ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಬಳಿಕ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, “ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಇಂದಿನ ಪಟ್ಟಿಯಲ್ಲಿ ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಆ ಹೆಸರುಗಳು ಅಂತಿಮವಾಗಲಿದೆ” ಎಂದು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಸ್ಥಳೀಯ ಶಾಸಕರು, ಮುಖಂಡರ ಜತೆ ಚರ್ಚೆ ಮಾಡಿದಾಗ ಅವರು ಯಾರ ಹೆಸರನ್ನ ಪ್ರಸ್ತಾಪ ಮಾಡಿರುತ್ತಾರೋ ಹಾಗೂ ನಮ್ಮ ಸಮೀಕ್ಷೆಗಳ ಆಧಾರದ ಮೇಲೆ ನಾವು ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. 11ರಂದು ನಡೆಯಲಿರುವ ಸಭೆ ನಂತರ ಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು” ಎಂದು ತಿಳಿಸಿದರು.
17 ಕ್ಷೇತ್ರಗಳಿಗೆ ನೀವು ಪಟ್ಟಿ ತೆಗೆದುಕೊಂಡು ಹೋಗಿದ್ದೀರಿಲ್ವಾ ಎಂದು ಪತ್ರಕರ್ತರು ಕೇಳಿದಾಗ, “ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಚರ್ಚೆ ಮಾಡುತ್ತಾರೆ. ನಾವು ಕೇವಲ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪ ಮಾಡುತ್ತೇವೆ ಅಷ್ಟೇ. ನಮ್ಮ ಪಕ್ಷದ ಸಿಇಸಿ ಸಮಿತಿ ಸದಸ್ಯರು ಅವರದೇ ಆದ ಮೂಲಗಳಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ಇವರೆಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಕರ್ನಾಟಕ ಸೇರಿ 9 ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಈಗ ಪ್ರಕಟವಾಗಿರುವ 7 ಕ್ಷೇತ್ರಗಳ ಪೈಕಿ ಎಷ್ಟರಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಕೇಳಿದಾಗ, “ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ” ಎಂದು ತಿಳಿಸಿದರು.
ಕರ್ನಾಟಕ ಸೇರಿ 9 ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶಿವಮೊಗ್ಗದಿಂದ ಸ್ಯಾಂಡಲ್‌ವುಡ್‌ನ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಬೆಂಗಳೂರು ಗ್ರಾಮಾಂತರದಿಂದ ಡಿ ಕೆ ಸುರೇಶ್ ಅವರಿಗೆ ಟಿಕೆಟ್ ನೀಡಿದೆ.
ಉಳಿದಂತೆ ವಿಜಯಪುರದಿಂದ ಹೆಚ್ ಆರ್ ಅಲಗೂರು, ಹಾಸನದಿಂದ ಶ್ರೇಯಸ್ ಪಟೇಲ್, ಮಂಡ್ಯದಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವ್ರು ಮಠ ಹಾಗೂ ತುಮಕೂರಿನಿಂದ ಎಸ್‌ಪಿ ಮುದ್ದಹನುಮೇಗೌಡರಿಗೆ ಟಿಕೆಟ್ ಘೋಷಿಸಿದೆ. ಮುದ್ದಹನುಮೇಗೌಡರು ಇತ್ತೀಚೆಗಷ್ಟೇ ಬಿಜೆಪಿಯ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.I
