ದೇಶದಲ್ಲಿ ಮತ್ತೊಂದು ಗೋದ್ರಾ ಹಾಗೂ ಪುಲ್ವಾಮಾ ಮಾದರಿ ದಾಳಿ ಮರುಕಳಿಸಬಹುದು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಹರಿಪ್ರಸಾದ್ ಅವರು ಇಂತಹ ಹೇಳಿಕೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಕೂಡಲೇ ಅವರ ವಿರುದ್ಧ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಹರಿಪ್ರಸಾದ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅವರನ್ನು ವಿಚಾರಣೆ ಮಾಡಿದರೆ ಮುಂದಾಗುವ ಅನಾಹುತದ ಬಗ್ಗೆ ಮಾಹಿತಿ ಸಿಗಬಹುದು ಎಂದು ದೂರಿನಲ್ಲಿ ಹೇಳಿದ್ದಾರೆ.
ದೂರು ಸಲ್ಲಿಸುವ ವೇಳೆ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್, ಎಸ್ ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಆನಂದ್, ಹೊಸಹಳ್ಳಿ ಶಿವು, ಎಚ್ ಕೆ ಮಂಜುನಾಥ್ ಹಾಜರಿದ್ದರು.