ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಜನವರಿ 5, 6, 7ರಂದು ನಡೆಯುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದಲ್ಲಿ ಯಾವುದೇ ವ್ಯತ್ಯಾಸಗಳಾಗದಂತೆ ಅಚ್ಚುಕಟ್ಟಾಗಿ ಆಯೋಜಿಸುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತಾಲಯದ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದ ಪೂರ್ವಭಾವಿ ಸಿದ್ದತೆ ಪರಿಶೀಲನಾ ಸಭೆ ನಡೆಸಿದ ಸಚಿವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಮೇಳದ ಉದ್ಘಾಟನೆ, ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಹಲವು ಸಚಿವರು ಹಾಗೂ ರಾಜ್ಯದ ಸಚಿವರು ಪಾಲ್ಗೊಳ್ಳಲಿದ್ದು ಶಿಷ್ಟಾಚಾರದಲ್ಲಿ ಯಾವುದೇ ಲೋಪ ಉಂಟಾಗದಂತೆ ಗಮನಹರಿಸುಲು ಎನ್ ಚಲುವರಾಯಸ್ವಾಮಿ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
ದೇಶ ವಿದೇಶದ ವಿಜ್ಞಾನಿಗಳು, ತಜ್ಞರು, ಗಣ್ಯರು ಇದರಲ್ಲಿ ಪಾಲ್ಗೊಳ್ಳುವುದರಿಂದ ಎಲ್ಲಾ ಕಾರ್ಯಕ್ರಮಗಳು ಗುಣಾತ್ಮಕವಾಗಿ ಹಾಗೂ ರಚನಾತ್ಮಕವಾಗಿರಲಿ. ರೈತ ಸ್ನೇಹಿ, ಗ್ರಾಹಕ ಸ್ನೇಹಿ ವಾತಾವರಣ ಸೃಷ್ಟಿ ಮಾಡಿ. ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಿ ಎಂದು ಸಚಿವರು ನಿರ್ದೇಶನ ನೀಡಿದರು.
ಸಿರಿಧಾನ್ಯಗಳ ಕೃಷಿ, ಅದರ ಉತ್ಪನ್ನಗಳ ಮೌಲ್ಯವರ್ಧನೆ, ವಿಭಿನ್ನ ಖಾದ್ಯ ತಯಾರಿಕೆ ಬಗ್ಗೆ ರೈತರಿಗೆ, ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ದೊರೆಯುವಂತೆ ಮಾಡಿ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಎಂದು ಎನ್ ಚಲುವರಾಯಸ್ವಾಮಿ ಸೂಚಿಸಿದರು.
ಮೇಳದ ಯಶಸ್ವಿ ಸಂಘಟನೆಗೆ ರಚಿಸಲಾಗಿರುವ ಉಪ ಸಮಿತಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ, ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಜಿಲ್ಲೆಗಳಲ್ಲಿಯೂ ಪ್ರಚಾರ ಕೈಗೊಳ್ಳಬೇಕು, ಗ್ರಾಮಿಣ ರೈತರಿಗೆ ಇದರಲ್ಲಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಮಾಡಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಹೇಳಿದರು.
ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರೂ ಸಹ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್, ನಿರ್ದೇಶಕರಾದ ಡಾ ಜಿ.ಟಿ ಪುತ್ರ ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.