- ರಾಜಕೀಯ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ಸೀಟು ಹಂಚಿಕೆ ವಿಚಾರ
- ನಿನ್ನೆ(ಫೆ.8) ಜೆಪಿ ನಡ್ಡಾ, ಬಿ ಎಲ್ ಸಂತೋಷ್ ಭೇಟಿಯಾಗಿದ್ದ ಮಂಡ್ಯ ಸಂಸದೆ
ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಸದ್ಯ ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೈತ್ರಿ ಒಪ್ಪಂದದ ಪ್ರಕಾರ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಲಿದ್ದು, ಬಿಜೆಪಿ ಮತ್ತು ದಳದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಅನ್ನುವ ಚರ್ಚೆಗಳ ಬೆನ್ನಲ್ಲೇ ಸುಮಲತಾ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದಾರೆ.
ದೆಹಲಿಯಲ್ಲಿ ನಿನ್ನೆ (ಫೆ.8) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಸಂಘಟನಾ ಕಾರ್ಯದರ್ಶಿ, ಆರ್‍ಎಸ್‌ಎಸ್‌ನ ಪ್ರಮುಖ ನಾಯಕ ಬಿ ಎಲ್ ಸಂತೋಷ್ ಭೇಟಿಯಾಗಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಇಂದು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೂಡ ಭೇಟಿಯಾಗಿದ್ದಾರೆ. ಇದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಟಿಕೆಟ್ ತಪ್ಪುವ ಭಯದಿಂದ ಸುಮಲತಾ ಅಂಬರೀಶ್ ಅವರು ಈ ರೀತಿಯ ಭೇಟಿ ನಡೆಸುತ್ತಿದ್ದಾರೆ ಎಂಬ ಮಾತು ಈಗ ಚರ್ಚೆಯಲ್ಲಿದೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ @PMOIndia ಸನ್ಮಾನ್ಯ ಶ್ರೀ ನರೇಂದ್ರ ಮೋದಿರವರಿಗೆ ನನ್ನ ಧನ್ಯವಾದಗಳು. @narendramodi ಶ್ರೀ ನರೇಂದ್ರ ಮೋದಿರವರು ವಿಶ್ವದ ಮಹಾನ್… pic.twitter.com/60y9sX7H53
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 9, 2024
ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಕುರಿತು ಫೋಟೋ ಜೊತೆಗೆ ಮಾಹಿತಿ ಹಂಚಿಕೊಂಡಿರುವ ಸಂಸದೆ, “ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನನ್ನ ಧನ್ಯವಾದಗಳು” ಎಂಬ ಒಕ್ಕಣೆಯನ್ನೂ ಸೇರಿಸಿಕೊಂಡಿದ್ದಾರೆ.
ಸುದೀರ್ಘ ಬರಹದಲ್ಲಿ ಪ್ರಧಾನಿಯವರನ್ನು ಕೊಂಡಾಡಿರುವ ಸುಮಲತಾ ಅಂಬರೀಶ್, “17ನೇ ಲೋಕಸಭೆಯ ಕೊನೆಯ ಅಧಿವೇಶನವು ಮುಕ್ತಾಯದ ಹಂತದಲ್ಲಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ. ಈ ಬಾರಿಯ ತಮ್ಮ ಭೇಟಿ ಸಂದರ್ಭದಲ್ಲಿ, “ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ” ಎಂಬ ನಿಮ್ಮ ಮಾತುಗಳು ನನಗೆ ಸ್ಪೂರ್ತಿದಾಯಕವಾಗಿದೆ. ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ಡಾ ಅವರನ್ನು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ಸಂತೋಷ್ ಅವರನ್ನು ಅನೌಪಚಾರಿಕವಾಗಿ ಇಂದು ಭೇಟಿ ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಲಾಯಿತು.
ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ… pic.twitter.com/T4qP7cdyNd
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 8, 2024
“ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಆಸಕ್ತಿ ವಹಿಸಿ, ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುದಾನವನ್ನು ಒದಗಿಸಿದ್ದಕ್ಕಾಗಿ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರು, ಕಾರ್ಯಕರ್ತರು, ನನ್ನ ಬೆಂಬಲಿಗರು ಮತ್ತು ಸಮಸ್ತ ಸಾರ್ವಜನಿಕರ ಪರವಾಗಿ, ಭಾರತ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.