ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 241 ಜನರಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಒಬ್ಬರು. ರೂಪಾನಿ ಅವರು ತನ್ನ ಪುತ್ರಿಯನ್ನು ಭೇಟಿಯಾಗಲು ಜೂನ್ 5ರಂದು ಲಂಡನ್ ತೆರಳಲಿದ್ದರು. ಆದರೆ ಚುನಾವಣೆ ಪ್ರಚಾರ ಕಾರಣ ಪ್ರಯಾಣವನ್ನು ಜೂನ್ 12ಕ್ಕೆ ಮುಂದೂಡಿದ್ದರು.
ಲೂಧಿಯಾನ(ಪಶ್ಚಿಮ) ಉಪ ಚುನಾವಣೆಯು ಜೂನ್ 19ರಂದು ನಡೆಯಲಿದ್ದು, ಜೂನ್ 23ರಂದು ಫಲಿತಾಂಶ ಹೊರಬೀಳಲಿದೆ. ಜೂನ್ 5ರಂದು ತನ್ನ ಪುತ್ರಿಯನ್ನು ಭೇಟಿಯಾಗಲು ಲಂಡನ್ ತೆರಳಲಿದ್ದ ರೂಪಾನಿ ಈ ಚುನಾವಣೆ ಪ್ರಚಾರಕ್ಕಾಗಿ ಪ್ರಯಾಣವನ್ನು ಮುಂದೂಡಿದ್ದರು. ಅವರ ಪತ್ನಿ ಅಂಜಲಿ ಜೂನ್ 5ರಂದೇ ಲಂಡನ್ಗೆ ತೆರಳಿದ್ದರು.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | 242 ಪ್ರಯಾಣಿಕರಲ್ಲಿ ಓರ್ವ ಸಾವಿನ ದವಡೆಯಿಂದ ಪಾರು
68 ವರ್ಷದ ರೂಪಾನಿ ಅವರು 2016ರಿಂದ 2021ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಭಾರತೀಯ ಜನತಾ ಪಕ್ಷ(ಬಿಜೆಪಿ) ಹಿರಿಯ ನಾಯಕರಾಗಿದ್ದರು. ರೂಪಾನಿ ಮಾತ್ರವಲ್ಲದೆ ದೇಶದಲ್ಲಿ ಹಲವು ರಾಜಕಾರಣಿಗಳು ವಿಮಾನ ದುರಂತದಲ್ಲಿ ಮಡಿದಿದ್ದಾರೆ. ಅವರ ವಿವರ ಈ ಕೆಳಗಿದೆ.
ಬಲವಂತರಾಯ್ ಮೆಹ್ತಾ (1965)
ಗುಜರಾತ್ನ ಎರಡನೇ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರು 1965ರ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ವಾಯುಪಡೆಯ ಜೆಟ್ ನಾಗರಿಕ ವಿಮಾನವನ್ನು ಹೊಡೆದುರುಳಿಸಿದಾಗ ಮೃತಪಟ್ಟರು. ಭಾರತ-ಪಾಕಿಸ್ತಾನದ ಗಡಿಯ ಬಳಿ ಅವರು ಅಧಿಕೃತ ಭೇಟಿ ನೀಡಿದ ವೇಳೆ ಈ ಘಟನೆ ಸಂಭವಿಸಿದೆ.
ಗುರ್ನಾಮ್ ಸಿಂಗ್ (1973)
ಪಂಜಾಬ್ನ ಮಾಜಿ ಮುಖ್ಯಮಂತ್ರಿ ಗುರ್ನಾಮ್ ಸಿಂಗ್ ಅವರು 1973ರ ಮೇ 31ರಂದು ದೆಹಲಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ವರದಿಯಾಗಿದೆ.
ಸಂಜಯ್ ಗಾಂಧಿ(1980)
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಅವರು 1980ರ ಜೂನ್ 23ರಂದು ದೆಹಲಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದರು. ಅಪಘಾತಕ್ಕೀಡಾದ ಎಸ್-2ಎ ವಿಮಾನವನ್ನು ಸ್ವತಃ 33 ವರ್ಷದ ಸಂಜಯ್ ಅವರೇ ಚಲಾಯಿಸುತ್ತಿದ್ದರು.
ಮಾಧವರಾವ್ ಸಿಂಧಿಯಾ(2001)
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಭೋಗಾಂವ್ನಲ್ಲಿ ನಡೆದ ಚಾರ್ಟರ್ಡ್ ವಿಮಾನ ಅಪಘಾತದಲ್ಲಿ ನಿಧನರಾದರು. ಕಾನ್ಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿತ್ತು. ಈ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು.
ಇದನ್ನು ಓದಿದ್ದೀರಾ? ಕಳೆದ ಐದು ವರ್ಷಗಳಲ್ಲಿ ಜಗತ್ತು ಕಂಡ ಭೀಕರ ವಿಮಾನ ದುರಂತಗಳಿವು
ಜಿಎಂಸಿ ಬಾಲಯೋಗಿ(2002)
2002ರಲ್ಲಿ ಲೋಕಸಭಾ ಸ್ಪೀಕರ್ ಆಗಿದ್ದ ಮತ್ತು ತೆಲುಗು ದೇಶಂ ಪಕ್ಷದ(ಟಿಡಿಪಿ) ನಾಯಕರಾಗಿದ್ದ ಜಿಎಂಸಿ ಬಾಲಯೋಗಿ ಅವರು 2002ರ ಮಾರ್ಚ್ 3ರಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ಅವಘಡ ಉಂಟಾಗಿದೆ ಎಂದು ವರದಿಯಾಗಿದೆ.
ಒ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್(2005)
2005ರಲ್ಲಿ ಕೈಗಾರಿಕೋದ್ಯಮಿಯೂ ಆಗಿದ್ದ ಹರಿಯಾಣ ವಿದ್ಯುತ್ ಸಚಿವ ಒ.ಪಿ. ಜಿಂದಾಲ್, ಮಾಜಿ ಕೇಂದ್ರ ಸಚಿವ ಸುರೇಂದರ್ ಸಿಂಗ್(ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಮಗ) 2005ರ ಮಾರ್ಚ್ 31ರಂದು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ವೈಎಸ್ಆರ್ ಎಂದೇ ಜನಪ್ರಿಯರಾದ ವೈಎಸ್ ರಾಜಶೇಖರ ರೆಡ್ಡಿ(2009)
2009ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈಎಸ್ಆರ್ ಅವರು 2009ರ ಸೆಪ್ಟೆಂಬರ್ 2ರಂದು ನಲ್ಲಮಲ ಬೆಟ್ಟಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಈ ಅಪಘಾತ ನಡೆದು ಒಂದು ದಿನದ ನಂತರ ಬೃಹತ್ ಶೋಧ ಕಾರ್ಯಾಚರಣೆ ನಡೆಸಿ ಅಪಘಾತದ ಸ್ಥಳವನ್ನು ಪತ್ತೆಹಚ್ಚಲಾಗಿತ್ತು.
ದೋರ್ಜಿ ಖಂಡು(2011)
2011ರಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಅವರು 2011ರ ಏಪ್ರಿಲ್ 30ರಂದು ಚೀನಾ ಗಡಿಯ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅಪಘಾತ ನಡೆದು ಐದು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿತ್ತು.
ರಾಜಕಾರಣಿಗಳು ಹೊರತುಪಡಿಸಿ ಜನಪ್ರಿಯ ನಟಿ ಸೌಂದರ್ಯ ಅವರೂ 2004ರ ಏಪ್ರಿಲ್ 17ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2021ರಲ್ಲಿ ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಭೀಕರ ಹೆಲಿಕಾಫ್ಟರ್ ಅಪಘಾತದಲ್ಲಿ ದೇಶದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್)ಜನರಲ್ ಬಿಪಿನ್ ರಾವತ್ ನಿಧನರಾಗಿದ್ದಾರೆ. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್ನಲ್ಲಿದ್ದ 11 ಇತರರು ಈ ದುರದೃಷ್ಟಕರ ಘಟನೆಯಲ್ಲಿ ಮೃತಪಟ್ಟಿದ್ದರು.
