2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೆ, ಇನ್ನು ಕೆಲವು ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಗೆಲುವು ಕಂಡಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರ ಒಂದೇ ಚುನಾವಣೆಯಲ್ಲಿ ಎರಡು ದಾಖಲೆಗಳನ್ನು ಸೃಷ್ಟಿಸಿದೆ. ಬಿಜೆಪಿಯ ಶಂಕರ್ ಲಾಲ್ವಾನಿ 11 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು, ಅವರು 12,26,571 ಮತಗಳನ್ನು ಪಡೆದಿದ್ದಾರೆ. ಅವರ ನಿಕಟ ಪ್ರತಿಸ್ಪರ್ಧಿ ಬಹುಜನ ಸಮಾಜ ಪಕ್ಷದ ಸಂಜಯ್ ಕೇವಲ 51,659 ಮತಗಳನ್ನು ಗಳಿಸಿದ್ದಾರೆ. ಲಾಲ್ವಾನಿಯವರ ಗೆಲುವಿನ ಅಂತರ ದೇಶದ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಎನ್ನಲಾಗಿದೆ.
ಕುತೂಹಲಕಾರಿಯಾಗಿ, ಇದರ ಜತೆಗೆ ಈ ಕ್ಷೇತ್ರದಲ್ಲಿ ಚಲಾವಣೆಯಾದ ನೋಟಾ 2,18,674 ಇದುವರೆಗಿನ ಗರಿಷ್ಠ ಎನಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿದೆ.
ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು ಬರೋಬ್ಬರಿ 5,72,155 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಸಸಿಕಾಂತ್ ಸೆಂಥಿಲ್ 7,96,956 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಾಲಗಣಪತಿ ವಿ 2,24,801 ಮತಗಳನ್ನು ಪಡೆದುಕೊಂಡಿದ್ದಾರೆ.
ಮಂಡ್ಸೋರ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಸುಧೀರ್ ಗುಪ್ತಾ ಬರೋಬ್ಬರಿ 5,00,655 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ದಿಲೀಪ್ ಸಿಂಗ್ ಗುರರ್ಜಾರ್ ಕಣದಲ್ಲಿದ್ದರು. ಸುಧೀರ್ ಗುಪ್ತಾ ಬರೋಬ್ಬರಿ 9,45,761 ಮತಗಳನ್ನು ಪಡೆದಿದ್ದಾರೆ.
ಮಧ್ಯಪ್ರದೇಶದ ವಿಧಿಶಾ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದ ಶಿವರಾಜ್ ಸಿಂಗ್ ಚೌಹಾಣ್ ಬರೋಬ್ಬರಿ 11,6,460 ಮತ ಪಡೆದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಾಪ್ ಭಾನು ಶರ್ಮಾ ಕಣದಲ್ಲಿದ್ದು 2,95,052 ಮತ ಪಡೆದಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಬರೋಬ್ಬರಿ 8,21,408 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಅಲೋಕ್ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿ ಅರುಣ್ ಶ್ರೀನಿವಾಸ್ತವ್ ವಿರುದ್ಧ ಬರೋಬ್ಬರಿ 5,01,499 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲೋಕ್ ಶರ್ಮಾ ಅವರು 9,81,109 ಮತ ಪಡೆದಿದ್ದಾರೆ.
ಖಜುರಾಹೊ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆಗಿಳಿದಿದ್ದ ವಿಷ್ಣು ದತ್ತ ಶರ್ಮಾ ಅವರು ಬಹುಜನ್ ಸಮಾಜ ಪಾರ್ಟಿಯ ಕಾಮಲೇಶ್ ಕುಮಾರ್ ವಿರುದ್ಧ ಜಯಗಳಿಸಿದ್ದಾರೆ. ಬರೋಬ್ಬರಿ 7,72,774 ಮತ ಪಡೆದಿದ್ದ ಅವರು 5,41,229 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೀಳಿದಿದ್ದ ಬಿಜೆಪಿ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂದ್ಯಾ ಕಾಂಗ್ರೆಸ್ ಅಭ್ಯರ್ಥಿ ಯಾದ್ವೇಂದ್ರ ರಾವ್ ದೇಶರಾಜ್ ಸಿಂಗ್ ಅವರನ್ನು ಸೋಲಿಸಿ 5,40,929 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ್ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಅಭಿಷೇಕ್ ಬ್ಯಾನರ್ಜಿ 10,48,230 ಮತ ಪಡೆದಿದ್ದಾರೆ. ಇವರ ವಿರುದ್ಧ ನಿಂತಿದ್ದ ಬಿಜೆಪಿಯ ಅಭಿಜಿತ್ ದಾಸ್ 3,37,300 ಮತ ಪಡೆದಿದ್ದು, ಬರೋಬ್ಬರಿ 7,10,930 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗಾಂಧಿನಗರ ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್ಭಾಯ್ ಪಟೇಲ್ ವಿರುದ್ಧ 7,44,716 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಮಿತ್ ಶಾ 10,10,972 ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್ಭಾಯ್ ಪಟೇಲ್ 2,66,256 ಮತ ಪಡೆದಿದ್ದಾರೆ.
ನವಸಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ಪಾಟೀಲ ಅವರು ಒಟ್ಟು 10,31,065 ಮತಗಳನ್ನು ಪಡೆದುಕೊಂಡಿದ್ದು, 7,73,551 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 2,57,514 ಮತಗಳನ್ನು ಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ನೈಷಧಭಾಯಿ ಭೂಪತಭಾಯ್ ದೇಸಾಯಿ ಅವರನ್ನು ಸಿ.ಟಿ. ಪಾಟೀಲ ಮಣಿಸಿ ಭರ್ಜರಿ ವಿಜಯ ಸಾಧಿಸಿದ್ದಾರೆ.
ಅತಿ ಕಡಿಮೆ ಅಂತರದಿಂದ ಗೆಲುವು
ಮಹಾರಾಷ್ಟ್ರದ ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಏಕನಾಥ್ ಶಿಂಧೆ ಶಿವಸೇನೆ ಅಭ್ಯರ್ಥಿ ರವೀಂದ್ರ ದತ್ತಾರಾಮ್ ವಾಯ್ಕರ್ ಪ್ರತಿಸ್ಪರ್ಧಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು 48 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ಕ್ಷೇತ್ರದಲ್ಲಿ ಎನ್‌ಸಿಪಿ (ಶರದ್ ಪವಾರ್) ಅಭ್ಯರ್ಥಿ ಬಜರಂಗ್ ಮನೋಹರ್ ಸೋನ್ವಾನೆ ಅವರು ಬಿಜೆಪಿಯ ಪಂಕಜಾ ಮುಂಡೆ ಅವರನ್ನು 6,553 ಮತಗಳಿಂದ ಸೋಲಿಸಿದ್ದಾರೆ.
ಕೇರಳದ ಆಟಿಂಗಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಡೂರು ಪ್ರಕಾಶ್ ಸಿಪಿಐಎಂ ಅಭ್ಯರ್ಥಿ ವಿ.ಜಾಯ್ ವಿರುದ್ಧ 648 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ರಾಜಕಾರಣದಲ್ಲಿ ಗೀತಾ ಶಿವರಾಜ್‌ಕುಮಾರ್‌ಗೆ ಸಿಗೋದೆ ಇಲ್ವಾ ನೆಲೆ?
ಕರ್ನಾಟಕದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 3,37,428, ಎಚ್.ಡಿ.ಕುಮಾರಸ್ವಾಮಿ (ಮಂಡ್ಯ) 2,84,620, ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) 2,77,083, ಡಾ.ಸಿ.ಎನ್.ಮಂಜುನಾಥ್ (ಬೆಂಗಳೂರು ಗ್ರಾಮೀಣ) 2,69,647 ಹಾಗೂ ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ) 2,59,476 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.