ಈ ದಿನ ವಿಶೇಷ | ನ್ಯಾಯಾಂಗ ನಿಂದನೆಗೆ ಶಿಕ್ಷೆ ಇದೆ, ಸಂವಿಧಾನ ನಿಂದನೆಗೆ?

Date:

Advertisements
ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದರೆ Contempt of Court (ನ್ಯಾಯಾಂಗ ನಿಂದನೆ) ಎಂದು ಪರಿಗಣಿಸಲಾಗುತ್ತದೆ. ಆದರೆ ನ್ಯಾಯ ಪೀಠವೇ ಸಂವಿಧಾನವನ್ನು ಎತ್ತಿ ಹಿಡಿಯದಿದ್ದಾಗ ಏನು ಹೇಳುವುದು? ಅದನ್ನು ಸಂವಿಧಾನ ವಿರೋಧಿ ನಡೆ ಎಂದು ಕರೆಯುತ್ತೇವೆ. ಇದನ್ನು ಇನ್ನೂ ಸ್ವಲ್ಪ ಕಟುವಾಗಿ ಹೇಳುವುದಾದರೆ Contempt of Constitution (ಸಂವಿಧಾನ ನಿಂದನೆ) ಎನ್ನಬಹುದೇನೋ. Unconstitutional (ಅಸಾಂವಿಧಾನಿಕ) ಎನ್ನುವುದನ್ನು Contempt of Constitution ಎಂದರೆ  ತಪ್ಪಾಗಲಾರದು ಅನಿಸುತ್ತದೆ.

ಬಿ.ಎಸ್. ಯಡಿಯೂರಪ್ಪನವರ ಮೇಲಿನ ಪೋಕ್ಸೋ ಕೇಸ್ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್, ”ಬಿ.ಎಸ್.ಯಡಿಯೂರಪ್ಪ ಯಾರೋ ಒಬ್ಬ ಯಂಕ, ನಾಣಿ, ಸೀನನಂತಹ ಸಾಮಾನ್ಯ ವ್ಯಕ್ತಿಯಲ್ಲ. ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಅವರಿಗೆ ತನುವಿನ ಆಚರಣೆಗಳಿರುತ್ತವೆ. ಅಷ್ಟಕ್ಕೂ ನೀವು ಯಾರನ್ನು ಸಂತುಷ್ಟಿಗೊಳಿಸುವ ಸಲುವಾಗಿ ಬಂಧಿಸಲು ತವಕಿಸುತಿದ್ದೀರಿ…” ಎಂಬ ಮಾತುಗಳನ್ನು ಆಡಿರುವುದು ವರದಿಯಾಗಿದೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ಸಂವಿಧಾನದ 14ನೇ ವಿಧಿಯ ಅಣಕದಂತೆ ಈ ಪ್ರಸಂಗ ಕಾಣುತ್ತಿದೆ. ಲಿಂಗ, ಜಾತಿ, ಧರ್ಮ, ಹುಟ್ಟಿನ ಆಧಾರದಲ್ಲಿ ಸರ್ಕಾರ ತಾರತಮ್ಯ ಮಾಡಬಾರದೆಂದು ಹೇಳುವ ಸರ್ವಶ್ರೇಷ್ಠ ಸಂವಿಧಾನವನ್ನು ಹೊಂದಿರುವ ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ ಹಲವು ಏಳುಬೀಳುಗಳನ್ನು ಕಾಣುತ್ತಾ ಬಂದಿದ್ದೇವೆ.

ಸಂವಿಧಾನವನ್ನು ವ್ಯಾಖ್ಯಾನ ಮಾಡುವ ಹಕ್ಕು ನಮ್ಮ ನ್ಯಾಯಾಂಗ ವ್ಯವಸ್ಥೆಗಿದೆ. ಆದರೆ ಸಂವಿಧಾನದ ಮೂಲ ತಳಹದಿಯನ್ನು ಯಾರೂ ಬದಲಿಸುವಂತಿಲ್ಲ. ಇದನ್ನು ನಮ್ಮ ಸರ್ವೋಚ್ಚ ನ್ಯಾಯಾಲಯವೇ ಮಹತ್ವದ ತೀರ್ಪುಗಳಲ್ಲಿ ಉಲ್ಲೇಖ ಮಾಡುತ್ತಾ ಬಂದಿದೆ.

Advertisements

ಸಂವಿಧಾನ ಬಾಹಿರವಾದ ಕಾನೂನುಗಳಿಗೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿದ್ಯಮಾನಗಳಿಗೆ ಕಡಿವಾಣ ಹಾಕುವ ಸಾಂವಿಧಾನಿಕ ಬಲ ನ್ಯಾಯಾಂಗಕ್ಕೆ ಇದೆ. ಹಾಗೆಂದು ಕಾರ್ಯಾಂಗದ ಸ್ವಾಯತ್ತತೆಯಲ್ಲಿ ಮೂಗು ತೂರಿಸಬಾರದೆಂಬುದೂ ನಿಜ‌. ಆದರೆ ಕಾರ್ಯಾಂಗ ಸಂವಿಧಾನ ಬಾಹಿರ ನಿಲುವು ತಳೆದಾಗ, “ಕಾರ್ಯಾಂಗದ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ” ಎಂದು ನ್ಯಾಯಾಂಗ ನಿಲುವು ತಳೆದ ನಿದರ್ಶನಗಳು ಸಾಕಷ್ಟಿವೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದರೆ Contempt of Court (ನ್ಯಾಯಾಂಗ ನಿಂದನೆ) ಎಂದು ಪರಿಗಣಿಸಲಾಗುತ್ತದೆ. ಆದರೆ ನ್ಯಾಯ ಪೀಠವೇ ಸಂವಿಧಾನವನ್ನು ಎತ್ತಿ ಹಿಡಿಯದಿದ್ದಾಗ ಏನು ಹೇಳುವುದು? ಅದನ್ನು ಸಂವಿಧಾನ ವಿರೋಧಿ ನಡೆ ಎಂದು ಕರೆಯುತ್ತೇವೆ. ಇದನ್ನು ಇನ್ನೂ ಸ್ವಲ್ಪ ಕಟುವಾಗಿ ಹೇಳುವುದಾದರೆ Contempt of Constitution (ಸಂವಿಧಾನ ನಿಂದನೆ) ಎನ್ನಬಹುದೇನೋ. Unconstitutional (ಅಸಾಂವಿಧಾನಿಕ) ಎನ್ನುವುದನ್ನು Contempt of Constitution ಎಂದರೆ  ತಪ್ಪಾಗಲಾರದು ಅನಿಸುತ್ತದೆ.

ಸಂವಿಧಾನಕ್ಕಿಂತ ನ್ಯಾಯಮೂರ್ತಿಗಳು ಅತೀತರಲ್ಲ. ನ್ಯಾಯಾಂಗ ನಿಂದನೆಗೆ ಶಿಕ್ಷೆ ಇದೆ, ಸಂವಿಧಾನ ನಿಂದನೆಗೆ ಯಾವ ಶಿಕ್ಷೆ ಇಲ್ಲವೇ?

ಯಂಕ, ಸೀನ, ನಾಣಿಗೊಂದು ನ್ಯಾಯ, ಪ್ರಭಾವಿ ರಾಜಕಾರಣಿಗೊಂದು ನ್ಯಾಯ ಎಲ್ಲಿದೆ? ಈಗ ಎದ್ದಿರುವ ಪ್ರಶ್ನೆ contempt of Constitutionಗೆ ಸಂಬಂಧಿಸಿದೆ ಅನಿಸುತ್ತದೆ.

ಸೆಕ್ಯುಲರಿಸಂ (ಸರ್ವಧರ್ಮ ಸಮಭಾವ) ಮತ್ತು ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ತಳಹದಿಗಳು. ಈ ಎರಡು ವಿಚಾರಗಳನ್ನು ನೋಡುವಾಗಲೆಲ್ಲ ಹಲವು ಪ್ರಕರಣಗಳಲ್ಲಿ ನ್ಯಾಯಪೀಠದಲ್ಲಿ ಕೂತವರು ಸಂವಿಧಾನವನ್ನು ಮನಸೋ ಇಚ್ಛೆ ವಿಶ್ಲೇಷಣೆ  ಮಾಡಿದ ನಿದರ್ಶನಗಳು ರಾಚುತ್ತವೆ. ಆಗ ನಮ್ಮ ನ್ಯಾಯದಾನ ವ್ಯವಸ್ಥೆಯ ಮೇಲೆ ಮರುಕ ಹುಟ್ಟುತ್ತದೆ. ಬಹುಸಂಖ್ಯಾತವಾದವನ್ನು ಮಾನ್ಯ ಮಾಡುತ್ತಾ ಹೋದರೆ ನ್ಯಾಯಕ್ಕೆ, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲವಾಗುತ್ತದೆ. ಉದಾಹರಣೆಗೆ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದಾಗ, ಇದನ್ನು ಸಂಪ್ರದಾಯ ನಿಷ್ಠ ಬಹುಸಂಖ್ಯಾತ ಸಮಾಜ ಒಪ್ಪುವುದಿಲ್ಲ ಎನ್ನಲು ಸಾಧ್ಯವೇ? ಈ ಕ್ಷಣಕ್ಕೆ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ತೀರ್ಪು ನೆನಪಾಗುತ್ತಿದೆ. “ಸಾಕ್ಷಿ ಪುರಾವೆಗಳಿಗಿಂತ ಬಹುಸಂಖ್ಯಾತರ ನಂಬಿಕೆಯೇ ಹೆಚ್ಚು ಮಹತ್ವದ್ದು” ಎಂಬ ವ್ಯಾಖ್ಯಾನವನ್ನು ಸಾಂವಿಧಾನಿಕ ಪೀಠ ಮಾಡಿತ್ತು. ಈ ಪ್ರಕರಣದ ತೀರ್ಪನ್ನು ಬರೆದವರ ಹೆಸರನ್ನೇ ನಿಗೂಢವಾಗಿ ಇಡಲಾಯಿತು. ಇದು ನ್ಯಾಯಾಂಗದ ಇತಿಹಾಸದಲ್ಲೇ ಮೊಟ್ಟಮೊದಲು ಎಂದು ಕಾನೂ‌ನು ತಜ್ಞರು ಅಭಿಪ್ರಾಯಪಡುತ್ತಾರೆ. ಬಹುಸಂಖ್ಯಾತರು ಯಡಿಯೂರಪ್ಪ ತಪ್ಪು ಮಾಡಿಲ್ಲ ಎಂದು ಹೇಳಿಬಿಟ್ಟರೆ ಅದನ್ನು ಮಾನ್ಯ ಮಾಡುವುದು ಸಂವಿಧಾನ ನಿಂದನೆಯಾದಂತೆ ಆಗುತ್ತದೆ. ಅಂತಿಮವಾಗಿ ನಿರ್ಧಾರವಾಗಬೇಕಿರುವುದು ಸಾಕ್ಷಿಗಳ ಆಧಾರದಲ್ಲೇ ಹೊರತು ಬಹುಸಂಖ್ಯಾತರ ಭಾವನೆಗಳ ಮೇಲಲ್ಲ ಅಲ್ಲವೇ?

ಹಿಜಾಬ್ ಪ್ರಕರಣದಲ್ಲಿ ಜಸ್ಟಿಸ್ ಹೇಮಂತ್ ಗುಪ್ತಾ ಅವರು ನ್ಯಾಯಪೀಠದಲ್ಲಿ ಕೂತು ತಮ್ಮ ವ್ಯಕ್ತಿಗತ ಪೂರ್ವಗ್ರಹಗಳನ್ನು ಮನಸೋಇಚ್ಛೆ ಪ್ರಸ್ತಾಪಿಸಿದ್ದನ್ನು ಮರೆಯಲಾಗದು. ಪ್ರಕರಣದ ವಿಚಾರಣೆಯಲ್ಲಿ ಅವರು ಆಡಿದ ಕೆಲವು ಮಾತುಗಳನ್ನು ಉಲ್ಲೇಖಿಸುವ ಅಗತ್ಯವಿದೆ‌.

“ವಸ್ತ್ರದ ಹಕ್ಕನ್ನು ಅತಿ ಮಾಡಿ ನೋಡಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಬಟ್ಟೆಯ ಹಕ್ಕು, ಬೆತ್ತಲಾಗುವ ಹಕ್ಕನ್ನು ಒಳಗೊಳ್ಳುತ್ತದೆಯೇ?” ಎಂದು ಕೇಳಿದ್ದರು ಜಸ್ಟಿಸ್ ಗುಪ್ತಾ. ಮುಂದುವರಿದು, “ರುದ್ರಾಕ್ಷಿ, ಜನಿವಾರ ಇವೆಲ್ಲಾ ಬಟ್ಟೆಯ ಒಳಗೆ ಇರುತ್ತವೆ. ಹೊರಗೆ ಕಾಣುವುದಿಲ್ಲ. ಅದರಿಂದ ಶಿಸ್ತು ಉಲ್ಲಂಘನೆಯಾಗುವುದಿಲ್ಲ. ಕುಂಕುಮ, ಪಗಡಿ, ಮೂಗುತಿ ಧಾರ್ಮಿಕ ಸಂಕೇತವಲ್ಲ” ಎಂದೂ ಹೇಳಿದ್ದರು. ಅರ್ಜಿದಾರರ ಪರ ವಕೀಲರು ಕುಂಕುಮ, ಮೂಗುತಿ, ಪಗಡಿಗಳೆಲ್ಲ ಧಾರ್ಮಿಕ ಸಂಕೇತ ಎಂದು ನ್ಯಾಯಾಂಗ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ್ದರು‌.

ವಾದ ವಿವಾದಗಳಲ್ಲಿ, ನ್ಯಾ.ಹೇಮಂತ್ ಗುಪ್ತಾ, “ನಮ್ಮ ಸಂವಿಧಾನದಲ್ಲಿ ಮೊದಲು ಸೆಕ್ಯುಲರಿಸಂ ಮತ್ತು ಸಮಾಜವಾದ ಎಂಬ ಪದಗಳು ಇರಲಿಲ್ಲ. ಆಮೇಲೆ ಸೇರಿಸಲ್ಪಟ್ಟವು. ಸರ್ವಧರ್ಮ ಸಮಭಾವ ಸರಿ. ಆದರೆ ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ಎಲ್ಲಾ ಧರ್ಮಗಳು ಒಪ್ಪಿಕೊಳ್ಳುತ್ತವೆಯೇ ..?” ಎಂದು ಕೇಳಿದ್ದರು.

ಇದನ್ನು ಓದಿದ್ದೀರಾ?: ಸೆಲೆಬ್ರಿಟಿಗಳ ಸುದ್ದಿಗಳು, ಮಾಧ್ಯಮಗಳು ಮತ್ತು ಜನಸಾಮಾನ್ಯರು

ವಿದೇಶಗಳಲ್ಲಿ ಸಮವಸ್ತ್ರದ ಜೊತೆಗೆ ಧಾರ್ಮಿಕ ಸಂಕೇತಗಳನ್ನು ಧರಿಸುವ ಅವಕಾಶ ನೀಡಿರುವುದನ್ನು ಉಲ್ಲೇಖಿಸಿದಾಗ, “ಅವು ನಮ್ಮ ದೇಶಕ್ಕೆ ಅನ್ವಯಿಸಲಾಗುವುದಿಲ್ಲ. ನಮ್ಮದು ಸಂಪ್ರದಾಯನಿಷ್ಠ ಸಮಾಜ” ಎಂದು ಅಭಿಪ್ರಾಯ ತಾಳಿದ್ದರು. ಇಂತಹ ನಿದರ್ಶನಗಳನ್ನು ಹೇಗೆ ನೋಡಬೇಕು?

ಸಾಮಾಜಿಕ ನ್ಯಾಯವನ್ನು ಉಲ್ಲಂಘಿಸಿ ಬಲಾಢ್ಯರಿಗೆ ನೀಡಿದ ಇಡಬ್ಲ್ಯುಎಸ್ ಮೀಸಲಾತಿಯನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಒಪ್ಪಿಕೊಂಡಿದ್ದು ಹೇಗೆಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸಂವಿಧಾನಕ್ಕೆ ತರಾತುರಿಯಲ್ಲಿ ತಂದ ತಿದ್ದುಪಡಿಯನ್ನು ಮಾನ್ಯ ಮಾಡಿದ್ದಾದರೂ ಹೇಗೆ?

ಅಸಾಂವಿಧಾನಿಕ ಯುಎಪಿಎ, ಅಸಮಾನತೆಯನ್ನು ಹೆಚ್ಚಿಸುವ ಆರ್ಥಿಕ ನೀತಿಗಳು, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಂಸತ್ ತೀರ್ಮಾನಗಳು ನ್ಯಾಯಾಂಗದಲ್ಲಿ ಊರ್ಜಿತವಾದಾಗಲೆಲ್ಲ, ಸಂವಿಧಾನ ನಿಂದನೆಯ ನೋವು ಕಾಡುತ್ತದೆ. ಈ ದೇಶದ ಉನ್ನತ ಸ್ಥಾನದಲ್ಲಿರುವ ಮೋದಿಯವರೇ ಬಿಡುಬೀಸಾಗಿ ತಾರತಮ್ಯದಿಂದ ಕೂಡಿದ ಬಹುಸಂಖ್ಯಾತವಾದದ ಭಾಷಣವನ್ನು ಮಾಡುತ್ತಾ ಚುನಾವಣೆ ಎದುರಿಸಿದ್ದು ಇತ್ತೀಚಿನ ಉದಾಹರಣೆ.

ಆದರೆ, ನಮ್ಮ ನ್ಯಾಯಾಂಗದ ಮೇಲೆ ಭರವಸೆಯನ್ನು ಕಳೆದುಕೊಳ್ಳಬಾರದೆಂಬುದು ನಿಜ. ತಾನೇ ಕೊಟ್ಟ ತೀರ್ಪನ್ನು ಮರುಪರಿಶೀಲನೆ ಮಾಡಿಕೊಂಡು ತಿದ್ದಿಕೊಂಡ ಉದಾಹರಣೆಗಳನ್ನು ನ್ಯಾಯಾಂಗದ ಇತಿಹಾಸ ಹೇಳುತ್ತದೆ. ಇಂದು ಯಂಕ, ಸೀನ, ನಾಣಿಯನ್ನು ದ್ವಿತೀಯ ದರ್ಜೆಯಾಗಿ ವಿಶ್ಲೇಷಿಸಿದವರೇ ನಾಳೆ ತಪ್ಪನ್ನು ತಿದ್ದುವ ಅವಕಾಶವಿರುವ ಭರವಸೆ ಇಟ್ಟುಕೊಳ್ಳುವುದು ಒಳಿತು.

-ಪಿಪೀಲಿಕ

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X