‘ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಸ್ಲಿಮರ ಬಗ್ಗೆ ಕಾಳಜಿ ಇದೆ ಎನ್ನುವುದರ ಬಗ್ಗೆ ನಮಗೆ ಅನುಮಾನವಿಲ್ಲ. ಇಷ್ಟಾದರೂ ನಮಗೆ ಈ ಸರ್ಕಾರದಲ್ಲೂ ಅನ್ಯಾಯವಾಗುತ್ತಿದೆ ಎನ್ನುವುದೂ ಅಷ್ಟೇ ನಿಜ. ಮುಸ್ಲಿಮರು ಎಲ್ಲೂ ಹೋಗಲ್ಲ, ತಮ್ಮ ಪಕ್ಷಕ್ಕೇ ಓಟು ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷವು ನಮ್ಮನ್ನು ನಿರ್ಲಕ್ಷಿಸುತ್ತಿದೆ’ ಎನ್ನುವ ನೋವು ಆ ಸಮುದಾಯದ ಕೆಲವು ಮುಖಂಡರಲ್ಲಿದೆ.
ಕಾಂಗ್ರೆಸ್ ತಮ್ಮನ್ನು ಕಡೆಗಣಿಸುತ್ತಿದೆ ಎನ್ನುವಂಥ ಅನುಮಾನವೊಂದು ಮುಸ್ಲಿಂ ಸಮುದಾಯದಲ್ಲಿ ಈಗ ಮೂಡಿದೆ. ಅದಕ್ಕೆ ಕಾರಣವಾಗಿರುವುದು ವಿಧಾನ ಪರಿಷತ್ ನಾಮನಿರ್ದೇಶನ.
ಮೋಹನ್‌ಕುಮಾರ್ ಕೊಂಡಜ್ಜಿ, ಪಿ ಆರ್ ರಮೇಶ್, ಸಿಎಂ ಲಿಂಗಪ್ಪ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಎಂ ಆರ್ ಸೀತಾರಾಮ್, ಮನ್ಸೂರ್ ಅಲಿ ಖಾನ್ ಮತ್ತು ಪಿ ಎಚ್ ಸುಧಾಮ ದಾಸ್ ಅವರ ಹೆಸರುಗಳನ್ನು ಪರಿಗಣಿಸಿರುವ ಸುದ್ದಿ ಹರಿದಾಡುತ್ತಿದೆ.
ಹಿಂದುಳಿದ ವರ್ಗಗಳ ಕೋಟಾದಿಂದ ಎಂ ಆರ್ ಸೀತಾರಾಮ್, ಅಲ್ಪಸಂಖ್ಯಾತ ಕೋಟಾದಿಂದ ಕೆ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಖಾನ್ ಹಾಗೂ ಪರಿಶಿಷ್ಟ ಜಾತಿ ಎಡಗೈ ಬಣದಿಂದ ಸುಧಾಮ್ ದಾಸ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ನಾಮ ನಿರ್ದೇಶನ ಮಾಡಲು ಹಲವು ತಿಂಗಳ ಹಿಂದಿನಿಂದಲೇ ಕಾಂಗ್ರೆಸ್‌ನಲ್ಲಿ ಚರ್ಚೆಗಳು ನಡೆದಿದ್ದವು.
ಆದರೆ, ಇದರ ವಿರುದ್ಧ ಕರ್ನಾಟಕ ರಾಜ್ಯ ಮುಸ್ಲಿಂ ಜನಜಾಗೃತಿ ವೇದಿಕೆ ಅಧ್ಯಕ್ಷ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ಎನ್ನುವವರು ರಾಜ್ಯಪಾಲರಿಗೆ ದೂರು ನೀಡಿದ್ದರು. ʼಶಿಕ್ಷಣ, ಸಹಕಾರ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಆಧಾರದಲ್ಲಿ ವಿಧಾನ ಪರಿಷತ್‌ಗೆ ಈ ಮೂವರನ್ನು ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಅವರ ಮೇಲೆ ಕೆಲವು ಆರೋಪಗಳಿವೆ’ ಎಂದು ದೂರಿನಲ್ಲಿ ಹೇಳಿದ್ದರು. ರಾಜಭವನವು ಆ ದೂರಿನ ಪ್ರತಿಯ ಸಮೇತ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
‘ಈ ಮೂವರ ಹೆಸರನ್ನು ನಾಮನಿರ್ದೇಶನ ಮಾಡಲು ಪರಿಗಣಿಸುವ ಮೊದಲು ಅವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರುಗಳನ್ನು ಪರಿಶೀಲಿಸಿ ನಿಯಮಗಳನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಮನ್ಸೂರ್ ಖಾನ್ ಮಾಜಿ ಕೇಂದ್ರ ಸಚಿವ, ಮಾಜಿ ಸಂಸದ ಕೆ ರೆಹಮಾನ್ ಖಾನ್ ಅವರ ಮಗ. ಸಹಕಾರ ಕ್ಷೇತ್ರದಲ್ಲಿನ ಸೇವೆಗಾಗಿ ಅವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಈಗ ಅದರ ಬಗ್ಗೆ ರಾಜಭವನದಿಂದ ಆಕ್ಷೇಪಣೆ ಬಂದಿರುವುದರಿಂದ ಅವರ ಬದಲಿಗೆ ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನುವ ಸುದ್ದಿ ಇದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಉಮಾಶ್ರೀ ತೇರದಾಳ ಕ್ಷೇತ್ರದ ಟಿಕೆಟ್ ಬಯಸಿದ್ದರು. ಉಮಾಶ್ರೀ ಅವರಿಗೆ ಎಂಎಲ್‌ಸಿ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್, ಅಲ್ಲಿಂದ ಸಿದ್ದುರಾಮಪ್ಪ ಕೊಣ್ಣೂರು ಅವರಿಗೆ ಟಿಕೆಟ್ ನೀಡಿತ್ತು. ಹೀಗಾಗಿ ಉಮಾಶ್ರೀ ಅವರನ್ನು ಎಂಎಲ್‌ಸಿ ಮಾಡುವಂತೆ ಸಿದ್ದರಾಮಯ್ಯ ವರಿಷ್ಠರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರ ನಿಲುವಿಗೆ ಮುಸ್ಲಿಂ ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಂ ಸಮುದಾಯ ಹಿಂದೆಂದೂ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ ಪರ ನಿಂತಿತ್ತು. ಜೆಡಿಎಸ್, ಎಸ್‌ಡಿಪಿಐ ಎಲ್ಲವನ್ನೂ ಮೀರಿ ಕಾಂಗ್ರೆಸ್ ಪರ ಮತ ಚಲಾಯಿಸಿತ್ತು. ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್‌ಗೆ ಬಂದಿರುವ ಒಟ್ಟು ಮತಗಳಲ್ಲಿ ಕಾಲು ಭಾಗ (ಶೇ 23ರಷ್ಟು) ಮತಗಳು ಮುಸ್ಲಿಮರವು. ಸಮುದಾಯದಲ್ಲಿನ ಅತಿ ಹೆಚ್ಚಿನವರು, ಅಂದರೆ, ಶೇ.78ರಷ್ಟು, ಕಾಂಗ್ರೆಸ್‌ಗೆ ಮತ ಚಲಾವಣೆ ಮಾಡಿದ್ದರು. ಹೀಗಿದ್ದರೂ ಸರ್ಕಾರದಲ್ಲಿ ತಮಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಅಸಮಾಧಾನ ಮುಸ್ಲಿಂ ಸಮುದಾಯದಲ್ಲಿದೆ.
ಕಾಂಗ್ರೆಸ್ ಈ ಬಾರಿ 15 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಅದರಲ್ಲಿ ಒಂಬತ್ತು ಮಂದಿ ಗೆದ್ದಿದ್ದಾರೆ. ಜಮೀರ್ ಅಹ್ಮದ್ ಖಾನ್ ಮತ್ತು ರಹೀಮ್ ಖಾನ್ ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಆದರೆ, ಕನಿಷ್ಠ ಮೂವರು ಮುಸ್ಲಿಮರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಎನ್ನುವುದು ಸಮುದಾಯದ ಮುಖಂಡರ ವಾದ. ಹಾಗಾಗಿ ಈ ಬಾರಿಯ ಮೂರು ಎಂಎಲ್ಸಿ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮನ್ಸೂರ್ ಖಾನ್ ಅವರಿಗೇ ಕೊಡಬೇಕು ಎನ್ನುವುದು ಮುಸ್ಲಿಂ ಮುಖಂಡರ ಬೇಡಿಕೆ.
‘ಜೂನ್‌ನಲ್ಲಿ ಜಗದೀಶ್ ಶೆಟ್ಟರ್, ಎನ್ ಎಸ್ ಬೋಸರಾಜು, ತಿಪ್ಪಣ್ಣಪ್ಪ ಕಮಕನೂರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆಗಲೂ ನಾವು ಸುಮ್ಮನಿದ್ದೆವು. ಈಗ ಇಲ್ಲದಿದ್ದರೆ ಮುಂದಿನ ವರ್ಷ ಎಂಟು ಸ್ಥಾನಗಳು ತೆರವಾಗುವವರೆಗೆ ಕಾಯಬೇಕಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಮುಸ್ಲಿಂ ಮುಖಂಡರೊಬ್ಬರು ಈದಿನ.ಕಾಮ್‌ಗೆ ತಿಳಿಸಿದರು.
ವಸತಿ ಸಚಿವ ಜಿ ಝಡ್ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹಾಗೂ ಶಿವಾಜಿನಗರದ ಶಾಸಕ ರಿಜ್ವಾನ್ ಅಹ್ಮದ್ ಈ ಬಗ್ಗೆ ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಮನ್ಸೂರ್ ಖಾನ್ ಅವರನ್ನು ಎಂಎಲ್ಸಿ ಮಾಡುವುದು ಹಾಗೂ ಮುಸ್ಲಿಂ ಅಧಿಕಾರಿಗಳಿಗೆ ಉನ್ನತ ಜಾಗಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದರ ಬಗ್ಗೆ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ. ಆಗಲೂ ಉಮಾಶ್ರೀ ಅವರಿಗೆ ಎಂಎಲ್ಸಿ ಮಾಡುವುದಾಗಿ ಮಾತು ಕೊಟ್ಟಿದ್ದೇವೆ ಎಂದೇ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದೇ ವಿಷಯದ ಬಗ್ಗೆ ಭಾನುವಾರ (ಆಗಸ್ಟ್ 6, 2023) ರಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುಸ್ಲಿಂ ಶಾಸಕರು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಅವರೆಲ್ಲ ಮನ್ಸೂರ್ ಖಾನ್ ಅವರನ್ನು ಎಂಎಲ್ಸಿ ಮಾಡುವುದು ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಸಭೆಯಲ್ಲಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮುಂದಿಟ್ಟಿದ್ದಾರೆ. ‘ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆನ್ನುವುದು ನಿಜ. ಅದೇ ರೀತಿ ಒಕ್ಕಲಿಗರಲ್ಲಿಯೂ ವಿಧಾನ ಪರಿಷತ್‌ನಲ್ಲಿ ಸೂಕ್ತ ಪ್ರಾತಿನಿಧ್ಯಕ್ಕಾಗಿ ಬೇಡಿಕೆ ಇದೆ. ಆದರೆ, ಈ ಬಾರಿ ಮಹಿಳೆಯೊಬ್ಬರನ್ನು ಎಂಎಲ್ಸಿ ಮಾಡಬೇಕೆನ್ನುವ ಒತ್ತಡ ನಮ್ಮ ಮೇಲಿದೆ. ಹೈಕಮಾಂಡ್ ಕೂಡ ಮಹಿಳೆಯರಿಗೇ ಕೊಡಬೇಕೆಂದು ಇಚ್ಛಿಸಿದೆ’ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಇಷ್ಟಾದರೂ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಎಂ ಆರ್ ಸೀತಾರಾಂ, ಸುಧಾಮ್ ದಾಸ್ ಸೇರಿದಂತೆ ಯಾರ ಹೆಸರೂ ಅಂತಿಮಗೊಂಡಿಲ್ಲ. ಹಾಗಾಗಿ ನಾವು ಮನ್ಸೂರ್ ಖಾನ್ ಅವರಿಗೆ ಸ್ಥಾನ ಕಲ್ಪಿಸಬೇಕು ಎಂದೇ ಹಠ ಹಿಡಿದಿದ್ದೇವೆ. ಮಹಿಳೆಯರಿಗೆ ಕೊಡಬೇಕೆಂದಿದ್ದರೆ ಕೊಡಿ, ಆದರೆ, ಅದಕ್ಕೆ ಮುಸ್ಲಿಮರದ್ದು ಯಾಕೆ ಕಿತ್ತು ಕೊಡುತ್ತೀರಿ ಎನ್ನುವುದು ನಮ್ಮ ವಾದ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಶಾಸಕರೊಬ್ಬರು ತಿಳಿಸಿದರು.
ಮುಸ್ಲಿಮರಿಗೆ ಸದ್ಯ ಎರಡು ಮಂತ್ರಿ ಸ್ಥಾನ ಕೊಡಲಾಗಿದೆ. ಸ್ಪೀಕರ್ ಹುದ್ದೆ ನೀಡಲಾಗಿದೆ. ನಸೀರ್ ಅಹಮದ್ ಹಾಗೂ ಸಲೀಂ ಅಹಮದ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ನಜೀರ್ ಅಹಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿ, ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇಷ್ಟಾದರೂ ತಮಗೆ ಸಿಕ್ಕಿರುವ ಪ್ರಾತಿನಿಧ್ಯ ಸಾಲದು ಎನ್ನುವುದು ಮುಸ್ಲಿಂ ಮುಖಂಡರ ವಾದ.
‘ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಸ್ಲಿಮರ ಬಗ್ಗೆ ಕಾಳಜಿ ಇದೆ ಎನ್ನುವುದರ ಬಗ್ಗೆ ನಮಗೆ ಅನುಮಾನವಿಲ್ಲ. ಇಷ್ಟಾದರೂ ನಮಗೆ ಈ ಸರ್ಕಾರದಲ್ಲೂ ಅನ್ಯಾಯವಾಗುತ್ತಿದೆ ಎನ್ನುವುದೂ ಅಷ್ಟೇ ನಿಜ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಉಡುಪಿ ಶೌಚಾಲಯ ಘಟನೆ ದೊಡ್ಡ ರಾದ್ಧಾಂತವಾಯಿತು. ಮುಸ್ಲಿಮರನ್ನು ವಿಲನ್‌ಗಳನ್ನಾಗಿ ಮಾಡಲಾಯಿತು. ಅದೇ ಭಜರಂಗದಳದವನೊಬ್ಬ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟಿದ್ದು ದೊಡ್ಡ ವಿಷಯ ಆಗಲೇ ಇಲ್ಲ’ ಎನ್ನುವುದು ಅವರ ಆಕ್ಷೇಪಣೆ.
‘ಮಹಿಳೆಗೇ ಎಂಎಲ್ಸಿ ಕೊಡಬೇಕು ಎನ್ನುವುದಾದರೆ, ಉಮಾಶ್ರೀ ಅವರೇ ಯಾಕೆ ಆಗಬೇಕು. ಪಕ್ಷಕ್ಕಾಗಿ ಶ್ರಮಿಸಿದ ಪುಷ್ಪಾ ಅಮರನಾಥ್‌ಗೆ ಕೊಡಿ’ ಎಂದು ಕಾರ್ಯಕರ್ತರ ಒಂದು ಗುಂಪು ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ: ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಅವರ ಜೈಲಿನ ಅನುಭವ ಕಥನ: ಪಂಜರದ ಬಣ್ಣಗಳು
ಹೀಗಾಗಿಯೇ ಇವತ್ತಿನ ಸಭೆಯಲ್ಲಿ ಬಿಬಿಎಂಪಿ, ತಾ ಪಂ, ಜಿ ಪಂ, ಲೋಕಸಭೆ ಚುನಾವಣೆಗಳಲ್ಲಿಯೂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ ನೇಮಕ ಮಾಡಿದ್ದವರೇ ಇವತ್ತಿಗೂ ವಕ್ಫ್ ಬೋರ್ಡ್, ಮೈನಾರಿಟಿ ಕಮಿಷನ್, ಹಜ್ ಕಮಿಟಿ ಚೇರ್‌ಮನ್‌ಗಳಾಗಿದ್ದಾರೆ. ಅವರನ್ನು ತಕ್ಷಣ ಬದಲಾಯಿಸಬೇಕು ಎನ್ನುವುದು ಮುಸ್ಲಿಂ ಮುಖಂಡರ ಬೇಡಿಕೆ.
ಕಾಂಗ್ರೆಸ್ ಸಾಮಾಜಿಕ ನ್ಯಾಯದ ಮೇಲೆ ನಿಂತಿರುವ ಪಕ್ಷ ಎನ್ನುತ್ತಾರೆ, ಸರಿ. ಚುನಾವಣೆ ಬಂದಾಗ ಪಕ್ಷಕ್ಕೆ ಮುಸ್ಲಿಮರ ಬಗ್ಗೆ ವಿಪರೀತ ಪ್ರೀತಿ ಹುಟ್ಟುತ್ತೆ. ಆದರೆ, ಅಧಿಕಾರ ಹಂಚಿಕೆಯ ಪ್ರಶ್ನೆ ಬಂದಾಗ ಸಮುದಾಯವನ್ನು ಮರೆಯಲಾಗುತ್ತೆ. ಪಕ್ಷ ಅಧಿಕಾರಕ್ಕೆ ಬಂದಾಗ ವಿಧಾನ ಪರಿಷತ್‌ನಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಮೂಲಕವಾದರೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಾದದ್ದು ಪಕ್ಷದ ಕರ್ತವ್ಯ ಎನ್ನುವುದು ಮುಸ್ಲಿಂ ಮುಖಂಡರ ವಾದ. ‘ಮುಸ್ಲಿಮರು ಎಲ್ಲೂ ಹೋಗಲ್ಲ, ತಮ್ಮ ಪಕ್ಷಕ್ಕೇ ಓಟು ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷವು ನಮ್ಮನ್ನು ನಿರ್ಲಕ್ಷಿಸುತ್ತಿದೆ’ ಎನ್ನುವ ನೋವು ಆ ಸಮುದಾಯದ ಕೆಲವು ಮುಖಂಡರಲ್ಲಿದೆ. ಸಿದ್ದರಾಮಯ್ಯನವರ ಸರ್ಕಾರ ಈ ವಿಚಾರದಲ್ಲಿ ಅಂತಿಮವಾಗಿ ಯಾವ ನಿಲುವು ತಳೆಯುತ್ತದೆಯೋ ನೋಡಬೇಕು.