- ಅಪೋಲೋ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ
- ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬಾರದು ಎಂದು ಸಲಹೆ ನೀಡಿದ ಮಾಜಿ ಸಿಎಂ
“ದೇವರು, ರಾಜ್ಯದ ಜನರು ಹಾಗೂ ತಂದೆ ತಾಯಿಯ ಆಶೀರ್ವಾದ, ವೈದ್ಯರ ಆರೈಕೆಯಿಂದ ನನಗೆ ಮೂರನೇ ಜನ್ಮ ಸಿಕ್ಕಿದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಭಾನುವಾರ ಮಧ್ಯಾಹ್ನ ಬಿಡುಗಡೆಗೊಂಡರು.
ಆ ಬಳಿಕ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, “ಭಗವಂತನ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ದೇವರು, ತಂದೆ, ತಾಯಿ, ಜನರ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ನನಗೆ ಮೂರನೇ ಜನ್ಮ ಸಿಕ್ಕಿದೆ ಎಂದು ತಿಳಿಸಿದರು.
“ಕಳೆದ ಐದು ದಿನಗಳಿಂದ ಸ್ನೇಹಿತರಲ್ಲಿ ಭಯದ ವಾತಾವರಣ ಇತ್ತು ನಿಖರವಾದ ಆರೋಗ್ಯದ ಮಾಹಿತಿಯನ್ನೂ ನೀವು ಕೊಟ್ಟಿದ್ದೀರಿ. ತಂದೆ-ತಾಯಿ ಆಶೀರ್ವಾದದಿಂದ ಪುನರ್ಜನ್ಮ ಸಿಕ್ಕಿದೆ. ಮೊದಲು ಫ್ಯಾಮಿಲಿ ವೈದ್ಯರಾದ ಡಾ.ಮಂಜುನಾಥ್ಗೆ ಕರೆ ಮಾಡಿದ್ದೆ, ನಂತರ ಅಪೋಲೊ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾದೆ. ಅಪೋಲೊ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಡಿಸ್ಚಾರ್ಜ್ ಬಳಿಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

“ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬಾರದು. ಏನೇ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ಎಚ್ಚೆತ್ತು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಅವರು ಜನತೆಯಲ್ಲಿ ವಿನಂತಿ ಮಾಡಿಕೊಂಡರು. ಸ್ವಲ್ಪ ತಡ ಮಾಡಿದ್ದರೂ ನಾನು ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಿತ್ತು. ಆದರೆ ವೈದ್ಯರ ಪರಿಶ್ರಮದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದೇನೆ” ಎಂದು ಹೇಳಿದರು.
“ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಎರಡು ಸಲ ಹೃದಯ ಚಿಕಿತ್ಸೆಗೆ ಒಳಗಾದವನು ನಾನು. ಎರಡು ಸಲ ಸಿಎಂ ಆಗಿದ್ದೆ. ಅಂದು ವಾಲ್ಮೀಕಿ ಜಯಂತಿಯ ದಿನ. ಮಾಧ್ಯಮವೊಂದರಲ್ಲಿ “ಕರ್ನಾಟಕವನ್ನು ಕತ್ತಲೆಗೆ ತಳ್ಳಿದ ಕುಮಾರ” ಎಂಬ ಶೀರ್ಷಿಕೆಯ ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. ಆಗ ನನ್ನ ಮನಸ್ಸಿಗೆ ಆಘಾತವಾಗಿ ಹೃದಯದ ಮೇಲೆ ತೀವ್ರ ಒತ್ತಡ ಉಂಟಾಗಿತ್ತು” ಎಂದು ಅವರು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡರು.
“ನಾನು ನಾಡಿನ ಜನತೆಗೆ ಮನವಿ ಮಾಡುವುದು ಇಷ್ಟೇ. ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ. ಹಣದ ಬಗ್ಗೆ ಚಿಂತೆ ಮಾಡಬೇಡಿ, ಮೊದಲು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ. ನಾನು ಬೆಳಗ್ಗೆ ಹೋಗೋಣ, ನೋಡೋಣ ಅಂತ ನಿರ್ಲಕ್ಷ್ಯ ಮಾಡಿದ್ದಿದ್ದರೆ ಜೀವನಪೂರ್ತಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬರುತ್ತಿತ್ತು” ಎಂದು ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಅಪೋಲೋ ಆಸ್ಪತ್ರೆಯ ನರರೋಗ ತಜ್ಞರಾದ ಡಾ.ಸತೀಶ್ ಚಂದ್ರ ಹಾಗೂ ಚಿಕಿತ್ಸೆ ನೀಡಿದ್ದ ಇತರ ವೈದ್ಯರು ಉಪಸ್ಥಿತರಿದ್ದರು.