ಹಗರಣಗಳ ಕುಣಿಕೆ, ‘ಮೋಶಾ’ಗಳ ಪಾಶ: ಕುಮಾರಸ್ವಾಮಿಯವರ ಕತೆ ಏನು?

Date:

Advertisements
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಒಟ್ಟೊಟ್ಟಿಗೆ ನಾಲ್ಕು ಹಗರಣಗಳು ಅಮರಿಕೊಂಡಿವೆ. ಒಂದು ಕಡೆ ಹಗರಣಗಳ ಕುಣಿಕೆ, ಮತ್ತೊಂದೆಡೆ ಮೋಶಾಗಳ ಪಾಶ. ಕುಟುಂಬವನ್ನು ಕಾಪಾಡಲು 'ದೇಕು'ಗಳು ತೆಗೆದುಕೊಂಡ ರಾಜಕೀಯ ನಿಲುವು, ಇಂದು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂಬುದಕ್ಕೆ, ಇದೊಂದು ಅತ್ಯುತ್ತಮ ಉದಾಹರಣೆ.

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕೆಲವು ಸಲ ಸತ್ಯ ನುಡಿಯುತ್ತಾರೆ. ಮರ್ಮಕ್ಕೆ ತಾಕುವಂತೆ ಮಾತನಾಡುತ್ತಾರೆ. ಅಂಥದ್ದೇ ಒಂದು ಮಾತನ್ನು 2023ರಲ್ಲಿ, ವಿಧಾನಸಭಾ ಚುನಾವಣೆಗೂ ಮುನ್ನ ಆಡಿದ್ದರು. ಅದು, ‘ಜೋಶಿ ಮಹಾರಾಷ್ಟ್ರ ಭಾಗದ ಪೇಶ್ವೆಗಳ ವಂಶಕ್ಕೆ ಸೇರಿದ ಬ್ರಾಹ್ಮಣರು. ಇವರು ನಮ್ಮ ಕರ್ನಾಟಕದ ಬ್ರಾಹ್ಮಣರಲ್ಲ, ಶೃಂಗೇರಿಯ ಮಠ ಒಡೆದವರು, ಮಹಾತ್ಮ ಗಾಂಧಿ ಕೊಂದವರು. ಬಿಜೆಪಿಗೆ ತಾಕತ್ತಿದ್ದರೆ ಪ್ರಲ್ಹಾದ ಜೋಶಿಯೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ’ ಎಂಬುದಾಗಿತ್ತು.

ಬ್ರಾಹ್ಮಣರು, ಮಠ ಒಡೆದವರು, ಗಾಂಧಿ ಕೊಂದವರು ಎಂದಾಕ್ಷಣ ಸಂಘ ಪರಿವಾರ ಮತ್ತು ಬಿಜೆಪಿ ಮರ್ಮಕ್ಕೆ ಪೆಟ್ಟು ಬಿದ್ದಿತ್ತು. ತಕ್ಷಣ ತನ್ನ ಕಾಲಾಳುಗಳಂತಹ ಐಟಿ ಸೆಲ್‌ಗೆ ಸುದ್ದಿ ಮುಟ್ಟಿಸಿತ್ತು. ಕುಮಾರಸ್ವಾಮಿಗೆ ಸಂಬಂಧಿಸಿದ ಚಿತ್ರಗಳು, ಹೇಳಿಕೆಗಳು, ವಿಡಿಯೋಗಳನ್ನು ಗುಡ್ಡೆಹಾಕಿಕೊಂಡು, ಹೇಗೆಲ್ಲ ತಿರುಚಬಹುದು, ಏನೆಲ್ಲ ಟ್ರೋಲ್‌ ಮಾಡಬಹುದು ಎಂದು ತಲೆಕೆಡಿಸಿಕೊಂಡಿತ್ತು. ಓಜೋನ್ ತೂತಾಗುವಂತೆ ಜಾಲತಾಣಕ್ಕೆ ತುಂಬಿತ್ತು. ಬಿಜೆಪಿಯ ಪ್ಯಾರಲಲ್ ಐಟಿ ಸೆಲ್‌ನಂತಿರುವ ಸ್ವಾಮೀಜಿಗಳು ‘ಹಿಡಿಶಾಪ’ ಹಾಕಿದ್ದರು. ಪೇಮೆಂಟ್ ಐಟಿ ಸೆಲ್‌ನ ಪತ್ರಕರ್ತರಂತೂ ಕುಮಾರಸ್ವಾಮಿಯವರನ್ನು ಹರಿದು ಚಿಂದಿ ಉಡಾಯಿಸಿದ್ದರು.

ಕುಮಾರಸ್ವಾಮಿಯವರು ಬಾಯಿತಪ್ಪಿ ಹೇಳಿದ ಒಂದೇ ಒಂದು ಸತ್ಯಕ್ಕೆ ಬಿಜೆಪಿ ಬುಡಕ್ಕೆ ಬೆಂಕಿ ಬಿದ್ದಂತಾಗಿತ್ತು. ನಾಗಪುರದ ಹಾವುಗಳು ಹುತ್ತದಿಂದ ಹೊರಬಂದು ಬುಸುಗುಡುತ್ತಿದ್ದವು. ಬಿಜೆಪಿಯ ನಾಯಕರಂತೂ ದೂರಾಲೋಚನೆಗೆ ಬಿದ್ದು ಧುಮುಗುಡುತ್ತಿದ್ದರು. ಆದರೆ, ಬಿಜೆಪಿಗಳ ಆಳ-ಅಗಲ ಬಲ್ಲ ಕುಮಾರಸ್ವಾಮಿಯವರು, ಮುಂದಾಗಬಹುದಾದ ರಾಜಕೀಯ ಚಿತ್ರಣವನ್ನು ಊಹಿಸಿ ತಣ್ಣಗಿದ್ದರು.

Advertisements

ಅವರು ಊಹಿಸಿದಂತೆಯೇ, ದಿಲ್ಲಿಯ ದೊರೆ, ಹರದನಹಳ್ಳಿಯ ಹೈದನ ಹೆಗಲ ಮೇಲೆ ಕೈ ಇಟ್ಟಿದ್ದರು. ‘ನೀವು-ನಾವು ದೂರಾಗಿ, ವಿಧಾನಸಭೆಯನ್ನು ಕಳೆದುಕೊಂಡಿದ್ದೇವೆ, ಲೋಕಸಭೆಯನ್ನಾದರೂ ಉಳಿಸಿಕೊಳ್ಳೋಣ. 1977ರಲ್ಲಿಯೇ ನೀವು ನಮ್ಮ ಜೊತೆಯಲ್ಲಿದ್ರಿ, 2006ರಲ್ಲಿ ನಮ್ಮೊಂದಿಗೆ ಸೇರಿ ಸರ್ಕಾರ ಮಾಡಿದ್ರಿ’ ಎಂದು ಮೋಶಾ(ಮೋದಿ-ಅಮಿತ್ ಶಾ)ಗಳು ಕೈ ಕುಲುಕಲು ಸಿದ್ಧರಾದಾಗ, ಆ ಕುಲುಕಾಟದಲ್ಲಿ ಗೌಡರಿಗೆ ‘ಬದುಕಲು ಕಲಿಯಿರಿ’ ಪಾಠಗಳು ಕಂಡಿದ್ದವು.

ಒಂದು, ಬದ್ಧವೈರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸಡ್ಡು ಹೊಡೆಯುವುದು; ರಾಜ್ಯದ ಎರಡು ಬಲಿಷ್ಠ ಸಮುದಾಯಗಳು ಒಂದಾಗಿ ಮೋದಿಗೆ ಶಕ್ತಿ ತುಂಬುವುದು; ಕೇಂದ್ರದಲ್ಲಿ ಸಚಿವಸ್ಥಾನ ಗಿಟ್ಟಿಸಿ ಗಟ್ಟಿಯಾಗುವುದು ಆಗಿತ್ತು. ಇದಕ್ಕಿಂತ ಇನ್ನೂ ಒಂದು ಮುಖ್ಯ ವಿಚಾರವೆಂದರೆ, ಮೋದಿಯವರ ಬ್ರಹ್ಮಾಸ್ತ್ರ- ಐಟಿ, ಇಡಿ, ಸಿಬಿಐ ದಾಳಿಗಳಿಂದ ಬಚಾವಾಗುವುದೂ ಸೇರಿತ್ತು.

ಅದೇ ರೀತಿ, ಬಿಜೆಪಿ ಹೈಕಮಾಂಡ್ ಕೂಡ ದೂರಾಲೋಚನೆಗೆ ಬಿದ್ದಿತ್ತು. ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕವನ್ನು ಬಾಗಿಲನ್ನಾಗಿಯೇ ಬಳಸಿಕೊಳ್ಳಬೇಕು. ಕರ್ನಾಟಕದ ಬಹುಸಂಖ್ಯಾತರಾದ ಲಿಂಗಾಯತರು ಹಾಗೂಹೀಗೂ ಬಿಜೆಪಿಯೊಂದಿಗೆ ಇದ್ದಾರೆ; ಇಲ್ಲದ ಒಕ್ಕಲಿಗರನ್ನು ಸೆಳೆದುಕೊಂಡು, ಆರ್‍ಎಸ್ಎಸ್ ಬಗ್ಗೆ ಒರಟಾಗಿ ಮಾತನಾಡದಂತೆ ಮಾಡಬೇಕು. ಆ ಎರಡು ಬಲಿಷ್ಠ ಸಮುದಾಯಗಳನ್ನು ಬಳಸಿಕೊಂಡು, ತಮ್ಮ ಮನದಾಸೆಯಾದ ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ಈಡೇರಿಸಿಕೊಳ್ಳಬೇಕು ಎಂಬುದಾಗಿತ್ತು.

ಆ ನಿಟ್ಟಿನಲ್ಲಿ ಮೋಶಾಗಳು, ಬಿಜೆಪಿಯಿಂದ ದೂರ ಮಾಡಿದ್ದ ಯಡಿಯೂರಪ್ಪನವರಿಗೆ ರಾಷ್ಟ್ರೀಯ ಸಮಿತಿಯಲ್ಲಿ ಸ್ಥಾನ, ಮಗ ವಿಜಯೇಂದ್ರರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕರುಣಿಸಿದರು. ಹಳೇ ಮೈಸೂರು ಭಾಗದಲ್ಲಿ ಬಲಿಷ್ಠರಾಗಿದ್ದ ದೇಕು(ದೇವೇಗೌಡ-ಕುಮಾರಸ್ವಾಮಿ)ಗಳನ್ನು ‘ದಾಳಿ’ಯ ಭಯ ಬಿತ್ತಿ ಬಲೆಗೆ ಬೀಳಿಸಿಕೊಂಡರು.  

ಮೋದಿಯವರು ಮತ್ತೆ ಪ್ರಧಾನಿಯಾದರು, ಕುಮಾರಸ್ವಾಮಿಯವರು ಕೇಂದ್ರದಲ್ಲಿ ಸಚಿವರಾದರು. ಒಟ್ಟಾರೆ ಮೋಶಾಗಳು ಮತ್ತು ದೇಕುಗಳು ಅಂದುಕೊಂಡಂತೆಯೇ ಆಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ಹೊಂದಾಣಿಕೆ, ಅವರಿಬ್ಬರ-ಇವರಿಬ್ಬರ ಅಪ್ಪಟ ಸ್ವಾರ್ಥದಿಂದ ಕೂಡಿದೆ. ‘ಬಾರ್ಟರ್ ಸಿಸ್ಟಮ್’ ವ್ಯವಹಾರ ವ್ಯವಸ್ಥಿತವಾಗಿಯೇ ಜಾರಿಯಲ್ಲಿದೆ.

ಇದನ್ನು ಓದಿದ್ದೀರಾ?: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಕೊರಳಿಗೆ ಡಿನೋಟಿಫಿಕೇಷನ್‌ ಉರುಳುಕಲ್ಲು!

ಆದರೆ, ಮೋಶಾಗಳು ದೆಹಲಿಯಲ್ಲಿ ಕೂತು ದೇಶವನ್ನಾಳುವ ದೊಡ್ಡ ಜನಗಳು. ಜಾತ್ಯತೀತ ಜನತಾ ದಳದಂತಹ ಹಲವು ಪ್ರಾದೇಶಿಕ ಪಕ್ಷಗಳ- ಸಣ್ಣಜನಗಳ ಬೆಂಬಲ ಪಡೆದು ಅಧಿಕಾರ ನಡೆಸುತ್ತಿರುವವರು. ಅವರು ಯಾವತ್ತೂ ಅವರ ಅನುಕೂಲ ನೋಡುತ್ತಾರೆಯೇ ಹೊರತು ಪ್ರಾದೇಶಿಕ ಪಕ್ಷಗಳನ್ನು ಉಳಿಸಿದ-ಬೆಳೆಸಿದ ಉದಾಹರಣೆ ಇಲ್ಲ. ಅವರದೇನಿದ್ದರೂ ಹೊಳೆ ದಾಟಿದ ಪಯಣಿಗನ ಪಾತ್ರ. ದೋಣಿ ಮುಳುಗುತ್ತದೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಬೇಕಾದ್ದು ಅಂಬಿಗನ ಕೆಲಸ.

ಈಗ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಇಂತಹ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಒಟ್ಟೊಟ್ಟಿಗೆ ನಾಲ್ಕು ಹಗರಣಗಳನ್ನು- ಕೇತಗಾನಹಳ್ಳಿ ಭೂ ಒತ್ತುವರಿ, ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್, ಗಂಗೇನಹಳ್ಳಿ ಹಗರಣ, ಜಂತಕಲ್ ಮೈನಿಂಗ್- ಕೆದಕಿ, ಕುತ್ತಿಗೆಗೆ ತಂದಿದೆ. ಬಚಾವಾಗಲು ಈ ಫೈಲ್‌ಗಳನ್ನು ಹಿಡಿದು ಮೋಶಾಗಳ ಮುಂದೆ ನಿಂತರೆ, ಅವರು ಬಚಾವು ಮಾಡಬಹುದು. ಆದರೆ, ಆ ಫೈಲ್‌ಗಳೇ ಭವಿಷ್ಯದ ಬ್ಲಾಕ್‌ಮೇಲ್‌ಗೆ ಅಸ್ತ್ರಗಳಾಗಲೂಬಹುದು.    

ಅಥವಾ ಮೋಶಾಗಳು ದೊಡ್ಡ ಮನಸ್ಸು ಮಾಡಿ ಬಚಾವು ಮಾಡಿದರೂ, ಕುಮಾರಸ್ವಾಮಿಯವರು ಋಣಭಾರಕ್ಕೆ ಒಳಗಾಗಬಹುದು. ಅವರಿಂದ ಮಾಡಬಾರದ್ದನ್ನು ಮಾಡಿಸಲೂಬಹುದು. ಆ ಮಾಡಬಾರದ್ದನ್ನು ಮಾಡಿಸುವ ಪಟ್ಟಿಯಲ್ಲಿ, ಮಂಡ್ಯ ಜಿಲ್ಲೆಯ ಮರಳಗಾಲ–ಅಲ್ಲಾಪಟ್ಟಣ ‍ಪ್ರದೇಶದಲ್ಲಿ ಸಿಗುವ 1,600 ಟನ್‌ಗಳ ಲಿಥಿಯಂ ನಿಕ್ಷೇಪವಿದೆ. 

ಲಿಥಿಯಂ ಒಂದು ಅತ್ಯಂತ ಹಗುರವಾದ ಲೋಹವಾಗಿದೆ. ಇದನ್ನು ಬಿಳಿಯ ಚಿನ್ನ (white gold) ಎಂದೂ ಕರೆಯಲಾಗುತ್ತದೆ. ಲಿಥಿಯಂ ಅನ್ನು ರಕ್ಷಣಾ ವಲಯ, ಪರಮಾಣು ಶಕ್ತಿ, ಬಾಹ್ಯಾಕಾಶ, ವೈದ್ಯಕೀಯ ಉಪಕರಣಗಳು, ಬ್ಯಾಟರಿ ಚಾಲಿತ ವಾಹನಗಳು, ಸೆರಾಮಿಕ್ಸ್, ಗಾಜು, ದೂರಸಂಪರ್ಕ ಮತ್ತು ಏರೋಸ್ಪೇಸ್ ಉದ್ಯಮಗಳಲ್ಲಿ, ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ, ಲೂಬ್ರಿಕೇಟಿಂಗ್ ಗ್ರೀಸ್, ರಾಕೆಟ್ ಪ್ರೊಪೆಲ್ಲಂಟ್‌ಗಳಲ್ಲಿ, ಮೊಬೈಲ್ ಫೋನ್, ಕಂಪ್ಯೂಟರ್‍‌ನಂತಹ ಕ್ಷೇತ್ರಗಳ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಉಪಯೋಗಿಸಲಾಗುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಲಿಥಿಯಂ ಪ್ರಪಂಚದ ಎಲ್ಲಾ ದೇಶಕ್ಕೂ ಬಹುಮುಖ್ಯವಾಗಿ ಬೇಕಾಗಿರುವ, ಬಹುಬೇಡಿಕೆಯ ಲೋಹವಾಗಿದೆ.

ಆ ಲೋಹದ ನಿಕ್ಷೇಪವಿರುವ ಮಂಡ್ಯದ ಮೇಲೆ ಈಗ ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಕಣ್ಣು ಬಿದ್ದಿದೆ. ಲಿಥಿಯಂ ಗಣಿಗಾರಿಕೆಯ ಪರವಾನಗಿ ಪಡೆಯಲು ನಾ ಮುಂದು, ತಾ ಮುಂದು ಎಂಬ ಲಾಬಿ ಜೋರಾಗಿದೆ. ಈ ಗಣಿಗಾರಿಕೆಯನ್ನು ಪ್ರಧಾನಿ ಮೋದಿಯವರ ಆಪ್ತ ಮಿತ್ರ, ಅತಿ ಶ್ರೀಮಂತ ಗೌತಮ್ ಅದಾನಿಗೆ ಧಾರೆ ಎರೆದು ಕೊಡಲು ಮಾತುಕತೆ ನಡೆಸಲಾಗಿದೆ ಎಂಬ ಮಾಹಿತಿಗಳೂ ಹೊರಬೀಳುತ್ತಿವೆ.

ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಗಣಿಗಾರಿಕೆಯಿಂದ ಹವಾಮಾನ ವೈಪರೀತ್ಯ, ಬರ – ನೆರೆಗಳು ಪದೆ ಪದೇ ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮಂಡ್ಯ ರೈತರು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಅರಿತೇ ಮೋಶಾಗಳು, ಕುಮಾರಸ್ವಾಮಿಯವರನ್ನು ಉಕ್ಕು ಮತ್ತು ಬೃಹತ್ ಕೈಗಾರಿಕೆ ಮಂತ್ರಿ ಮಾಡಿದ್ದಾರೆ ಎಂದು ಬಲ್ಲವರು ಆರೋಪಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ‘ಗ್ಯಾರಂಟಿ ಯೋಜನೆ’ಗಳು ಚುನಾವಣಾ ಸಮಯದಲ್ಲಷ್ಟೇ ಗ್ಯಾರಂಟಿ!

ಅಕಸ್ಮಾತ್, ಮೇಲಿನ ನಾಲ್ಕು ಹಗರಣಗಳ ಪೈಲ್ ಮುಂದಿಟ್ಟು, ಮಂಡ್ಯದ ಲಿಥಿಯಂ ಗಣಿಗಾರಿಕೆಗೆ ಕುಮಾರಸ್ವಾಮಿ ಕಡೆಯಿಂದ ಪರವಾನಗಿ ಕೊಡಿಸಿದ್ದೇ ಆದರೆ, ಒಂದು- ಕರ್ನಾಟಕ ಸರ್ಕಾರ ತಡೆಯೊಡ್ಡುತ್ತದೆ; ಇಲ್ಲ ಮಂಡ್ಯದ ಜನ ಕುಮಾರಸ್ವಾಮಿಯವರ ವಿರುದ್ಧ ತಿರುಗಿ ಬೀಳುತ್ತಾರೆ. ಗಣಿಗಾರಿಕೆ ನಡೆದರೆ, ಮಂಡ್ಯದ ಮತದಾರರ ಅವಕೃಪೆಗೊಳಗಾಗುತ್ತಾರೆ. ನಡೆಯದಿದ್ದರೆ ಮೋಶಾಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ಈಗಾಗಲೇ ಕೇಂದ್ರ ಸಚಿವರಾದ ಮೊದಲ ದಿನವೇ ಸಹಿ ಮಾಡಿದ ದೇವದಾರಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿದೆ. ಬೆಂಗಳೂರಿನ ಎಚ್ಎಂಟಿ, ಭದ್ರಾವತಿಯ ಎಂಪಿಎಂ ಕೈಗೂಡುತ್ತಿಲ್ಲ. ಹೀಗಾಗಿ ಕೇಂದ್ರ ಸಚಿವರಾದರೂ, ರಾಜ್ಯದಲ್ಲಿ ಅವರ ಪಾತ್ರ ಮತ್ತು ಪ್ರಗತಿ ಇಲ್ಲದಾಗಿದೆ.  

‘ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಕೇಂದ್ರದಲ್ಲಿ ಕೃಷಿ ಮಂತ್ರಿಯಾಗಿ ನಿಮ್ಮೆಲ್ಲ ಕಷ್ಟಗಳನ್ನು ಪರಿಹರಿಸುತ್ತೇನೆ’ ಎಂದು ಭರವಸೆ ನೀಡಿದ್ದ ಕುಮಾರಸ್ವಾಮಿಯವರು, ಈಗ ಒತ್ತಡಕ್ಕೆ ಸಿಲುಕಿ ಕೈಗಾರಿಕಾ ಮಂತ್ರಿಯಾಗಿದ್ದಾರೆ. ಈಗ ಮೇಲೆದ್ದು ಬಂದಿರುವ ಹಗರಣಗಳಿಂದ ಬಚಾವಾಗಲು ಗಣಿಗಾರಿಕೆಗೆ ಪರವಾನಗಿ ಕೊಟ್ಟರೆ, ಭವಿಷ್ಯದ ರಾಜಕಾರಣ ಮತ್ತು ಪ್ರಾದೇಶಿಕ ಪಕ್ಷ- ಎರಡೂ ನೆಲಕಚ್ಚಿದಂತೆ.

ಒಂದು ಕಡೆ ಹಗರಣಗಳ ಕುಣಿಕೆ, ಮತ್ತೊಂದೆಡೆ ಮೋಶಾಗಳ ಪಾಶ. ಕುಟುಂಬವನ್ನು ಕಾಪಾಡಲು ದೇಕುಗಳು ತೆಗೆದುಕೊಂಡ ರಾಜಕೀಯ ನಿಲುವು, ಇಂದು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂಬುದಕ್ಕೆ, ಇದೊಂದು ಅತ್ಯುತ್ತಮ ಉದಾಹರಣೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X