2014ರಲ್ಲಿ ಮೋದಿ ಘೋಷಿಸಿದ್ದ ಭರವಸೆಗಳಲ್ಲಿ ರೈತರ ಆತ್ಮಹತ್ಯೆಗಳಿಗೆ ಅಂತ್ಯ ಹಾಡುತ್ತೇವೆ ಎಂಬುದು ಪ್ರಧಾನವಾಗಿತ್ತು. ಆದರೆ, 2014-2023ರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸುಮಾರು 4,25,000 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆದಾಯ ದ್ವಿಗುಣಗೊಳ್ಳುತ್ತದೆ ಎಂದಿದ್ದರು, ಅದೂ ಆಗಲಿಲ್ಲ. ಇದು ಮೋದಿಯವರ ವೈಫಲ್ಯವಲ್ಲವೇ ಮತ್ತೇನು?
ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇವೆ. 10 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಜನರನ್ನು ಸೆಳೆಯಲು ‘ಮೋದಿ ಕಿ ಗ್ಯಾರಂಟಿ’ ಹೆಸರಿನಲ್ಲಿ ಜಾಹೀರಾತುಗಳ ಮೂಲಕ ಭಾರೀ ಪ್ರಚಾರ ಮಾಡುತ್ತಿದೆ. ಈ ಹಿಂದೆ, ಬಿಜೆಪಿ ನೀಡಿದ್ದ ಎಲ್ಲ ಭರವಸೆಗಳನ್ನೂ ಪೂರೈಸಿದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ.
2014 ಮತ್ತು 2019ರಲ್ಲಿ ರೈತರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಗಳೇನು? ಆದರೆ, ಈಗ ಆಗಿರುವುದೇನು?
2014ರಲ್ಲಿ ಗುಜರಾತ್ ಮಾದರಿ, ಭ್ರಷ್ಟಾಚಾರಕ್ಕೆ ಕಡಿವಾಣ, ಸಬ್ ಕಾ ಸಾತ್ – ಸಬ್ ಕಾ ವಿಕಾಸ್ ಸೇರಿದಂತೆ ನಾನಾ ಭರವಸೆಗಳನ್ನ ನೀಡಿದ್ದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ರೈತರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಸಿ2+50% [ಸಮಗ್ರ ಉತ್ಪಾದನಾ ವೆಚ್ಚದ ಕನಿಷ್ಠ ಒಂದೂವರೆ ಪಟ್ಟು ಆದಾಯವುಳ್ಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)] ಸೂತ್ರದಲ್ಲಿ ಖರೀದಿಸುತ್ತೇವೆ. ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ. ರೈತರನ್ನು ರಕ್ಷಿಸುತ್ತೇವೆ. ರೈತರ ಆತ್ಮಹತ್ಯೆಗಳನ್ನು ಕೊನೆಗಾಣಿಸುತ್ತೇವೆ. ರೈತರಿಗೆ ಪಿಂಚಣಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಇದರಲ್ಲಿ ಯಾವುದಾದರೂ ಒಂದು ಭರವಸೆ ಈಡೇರಿದೆಯೇ – ಖಂಡಿತಾ ಇಲ್ಲ.
ಬದಲಾಗಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು, ತಮ್ಮ ಮಿತ್ರರಾದ ಅಂಬಾನಿ-ಅದಾನಿಗಳಿಗೆ ಲಾಭ ಮಾಡಿಕೊಟ್ಟಿದೆ.
ಸಿ2+50% ಸೂತ್ರದಲ್ಲಿ ಎಂಎಸ್‌ಪಿ ಖಾತ್ರಿ – ಜುಮ್ಲಾ
ಸಿ2+50% ಸೂತ್ರದಲ್ಲಿ ಕೃಷಿ ಮಾಡಲು ವ್ಯಯಿಸಿದ ಎಲ್ಲ ವೆಚ್ಚಗಳು, ಜೊತೆಗೆ ಕುಟುಂಬದ ಕಾರ್ಮಿಕರ ಶ್ರಮದ ಕೂಲಿ, ಭೂಮಿಯ ಬಾಡಿಗೆ ಮೌಲ್ಯ ಮತ್ತು ಬಂಡವಾಳದ ಮೇಲಿನ ಬಡ್ಡಿ ಹಾಗೂ ಒಟ್ಟು ಖರ್ಚಿನ ಮೇಲೆ 50% ಲಾಭ ಇರುವ ಎಂಎಸ್‌ಪಿ ನೀಡುವುದು ಬಿಜೆಪಿಯ ಭರವಸೆಯ ವಿವರಣೆಯಾಗಿತ್ತು.
ಆದರೆ, ಬಿಜೆಪಿ ಸರ್ಕಾರವು ಇತ್ತೀಚೆಗೆ, ಈ ಭರವಸೆಯಂತೆ ಎಂಎಸ್‌ಪಿ ನೀಡಲು ಸಾಧ್ಯವಿಲ್ಲ. ಈ ಸೂತ್ರದಲ್ಲಿ ಎಂಎಸ್‌ಪಿ ನಿರ್ಧರಿಸುವುದು ಮಾರುಕಟ್ಟೆಯನ್ನು ವಿರೂಪಗೊಳಿಸುತ್ತದೆ ಎಂದು ವಾದಿಸಿ, ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಅಲ್ಲದೆ, ಈಗ ತನ್ನ ಭರವಸೆಯಲ್ಲಿ ಸಿ2 ಬದಲಾಗಿ ‘ಎ2+ಎಫ್‌ಎಲ್’ ಸೇರಿಸಿದೆ. ಇದರಲ್ಲಿ, ಕೃಷಿಗಾಗಿ ಪಾವತಿಸಿದ ವೆಚ್ಚ ಮತ್ತು ಕುಟುಂಬದ ಶ್ರಮದ ಕೂಲಿ ಇದ್ದು, ಭೂಮಿಯ ಬಾಡಿಗೆ ಮೌಲ್ಯ ಮತ್ತು ಬಂಡವಾಳದ ಮೇಲಿನ ಬಡ್ಡಿಯನ್ನು ಬಿಜೆಪಿ ಕೈಬಿಟ್ಟಿದೆ. 10 ವರ್ಷ ಆಡಳಿತ ನಡೆಸಿದ ಮೋದಿ ಸರ್ಕಾರ, ಈ ‘ಎ2+ಎಫ್‌ಎಲ್’ ಅಡಿಯಲ್ಲಾದರೂ ಎಂಎಸ್‌ಪಿ ನೀಡಿತಾ, ಅದೂ ಇಲ್ಲ. ಅಲ್ಲದೆ, ಹೆಚ್ಚುತ್ತಿರುವ ಹಣದುಬ್ಬರದಲ್ಲಿಯೂ ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದೆ. ರೈತರು ಕಂಗಾಲಾಗುತ್ತಿದ್ದಾರೆ.
ಬಿಜೆಪಿ 10 ವರ್ಷಗಳ ಹಿಂದೆ ಭರವಸೆ ನೀಡಿದ್ದ ಎಂಎಸ್‌ಪಿಗಾಗಿ ರೈತರು ವರ್ಷಾನುಗಟ್ಟಲೆ ಹೋರಾಟ ನಡೆಸುತ್ತಿದ್ದಾರೆ. ಆ ರೈತರ ಮೇಲೆ ಸರ್ಕಾರ ದಮನ ಎಸಗುತ್ತಿದೆ.
‘2022ರ ವೇಳೆಗೆ ರೈತರ ಆದಾಯ ದ್ವಿಗುಣ’ವೆಂಬ ದೂರದ ಬೆಟ್ಟ
2016ರ ಫೆಬ್ರವರಿ 28ರಂದು ಮಂಡನೆಯಾದ ಕೇಂದ್ರ ಬಜೆಟ್‌ನ ಹಿಂದಿನ ದಿನ (ಫೆ.27) ಪ್ರಧಾನಿ ಮೋದಿ ಅವರು, ಭಾರತವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಿಕೊಳ್ಳುವ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ (ಡಿಎಫ್‌ಐ) ಮಾಡುತ್ತೇವೆಂದು ಮತ್ತೊಂದು ಭರವಸೆ ಘೋಷಿಸಿದ್ದರು. ಅದರಂತೆ, 2022ರ ವೇಳೆಗೆ ರೈತರ ವಾರ್ಷಿಕ ಆದಾಯವು 2,71,378 ರೂ. ಆಗಿಬೇಕಿತ್ತು.
ಆದರೆ, ರೈತರ ಆದಾಯ ದ್ವಿಗುಣಗೊಳ್ಳುವುದಿರಲಿ, ಕೃಷಿಗೆ ವ್ಯಯಿಸಿದ ಬಂಡವಾಳವೂ ಮರಳಿ ಕೈಸೇರುತ್ತಿಲ್ಲ. 2021ರಲ್ಲಿ ಬಿಡುಗಡೆಯಾದ ಕೃಷಿ ಕುಟುಂಬಗಳ 77ನೇ ಸುತ್ತಿನ ಪರಿಸ್ಥಿತಿ ಮೌಲ್ಯಮಾಪನ ಸಮೀಕ್ಷೆಯು ಇದನ್ನು ಬಹಿರಂಗಪಡಿಸಿದೆ. ಸಮೀಕ್ಷಾ ವರದಿ ಪ್ರಕಾರ, 2018-19ರಲ್ಲಿ ಕೃಷಿ ಕುಟುಂಬಗಳ ಅಂದಾಜು ಮಾಸಿಕ ಆದಾಯವು ಕೇವಲ 10,218 ರೂ. ಆಗಿದೆ. ಅಂದರೆ, ವಾರ್ಷಿಕವಾಗಿ ಸುಮಾರು 1,22,616 ರೂ. ಮಾತ್ರ. ಈ ಮೊತ್ತವು ಮೋದಿ ಅವರು ಘೋಷಿಸಿದ್ದ 2022ರ ವೇಳೆಗಿನ ವಾರ್ಷಿಕ ಡಿಎಫ್ಐ 2,71,378 ರೂ. ಅಥವಾ ಮಾಸಿಕ 22,610 ರೂ.ಗಳಿಗೆ ಸಮೀಪವೂ ಇಲ್ಲ.
ಆದರೆ, ಇದೇ ವೇಳೆ ರೈತರ ಸರಾಸರಿ ಸಾಲವು ಭಾರೀ ಏರಿಕೆಯಾಗಿದೆ. ಭಾರತದ ಅರ್ಧಕ್ಕಿಂತ ಹೆಚ್ಚು ಕೃಷಿ ಕುಟುಂಬಗಳು ಸಾಲಭಾದೆಗೆ ಸಿಲುಕಿವೆ. ಮಾತ್ರವಲ್ಲದೆ, 2013ರಲ್ಲಿ ಕೃಷಿ ಕುಟುಂಬಗಳ ಸರಾಸರಿ ಸಾಲ 47,000 ರೂ. ಇತ್ತು. ಅದು ಈಗ, 2022ರ ವೇಳೆಗೆ 74,121 ರೂ.ಗೆ ಏರಿಕೆಯಾಗಿದೆ. ಅಂದರೆ, ಬರೋಬ್ಬರಿ 57%ರಷ್ಟು ಸಾಲ ಏರಿಕೆಯಾಗಿದೆ.
ಸಾಲಭಾದೆ ಅಥವಾ ಋಣಭಾರದಲ್ಲಿರುವ ರೈತರ ಸಂಖ್ಯೆಯು 2013ರಿಂದ 1019ರ ನಡುವೆ 9.02ಯಿಂದ 9.30 ಕೋಟಿಗೆ ಏರಿಕೆಯಾಗಿದೆ. ರೈತರ ಆದಾಯ ಹೆಚ್ಚಾಗುವ ಬದಲಾಗಿ, ಸಾಲ ಮಾಡಿದ ರೈತರ ಸಂಖ್ಯೆ ಹೆಚ್ಚಾಗಿದೆ.
ಕೃಷಿ ಬಿಕ್ಕಟ್ಟು – ರೈತರ ಆತ್ಮಹತ್ಯೆ
2014ರಲ್ಲಿ ಮೋದಿ ಘೋಷಿಸಿದ್ದ ಭರವಸೆಗಳಲ್ಲಿ ರೈತರ ಆತ್ಮಹತ್ಯೆಗಳಿಗೆ ಅಂತ್ಯ ಹಾಡುತ್ತೇವೆ ಎಂಬುದು ಪ್ರಧಾನವಾಗಿತ್ತು. ಆದರೆ, 2014-2023ರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸುಮಾರು 4,25,000 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, 2014 ಮತ್ತು 2023ರ ನಡುವೆ ರೈತರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಗಳ ಸಂಖ್ಯೆ ಸುಮಾರು 1,12,000 ದಾಟಿದೆ. ಅಲ್ಲದೆ, 3,12,214 ಮಂದಿ ದೈನಂದಿನ ಕೃಷಿ ಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಇನ್ನೂ ಅನೇಕ ರಾಜ್ಯಗಳು ಕೃಷಿ ಕ್ಷೇತ್ರದ ಆತ್ಮಹತ್ಯೆಗಳ ಬಗ್ಗೆ ನಿಖರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂಬುದು ಗಮನಾರ್ಹ.
ವರದಿಗಳು, ಅಂದಾಜಿನ ಪ್ರಕಾರ, ಮೋದಿ ಆಡಳಿತದಲ್ಲಿ ಕೃಷಿ ಕ್ಷೇತ್ರದ ಸುಮಾರು 4,25,000 ರೈತರು, ಕೃಷಿ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಂಕಿಅಂಶಗಳಲ್ಲಿ ಮಹಿಳಾ ರೈತರು ಮತ್ತು ಕೃಷಿ ಕಾರ್ಮಿಕರು, ಭೂರಹಿತರು, ಹಿಡುವಳಿದಾರರು, ಅರಣ್ಯ ಕಾರ್ಮಿಕರು, ಮೀನು ಕಾರ್ಮಿಕರು ಮತ್ತು ಇತರರನ್ನು ಒಳಗೊಂಡಿಲ್ಲ. ಇಡೀ ಮಾನವ-ಕುಲದ ಇತಿಹಾಸದಲ್ಲಿ ಊಹಿಸಲಾಗದ ದುರಂತಕ್ಕೆ ಮೋದಿ ಸರ್ಕಾರ ಹೊಣೆಯಾಗಿದೆ. ರೈತರ ಆತ್ಮಹತ್ಯೆಗೆ ತನ್ನ ನೀತಿಗಳ ಮೂಲಕ ಕುಮ್ಮಕ್ಕು ನೀಡಿದೆ.
ಕಾರ್ಪೊರೇಟ್ ಖಜಾನೆ ತುಂಬಿಸಿದ ‘ರೈತರಿಗೆ ವಿಮಾ ರಕ್ಷಣೆ’ ಭರವಸೆ
ಕೃಷಿ ಕ್ಷೇತ್ರದಲ್ಲಿ ತೊಡಗಿರುವ ರೈತರನ್ನು ಅಪಾಯಗಳಿಂದ ರಕ್ಷಿಸಲು, ನಷ್ಟಕ್ಕೆ ಬಲಿಯಾಗದಂತೆ ತಡೆಯಲು ಕೃಷಿ ಬೆಳೆಗಳಿಗೆ ವಿಮಾ ರಕ್ಷಣೆ ನೀಡುವುದಾಗಿ ಮೋದಿ ಸರ್ಕಾರ ಘೋಷಿಸಿತ್ತು. ಎಲ್ಲ ರೈತರಿಗೂ ಬೆಳೆ ವಿಮೆ ಮಾಡಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ವಾಸ್ತವದಲ್ಲಿ, ರೈತರಿಗೆ ವಿಮೆಯನ್ನು ನಿರಾಕರಿಸಲಾಗುತ್ತಿದೆ. ವಿಮೆಯ ಹಣವನ್ನು ಪಾವತಿಸುತ್ತಿಲ್ಲ. ಆದರೂ, ವಿಮಾ ಕಂಪನಿಗಳು ಮಾತ್ರ ಭಾರೀ ಲಾಭ ಗಳಿಸುತ್ತಿವೆ.
2016ರ ಖಾರಿಫ್‌ನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಆರಂಭವಾದಾಗಿನಿಂದ 2022ರ ಆರ್ಥಿಕ ವರ್ಷದ ಅಂತ್ಯದವರೆಗೆ ಒಟ್ಟು ಸುಮಾರು 1,97,657.20 ಕೋಟಿ ರೂ. (1.97 ಟ್ರಿಲಿಯನ್) ರೈತರಿಗೆ ಮಿಮೆಗಾಗಿ ಪ್ರೀಮಿಯಂ ಹಣ ಸಂಗ್ರಹಿಸಲಾಗಿದೆ. ಆದರೆ, ಸರ್ಕಾರದ ವರದಿಯು 1.48,037 ಕೋಟಿ ರೂ. (1.48 ಟ್ರಿಲಿಯನ್) ಎಂದು ಹೇಳಿಕೊಳ್ಳುತ್ತಿದೆ.
ಬಿಜೆಪಿ ಸರ್ಕಾರದ ಪ್ರಕಾರ ಪಿಎಂಎಫ್‌ಬಿವೈ ಅಡಿಯಲ್ಲಿ ಸುಮಾರು 4 ರಿಂದ 6 ಕೋಟಿ ರೈತರು ದಾಖಲಾಗಿದ್ದಾರೆ. ಅಲ್ಲದೆ, ಈ ರೈತರು ವಿಮೆ ಮಾಡಿಸಲು ವಿಮಾ ಕಂಪನಿಗಳಿಗೆ ಒಟ್ಟು 57,619.32 ಕೋಟಿ ರೂ. ಪಾವತಿಸಿದ್ದಾರೆ. ಆದರೆ 2022-23ರ ಮುಂಗಾರು ಅವಧಿಯಲ್ಲಿ ಕೇವಲ 7.8 ಲಕ್ಷ ರೈತರಿಗೆ ಕೇವಲ 3,878 ಕೋಟಿ ರೂ.ಗಳನ್ನು ವಿಮೆಯಾಗಿ ಪಾವತಿಸಲಾಗಿದೆ. ವಿಮೆ ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸಿದ್ದ ಹಲವಾರು ರೈತರಿಗೆ ವಿಮೆ ಹಣ ನೀಡಿಲು ನಾನಾ ಕಾರಣ ನೀಡಿ ಕಂಪನಿಗಳು ನಿರಾಕರಿಸಿವೆ. ಅಂದರೆ, ಉಳಿದ ಬೃಹತ್ ಮೊತ್ತ ವಿಮಾ ಕಂಪನಿಗಳ ಖಜಾನೆ ಸೇರಿದೆ. ಇದು ಯೋಜನೆಯ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಅಂದಮೇಲೆ, ಈ ಯೋಜನೆಯನ್ನು ಪ್ರಧಾನ ಮಂತ್ರಿ ಕಾರ್ಪೊರೇಟ್ ಬಿಮಾ ಯೋಜನೆ ಎಂದು ಮರುನಾಮಕರಣ ಮಾಡಿದರೂ ತಪ್ಪೇನೂ ಇಲ್ಲ, ಅಲ್ಲವೇ?
ಎಲ್ಲ ಕೃಷಿ ಭಾಗಗಳಿಗೂ ನೀರಾವರಿ – ಪೊಳ್ಳು ಭರವಸೆ
2015ರಲ್ಲಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆ/ಪಿಎಂಕೆಎಸ್‌ವೈ) ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿತು. ಈ ಯೋಜನೆಯಡಿ ಐದು ವರ್ಷಗಳಲ್ಲಿ 50,000 ಕೋಟಿ ರೂ. ಅಥವಾ ವರ್ಷಕ್ಕೆ ಸರಾಸರಿ 10,000 ಕೋಟಿ ರೂ. ವ್ಯಯಿಸಿ ‘ಹರ್ ಖೇತ್ ಕೋ ಪಾನಿ’ (ಎಲ್ಲ ಕೃಷಿ ಭಾಗಗಳಿಗೂ ನೀರಾವರಿ) ಒದಗಿಸುತ್ತೇವೆ ಎಂದು ಹೇಳಿತ್ತು. ಇದೀಗ, ಚುನಾವಣಾ ಭರವಸೆಯಾಗಿ ಈ ಯೋಜನೆಯನ್ನು 2026ರವರೆಗೆ ವಿಸ್ತರಿಸುತ್ತೇವೆ ಎಂದೂ ಬಿಜೆಪಿ ಹೇಳುತ್ತಿದೆ.
ಈ ಯೋಜನೆಯ ಘೋಷಣೆಯಂತೆ ವರ್ಷಕ್ಕೆ ಸರಾಸರಿ 10,000 ರೂ. ಕೋಟಿಯಂತೆ 2015ರಿಂದ ಈವರೆಗೆ ಯೋಜನೆಯ ಮೊತ್ತ 1,00,000 ಕೋಟಿ ರೂ.ಗಳನ್ನು ಸರ್ಕಾರ ಈ ವೇಳೆಗೆ ವ್ಯಯಿಸಬೇಕಿತ್ತು. ಆದರೆ, ಸರ್ಕಾರ ಯೋಜನೆಗಾಗಿ ನೀಡಿರುವುದು 30,000 ಕೋಟಿ ರೂ.ಗಿಂತ ಕಡಿಮೆ.
ಈ ಪಿಎಂಕೆಎಸ್‌ವೈ – ಈಗಾಗಲೇ ಅಸ್ತಿತ್ವದಲ್ಲಿರುವ ಆಕ್ಸಲರೇಟೆಡ್ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ (ಎಐಬಿಪಿ), ಕಮಾಂಡ್ ಏರಿಯಾ ಡೆವಲಪ್‌ಮೆಂಟ್ ಅಂಡ್ ವಾಟರ್ ಮ್ಯಾನೇಜ್‌ಮೆಂಟ್ ಹಾಗೂ ಸೂಕ್ಷ್ಮ ನೀರಾವರಿಗಾಗಿ ಸಬ್ಸಿಡಿಗಳಂತಹ ಯೋಜನೆಗಳ ಸಂಯೋಜನೆಯಾಗಿದೆ.
2015 ರಿಂದ 2021ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಯೋಜನೆಯ ಅಂತರ್ಜಲ ಘಟಕದ ಅಡಿಯಲ್ಲಿ, ಕೇವಲ 35,953 ರೈತರು ಕೊಳವೆ ಬಾವಿಗಳನ್ನು ಹಾಕಿಸಿದ್ದಾರೆ. ಈ ಸಂಖ್ಯೆಯು ಯೋಜನೆಯ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಇನ್ನು, ಎಐಬಿಪಿ ಅಡಿಯಲ್ಲಿ, 76 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸುವ 99 ಯೋಜನೆಗಳು ಡಿಸೆಂಬರ್ 2019ರ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಯೋಜನೆಯಡಿ 2016ರಿಂದ 2022ರವರೆಗೆ ಕೇವಲ 24 ಲಕ್ಷ ಹೆಕ್ಟೇರ್‌ಗೆ ಹೊಸದಾಗಿ ನೀರಾವರಿಯನ್ನು ಒದಗಿಸಲಾಗಿದೆ. ಇದು 10ನೇ ಪಂಚವಾರ್ಷಿಕ ಯೋಜನೆ (2002-2007) 45.9 ಲಕ್ಷ ಹೆಕ್ಟೇರ್ ಮತ್ತು 11ನೇ ಪಂಚವಾರ್ಷಿಕ ಯೋಜನೆ (2007-2012) 57.7 ಲಕ್ಷ ಹೆಕ್ಟೇರ್‌ಗೆ ಪ್ರದೇಶಕ್ಕೆ ನೀರು ಒದಗಿಸಿದ ಯೋಜನೆಗಳ ಸಾಮರ್ಥ್ಯಕ್ಕಿಂತ ತೀರಾ ಕಡಿಮೆ.
ಇನ್ನು, ಹನಿ ನೀರಾವರಿ, ತುಂತುರು ನೀರಾವರಿಗಾಗಿ ರೈತರಿಗೆ ಸಬ್ಸಿಡಿ ಸಹಿತ ಉಪಕರಣಗಳನ್ನು ಒದಗಿಸುವಲ್ಲಿಯೂ ಸರ್ಕಾರ ಹಿಂದುಳಿದಿದೆ. ಪಿಐಕೆಎಸ್‌ವೈನ ಹನಿ ನೀರಾವರಿ ಘಟಕವು 2015-2020ರ ಅವಧಿಯಲ್ಲಿ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳ ಅಡಿಯಲ್ಲಿ ಸುಮಾರು 1 ಕೋಟಿ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಅದಾಗ್ಯೂ, 2022ರ ವೇಳೆಗೆ, ಕೇವಲ 62 ಲಕ್ಷ ಹೆಕ್ಟೇರ್‌ಗೆ ಮಾತ್ರವೇ ಹನಿ ನೀರಾವರಿ ಒದಗಿಸಲಾಗಿದೆ.
ಈಗಲೂ ಸುಮಾರು 14 ಕೋಟಿ ರೈತರು ತಮ್ಮ ಜಮೀನುಗಳಿಗೆ ಯಾವುದೇ ಮೂಲದಿಂದ ನೀರಾವರಿ ಪಡೆದಿಲ್ಲ. 2015-2021 ನಡುವೆ ಭಾರತೀಯ ರೈತರು ಬರಗಾಲದಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪರಿಣಾಮವಾಗಿ, ಸುಮಾರು 3.5 ಕೋಟಿ ಹೆಕ್ಟೇರ್‌ಗಳಲ್ಲಿ ಬೆಳೆ ನಷ್ಟವಾಗಿದೆ.
ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-4 | ಭಾರತದಲ್ಲಿ ಶೇ.5ಕ್ಕೆ ಇಳಿದಿದೆಯಾ ಬಡತನ? ಅಸಲಿಯತ್ತೇನು ಗೊತ್ತೇ?
ಪತ್ರಕರ್ತ ವಿವೇಕ್ ಗುಪ್ತಾ ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಬರ ನಿರ್ವಹಣಾ ಘಟಕದಿಂದ ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ದಕ್ಷಿಣ ಭಾರತದಲ್ಲಿ 1876ರ ನಂತರ ಸಂಭವಿಸಿದ ಅತ್ಯಂತ ಕೆಟ್ಟ ಬರ ಪರಿಸ್ಥಿತಿ 2016ರಲ್ಲಿ ಎದುರಾಗಿತ್ತು. ಅತಿ ಕಡಿಮೆ ಇಡುವಳಿಯುಳ್ಳ ಸಣ್ಣ ರೈತರು, ಹೆಚ್ಚು ಭೂಮಿ ಇರುವ ದೊಡ್ಡ ಹಿಡುವಳಿದಾರರಲ್ಲಿ 80% ರೈತರು ಹವಾಮಾನ ವೈಪರೀತ್ಯಗಳಿಂದ ಕೃಷಿಯಲ್ಲಿ ನಷ್ಟ ಎದುರಿದ್ದಾರೆ. ‘ಹರ್ ಖೇತ್ ಕೋ ಪಾನಿ’ ಘೋಷಣೆಯ ಮಾತುಗಳು ರೈತರಿಗೆ ನೀರು ಒದಗಿಸುವಲ್ಲಿ ವಿಫಲವಾಗಿವೆ.
60 ವರ್ಷ ದಾಟಿದ ರೈತರಿಗೆ ಪಿಂಚಣಿ ಎಂಬ ಜುಮ್ಲಾ
60 ವರ್ಷ ಮೇಲ್ಪಟ್ಟ ಎಲ್ಲ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿ ಕನಿಷ್ಠ 3,000 ರೂ. ಪಿಂಚಣಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಇದುವರೆಗೆ ಯಾವುದೇ ರೈತನಿಗೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ.
ಅಚ್ಚರಿ ಎಂದರೆ, ಈ ಯೋಜನೆಯ ಬಗ್ಗೆ ವಿಶ್ವಾಸವನ್ನೇ ಇಡದ ರೈತರು ನೋಂದಾಯಿಸಿಕೊಳ್ಳಲು ಕೂಡ ಮುಂದಾಗಿಲ್ಲ. ಇಡೀ ದೇಶದಲ್ಲಿ, ಕೇವಲ 22 ಲಕ್ಷ ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಅವರಿಗೂ ನಯಾ ಪೈಸೆ ಸಿಕ್ಕಿಲ್ಲ. ಇದು ಮೋದಿ ಮತ್ತು ಬಿಜೆಪಿಯ ಮತ್ತೊಂದು ಜುಮ್ಲಾ.
ಬೆಜೆಟ್‌ನಲ್ಲಿ ತೀವ್ರ ಕಡಿತ
ತೀವ್ರ ಕೃಷಿ ಬಿಕ್ಕಟ್ಟಿನ ನಡುವೆಯೂ ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹಂಚಿಕೆ ಕಡಿತವಾಗಿದೆ. 2022-23ಕ್ಕೆ ಹೋಲಿಸಿದರೆ, 2024-25ರ ಬಜೆಟ್‌ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಮೀಸಲಿಟ್ಟ ಮೊತ್ತವನ್ನು 81,000 ಕೋಟಿ ರೂ.ಗಳಷ್ಟು ಕಡಿತಗೊಳಿಸಲಾಗಿದೆ. ಅಲ್ಲದೆ, ಕೃಷಿ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ ಬಜೆಟ್‌ಗಳಲ್ಲಿ ಹಂಚಿಕೆಯಾಗಿದ್ದ ಒಟ್ಟು ಮೊತ್ತದಲ್ಲಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಕೇಂದ್ರಕ್ಕೆ ಬಿಟ್ಟುಕೊಟ್ಟಿದೆ. ಇದು, ರೈತರು ಮತ್ತು ಅವರ ಸಂಕಷ್ಟಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಹೊಂದಿರುವ ನಿರ್ಲಜ್ಜ ಬೇಜವಾಬ್ದಾರಿತನವನ್ನು ಅರ್ಥೈಸುತ್ತದೆ.
ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳು
ರೈತರ ಆದಾಯ ದ್ವಿಗುಣ, ಎಂಎಸ್‌ಪಿಯಂತಹ ಭರವಸೆಗಳನ್ನು ನೀಡಿದ್ದ ಮೋದಿ ಸರ್ಕಾರ, ಅಸಲಿಗೆ ರೈತರ ಕತ್ತು ಹಿಸುಕಲು ಮುಂದಾಗಿತ್ತು. ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು
- ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ–ಸೌಲಭ್ಯ) ಕಾಯ್ದೆ ಅಥವಾ ಕೃಷಿ ಮಾರುಕಟ್ಟೆ ಕಾಯ್ದೆ: ಈ ಕಾಯ್ದೆಯ ಮೂಲಕ ಸರ್ಕಾರಿ ಸ್ವಾಮ್ಯದ ಎಪಿಎಂಸಿಗಳನ್ನು ಮುಚ್ಚಿ, ಖಾಸಗೀ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲು ಸರ್ಕಾರ ಮುಂದಾಗಿತ್ತು. ಖಾಸಗಿ ವ್ಯಕ್ತಿಗಳು ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು, ಇದರಿಂದ ರೈತರಿಗೆ ಲಾಭವಾಗುತ್ತದೆ ಎಂಬ ಭ್ರಾಂತಿಯನ್ನು ಹಬ್ಬಿಸಿತ್ತು. ಅಸಲಿಗೆ, ಇದು ಕೃಷಿ ಉತ್ಪನ್ನಗಳನ್ನು ಕಾರ್ಪೊರೇಟ್‌ಗಳು ಹೇಳುವ ರೀತಿಯಲ್ಲಿ ರೈತರು ಮಾರಬೇಕಾದ ಪರಿಸ್ಥಿತಿಯನ್ನು ತಂದೊಡ್ಡುವ ಹುನ್ನಾರವಾಗಿತ್ತು.
- ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ: ಬಿತ್ತನೆಗೂ ಮುನ್ನವೇ ಕೊಳ್ಳುವವರ ಜೊತೆಗಿನ ಒಪ್ಪಂದವು ಕೃಷಿ ಉತ್ಪನ್ನಕ್ಕೆ ಪೂರ್ವ ಬೆಲೆ ನಿಗದಿ ಮಾಡುತ್ತದೆ. ಇದು ರೈತರಿಗೆ ನಷ್ಟ ತಪ್ಪಿಸುತ್ತದೆ ಎಂದು ಸರ್ಕಾರ ವಾದಿಸಿತ್ತು. ಆದರೆ, ಕ್ರಮೇಣ, ಈ ನೀತಿಯಿಂದ ಕಾರ್ಪೊರೇಟ್‌ಗಳು ಹೇಳಿದಂತೆ ರೈತರು ಕೃಷಿ ಮಾಡಬೇಕಾದ ಪರಿಸ್ಥಿತಿಗೆ ಕೊಂಡೊಯ್ದು, ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ಗಳ ಪಾದದಡಿ ಇರಿಸುವ ಸಂಚು ಸರ್ಕಾರದ್ದಾಗಿತ್ತು.
- 3-ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ: ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗೆಡ್ಡೆ ಮುಂತಾದ ವಸ್ತುಗಳನ್ನು ಕೈಬಿಡಲು ಸರ್ಕಾರ ಈ ತಿದ್ದುಪಡಿಯನ್ನು ತಂದಿತ್ತು. ಇದರಂತೆ, ಯುದ್ಧ, ಬರಗಾಲ, ಅಸಾಧಾರಣ ಬೆಲೆ ಏರಿಕೆ ಮತ್ತು ನೈಸರ್ಗಿಕ ವಿಪತ್ತಿನಂಥ ಸಂದರ್ಭಗಳನ್ನು ಹೊರತುಪಡಿಸಿ, ಉಳಿದೆಲ್ಲ ಸಮಯದಲ್ಲೂ ಇವುಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಪರಿಣಾಮವಾಗಿ, ಕಾರ್ಪೊರೇಟ್‌ಗಳು ಕೃಷಿ ಉತ್ಪನ್ನಗಳನ್ನು ತಮ್ಮ ಖಾಸಗಿ ಗೋದಾಮುಗಳನ್ನು ಬೇಕಾದಷ್ಟು ಸಂಗ್ರಹಿಸಿಕೊಳ್ಳಬಹುದಿತ್ತು. ಇಂತಹ ಸಂಗ್ರಹದಿಂದ ಮಾರುಕಟ್ಟೆಯಲ್ಲಿ ಆಹಾರ ಉತ್ಪನ್ನಗಳ ಪೂರೈಕೆ ಕಡಿಮೆಯಾಗಿ, ಬೇಡಿಕೆ ಹೆಚ್ಚುತ್ತಿತ್ತು. ಜೊತೆಗೆ, ಬೆಲೆಯೂ ಹೆಚ್ಚಾಗುತ್ತಿತ್ತು. ನಂತರದಲ್ಲಿ, ಕಾರ್ಪೋರೇಟ್ ಖದೀಮರು ತಮ್ಮ ಗೋದಾಮುಗಳಿಂದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಹಂತಹಂತವಾಗಿ ಪೂರೈಕೆ ಮಾಡಿ, ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದರು. ಇದಕ್ಕೆ, 2019ರಲ್ಲಿ ತೊಗರಿ ಬೇಳೆ ಬೆಲೆ ಕೆ.ಜಿಗೆ 200 ರೂ. ದಾಟಿದ್ದು, ಒಂದು ಉದಾಹರಣೆ.
ಈ ಕೃಷಿ ಕಾಯ್ದೆಗಳ ವಿರುದ್ಧ 2020-2021ರಲ್ಲಿ ಬರೋಬ್ಬರಿ 1 ವರ್ಷಗಳ ಕಾಲ ರೈತರು ಹೋರಾಟ ನಡೆಸಿದರು. ರೈತರ ಮೇಲೆ ಸರ್ಕಾರ ನಾನಾ ರೀತಿಯಲ್ಲಿ ದೌರ್ಜನ್ಯ ಎಸಗಿತು. ಟಿಯರ್ ಗ್ಯಾಸ್, ವಾಟರ್ ಜೆಟ್‌ಗಳು, ರಬ್ಬರ್ ಬುಲೆಟ್‌ಗಳು, ಲಾಠಿ ಚಾರ್ಜ್ ಮಾಡಿ ಹಲ್ಲೆ ನಡೆಸಿತು. ಅಲ್ಲದೆ, ರೈತರು ದೆಹಲಿಗೆ ಬರುವ ಹಾದಿಗೆ ಮುಳ್ಳಿನ ಬೇಲಿ, ಕಬ್ಬಿಣದ ಮೊಳೆಗಳನ್ನು ಹಾಕಿತು. ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಂದಕಗಳನ್ನು ನಿರ್ಮಾಣ ಮಾಡಿತು. ರೈತ ಹೋರಾಟದ ಜಾಗಕ್ಕೆ ವಿದ್ಯುತ್, ನೀರು ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿತು. ರೈತರು ಮತ್ತು ಅವರ ಕುಟುಂಬಗಳ ಮೇಲೆ ದಾಳಿಗಳು ನಡೆದವು. ಆದರೂ, ಕೊರೋನ, ಮಳೆ, ಬಿಸಿಲಿಗೂ ರೈತರು ಜಗ್ಗದೆ ಹೋರಾಟ ನಡೆಸಿದರು. ಹೋರಾಟದಲ್ಲಿ ಸುಮಾರು 750 ರೈತರು ಪ್ರಾಣ ಕಳೆದುಕೊಂಡರು. ಅಂತಿಮವಾಗಿ ರೈತ ಹೋರಾಟಕ್ಕೆ ಮಣಿದ ಮೋದಿ ಸರ್ಕಾರ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು.
ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-2 | ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ? ಸುಳ್ಳಿನ ಸುಳಿಗೆ ನಿರುದ್ಯೋಗಿ ಯುವಜನರು ಬಲಿ!
ಇನ್ನು, ಮತ್ತೊಂದು ರೈತರ ಬೆನ್ನು ಮುರಿಯುವ ‘ವಿದ್ಯುತ್ ಖಾಸಗೀಕರಣ ಮತ್ತು ಪ್ರೀ-ಪೇಯ್ಡ್ ಸ್ಮಾರ್ಟ್ ಮೀಟರ್’ ಅಳವಡಿಸುವ ಯೋಜನೆ ಸರ್ಕಾರದ ಮುಂದಿದೆ. ಕೃಷಿಗೆ ಸರ್ಕಾರಗಳು ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿವೆ. ಆದರೆ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿ, ರೈತರ ಪಂಪ್‌ಸೆಟ್‌ಗಳಿಗೆ ಪ್ರೀ-ಪೇಯ್ಡ್ ಸ್ಮಾರ್ಟ್ ಮೀಟರ್ (ಪೂರ್ವ ಪಾವತಿ) ಅಳವಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿ, ಅಂಗೀಕರಿಸಿದೆ. ಇದು ಜಾರಿಯಾದರೆ, ಕೃಷಿಗೆ ವಿದ್ಯುತ್ ಪಡೆಯಲು ರೈತರು ಮೊದಲೇ ವಿದ್ಯುತ್ ಶುಲ್ಕ ಪಾವತಿಸಿ, ತಮ್ಮ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆಯಬೇಕಾಗುತ್ತದೆ. ಇದು, ಮೊದಲೇ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ.
ಇತ್ತೀಚೆಗೆ ಬಹಿರಂಗವಾದ ಚುನಾವಣಾ ಬಾಂಡ್‌ಗಳು ಕಾರ್ಪೊರೇಟ್ ಮತ್ತು ಬಿಜೆಪಿ ನಡುವಿನ ಸಂಬಂಧವನ್ನು ಎತ್ತಿ ಹಿಡಿದಿದೆ. ಈ ಸಂಬಂಧವು ರೈತ ವಿರೋಧಿ ಕೃಷಿ ನೀತಿಗಳ ರಚನೆಗೆ ಕಾರಣವೆಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.
ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-1 | ಕೊರೋನಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್ ಎಲ್ಲೋಯ್ತು?
ರೈತ ಹೋರಾಟದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಮ್ಮ ಮೇಲೆ ನಡೆಸಿದ ದೌರ್ಜನ್ಯ, ದಬ್ಬಾಳಿಕೆಯನ್ನು ರೈತರು ಮರೆತಿಲ್ಲ. ಮರೆಯುವುದಿಲ್ಲ. ಕ್ಷಮಿಸುವುದೂ ಇಲ್ಲ. ಮೋದಿ ಅವರು ತಮ್ಮ ಮಿತ್ರರಾದ ಅಂಬಾನಿ-ಅದಾನಿಗಾಗಿ ಇಡೀ ದೇಶವನ್ನೇ ಕಾರ್ಪೊರೇಟೀಕರಣ ಮಾಡುತ್ತಿರುವುದರ ವಿರುದ್ಧ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯು ರೈತರ ಮೇಲಿನ ದಮನಕ್ಕೆ ಬೆಲೆ ತೆರಲಿದೆ ಎಂದು ರೈತರು ನಂಬಿದ್ದಾರೆ.
ಮೋದಿ ಸಹವಾಸ ಸಾಕೆನ್ನುತ್ತಿದ್ದಾರೆ ರೈತರು; ಸಮೀಕ್ಷಾ ವರದಿ
ಲೋಕಸಭಾ ಚುನಾವಣೆಯ ಕಾರಣಕ್ಕಾಗಿ ಸಿ-ವೋಟರ್ ಮತ್ತು ಇಂಡಿಯಾ ಟುಡೇ ಸಂಸ್ಥೆಗಳು ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ನಡೆಸಿವೆ. ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರನ್ನು ಸಮೀಕ್ಷೆಯು ಒಳಗೊಂಡಿದೆ. ಸಮೀಕ್ಷೆಯಲ್ಲಿ ಭಾಗಿಯಾದ ರೈತರ ಪೈಕಿ 32.5% ಮತ್ತು ಕೃಷಿ ಕಾರ್ಮಿಕರಲ್ಲಿ 34.6% ಜನರು ಮೋದಿ ಸರ್ಕಾರದಲ್ಲಿ ತಮ್ಮ ಆರ್ಥಿಕ ಸ್ಥಿತಿ ಕೆಟ್ಟ ಪರಿಸ್ಥಿತಿಗೆ ಹೋಗಿದೆ ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-3 | 100 ಸ್ಮಾರ್ಟ್ ಸಿಟಿಗಳು ಎಲ್ಲಿವೆ? ಇದು ಮೋದಿಯ ‘ಸ್ಮಾರ್ಟ್’ ಸುಳ್ಳು!
ಅಲ್ಲದೆ, ಹಣದುಬ್ಬರವು ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. 63.2% ರೈತರು ಮತ್ತು 70% ಕೃಷಿ ಕಾರ್ಮಿಕರು ತಮ್ಮ ದೈನಂದಿನ ಅಗತ್ಯ ಖರ್ಚುಗಳನ್ನು ನಿಭಾಯಿಸಲು ಹೆಚ್ಚು ಕಷ್ಟವಾಗುತ್ತಿದೆ ಎಂದು ಒತ್ತಿಹೇಳಿದ್ದಾರೆ. 52% ರೈತರು ಮತ್ತು 55% ಕೃಷಿ ಕಾರ್ಮಿಕರು ಮೋದಿ ಸರ್ಕಾರದ ನೀತಿಗಳು ರೈತರ ಪರವಾಗಿಲ್ಲ. ಬದಲಾಗಿ, ಕಾರ್ಪೊರೇಟ್‌ಗಳ ಪರವಾಗಿವೆ ಎಂದು ದೂಷಿಸಿದ್ದಾರೆ.
ಇದೆಲ್ಲವೂ, ರೈತರು, ಕೃಷಿ ಕಾರ್ಮಿಕರು ಮತ್ತು ಕೃಷಿ ಕ್ಷೇತ್ರದ ವಿಚಾರದಲ್ಲಿ ಮೋದಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತವೆ. ರೈತರಿಗೆ ಮೋದಿ ಆಡಳಿತದ ಸಹವಾಸ ಸಾಕೆನಿಸಿದೆ. ಅವರೆಲ್ಲರೂ, ಬಂಡವಾಳಿಗರ ಸ್ನೇಹಿತ ಮೋ-ಶಾಗಳನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಯುತ್ತಿದ್ದಾರೆ. ಚುನಾವಣಾ ಫಲಿತಾಂಶಗಳಲ್ಲಿಯೂ ರೈತರ ಆಕ್ರೋಶ ಪ್ರತಿಫಲಿಸಲಿದೆ.