ಮೈಸೂರು ವಿಶ್ವವಿಖ್ಯಾತ ನಗರ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ರಾಜಕೀಯವಾಗಿ ತನ್ನದೇ ಛಾಪನ್ನು ಹೊಂದಿದೆ. ಕರ್ನಾಟಕ ಏಕೀಕರಣಕ್ಕೂ ಮುನ್ನ ಮೈಸೂರು ರಾಜ್ಯವಾಗಿತ್ತು. ಈಗಲೂ ಹಳೆ ಮೈಸೂರು ಭಾಗ ಎನ್ನುವುದು ರಾಜಕೀಯವಾಗಿ ವಾಡಿಕೆ. ಕೊಡಗು ಪ್ರವಾಸಿಗರ ಸ್ವರ್ಗ ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಹೊಂದಿದ ಕಾಫಿ ನಾಡು.
ಮೈಸೂರು ಎಂದರೆ ವಿಶ್ವವಿಖ್ಯಾತ ದಸರಾ, ನಾಡದೇವತೆ ಚಾಮುಂಡೇಶ್ವರಿ, ಬಕರ್ ಹುಕುಂ ಹರಿಕಾರ ಡಿ.ದೇವರಾಜ ಅರಸು, ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿಗೆ ಬರ್ತಾರೆ. ಇನ್ನು ಕೊಡಗು ಅಂದಕ್ಷಣ ಕಾವೇರಿ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಒಟ್ಟು 26 ಲಕ್ಷದ 99 ಸಾವಿರದ 835 ಮತದಾರರು ಇದ್ದಾರೆ (ಜಿಲ್ಲಾಧಿಕಾರಿ ಪತ್ರಿಕಾ ಹೇಳಿಕೆ ಅನುಸಾರ). ಇದರಲ್ಲಿ ಒಟ್ಟು ಪುರುಷ ಮತದಾರರು 13 ಲಕ್ಷದ 31 ಸಾವಿರದ 772. ಮಹಿಳಾ ಮತದಾರರ ಸಂಖ್ಯೆ 13 ಲಕ್ಷದ 67 ಸಾವಿರದ 843. ಇದರಲ್ಲಿ 220 ಜನ ಲಿಂಗತ್ವ ಅಲ್ಪಸಂಖ್ಯಾತರು ಸಹ ಸೇರಿದ್ದಾರೆ.
ಮೈಸೂರು-ಕೊಡಗು 17 ಲೋಕಸಭಾ ಚುನಾವಣೆ ಕಂಡಿದೆ ಇದರಲ್ಲಿ 12 ಭಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಒಮ್ಮೆ ಗೆದ್ದಿದೆ, ಬಿಜೆಪಿ ನಾಲ್ಕು ಬಾರಿ ವಿಜಯಿಯಾಗಿದೆ. ಜನತಾ ಪರಿವಾರ (ಜೆಡಿಎಸ್, ಜೆಡಿಯು) ಒಮ್ಮೆಯೂ ಗೆದ್ದಿಲ್ಲ.
1952ರಲ್ಲಿ ಎಂ.ಎಸ್. ಗುರುಪಾದಸ್ವಾಮಿ ಕಿಸಾನ್ ಮಜ್ದೂರ್ ಪಾರ್ಟಿ.
1957 ಮತ್ತು 1962 ಎಂ. ಶಂಕರಯ್ಯ, ಕಾಂಗ್ರೆಸ್
1967 ಮತ್ತು 1971 ತುಳಸಿದಾಸ ದಾಸಪ್ಪ, ಕಾಂಗ್ರೆಸ್
1977 ಎಸ್.ಎಂ. ಸಿದ್ದಯ್ಯ, ಕಾಂಗ್ರೆಸ್
1980 ಎಂ. ರಾಜಶೇಖರ ಮೂರ್ತಿ, ಕಾಂಗ್ರೆಸ್
1984 ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್, ಕಾಂಗ್ರೆಸ್
1991 ಚಂದ್ರಪ್ರಭ ಅರಸ್, ಕಾಂಗ್ರೆಸ್
1996 ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್, ಕಾಂಗ್ರೆಸ್
2004 ಸಿ.ಎಚ್. ವಿಜಯ್ ಶಂಕರ್, ಭಾರತೀಯ ಜನತಾ ಪಾರ್ಟಿ
2009 ಎಚ್. ವಿಶ್ವನಾಥ್, ಕಾಂಗ್ರೆಸ್
2014 ಮತ್ತು 2019 ಪ್ರತಾಪ್ ಸಿಂಹ, ಬಿಜೆಪಿ
ರಾಜಕೀಯವಾಗಿ ಜಾತಿವಾರು ಲೆಕ್ಕಾಚಾರ ಮಾಡುವುದೇ ಆದರೆ ಈ ಕ್ಷೇತ್ರದಲ್ಲಿ ಒಕ್ಕಲಿಗರದ್ದೆ ಪ್ರಾಬಲ್ಯ. ಬಹುಕಾಲ ಜಾತಿಯ ಹಿಡಿತವಿರದೆ ಪಕ್ಷಾಧಾರಿತವಾಗಿ ಚುನಾವಣೆ ಕಂಡಿವೆ. ಆದರೆ, ಇತ್ತೀಚೆಗೆ ಪಕ್ಷ ಮೀರಿದ ಜಾತಿ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಳೆದೆರಡು ಲೋಕಸಭಾ ಚುನಾವಣೆ ಸೂಕ್ಷ್ಮವಾಗಿ ಗಮನಿಸಿದಾಗ ಜೆಡಿಎಸ್ ಅಸ್ತಿತ್ವ ಹೊಂದಿಲ್ಲದೇ ಇದ್ದರುಸಹ ಬಿಜೆಪಿ ತೆರೆಮರೆಯ ಸಾಂಗತ್ಯ ಬಿಜೆಪಿ ಗೆಲುವಿಗೆ ಪೂರಕವಾಗಿರುವುದನ್ನು ಅಲ್ಲಗಳೆಯುವಂತೆಯಿಲ್ಲ.
ಆದರೆ, ಈ ಭಾರಿ ಚುನಾವಣೆ ರಂಗೇರಿದ್ದು ವ್ಯಕ್ತಿಗಳ ನಡುವಣ ಚುನಾವಣೆ ಆಗದೆ, ಪಕ್ಷಗಳ ಚುನಾವಣೆ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಪ್ರತಾಪ್ ಸಿಂಹ ಅಭ್ಯರ್ಥಿ ಆಗಿದ್ದರೆ ಒಂದು ವೇಳೆ ಜನರ, ಸಂಘಟನೆಗಳ ಆಕ್ರೋಶ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅನಗತ್ಯ, ವಿವಾದಾತ್ಮಕ ಹೇಳಿಕೆಗಳಿಂದ ಜನರ ಭಾರಿ ಆಕ್ರೋಶ ಕ್ಷೇತ್ರದಲ್ಲಿ ನಿರ್ಮಾಣ ಆಗಿತ್ತು. ಯಾರೇ ಕೆಲಸ ಮಾಡಿದ್ದರು ನಾನೇ ಮಾಡಿದೆ ಎಂದು ಹೇಳುವ ಪ್ರತಾಪ್ ಸಿಂಹ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಗಣ್ಯ. ಅಭಿವೃದ್ಧಿ ಕುರುಹು ಇರದಂತೆ ನಡೆದುಕೊಂಡಿದ್ದು ಅಲ್ಲದೆ, ಜನಸ್ನೇಹಿ ಆಗದೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಜನರ ಮುಂದೆ ಬಾರದ ಸಂಸದರಾಗಿದ್ದಿದ್ದು ಜನರ ಆಕ್ರೋಶಕ್ಕೆ ಕಾರಣ ಎನ್ನಬಹುದು.
ಇನ್ನ ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಸಿಎಂ ತವರೂರು ಪ್ರತಿಷ್ಟೆಯ ಕಣ ಆಗಿತ್ತು. ಇವರಿಗೆ ಅಭ್ಯರ್ಥಿ ಹುಡುಕುವುದೇ ಚಿಂತೆ ಆಗಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಬಿಜೆಪಿ ಅಭ್ಯರ್ಥಿ ಆಗಿರುವುದು ವ್ಯಕ್ತಿಗಳ ನಡುವಿನ ಕಾದಾಟಕ್ಕೆ ತೆರೆ ಬಿದ್ದಂತೆದೆ. ಈ ಬಾರಿ ಪಕ್ಷಗಳ ಜಿದ್ದಾಜಿದ್ದಿಗೆ ಕಣ ಸಜ್ಜಾಗಿದೆ. ಅದರಲ್ಲೂ ಸಿಎಂ ತವರಿನಲ್ಲಿ ಕಳೆದುಕೊಂಡಿರುವ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇ ಬೇಕು ಎನ್ನುವುದು ಕಾಂಗ್ರೆಸ್ ಕಾರ್ಯತಂತ್ರ. ಬಿಜೆಪಿ ಪಕ್ಷಕ್ಕೆ ರಾಜಕೀಯವಾಗಿ ಅಸ್ತಿತ್ವದ ಹೊಣೆಗಾರಿಕೆ. ಕ್ಷೇತ್ರದಲ್ಲಿ ಮೋದಿಯ ಮೋಡಿ, ಅಲೆ ಯಾವುದು ಇಲ್ಲ.
ಜನರ ಮುಂದೆ ಈ ಭಾರಿ ಅಭಿವೃದ್ಧಿ ವಿಚಾರ ಮುಂದಿಟ್ಟು ಹೋಗಬೇಕಾದ ಸ್ಥಿತಿ ಇದೆ. ಆದರೆ, ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ಎದುರಿಸುವುದು ನಿಶ್ಚಿತ. ಕಾಂಗ್ರೆಸ್ ಜನರಿಗೆ ನೀಡಿರುವ ಗ್ಯಾರೆಂಟಿ ಮುಂದಿಟ್ಟು ಮತ ಗಿಟ್ಟಿಸುವುದೇ ಕಾದು ನೋಡಬೇಕಿದೆ.
