“ರಮ್ಮಿ ಆಟದಲ್ಲಿ ಜೋಕರ್ ಇರುವ ಎಲೆಯನ್ನು ಯಾವುದಕ್ಕಾದರೂ ಸೇರಿಸಬಹುದು. ಆಡಳಿತಕ್ಕಾಗಿ ಯಾರ ಜತೆ ಬೇಕಾದರೂ, ಎಲ್ಲಿಗೆ ಬೇಕಾದರೂ ಹೋಗುವ ಕುಮಾರಸ್ವಾಮಿ ಜೋಕರ್ ಆಗಿದ್ದಾರೆಯೇ ಹೊರತು ನಾನಲ್ಲ. ಆದ್ದರಿಂದ ಆ ಪದಕ್ಕೆ ಅವರೇ ಹೆಚ್ಚು ಸೂಕ್ತ” ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ
ತಮ್ಮನ್ನ ಜೋಕರ್ ಎಂದಿರುವ ಕುಮಾರಸ್ವಾಮಿ ವಿರುದ್ಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುಮಾರಸ್ವಾಮಿಗೆ ಬಾಯಿ ಚಪಲ ಜಾಸ್ತಿ. ನಾಲಗೆಗೆ ಎಲುಬಿಲ್ಲ ಅಂತ ಮನಸ್ಸಿಗೆ ಬಂದಿದ್ದನೆಲ್ಲ ಮಾತಾಡಿದರೆ ಗೌರವ ಸಿಗಲ್ಲ, ತನ್ನನ್ನು ಮಂತ್ರಿ ಮಾಡಿದ್ದೆ ಅಂತ ಹೇಳಿದರೆ ಅವರನ್ನು ಮುಖ್ಯಮಂತ್ರಿ ಮಾಡಲು ತಾನೂ ಕಾರಣನಾಗಿದ್ದೆ ಅನ್ನೋದನ್ನು ಕೇಂದ್ರ ಸಚಿವ ಮರೆಯಬಾರದು” ಎಂದು ಹೇಳಿದರು.
“ಕುಮಾರಸ್ವಾಮಿ ಆಗಾಗ ಟಿವಿಯಲ್ಲಿ ಕಾಣಿಸಿಕೊಳ್ಳದಿದ್ದರೆ ನಿದ್ದೆ ಬರಲ್ಲ. ಟಿವಿಯಲ್ಲಿ ಬಂದಾಕ್ಷಣ ಸಿದ್ದರಾಮಯ್ಯರನ್ನು, ಶಿವಕುಮಾರ್ ಅವರನ್ನು ಮತ್ತು ನನ್ನನ್ನು ಬಯ್ಯುವುದಷ್ಟೇ ಅವರು ಮಾಡೋದು, ಅವರಿಗೆ ಸೌಜನ್ಯತೆ ಎಂಬುದೇ ಗೊತ್ತಿಲ್ಲ” ಎಂದು ಹೇಳಿದರು.
ʼಐಐಟಿ ಪದಕ್ಕೆ ಅರ್ಥ ಗೊತ್ತಿದೆಯೇ’ ಎನ್ನುವ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, “ಮಂಡ್ಯಕ್ಕೆ ಐಐಟಿ ತರಲು ಅವರು ಪತ್ರ ಬರೆದಿದ್ದಾರಾ?. ಅವರ ತಂದೆ ಪ್ರಧಾನಮಂತ್ರಿ, ನನ್ನ ತಂದೆ ರೈತ. ನಾನು ಜಿ.ಪಂ. ಸದಸ್ಯನಿಂದ ರಾಜಕಾರಣ ಮಾಡಿದ್ದೇನೆ. ನನಗೆ ಜನರ ಕಷ್ಟ ಗೊತ್ತಿದೆ. ಅವರು ನನ್ನ ಮಂತ್ರಿ ಮಾಡಿದ್ದೇನೆ ಎನ್ನುವುದಾದರೆ, ನಾನು ಅವರನ್ನು ಮುಖ್ಯಮಂತ್ರಿ ಮಾಡಿದ್ದೀನಿ ಎನ್ನುವುದು ತಪ್ಪಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಚಲುವರಾಯಸ್ವಾಮಿ ನೂರಕ್ಕೆ ನೂರರಷ್ಟು ಜೋಕರ್: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯ
“ಕುಮಾರಸ್ವಾಮಿಯಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗಿಲ್ಲ. ಎಚ್‌ಡಿಕೆಯನ್ನು ನಾಯಕನನ್ನಾಗಿ ಮಾಡಲು ನಾವು ಸಾಥ್ ಕೊಟ್ವಾ, ಇಲ್ವಾ ಎನ್ನುವುದನ್ನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತಾರಾ?. ಮೂರು ಹೊತ್ತೂ ಬೇರೆಯವರನ್ನು ಬೈಯುತ್ತ ನಾಲಗೆ ಚಪಲ ತೀರಿಸಿಕೊಳ್ಳುವ ಅವರ ಬಗ್ಗೆ ಮಾತನಾಡಿ ನಾಲಗೆ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ” ಎಂದರು.