2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಭಾರತೀಯ ಸಂವಿಧಾನದ ಒಂದು ಭಾಗವಾದ ಆರ್ಟಿಕಲ್ 370 ಅನ್ನು ರದ್ದು ಮಾಡಿದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸರ್ಕಾರ ದಿಗ್ಬಂಧನ ವಿಧಿಸಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಾಲ್ಕು ವರ್ಷಗಳ ಬಳಿಕ ಲೋಕಸಭೆ ಚುನಾವಣೆ ನಡೆಯುತ್ತಿದೆ. ಆದರೆ ಈ ವಿಧಿ ರದ್ದು ಮಾಡಿದ್ದು ಅತೀ ದೊಡ್ಡ ಸಾಧನೆ ಎಂಬಂತೆ ಬೀಗಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮಾತ್ರ ಕಾಶ್ಮೀರದಲ್ಲಿ ಚುನಾವಣೆಯಿಂದ ದೂರ ಉಳಿದಿದೆ.
ಜಮ್ಮು ಕಾಶ್ಮೀರದಲ್ಲಿ ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉದ್ದಂಪುರ್, ಜಮ್ಮು ಮತ್ತು ಶ್ರೀನಗರದಲ್ಲಿ ಈಗಾಗಲೇ ಚುನಾವಣೆ ನಡೆದಿದೆ. ಬರಾಮುಲ್ಲಾ ಹಾಗು ಅನಂತನಾಗ-ರಾಜೌರಿಯಲ್ಲಿ ಕ್ರಮವಾಗಿ ಮೇ 20, ಮೇ 25ರಂದು ಚುನಾವಣೆ ನಡೆಯಲಿದೆ.
370ನೇ ವಿಧಿ ನೀಡುವ ವಿಶೇಷ ಸ್ಥಾನಮಾನವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅಭಿವೃದ್ಧಿಗೆ ದೊಡ್ಡ ಅಡಚಣೆಯಾಗಿತ್ತು ಎಂದು ಆಗಾಗೇ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುತ್ತಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಮಾತ್ರ ಮೋದಿ ಪಡೆ ಭಯ ಪಟ್ಟಂತಿದೆ.
ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಮೋದಿ ಇತರೆ ರಾಜ್ಯಗಳಲ್ಲಿ ಚುನಾವಣೆಯ ಪ್ರಚಾರವನ್ನೇನೋ ಮಾಡುತ್ತಿದೆ. ಆದರೆ ಈ ವಿಧಿ ರದ್ದತಿಯಿಂದ ಪ್ರಭಾವಕ್ಕೆ ಒಳಗಾಗಿರುವ ಕಾಶ್ಮೀರದಲ್ಲಿ ಬಿಜೆಪಿ ಚುನಾವಣೆಯ ಕಣಕ್ಕೆ ಇಳಿಯದಿರುವುದು ಆಶ್ಚರ್ಯ ಎನಿಸಬಹುದು. ಆದರೆ ಇದಕ್ಕೆ ಕಾರಣವೂ ಇದೆ ಅನ್ನುತ್ತಾರೆ ರಾಜಕೀಯ ವಿಶ್ಲೇಷಕರು ಮತ್ತು ವಿರೋಧ ಪಕ್ಷದ ನಾಯಕರು.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ| ಭಯೋತ್ಪಾದಕ ದಾಳಿ; ಬಿಜೆಪಿಯ ಮಾಜಿ ಸರಪಂಚ ಹತ್ಯೆ, ಪ್ರವಾಸಿಗರಿಗೆ ಗಾಯ
ಕಾಶ್ಮೀರದಲ್ಲಿ ಸ್ಪರ್ಧೆಯಿಂದ ಬಿಜೆಪಿ ದೂರ ಉಳಿದಿದ್ದೇಕೆ?
ಹಿಂದೂ ಬಹುಸಂಖ್ಯಾತ ಜಮ್ಮುವಿನ ಎರಡು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೊಂದಿದೆ. ಆದರೆ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರ ಕಣಿವೆಯ ಮೂರು ಸ್ಥಾನಗಳಲ್ಲಿ ಬಿಜೆಪಿಯ ಯಾವುದೇ ಅಭ್ಯರ್ಥಿ ಕಣಕ್ಕಿಳಿದಿಲ್ಲ. ಆ ಪ್ರದೇಶದಲ್ಲಿ ಬಿಜೆಪಿ ಮೇಲೆ ಜನರಿಗೆ ಇರುವ ಆಕ್ರೋಶವೇ ಇದಕ್ಕೆ ಪ್ರಮುಖ ಕಾರಣ ಎಂದು ರಾಜಕೀಯ ವಿಶ್ಲೇಷಕರು ಮತ್ತು ವಿರೋಧ ಪಕ್ಷದ ನಾಯಕರು ಹೇಳುತ್ತಾರೆ.
ಉದ್ದಂಪುರ್ ಮತ್ತು ಜಮ್ಮುವಿನಲ್ಲಿ ಮಾತ್ರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಉಳಿದ ಮೂರು ಕ್ಷೇತ್ರಗಳಲ್ಲಿಯೂ ಎನ್‌ಡಿಎ ಸ್ಪರ್ಧೆಯಿಂದ ದೂರ ಸರಿದಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದರೆ ಮುಸ್ಲಿಂ ಬಾಹುಳ್ಯವಿರುವ ಮೂರು ಕ್ಷೇತ್ರಗಳಲ್ಲಿ ಜೆಕೆಎನ್ಸಿ ಮತ್ತು ಜೆಕೆಪಿಡಿಪಿ ಮಾತ್ರ ಸ್ಪರ್ಧೆಯಲ್ಲಿದೆ.
ಕಾಶ್ಮೀರ ಮತ್ತು ಕೇಂದ್ರ ಸರ್ಕಾರದ ನಂಟು
ಅಷ್ಟಕ್ಕೂ ಕಾಶ್ಮೀರ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬಂಧವು ದಶಕಗಳಿಂದ ಹದಗೆಟ್ಟಿದೆ. ಕಳೆದ ಮೂರು ದಶಕಗಳಲ್ಲಿ ಭಾರತೀಯ ಆಳ್ವಿಕೆಯ ವಿರುದ್ಧ ಕಾಶ್ಮೀರದಲ್ಲಿ ದಂಗೆ ನಡೆದಿದೆ. ಈ ದಂಗೆಯ ವಿರುದ್ಧ ಮಿಲಿಟರಿ ಕ್ರಮವು ಸಾವಿರಾರು ಜನರನ್ನು ಬಲಿ ಪಡೆದುಕೊಂಡಿದೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಭಾರತೀಯ ಸಂವಿಧಾನದ ಒಂದು ಭಾಗವಾದ ಆರ್ಟಿಕಲ್ 370 ಅನ್ನು ರದ್ದು ಮಾಡಿದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸರ್ಕಾರ ದಿಗ್ಬಂಧನ ವಿಧಿಸಿತ್ತು. ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ನೂರಾರು ರಾಜಕೀಯ ಮುಖಂಡರನ್ನು ತಿಂಗಳುಗಟ್ಟಲೆ ಜೈಲಿನಲ್ಲಿಟ್ಟಿತ್ತು.
ಇದನ್ನು ಓದಿದ್ದೀರಾ? ಬೆಲೆ ಏರಿಕೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಮುಷ್ಕರ
ಅಂದಿನಿಂದ ಇಂದಿನವರೆಗೂ ಮೋದಿ ಮತ್ತು ಅವರ ಪಕ್ಷದ ನಾಯಕರುಗಳು 2019ರ ನಿರ್ಧಾರವನ್ನು ಪದೇ ಪದೇ ಸಮರ್ಥಿಸಿಕೊಂಡಿದ್ದಾರೆ. ಇದು ಈ ಪ್ರದೇಶದಲ್ಲಿ ಶಾಂತಿಯನ್ನು ತಂದಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಕಳೆದ ಕೆಲವು ವರ್ಷಗಳಲ್ಲಿ, ಸ್ಥಳೀಯ ಬಿಜೆಪಿ ನಾಯಕರು ಕಾಶ್ಮೀರದಲ್ಲಿ ತನ್ನ ಬೆಂಬಲ ನೆಲೆಯನ್ನು ವಿಸ್ತರಿಸಲು ಮನೆ-ಮನೆಗೆ ಪ್ರಚಾರವನ್ನು ಮಾಡುತ್ತಾ ಬಂದಿದ್ದಾರೆ. ಹಾಗಿರುವಾಗ ಬಿಜೆಪಿಯು ಕಾಶ್ಮೀರದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವುದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಬಿಜೆಪಿ ನಾಯಕರುಗಳು ಹೇಳುವುದೇನು?
ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಚಾರ್ ಸೋ ಪಾರ್ (400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು) ಎಂದು ಹೇಳಿಕೊಂಡು ಬರುತ್ತಿರುವಾಗ ಜಮ್ಮು ಮತ್ತು ಕಾಶ್ಮೀರದ ಬಿಜೆಪಿಯ ಮುಖ್ಯ ವಕ್ತಾರ ಸುನಿಲ್ ಸೇಠ್ ಚುನಾವಣೆ ಆದ್ಯತೆಯಲ್ಲ, ಜನರ ಹೃದಯ ಗೆಲ್ಲುವುದು ಮುಖ್ಯ ಎಂದು ಹೇಳಿಕೊಂಡಿದ್ದಾರೆ.
“ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪೂರ್ಣವಾಗಿ ಸೇರಿಸಲು ನಮಗೆ 75 ವರ್ಷಗಳು ಬೇಕಾಯಿತು. ನಾವು ಕೇವಲ ಸ್ಥಾನಗಳನ್ನು ಗೆಲ್ಲಲು ಈ ಕಸರತ್ತು ಮಾಡಿದ್ದೇವೆ ಎಂಬ ಅನಿಸಿಕೆಯನ್ನು ಸೃಷ್ಟಿಸಲು ನಾವು ಬಯಸಲ್ಲ” ಎಂದು ಬಿಜೆಪಿ ವಕ್ತಾರ ಸುನಿಲ್ ಹೇಳಿದ್ದಾರೆ.
ಆದರೆ ಈ ಪ್ರದೇಶದಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ ಎಂದು ಪಕ್ಷದ ನಾಯಕತ್ವಕ್ಕೆ ತಿಳಿದಿರುವುದೇ ಈ ಸ್ಥಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಎನ್ನುತ್ತಾರೆ ವಿಮರ್ಶಕರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ : ಮಹಾ ವಿಕಾಸ್ ಅಘಾಡಿಯ ಐಕಾನ್ ಉದ್ಧವ್ ಠಾಕ್ರೆ!
“ವಿಶೇಷ ಸ್ಥಾನಮಾನ ತೆಗೆದು ಹಾಕಿದ ‘ಸಾಧನೆ’ ಎಂಬುವುದು ಇತರ ರಾಜ್ಯಗಳಲ್ಲಿ ಮಾರಾಟದ ಸರಕಾಗಬಹುದು. ಆದರೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವುದು ಇಲ್ಲಿಯ ಜನರಿಗೆ ಇಷ್ಟವಾಗಿಲ್ಲ” ಎಂದು ರಾಜಕೀಯ ವಿಶ್ಲೇಷಕ ನೂರ್ ಅಹ್ಮದ್ ಬಾಬಾ ತಿಳಿಸಿದ್ದಾರೆ.
ಇನ್ನೊಂದೆಡೆ ಮೋದಿ ಪಕ್ಷ ತನ್ನ 2019ರ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದ್ದಂತೆ ಚುನಾವಣೆಯಿಂದ ಹಿಂದೆ ಸರಿದಿದೆ ಎಂದು ವಿರೋಧ ಪಕ್ಷದ ನಾಯಕರು ಲೇವಡಿ ಮಾಡಿದ್ದಾರೆ. “ಆರ್ಟಿಕಲ್ 370 ರದ್ದತಿಯಿಂದ ಜನರು ಸಂತೋಷವಾಗಿದ್ದರೆ, ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿಯುತ್ತಿರಲಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಸದಸ್ಯ ಒಮರ್ ಅಬ್ದುಲ್ಲಾ ಹೇಳುತ್ತಾರೆ.
#WATCH | Addressing a public gathering in Sonipat, Haryana, Prime Minister Narendra Modi says, “A leader of INDI alliance told the media- five years five Prime Ministers. You tell me will the country benefit from this?… This is a chance to run the government & not to eat… pic.twitter.com/jXvONuMaMa
— ANI (@ANI) May 18, 2024
ಒಟ್ಟಿನಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ಚುನಾವಣಾ ಪ್ರಚಾರದ ವಿಷಯವಾಗಿದ್ದರೂ ಕೂಡಾ ಕಾಶ್ಮೀರದಲ್ಲಿ ಅದು ಚುನಾವಣಾ ಪ್ರಚಾರದ ವಿಚಾರವಾಗಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.
ಅಂಡು ಸುಟ್ಟ ಬೆಕ್ಕಿನಂತೆ ಕಾಶ್ಮೀರದ ಚುನಾವಣೆಯಿಂದ ಓಡಿ ಹೋಗಿರುವುದು ಉತ್ತರ ಕುಮಾರನ ಪೌರುಷವೇ ಸರಿ !