ಲೋಕಸಭೆ | ಕರ್ನಾಟಕದಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸುವುದು ಸಾಧ್ಯವಿಲ್ಲ ಎನ್ನುತ್ತಿದೆ ಇದುವರೆಗಿನ ಇತಿಹಾಸ

Date:

Advertisements
ಬಿಜೆಪಿ ಅಧಿಕಾರಕ್ಕೆ ಬಂದು, ಒಂದು ದೇಶ, ಒಂದು ತೆರಿಗೆ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಬ್ಬ ನಾಯಕ ಅನ್ನುತ್ತದೆಯೋ ಆಗ ಕಾಂಗ್ರೆಸ್‌ ಅದಕ್ಕಿಂತ ಉತ್ತಮ ಅನಿಸತೊಡಗಿದೆ. ಗುಜರಾತ್‌ ಮಾದರಿ ಅಲ್ಲ, ಕರ್ನಾಟಕ ಮಾದರಿ, ತಮಿಳುನಾಡು ಮಾದರಿ ಇತ್ಯಾದಿಗಳೂ ಮುನ್ನೆಲೆಗೆ ಬರುವಂತೆ ಒಂದು ಆಂದೋಲನ ಬೆಳೆಯುವ ಅಗತ್ಯವೂ ಇದೆ. ಅಂತಹ ಕರ್ನಾಟಕ ಮಾದರಿಗೆ ಇಂಬು ಕೊಡುವ ಕೆಲಸ ಎಷ್ಟಾಗುತ್ತೆ, ಹೇಗೆ ಆಗುತ್ತೆ ನೋಡಬೇಕು.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ 135 ಸೀಟು ಪಡೆದು ಕಾಂಗ್ರೆಸ್‌ ಅಧಿಕಾರ ರಚಿಸಿದ್ದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕರ್ನಾಟಕದಲ್ಲಿ ಅದೇ ಪ್ರಮಾಣದಲ್ಲಿ ಸೋಲಿಸುವುದು ಬಹಳ ಕಷ್ಟ. ಆಶ್ಚರ್ಯವೆನಿಸುವ ರೀತಿಯಲ್ಲಿ ಇರುವ ಕರ್ನಾಟಕದ ಮತದಾರರ ಒಲವಿನ ಸ್ವರೂಪವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. 1991ರಿಂದ ಇಲ್ಲಿಯವರೆಗೆ ಕರ್ನಾಟಕದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಬಿಜೆಪಿಯ ಪರ ಒಲವು ತೋರಿಸಿದ್ದಾರೆ ಎನ್ನುವುದನ್ನು ಗಮನಿಸಿದರೆ, ಬಿಜೆಪಿಯನ್ನು ಕರ್ನಾಟಕದಲ್ಲಿ ಒಂದಂಕಿಗೆ ಇಳಿಸಬಹುದು ಎಂದು ಅನ್ನಿಸುವುದೇ ಇಲ್ಲ.

ಬಿಜೆಪಿಯ ಪರವಾದ ಮತದಾರರ ಆ ಒಲವಿನ ಸ್ವರೂಪ ಮತ್ತು ಪ್ರಮಾಣ ಏನಿದೆ ಅನ್ನೋದನ್ನ ನೋಡೋಣ.

ಭಾರತೀಯ ಜನತಾ ಪಕ್ಷ- ಬಿಜೆಪಿ ಅಸ್ತಿತ್ವಕ್ಕೆ ಬಂದಿದ್ದೇ 1980ರಲ್ಲಿ. ಅದಕ್ಕೆ ಮುಂಚೆ ಅದು ಜನಸಂಘ ಎನ್ನುವ ಪಕ್ಷದ ರೂಪದಲ್ಲಿ ಅಸ್ತಿತ್ವದಲ್ಲಿದ್ದು 1977ರ ಚುನಾವಣೆಗೆ ಮುಂಚೆ ಜನತಾಪಕ್ಷದಲ್ಲಿ ವಿಲೀನವಾಗಿತ್ತು. ಜನತಾಪಕ್ಷ ಹೋಳಾದಾಗ, ಈ ಹಿಂದೆ ಜನಸಂಘದಲ್ಲಿದ್ದ ಆರೆಸ್ಸೆಸ್‌ನವರು ಭಾರತೀಯ ಜನತಾಪಕ್ಷ- ಬಿಜೆಪಿಯನ್ನು ಮಾಡಿಕೊಂಡರು. 1980ರ ಲೋಕಸಭಾ ಚುನಾವಣೆಯಲ್ಲಿ ಅವರು ಕರ್ನಾಟಕದಲ್ಲಿ ಒಂದು ಸ್ಥಾನಕ್ಕೂ ಸ್ಪರ್ಧೆ ಮಾಡಿರಲಿಲ್ಲ. 1984ರಲ್ಲಿ ಬಿಜೆಪಿಯು ಕೇವಲ 6 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 1 ಸ್ಥಾನದಲ್ಲೂ ಗೆಲ್ಲಲಿಲ್ಲ. ಆದರೂ 4 ಸ್ಥಾನಗಳಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದರು. ಆ ಚುನಾವಣೆಯಲ್ಲಿ ಅವರಿಗೆ ಶೇ.4.74ರಷ್ಟು ಮತಗಳು ಬಂದಿದ್ದವು. ಇನ್ನು 1989ರಲ್ಲಿ ನಡೆದ ಚುನಾವಣೆಯ ಹೊತ್ತಿಗೆ ಅದರ ಮತ ಗಳಿಕೆ 2.6%ಕ್ಕೆ ಇಳಿದುಬಿಟ್ಟಿತು. ಅದರ ನಂತರ 1991ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಅದರ ಮತ ಗಳಿಕೆ ಶೇ.29.3ಕ್ಕೆ ಏರಿತಲ್ಲದೇ 4 ಸೀಟುಗಳೂ ಬಂದವು. ಅದರ ನಂತರ ನಡೆದ ಅಸೆಂಬ್ಲಿ ಚುನಾವಣೆ ಅಂದರೆ 1994ರಲ್ಲಿ, ಅಸೆಂಬ್ಲಿಯಲ್ಲೂ ಶೇ.17ರಷ್ಟು ಓಟುಗಳು ಬಂದವು. ಅಲ್ಲಿಂದ ಶುರು ಮಾಡಿ ಇಲ್ಲಿಯವರೆಗೂ (2013ರಲ್ಲಿ ಅದರಿಂದ ಹೋಳಾದ ಪಕ್ಷಗಳ ಲೆಕ್ಕವನ್ನೂ ಹಿಡಿದರೆ) ಅಸೆಂಬ್ಲಿಯಲ್ಲಿ ಅದರ ಮತಗಳಿಕೆ ಏರುತ್ತಲೇ ಹೋಯಿತು. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅದರ ಮತಗಳಿಕೆ ಶೇ.29ರಿಂದ ಶೇ.24.8ಕ್ಕೆ ಕಡಿಮೆಯಾದರೂ, ಸೀಟುಗಳು 4ರಿಂದ 6ಕ್ಕೆ ಹೆಚ್ಚಿತು. ಅಲ್ಲಿಂದ ಮುಂದಕ್ಕೆ ಲೋಕಸಭಾ ಚುನಾವಣೆಗಳಲ್ಲೂ ಕರ್ನಾಟಕದಲ್ಲಿ ಅದರ ಮತಗಳಿಕೆ ಇಂದಿನವರೆಗೆ ಏರುತ್ತಲೇ ಹೋಗಿದೆ. ಅಷ್ಟು ಮಾತ್ರವಲ್ಲಾ ಅಲ್ಲಿಂದ ಮುಂದೆ ಬಿಜೆಪಿಗೆ ಎಂದೂ ಕರ್ನಾಟಕದಲ್ಲಿ ಸಿಂಗಲ್‌ ನಂಬರ್‌ ಗೆ ಬಿಜೆಪಿಯ ಸೀಟು ಇಳಿದೇ ಇಲ್ಲ.

Advertisements

ಇದರಲ್ಲಿ ಗಮನಿಸಬೇಕಾದ್ದು ಓಟು ಗಳಿಕೆಯದ್ದು. ಕೆಳಗಿನ ಕೋಷ್ಟಕ ಅದನ್ನು ಸ್ಪಷ್ಟಪಡಿಸುತ್ತದೆ.

ಕರ್ನಾಟಕದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಸೀಟುಗಳುಮತಗಳಿಕೆ ಪ್ರಮಾಣಸಮೀಪದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂದಿದ್ದ ಮತವಿ.ಸಭೆಗೆ ಹೋಲಿಸಿದರೆ ಲೋಕಸಭೆಯ ಮತಪ್ರಮಾಣ
198404.74%7.9% (1983), 3.9% (1985)
198902.6%4.1% (1989)– 1.5%
1991429.3%17% (1994)+ 12.3%
1996624.8%17% (1994)+7.8%
199813+326.9 (+11.5%)20.7% (1999)+6.2% ++
19997+327.2 (+13.3%)20.7% (1999) ಎರಡೂ ಚುನಾವಣೆಗಳು ಒಟ್ಟಿಗೇ ನಡೆದಿದ್ದರೂ+ 6.7%++
20041834.8%28.3% (2004) ಎರಡೂ ಚುನಾವಣೆಗಳು ಒಟ್ಟಿಗೇ ನಡೆದಿದ್ದರೂ+ 6.5%
20091941.6%33.9% (2008)+ 7.7%
20141743.4%19.9%+9.8%+2.7% (BJP+KJP+BSR) = 32.4% (2013)+11.0%
20192551.7%36.35% (2018)+ 15.35%
2024  36.00% (2023) 

ಇದರಿಂದ ಸ್ಪಷ್ಟವಾಗುವುದು ಏನೆಂದರೆ, ಲೋಕಸಭೆಯಲ್ಲಿ ಕರ್ನಾಟಕದ ಮತದಾರರು ಬಿಜೆಪಿಯನ್ನೇ ಆರಿಸಿದ್ದಾರೆ. ಅದರಲ್ಲೂ ಇಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ… ಲೋಕಸಭೆಯ ವಿಚಾರಕ್ಕೆ ಬಂದಾಗ ಓಟನ್ನು ಬಿಜೆಪಿಗೆ ಹಾಕಿದ್ದಾರೆ. ಒಂದು ಸಾರಿ ಎರಡೂ ಚುನಾವಣೆಗಳೂ ಒಟ್ಟಿಗೇ ನಡೆದಿದ್ದರೂ… ಅಸೆಂಬ್ಲಿಗೆ ಒಂದು ಪಕ್ಷಕ್ಕೆ ಮತ ಹಾಕಿದ 6.5% ಮತದಾರರು ಲೋಕಸಭೆಗೆ ಮಾತ್ರ ಬಿಜೆಪಿಯನ್ನು ಆರಿಸಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ?: ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ ಮಾನವೀಯತೆ ಮರೆತ ಶೋಭಾ ಕರಂದ್ಲಾಜೆ

ಇದಕ್ಕೆ ಕಾರಣವೇನು? ಅಂದರೆ ಕರ್ನಾಟಕದ ಮತದಾರರು ತಮ್ಮ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಹೆಚ್ಚು ಒಲವು ತೋರಿಸಿದ್ದಾರೆ ಎನ್ನುವುದಲ್ಲದೇ ಬೇರೇನು ಕಾರಣ ಇರಲು ಸಾಧ್ಯ? ಅದನ್ನು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಒಲವು ಅಂತ ಕರೆಯಬಹುದು ಅಥವಾ ಬಿಜೆಪಿಯು ಅಖಿಲ ಭಾರತ ಮಟ್ಟದಲ್ಲಿ ಮುಂದಿಡುತ್ತಿರುವ ನೆರೇಟಿವ್‌, ಅವರಿಗೆ ಏಕೆ ಓಟು ಹಾಕಬೇಕೆಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೋ ಅದನ್ನು ಕರ್ನಾಟಕದ ಮತದಾರರು ಒಪ್ಪಿದ್ದಾರೆ ಎಂದು ಹೇಳಬಹುದು. ಇನ್ನೂ ಒಂದು ವಿಷಯ ಅಂದರೆ, ಸ್ಥಳೀಯವಾಗಿ – ಕರ್ನಾಟಕವನ್ನು ಮುನ್ನಡೆಸಲು ಇಲ್ಲಿನ ನಾಯಕತ್ವ ಬಿಜೆಪಿಯ ನಾಯಕತ್ವಕ್ಕಿಂತ ಉತ್ತಮ ಅನಿಸಿದರೂ, ಕಾಂಗ್ರೆಸ್ಸಿನ ಅಖಿಲ ಭಾರತ ನಾಯಕತ್ವಕ್ಕಿಂತ ಬಿಜೆಪಿಯ ಅಖಿಲ ಭಾರತ ನಾಯಕತ್ವ ಉತ್ತಮ ಎಂದು ಭಾವಿಸಿರಬಹುದು. ಅದೇನೇ ಇದ್ದರೂ ಕಳೆದ ಇಪ್ಪತ್ತು ವರ್ಷಗಳ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ಕರ್ನಾಟಕದ ಜನರ ಆಯ್ಕೆ ಎಂದು ಕಾಣುತ್ತಿದೆ. ಅಷ್ಟೇ ಅಲ್ಲದೇ ಅದಕ್ಕಿರುವ ಬೆಂಬಲ ಹೆಚ್ಚುತ್ತಲೇ ಹೋಗಿದೆ.

ಇದರ ಅರ್ಥ ಈ ಸಾರಿಯ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ 2019ಕ್ಕಿಂತ ಹೆಚ್ಚಾಗುತ್ತದಾ? ಖಂಡಿತಾ ಇಲ್ಲ. ಏಕೆಂದರೆ 2019ರ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದವು. ಹಾಗೆ ಮಾಡಿದಾಗ ಇರುವ ಪ್ರಬಲ ಎದುರಾಳಿಯ ಸುತ್ತ ಇನ್ನೊಂದಷ್ಟು ಮತ ಕ್ರೋಡೀಕರಣ ಆಗುವುದು ಸಹಜ. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಮೈತ್ರಿಯೇ ಅಸಹಜವಾದುದಾಗಿತ್ತು; ಅವರು ಒಟ್ಟು ಸೇರಿ ಗೆಲ್ಲೋದಕ್ಕಿಂತ ಪರಸ್ಪರ ಸೋಲಿಸೋಕೆ ಪ್ರಯತ್ನಿಸಿದರು ಅನ್ನೋದೇ ಹೆಚ್ಚು ಸತ್ಯ. ಹಾಗಾಗಿ ಈ ಸಾರಿ ಬಿಜೆಪಿಗೆ ಶೇ. 50.7%ಗಿಂತ ಹೆಚ್ಚಾಗಲ್ಲ; ಕಡಿಮೆಯೇ ಆಗುತ್ತೆ. ಜೊತೆಗೆ ನಿರಂತರವಾಗಿ ಮತಗಳಿಕೆ ಹೆಚ್ಚಾಗುತ್ತೆ ಅಂದಾಗ ಅದು ಒಂದು ಹಂತಕ್ಕಿಂತ ಹೆಚ್ಚು ಆಗಲ್ಲ. ಆದರೂ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಿಗೇ ಹೋಗುವ ಸಾಧ್ಯತೆ ಇರೋದು ಎದ್ದು ಕಾಣ್ತಿದೆ. ಅವೆರಡೂ ಒಟ್ಟಿಗೆ ಹೋದರೆ, ಈ ಸಾರಿಯೂ ಅದರ ಮತಗಳಿಕೆ ಏರಿಬಿಡಬಹುದು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಯಿಸ್ಟ್ ಬೊಮ್ಮಾಯಿ, ಬೊಂಬೆ ಬೊಮ್ಮಾಯಿ ಮತ್ತು ಬಿಜೆಪಿ

ಹೀಗಾಗಿ ಬಿಜೆಪಿಯ ಸೀಟುಗಳು 10ಕ್ಕಿಂತ ಕಡಿಮೆ ಆಗೋದು ಸುಲಭ ಇಲ್ಲ ಅಂತ ಇದುವರೆಗಿನ ಇತಿಹಾಸ ತೋರಿಸ್ತಾ ಇದೆ. ಅದನ್ನೂ ಮೀರಿ ಬದಲಾವಣೆ ಆಗುವುದು ಎರಡು ಸಂದರ್ಭಗಳಲ್ಲಿ ಮಾತ್ರ ಸಾಧ್ಯ.

1. ಅಖಿಲ ಭಾರತ ಮಟ್ಟದಲ್ಲಿ ನರೇಂದ್ರ ಮೋದಿಯವರ, ಬಿಜೆಪಿಯ ಇಮೇಜ್‌ ಕುಸಿದು ಕಾಂಗ್ರೆಸ್ಸಿನ ಅಥವಾ ಈಗ ಇಂಡಿಯಾ ಅಂತ ಮೈತ್ರಿಕೂಟ ಏನು ರೂಪುಗೊಂಡಿದೆ ಅದರ ಇಮೇಜ್‌ ಹೆಚ್ಚಬೇಕು. ಯಾಕೆ? ಯಾಕಂದ್ರೆ ಕರ್ನಾಟಕದ ಮತದಾರರು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಅಥವಾ ದೆಹಲಿಯಲ್ಲಿ ಅಧಿಕಾರ ನಡೆಸಲು ಬಿಜೆಪಿ, ಕಾಂಗ್ರೆಸ್ಸಿಗಿಂತ ಹೆಚ್ಚು ಸೂಕ್ತ ಅನ್ನೋ ಅಭಿಪ್ರಾಯ ಹೊಂದಿರೋದು ಸ್ಪಷ್ಟವಾಗಿದೆ. ಹಾಗಾಗಿ ಆ ರಾಷ್ಟ್ರೀಯ ಪಕ್ಷದ ಇಮೇಜೇ ದೊಡ್ಡ ಪ್ರಮಾಣದಲ್ಲಿ ಬದಲಾದರೆ ಇಲ್ಲೂ ಬದಲಾಗಬಹುದು.

2. ಅದನ್ನು ದಾಟಿ, ಕರ್ನಾಟಕದ ಜನರು ಕರ್ನಾಟಕದ ಕಾರಣಕ್ಕೆ ಭಿನ್ನ ರೀತಿಯಲ್ಲಿ ಮತ ಹಾಕಬೇಕೆಂದರೆ (ಅದು ಮೂರು ದಶಕಗಳಲ್ಲಿ ಆಗಿಲ್ಲ) ಅದಕ್ಕೆ ಮತ್ತೆ ಎರಡು ರೀತಿಯ ಸಂದರ್ಭ ನಿರ್ಮಾಣ ಆಗಬೇಕು. ಒಂದು – ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಬಹಳ ಎದ್ದು ಕಾಣುವಂತೆ ಆಗಬೇಕು ಮತ್ತು ಸಾಧನೆ ಅಷ್ಟೇ ಸಾಕಾಗಲ್ಲ. ಆ ರೀತಿ ಸಾಧನೆ ಆಗಿದೆ ಅನ್ನುವ ಸಂದೇಶವೂ ಜನರಿಗೆ ತಲುಪಿರಬೇಕು. ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಮತ್ತೆ ಕೇಂದ್ರದಲ್ಲಿ ಬಿಜೆಪಿ ಬಂದರೆ ತಮಗೆ ತೊಂದರೆ ಅನ್ನಿಸಬೇಕು.

3. ಇನ್ನೊಂದು ದಕ್ಷಿಣದ ಉಳಿದ ರಾಜ್ಯಗಳಲ್ಲಿ ಅಥವಾ ಪಶ್ಚಿಮಬಂಗಾಳದಲ್ಲಿ ಇರುವಂತೆ, ಕರ್ನಾಟಕದ ಜನರು ಪ್ರಾದೇಶಿಕ ಹಿತಾಸಕ್ತಿಯನ್ನು ಆದ್ಯತೆಯನ್ನಾಗಿಸಿಕೊಳ್ಳುವುದು. ಕಾಂಗ್ರೆಸ್‌ ಪಕ್ಷ ಈ ದೇಶದಲ್ಲಿ ದೀರ್ಘಕಾಲ ಪ್ರಾದೇಶಿಕ ಹಿತಾಸಕ್ತಿಗೆ ಪೂರಕವಾಗೇನೂ ಇರಲಿಲ್ಲ. ಆದರೆ ಯಾವಾಗ ಬಿಜೆಪಿ ಅಧಿಕಾರಕ್ಕೆ ಬಂದು, ಒಂದು ದೇಶ, ಒಂದು ತೆರಿಗೆ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಬ್ಬ ನಾಯಕ ಅನ್ನುತ್ತಿದೆಯೋ ಆಗ ಕಾಂಗ್ರೆಸ್‌ ಅದಕ್ಕಿಂತ ಉತ್ತಮ ಅನಿಸತೊಡಗಿದೆ. ಗುಜರಾತ್‌ ಮಾದರಿ ಅಲ್ಲ, ಕರ್ನಾಟಕ ಮಾದರಿ, ತಮಿಳುನಾಡು ಮಾದರಿ ಇತ್ಯಾದಿಗಳೂ ಮುನ್ನೆಲೆಗೆ ಬರುವಂತೆ ಒಂದು ಆಂದೋಲನ ಬೆಳೆಯುವ ಅಗತ್ಯವೂ ಇದೆ. ಅಂತಹ ಕರ್ನಾಟಕ ಮಾದರಿಗೆ ಇಂಬು ಕೊಡುವ ಕೆಲಸ ಈ ರಾಜ್ಯದಲ್ಲಿ ಎಷ್ಟಾಗುತ್ತೆ, ಹೇಗೆ ಆಗುತ್ತೆ ನೋಡಬೇಕು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಸೀಟುಗಳು ಕಡಿಮೆಯಾಗೋದು ನಿಶ್ಚಿತ. ಆದರೆ ಇದುವರೆಗಿನ ಇತಿಹಾಸ ನೋಡಿದರೆ, ತನ್ನಂತೆ ತಾನೇ ಬಿಜೆಪಿ ಒಂದಂಕಿ ಸ್ಥಾನಕ್ಕೆ ಖಂಡಿತಾ ಇಳಿಯುವುದಿಲ್ಲ. ಲೋಕಸಭೆಗೆ ಕರ್ನಾಟಕದ ಮತದಾರರ ಆಯ್ಕೆ ಬಿಜೆಪಿಯೇ ಆಗಿದೆ. ಅದನ್ನು ಬದಲಿಸಬೇಕು ಅಂದರೆ, ಕರ್ನಾಟಕದಲ್ಲಿ ಇಲ್ಲಿನದ್ದೇ ಒಂದು ಮಾದರಿ ನಿರ್ಮಾಣವಾಗಬೇಕು, ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೂ ಸಾಧನೆ ಮಾಡಬೇಕು, ಅದು ಜನರಿಗೆ ತಲುಪಲೂಬೇಕು ಮತ್ತು ಅಖಿಲ ಭಾರತ ಮಟ್ಟದಲ್ಲೂ ಮೋದಿ ಮತ್ತು ಬಿಜೆಪಿ ಎದುರು ಸಮರ್ಥ ಪರ್ಯಾಯ ಜನರಿಗೆ ಕಾಣಬೇಕು. ಇದಾಗುತ್ತಾ ಇಲ್ಲವಾ ಎನ್ನುವುದನ್ನು ನೋಡಲು ಇನ್ನೂ ಹತ್ತು ತಿಂಗಳು ಅವಕಾಶ ಇದೆ. ಜನ ಏನು ತೀರ್ಮಾನ ಮಾಡ್ತಾರೆ ಅನ್ನೋದು ಹತ್ತು ತಿಂಗಳ ನಂತರ ತಿಳಿಯುತ್ತದೆ.

Dr Vasu HV
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X