ಕಲಬುರಗಿ | 10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ : ಸಚಿವ ಮಧು ಬಂಗಾರಪ್ಪ

Date:

ಪ್ರಸಕ್ತ 2024-25ನೇ ಸಾಲಿನ ಆಯವ್ಯದಲ್ಲಿ ರಾಜ್ಯದಾದ್ಯಂತ 500 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲು ಘೋಷಿಸಿದ್ದು, ಈ ಪೈಕಿ 137 ಶಾಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ಇಲ್ಲಿನ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 297 ಪಬ್ಲಿಕ್‌ ಸ್ಕೂಲ್‌ (ಕೆಪಿಎಸ್) ಇದ್ದು, ಇದರ ಜೊತೆಗೆ ಈ ವರ್ಷ 500 ಶಾಲೆ ಆರಂಭಿಸಲಾಗುವುದು” ಎಂದರು.

“ದ್ವಿಭಾಷಾ ಬೋಧನೆ, ವಿಷಯ ಶಿಕ್ಷಕರ ಜೊತೆಗೆ ದೈಹಿಕ, ಸಂಗೀತ ಶಿಕ್ಷಕರು, ಉತ್ತಮ ಮೂಲಸೌಕರ್ಯ, ಶಾಲಾ ಮೈದಾನ ಪರಿಕಲ್ಪನೆ ಒಳಗೊಂಡಿರುವ ಕೆಪಿಎಸ್ ಶಾಲೆಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ 3 ವರ್ಷದಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದರಂತೆ 3,000 ಪಬ್ಲಿಕ್ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಯಿಂದ ವಿಮುಖ ಮಾಡಿದವರನ್ನು ಮತ್ತೆ ಸರ್ಕಾರಿ ಶಾಲೆಯತ್ತ ಸೆಳೆಯುವುದರ ಜೊತೆಗೆ ದ್ವಿಭಾಷಾ ಬೋಧನೆಯಲ್ಲಿ ಮಕ್ಕಳು, ಪಾಲಕರಿಗೆ ಅವರ ಆಯ್ಕೆಯ ಭಾಷೆಯಲ್ಲಿಯೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿ ಬೋಧನೆಗೆ ಈಗಾಗಲೆ ಆದೇಶ ಹೊರಡಿಸಿದೆ. ಶಾಲೆಗಳಿಗೆ ಮ್ಯಾನೇಜ್‍ಮೆಂಟ್ ಅನುದಾನ ಇಲ್ಲದೆ ಶಾಲೆಗೆ ನೀಡಲಾದ ಗಣಕಯಂತ್ರಗಳು ಧೂಳು ತಿನ್ನುತ್ತಿದ್ದವು. ಗೃಹ ಜ್ಯೋತಿ ಯೋಜನೆಯಡಿ ಕಳೆದ ನವೆಂಬರ್ 1 ರಿಂದ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಣೆ ಪರಿಣಾಮ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದು, ಗಣಕಯಂತ್ರಗಳು ಮಕ್ಕಳ ಉಪಯೋಗಕ್ಕೆ ಬಂದಿವೆ. ಇದಲ್ಲದೆ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಿರ್ವಹಣಾ ವೆಚ್ಚ 20 ರಿಂದ 40 ಸಾವಿರ ರೂ. ಗಳಿಗೆ ಅನುದಾನ ಹೆಚ್ಚಿಸಿದೆ” ಎಂದರು.

“ಈ ಹಿಂದೆ 8ನೇ ತರಗತಿ ವರೆಗೆ ಶಾಲಾ ಮಕ್ಕಳಿಗೆ ವಾರದಲ್ಲಿ ಒಮ್ಮೆ ಮೊಟ್ಟೆ ನೀಡಲಾಗುತ್ತಿತ್ತು, ನಮ್ಮ ಸರ್ಕಾರ ಬಂದ ನಂತರ ವಾರದಲ್ಲಿ 2 ಬಾರಿ ಮೊಟ್ಟೆ ನೀಡಲಾಗುತ್ತಿದ್ದು, ಇದನ್ನು 10ನೇ ತರಗತಿ ವರೆಗೆ ವಿಸ್ತರಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡುವತ್ತ ಸಹ ಇಲಾಖೆ ಗಮನಹರಿಸುತ್ತಿದೆ” ಎಂದರು.

10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ:

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿ 14 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದು, ಇದರಲ್ಲಿ 12 ಸಾವಿರ ಜನರು ಈಗಾಗಲೆ ಶಾಲೆಗೆ ಹಾಜರಾಗಿದ್ದಾರೆ. 800-900 ಜನ ವಿವಿಧ ಕಾರಣದಿಂದ ಕೋರ್ಟ್ ಮೊರೆ ಹೋಗಿದ್ದು, ಆ ಸಮಸ್ಯೆ ಸಹ ಶೀಘ್ರ ಬಗೆಹರಿಯಲಿದೆ. 12 ಸಾವಿರ ಪೈಕಿ 3,900 ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ. 43 ಸಾವಿರ ಅತಿಥಿ ಶಿಕ್ಷಕರನ್ನು ಸಹ ಪಡೆದುಕೊಂಡಿದ್ದೇವೆ. ಕಕ ಭಾಗದಲ್ಲಿ ಕೆಕೆಆರ್‌ಡಿಬಿ 2,618 ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದು ಸ್ವಾಗತಾರ್ಹ. ಆಗಾಗ ನಿವೃತ್ತ ಕಾರಣ ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ, ಈ ವರ್ಷ ಇನ್ನು 10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ ನಡೆದಿದೆ. ಒಟ್ಟಾರೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆ ಕಲ್ಪಿಸಲು ಆದ್ಯತೆ ನೀಡುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

1,975 ಮಾದರಿ ಶಾಲೆ:

ಕೆಕೆಆರ್‌ಡಿಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, “2023-24 ಮತ್ತು 2024-25ನೇ ವರ್ಷ ಶೈಕ್ಷಣಿಕ ವರ್ಷವೆಂದು ಘೋಷಿಸಿ ಅಕ್ಷರ ಆವಿಷ್ಕಾರ ಯೋಜನೆಯಡಿ ಶಾಲೆಗಳ ಬಲವರ್ಧನೆಗೆ ಮಂಡಳಿ ಮುಂದಾಗಿದೆ. ಪ್ರದೇಶದದಲ್ಲಿ 9,247 ಶಾಲೆಗಳಿದ್ದು, ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಮಾಡಲು 2023-24ನೇ ಸಾಲಿಗೆ 1,975 ಶಾಲೆಗಳನ್ನು ಈಗಾಗಲೆ ಗುರುತಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಹಂತ ಹಂತವಾಗಿ ಪ್ರತಿ ವರ್ಷ 2,000 ರಂತೆ ಉಳಿದ ಶಾಲೆಗಳ ಬಲವರ್ಧನೆಗೆ ಯೋಜನೆ ಹಾಕಿಕೊಂಡಿದ್ದೇವೆ” ಎಂದರು.

“ಪ್ರಸಕ್ತ 2023-24ನೇ ಸಾಲಿಗೆ ಮಂಡಳಿಗೆ ಹಂಚಿಕೆ ಮಾಡಿದ 3,000 ಕೋಟಿ ರೂ. ಅನುದಾನದಲ್ಲಿ 2,610 ಕೋಟಿ ರೂ. ಗಳ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.25 ರಂತೆ 652 ಕೋಟಿ ರೂ. ಹಣ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೇವೆ. ಇದರಲ್ಲಿ ಈಗಾಗಲೆ ಪ್ರದೇಶದಲ್ಲಿನ ಶಿಕ್ಷಕರ ಕೊರತೆ ನೀಗಿಸಲು 2,618 ಅತಿಥಿ ಶಿಕ್ಷಕರನ್ನು ಪಡೆದಿದ್ದು, ಅವರ ಗೌರವ ಸಂಭಾವನೆ ಸಹ ಮಂಡಳಿ ಪಾವತಿ ಮಾಡಲಿದೆ” ಎಂದು ಮಾಹಿತಿ ನೀಡಿದರು.

ಅಕ್ಷರ ಆವಿಷ್ಕಾರ ಯೋಜನೆಯ ಪ್ರಗತಿ ವರದಿಯನ್ನು ಸಚಿವ ಎಸ್. ಮಧು ಬಂಗಾರಪ್ಪ, ಡಾ.ಅಜಯ್ ಸಿಂಗ್, ಶಾಸಕ ಎಂ.ವೈ.ಪಾಟೀಲ ಅವರು ಬಿಡುಗಡೆಗೊಳಿಸಿದರು.

ಈ ಸುದ್ದಿ ಓದಿದ್ದೀರಾ? ಅಲೆಮಾರಿಗಳ ಬದುಕು ಹಸನಗೊಳಿಸಲು ಹೋರಾಡಿದ ʼಶಾರದಾʼ ಮೇಡಂ; ಈಗ ಕೆಎಎಸ್‌ ಅಧಿಕಾರಿ

ಪತ್ರಿಕಾಗೋಷ್ಠಿಯಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶ ಬಾಬು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೆ.ಕೆ.ಆರ್.ಡಿ.ಬಿ. ಮಂಡಳಿ ಅಧೀನ ಕಾರ್ಯದರ್ಶಿ ದಯಾನಂದ ಪಾಟೀಲ ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಿಸಿಲಿನ ತಾಪಕ್ಕೆ ನಿರ್ಜಲೀಕರಣ; ಇಬ್ಬರು ಮಕ್ಕಳು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಭೀಕರ ಬಿಸಿಲಿನ ತಾಪಕ್ಕೆ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಮಾಂಗಲ್ಯ ಧಾರಣೆ ಬಳಿಕ ಮತಗಟ್ಟೆಗೆ ಬಂದು ಮತ ಚಲಾಯಿಸಿದ ದಂಪತಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾವಣೆ ಹಾಗೂ ಮತದಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ....

ಹಾಸನ ಪೆನ್‌ಡ್ರೈವ್ ಪ್ರಕರಣ | ಸಂಬಂಧಪಟ್ಟವರ ಬಂಧನಕ್ಕೆ ಆಗ್ರಹಿಸಿ ಏ.29ರಂದು ಪ್ರತಿಭಟನೆ

ನೂರಾರು ಅಶ್ಲೀಲ ವಿಡಿಯೋಗಳು, ಚಿತ್ರಗಳು ಇರುವ ಹಾಸನದ ಪೆನ್ ಡ್ರೈವ್ ಲೈಂಗಿಕ...