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಮುಖ್ಯ ವಿಚಾರದ ಹಾದಿ ತಪ್ಪಿಸಲು ಏನೇನೋ ಹೇಳುತ್ತಿರುತ್ತಾರೆ. ಮೊದಲು ಹಾಸನದ ಹೆಣ್ಣು ಮಕ್ಕಳ ಮಾನ ರಕ್ಷಣೆಗೆ ಏನು ಮಾಡಬೇಕು. ಇವರ ಕುಟುಂಬದ ಸದಸ್ಯನಿಂದ ಆಗಿರುವ ತಪ್ಪಿಗೆ ಏನು ಮಾಡಬೇಕು ಎಂದು ಹೇಳಬೇಕು. ಇದನ್ನು ಮರೆಮಾಚಿ ಇತರೇ ವಿಚಾರಗಳನ್ನು ಹೇಳುತ್ತಿರುತ್ತಾರೆ. ಇದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಚಾರ” ಎಂದರು.
“ನಾವು ಯಾರನ್ನೂ ಕೆಣಕಿಲ್ಲ. ಅವರ ಮೈತ್ರಿ ಪಕ್ಷದವರೇ ಅವರನ್ನು ಕೆಣಕಿರುವುದು, ಅವರಿಂದಲೇ ಎಲ್ಲಾ ಬಿಡುಗಡೆಯಾಗಿರುವುದು. ಇದರ ಬಗ್ಗೆ ಅವರ ಬಳಿ ಚರ್ಚೆ ನಡೆಸಲಿ. ಅವರ ಮೇಲೆ ಮಾತನಾಡಲು ಶಕಿಯಿಲ್ಲ, ಅದಕ್ಕೆ ನಮ್ಮ ಮೇಲೆ ಮಾತನಾಡುತ್ತಾರೆ. ಸುಳ್ಳು ಹೇಳುವುದರಲ್ಲಿ, ವಿಚಾರವನ್ನು ಹಾದಿ ತಪ್ಪಿಸುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ” ಎಂದರು.
ಇದನ್ನು ಓದಿದ್ದೀರಾ? ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ
“ಮಾಧ್ಯಮದವರು ಹೇಳಿಕೆ ನೀಡುವಾಗ ಸಾಮಾಜಿಕ ಜೀವನದ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಹೇಳಿಕೆಗಳಿಂದ ಒಂದು ಕುಟುಂಬದಲ್ಲಿ ಆಗುವ ವ್ಯತ್ಯಾಸಗಳು, ಪರಿಸ್ಥಿತಿಗಳು ಒಂದು ಹೆಣ್ಣುಮಗಳ ಬದುಕಿಗೆ ಈ ಸಂದರ್ಭದಲ್ಲಿ ಪ್ರಮುಖವಾಗುತ್ತದೆ. ಇದು ಯಾರ ಊಹೆಗೂ ನಿಲುಕದ ಸಂಗತಿ. ಇಡೀ ಕುಟುಂಬ ತಲೆತಗ್ಗಿಸಿ ನಡೆಯಬೇಕಾಗುತ್ತದೆ. ಕೃತ್ಯ ಎಸಗಿದವರಿಗೆ ಮಾನ ಮರ್ಯಾದೆ ಇಲ್ಲದೆ ಇರಬಹುದು. ಆದರೆ ಇದರಲ್ಲಿ ಸಿಲುಕಿಕೊಂಡವರಿಗೆ ಮಾನ ಇರುತ್ತದೆ. ಈ ಸಂದರ್ಭದಲ್ಲಿ ಇದು ಮುಖ್ಯವಾಗಬೇಕು” ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ತಿಳಿಸಿದರು.
