ಕರಾವಳಿ ಹಾಗೂ ಮಲೆನಾಡು ಭಾಗದ ಕೋಮುಗಲಭೆ ಪ್ರಚೋದಿಸುವ ಸರಣಿ ಹತ್ಯೆಗಳ ತಡೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ಕಾರ್ಯಪಡೆ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ(ಜೂನ್ 13)ದಂದು ಉದ್ಘಾಟಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ ಜಿ.ಪರಮೇಶ್ವರ್, “ಕರಾವಳಿ ಜಿಲ್ಲೆಗಳ ಶಾಂತಿ ಕಾಪಾಡುವುದು ಈ ವಿಶೇಷ ಕಾರ್ಯಪಡೆಯ ಉದ್ದೇಶ. ಜನ ಅರ್ಥ ಮಾಡಿಕೊಂಡರೆ ಈ ಪಡೆಯ ಅಗತ್ಯತೆ ಕಡಿಮೆಯಾಗುತ್ತದೆ. ಕಾರ್ಯಪಡೆಯನ್ನು ಸಾಂಕೇತಿಕವಾಗಿ ರಚಿಸಲಾಗಿದೆ” ಎಂದು ಹೇಳಿದರು.
“ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ವಿಸರ್ಜಿಸುವುದಿಲ್ಲ. ಅದರ ಪ್ರಮಾಣ ಕಡಿಮೆ ಮಾಡಿದ್ದೇವೆ ಅಷ್ಟೇ. ಸದ್ಯಕ್ಕೆ ಅಗತ್ಯತೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಅಗತ್ಯ ಬಂದರೆ ಬೇಕಾಗುತ್ತದೆ ಎಂದು ಇಟ್ಟುಕೊಂಡಿದ್ದೇವೆ. ಒಡಿಶಾ, ಅಸ್ಸಾಂ ಮೊದಲಾದೆಡೆ ನಕ್ಸಲ್ ಚಟುವಟಿಕೆ ಇದೆ. ಅಲ್ಲಿಂದ ಇಲ್ಲಿಗೆ ಬರುವ ಸಾಧ್ಯತೆಯೂ ಇದೆ. ಅದು ಬಂದರೆ ತಯಾರಿರಬೇಕೆಂದು ನಕ್ಸಲ್ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಹಾಗೆಯೇ ಇಟ್ಟುಕೊಂಡಿದ್ದೇವೆ. ಉಳಿದವರನ್ನು ಈ ವಿಶೇಷ ಕಾರ್ಯಪಡೆಗೆ ನಿಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಕರಾವಳಿಯಲ್ಲಿ ದ್ವೇಷದ ವಾತಾವರಣ ಹೆಚ್ಚಾಗುತ್ತಿದೆ. ಇದನ್ನು ಆದಷ್ಟು ಶೀಘ್ರವಾಗಿ ಹತ್ತಿಕ್ಕದೆ ಇದ್ದರೆ ಇದು ಬೇರೆ ಬೇರೆ ಭಾಗಕ್ಕೂ ಹೋಗುವ ಸಾಧ್ಯತೆ ಇದೆ. ನಾನು ಈ ಹಿಂದೆಯೇ ಒಂದು ಟಾಸ್ಕ್ ಫೋರ್ಸ್ ಮಾಡಲು ಆಗಿನ ಕಮಿಷನರ್ ಗೆ ಹೇಳಿದ್ದೆ. ಅವತ್ತು ಸಣ್ಣದೊಂದು ಫೋರ್ಸ್ ಮಾಡಿದ್ದರೂ ಅಷ್ಟು ಪ್ರಯೋಜನಕಾರಿಯಾಗಿಲ್ಲ. ಮೊನ್ನೆ ನಡೆದಂತಹ ಮೂರು ಕೊಲೆಗಳನ್ನು ಗಮನಿಸಿದಾಗ ಒಂದು ವಿಶೇಷ ಪಡೆಯನ್ನೇ ಮಾಡಬೇಕು ಎಂದು ನನಗೆ ಅನ್ನಿಸಿತ್ತು. ಇದಕ್ಕೆ ಒಂದು ಕಠಿಣವಾದ ತೀರ್ಮಾನ ಆಗಬೇಕು, ಕಠಿಣವಾದ ಕ್ರಮ ಆಗಬೇಕು ಅಂದುಕೊಂಡು ಇದಕ್ಕಾಗಿಯೇ ನಾನು ಅವತ್ತೇ ಘೋಷಣೆ ಮಾಡಿ ಹೋದೆ. ಒಂದು ವಾರದಲ್ಲೇ ಅದಕ್ಕೊಂದು ರೂಪುರೇಷೆ ಮಾಡಿದ್ದೇವೆ” ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

“ಇದು ಕೋಮು ದ್ವೇಷ ನಿಗ್ರಹಕ್ಕೆ ಸ್ಥಾಪನೆಯಾದ ಭಾರತದ ಮೊದಲ ಕಾರ್ಯಪಡೆ. ದೇಶದ ಯಾವ ರಾಜ್ಯದಲ್ಲೂ ಕೋಮುಸಂಘರ್ಷವನ್ನು ಕಂಟ್ರೋಲ್ ಮಾಡಲು ಪ್ರತ್ಯೇಕ ಪೋರ್ಸ್ ಇಲ್ಲ. ಕೋಮುದ್ವೇಷವನ್ನು ಹರಡಿಸುವ ಜನ ಹಾಗೂ ಸಮುದಾಯವನ್ನು ಹತ್ತಿಕ್ಕುವ ಕೆಲಸ ಈ ಫೋರ್ಸ್ ಮಾಡಲಿದೆ. ಈ ಫೋರ್ಸ್ ಗೆ ಬೇರೆ ಯಾವುದೇ ಕೆಲಸ ಇಲ್ಲ. ಶಾಂತಿ ನೆಲೆಸಬೇಕು ಎನ್ನುವ ಒಂದೇ ಕಾರಣದಿಂದ ಮಾಡಲಾಗಿದೆ. ಈ ಕಾರ್ಯಪಡೆ ಯಶಸ್ವಿಯಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ಈ ಜಿಲ್ಲೆಯಲ್ಲಿ ಶಾಂತಿ ನೆಲೆಸಿದರೆ ಇಡೀ ಕರ್ನಾಟಕದಲ್ಲಿ ಶಾಂತಿ ನೆಲೆಸುತ್ತದೆ. ಈ ಕಾರ್ಯಪಡೆಯನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಅಗತ್ಯ ಬಿದ್ದರೆ ಇದರ ಸಂಖ್ಯೆಯನ್ನು ಹೆಚ್ಚು ಮಾಡುತ್ತೇವೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಚಟುವಟಿಕೆಗಳು ಆಗುತ್ತಿದೆ. ಬೇರೆ ಜಿಲ್ಲೆಯ ವಾತಾವರಣ ಬೇರೆ ಇದೆ, ಅಲ್ಲಿಗೆ ಈ ಕಾರ್ಯಪಡೆ ಅಗತ್ಯ ಬೀಳುವುದಿಲ್ಲ. ಮುಂದೆ ಈ ಜಿಲ್ಲೆಗೂ ಅಗತ್ಯ ಬೀಳದಂತೆ ಆಗಲಿ ಎಂದು ಹಾರೈಸುತ್ತೇನೆ” ಎಂದು ಪರಮೇಶ್ವರ್ ನುಡಿದರು.
ಕೊಳತ್ತಮಜಲಿನ ಮುಸ್ಲಿಂ ಯುವಕ ಅಬ್ದುಲ್ ರಹ್ಮಾನ್ ಮತ್ತು ಕುಡುಪಿನಿಲ್ಲಿ ಗುಂಪಿನಿಂದ ಹತ್ಯೆಗೀಡಾದ ಕೇರಳದ ಅಶ್ರಫ್ ಹತ್ಯೆ ಪ್ರಕರಣದ ತನಿಖೆ ಇನ್ನೂ ಕೂಡ ನಡೆಯುತ್ತಿದೆ. ತನಿಖೆ ಒಂದು ವಾರ, ತಿಂಗಳಲ್ಲಿ ಮುಗಿಯುವುದಿಲ್ಲ. ಅದರ ಬುಡಕ್ಕೆ ಹೋಗಬೇಕಾದರೆ ಸಮಗ್ರ ತನಿಖೆಯಾಗಬೇಕು. ಅದನ್ನು ಮಾಡುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಯಲಿದೆ. ಯಾವ ಉದ್ದೇಶಕ್ಕೆ ಕೊಲೆಯಾಗಿದೆ, ವೈಯಕ್ತಿಕವೇ, ಕೋಮುದ್ವೇಷವೇ ಎಂದು ಈಗ ಹೇಳಲಾಗದು. ತನಿಖೆಯ ವರದಿ ಬಂದ ಅನಂತರ ಗೊತ್ತಾಗಲಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ವಿಶೇಷ ಕಾರ್ಯಪಡೆ ರಚನೆಯಿಂದ ಕೋಮು ಹಿಂಸಾಚಾರಕ್ಕೆ ತಡೆ ನೀಡಲು ಸಾಧ್ಯವೇ?
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೇಂದ್ರಕ್ಕೆ ಅದನ್ನು ಎನ್‌ಐಎಗೆ ಪಡೆಯುವ ಅಧಿಕಾರವಿದೆ. ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅವರಿಗೆ ಕೊಡಲೇಬೇಕಾದ ಪರಿಸ್ಥಿತಿ ಬಂದಿದೆ. ಯಾಕೆ ನಿರ್ದಿಷ್ಟವಾಗಿ ಆ ಕೇಸು ಎನ್‌ಐಎಗೆ ಕೇಳಿದ್ದಾರೆಂದು ಗೊತ್ತಿಲ್ಲ. ರಹ್ಮಾನ್ ಹತ್ಯೆ ಪ್ರಕರಣವನ್ನು ಎನ್‌ಐಎಗೆ ನೀಡುತ್ತೀರಾ ಎಂದು ಕೇಳಿದಾಗ, ಅದನ್ನು ಎನ್‌ಐಎಗೆ ಕೇಳಿಲ್ಲ. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ತನಿಖೆ ನಡೆಯುತ್ತಿದೆ. ಅಗತ್ಯತೆ ಬಿದ್ದರೆ ಹೆಚ್ಚು ತೀವ್ರವಾಗಿ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದರು.
ಮಂಗಳೂರಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ, ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್.ಮುರುಗನ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಶೇಷ ಕಾರ್ಯಪಡೆ ಘಟಕದ ಡಿಐಜಿಪಿ (ಪ್ರಭಾರ) ಆಗಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಮತ್ತಿತರರು ಉಪಸ್ಥಿತರಿದ್ದರು.