ವಿದೇಶದಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಗಳಿಗೆ ಹಾಜರಾಗಲು ಇತರೆ ನಾಯಕರಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿರುವಾಗ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣಗೆ ವಿದೇಶಕ್ಕೆ ಪರಾರಿಯಾಗಲು ಕ್ಲಿಯರೆನ್ಸ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಈ ಹಿಂದೆ ತೀವ್ರ ಚರ್ಚೆ ನಡೆದಿತ್ತು.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯವು ನಿರ್ಬಂಧ ಹೇರಿದೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮಹತ್ವದ ಪ್ರವಾಸ ಇದಾಗಿದ್ದ ಕಾರಣ ಕೇಂದ್ರದ ಈ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಇಲ್ಲಿ ರಾಜಕೀಯವಿದೆಯೇ ಅಥವಾ ಇತರೆ ಕಾರಣವಿದೆಯೇ ಎಂಬುದು ಕೇಂದ್ರ ಸ್ಪಷ್ಟನೆ ನೀಡಿದ ಬಳಿಕವಷ್ಟೇ ತಿಳಿದುಬರಬೇಕು.
ಸದ್ಯ ಪ್ಯಾರಿಸ್ ಪ್ರವಾಸದಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಅಲ್ಲಿಂದ ಅಮೆರಿಕಕ್ಕೆ ತೆರಳಿ ‘ಬಯೋ ಇಂಟರ್‌ನ್ಯಾಷನಲ್ ಕನ್ವೆಷನ್’ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಇದು ಮಾತ್ರವಲ್ಲದೆ ರಾಜ್ಯದೆಡೆ ವಿದೇಶಿ ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಖರ್ಗೆ ಭಾಗಿಯಾಗಲಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕೇಂದ್ರ ಸರ್ಕಾರವು ಅವರ ಅಮೆರಿಕ ಪ್ರವಾಸಕ್ಕೆ ಕ್ಲಿಯರೆನ್ಸ್ ನೀಡಿಲ್ಲ. ಇದರಿಂದಾಗಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.
ಇದನ್ನು ಓದಿದ್ದೀರಾ? ಪ್ರಿಯಾಂಕ್ ಖರ್ಗೆ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ನಿರ್ಬಂಧ, ವಿವರಣೆ ಕೇಳಿದ ಸಚಿವರು
ಯಾಕಾಗಿ ಈ ಪ್ರವಾಸ, ಸಚಿವರು ಹೇಳಿದ್ದೇನು?
ರಾಜ್ಯಕ್ಕೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವುದೇ ಈ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು. ಖರ್ಗೆ ಅವರು ಅಮೆರಿಕದಲ್ಲಿ ಪ್ರಮುಖವಾಗಿ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾಗಿತ್ತು. ಬೋಸ್ಟನ್‌ನಲ್ಲಿ ಬೋಸ್ಟನ್ ಬಯೋ ಮತ್ತು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಡಿಸೈನ್ ಆಟೋಮೇಷನ್ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಬೇಕಾಗಿತ್ತು. ಎರಡು ಕಾರ್ಯಕ್ರಮವೂ ಐಟಿ ಮತ್ತು ಬಿಟಿ ವಲಯಕ್ಕೆ ವಿದೇಶಿ ಹೂಡಿಕೆಯನ್ನು ಸೆಳೆಯಲು ಉತ್ತಮ ಅವಕಾಶವಾಗಿತ್ತು.
ಈ ನಡುವೆ ಸದ್ಯ ಈ ವಿಚಾರದಲ್ಲಿ ಯಾವುದೇ ಹೇಳಿಕೆಯನ್ನು ನೀಡಲು ಪ್ರಿಯಾಂಕ್ ಖರ್ಗೆ ನಿರಾಕರಿಸಿದ್ದಾರೆ. “ನಾನು ಸದ್ಯ ಯಾವುದೇ ಸಾರ್ವಜನಿಕ ಹೇಳಿಕೆಯನ್ನು ನೀಡಲು ಬಯಸಲ್ಲ. ನಾನು ಬೆಂಗಳೂರಿಗೆ ಬಂದ ಬಳಿಕ ಕೇಂದ್ರ ಸರ್ಕಾರದ ಬಳಿ ಸ್ಪಷ್ಟನೆಯನ್ನು ಕೋರುವೆ” ಎಂದಿದ್ದಾರೆ.
I’m holding back on making any public statements for now. Once I’m back in Bengaluru, I will seek a clear explanation from the Government of India regarding this denial. https://t.co/70QyioMeM8
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 17, 2025
ಇತರೆ ಯಾವುದೋ ವೈಯಕ್ತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಅನುಮತಿ ನಿರಾಕರಿಸಿದ್ದರೆ ಈ ವಿಚಾರ ಬೇರೆಯೇ ಆಯಾಮವನ್ನು ಪಡೆಯುತ್ತಿತ್ತೇನೋ. ಆದರೆ ರಾಜ್ಯದ ಹೂಡಿಕೆ ಸಂಬಂಧಿತ ಪ್ರವಾಸಕ್ಕೆ ಕ್ಲಿಯರೆನ್ಸ್ ನೀಡದಿರುವುದು ರಾಜಕೀಯ ಮಗ್ಗಲಿಗೆ ವಿಚಾರ ಮಗುಚುವಂತೆ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಂತೂ ತೀವ್ರ ಚರ್ಚೆ ನಡೆಯುತ್ತಿದೆ. ಕೆಲವು ನೆಟ್ಟಿಗರು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರೆ, ಇನ್ನು ಕೆಲವು ನೆಟ್ಟಿಗರು ಇದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಲೈಂಗಿಕ ಹಗರಣ | ವಿದೇಶಾಂಗ ಸಚಿವಾಲಯದ ಅನುಮತಿ ಇಲ್ಲದೆ ಪ್ರಜ್ವಲ್ ಜರ್ಮನಿಗೆ ಹೋಗಿದ್ದು ಹೇಗೆ?
ಹಲವು ರಾಜಕಾರಣಿಗಳಿಗೆ ನಿರಾಕರಣೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೇಂದ್ರ ಸರ್ಕಾರವು ಈ ಹಿಂದೆ ಅನುಮತಿ ನಿರಾಕರಿಸಿದೆ. 2022ರಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಂಗಾಪುರಕ್ಕೆ ಹೋಗಲು ಅನುಮತಿ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಂಗಾಪುರದಲ್ಲಿ ವರ್ಲ್ಡ್ ಸಿಟಿ ಸಮ್ಮಿಟ್‌ಗೆ ಕೇಜ್ರಿವಾಲ್ ಅವರನ್ನು ಆಹ್ವಾನಿಸಲಾಗಿತ್ತು.
ಇದಕ್ಕೂ ಮುನ್ನ 2019ರಲ್ಲಿಯೂ ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ನಡೆಯಲಿದ್ದ ಸಮ್ಮೇಳನವೊಂದಕ್ಕೆ ಹೋಗಲು ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಕೊನೆಗೆ ವರ್ಚುವಲ್ ಸಭೆಯಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದರು. ಇನ್ನು ಮಮತಾ ಬ್ಯಾನರ್ಜಿ ಅವರಿಗೆ 2021ರಲ್ಲಿ ಎರಡು ಬಾರಿ ವಿದೇಶ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇವೆಲ್ಲವೂ ಕೂಡಾ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬರೀ ವಿಪಕ್ಷ ನಾಯಕರಿಗೆ ಮಾತ್ರವಲ್ಲ ಹಲವು ಬಿಜೆಪಿ ನಾಯಕರಿಗೂ ವಿದೇಶ ಪ್ರವಾಸಕ್ಕೆ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ. ಈ ವೇಳೆ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿತ್ತು ಅಥವಾ ವರ್ಚುವಲ್ ಸಭೆಯಲ್ಲಿ ಭಾಗಿಯಾಗಬೇಕಾದ ಸ್ಥಿತಿ ಬಂದೊದಗಿತ್ತು.
ವಿದೇಶ ಪ್ರವಾಸ ಮಾಡಲು ರಾಜಕಾರಣಿಗಳಿಗೆ ಕ್ಲಿಯರೆನ್ಸ್ ನೀಡುವ ವಿಚಾರವು ಹೆಚ್ಚು ಚರ್ಚೆಗೆ ಬಂದಿದ್ದು ಪ್ರಜ್ವಲ್ ರೇವಣ್ಣ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ. ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪವನ್ನು ಹೊತ್ತಿರುವ ಬಿಜೆಪಿ ಮಿತ್ರಪಕ್ಷ ಜೆಡಿಎಸ್‌ನ ಸಂಸದನಾಗಿದ್ದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾದಾಗ ಈ ಕ್ಲಿಯರೆನ್ಸ್ ವಿಚಾರ ಮುನ್ನೆಲೆಗೆ ಬಂದಿತ್ತು. ವಿದೇಶದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಾಜರಾಗಲು ಇತರೆ ನಾಯಕರಿಗೆ ವಿದೇಶಾಂಗ ಸಚಿವಾಲಯದ ಅನುಮತಿ ಲಭಿಸದೆ ಇರುವಾಗ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣಗೆ ಕ್ಲಿಯರೆನ್ಸ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಈ ಎಲ್ಲಾ ಪ್ರಕರಣಗಳಿಗೆ ಅಧಿಕೃತ ಪ್ರವಾಸಕ್ಕೆ ಅವಕಾಶ ಲಭಿಸದಿರುವ ಪ್ರಿಯಾಂಗ್ ಖರ್ಗೆ ಪ್ರಕರಣ ಭಿನ್ನವಾಗಿ ನಿಲ್ಲುತ್ತದೆ. ಇದೀಗ ಕೇಂದ್ರ ಸರ್ಕಾರದ ಸ್ಪಷ್ಟನೆಯ ಬಳಿಕವೇ ಇಲ್ಲಿರುವ ರಾಜಕೀಯ ದೃಷ್ಟಿಕೋನ ತಿಳಿಯಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.