- ರಾಹುಲ್ ಗಾಂಧಿ ಅರ್ಜಿ ವಿಚಾರಣೆ ಪಟ್ಟಿ ಮಾಡಲಿರುವ ಎಸಿಜೆ ದೇಸಾಯಿ
- ಏಪ್ರಿಲ್ 29ರಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ವಕೀಲರ ಮನವಿ
ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜನಪ್ರತಿನಿಧಿಗಳ ಮತ್ತು ಸೂರತ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಯಾವುದೇ ಕಾರಣ ನೀಡದೆ ನ್ಯಾಯಮೂರ್ತಿ ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಮೋದಿ ಉಪನಾಮ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಗುಜರಾತ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷಯ ತೀರ್ಪನ್ನು ಪ್ರಶ್ನಿಸಿ ರಾಹುಲ್ ಸೂರತ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಮನವಿ ತಿರಸ್ಕರಿಸಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಹುಲ್ ಪರ ವಕೀಲ ಪಂಕಜ್ ಚಂಪನೇರಿ ಅವರು ಏಪ್ರಿಲ್ 29ರಂದು ಅರ್ಜಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಯಾವುದೇ ಕಾರಣ ನೀಡದ ನ್ಯಾಯಾಮೂರ್ತಿ ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದ ಬಳಿಕ, ಏಪ್ರಿಲ್ 29ರಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಹಂಗಾಮಿ ನ್ಯಾಯಾಮೂರ್ತಿ ಎ.ಜೆ ದೇಸಾಯಿ ಅವರ ಮುಂದೆ ರಾಹುಲ್ ಅವರ ವಕೀಲ ಪಂಕಜ್ ಚಂಪನೇರಿ ಪ್ರಸ್ತಾಪಿಸಿದ್ದಾರೆ. ಎಸಿಜೆ ದೇಸಾಯಿ ಅವರು ವಿಚಾರಣಾ ದಿನಾಂಕವನ್ನು ಪಟ್ಟಿ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿರುವ ಗೀತಾ ಗೋಪಿ ಅವರು ಪ್ರಕರಣವನ್ನು ಬೇರೆ ಪೀಠಕ್ಕೆ ನಿಯೋಜಿಸಲು ಮುಖ್ಯ ನ್ಯಾಯಮೂರ್ತಿಗೆ ಹಸ್ತಾಂತರಿಸುವಂತೆ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಸತ್ಯ ಹೇಳಿದ್ದಕ್ಕೆ ಸಿಕ್ಕ ಬೆಲೆ; ತುಘಲಕ್ ಲೇನ್ ನಿವಾಸ ತೊರೆದ ರಾಹುಲ್ ಗಾಂಧಿ
ಏನಿದು ಪ್ರಕರಣ?
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ “ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ” ಎಂದು ರಾಹುಲ್ ಲೇವಡಿ ಮಾಡಿದ್ದರು.
ಈ ಹೇಳಿಕೆಯನ್ನು ಖಂಡಿಸಿ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಅಪರಾಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.