ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸ್ವಾಭಿಮಾನದ ಹೆಸರಿನಲ್ಲಿ ಗೆದ್ದಿದ್ದ ಸಂಸದೆ ಸುಮಲತಾ ಅವರು ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾರನ್ನು ನಂಬಿ ಬಿಜೆಪಿ ಸೇರಿ, ಅತಂತ್ರರಾಗಿದ್ದಾರೆ. ಸದ್ಯ, ಅಕ್ಷರಶಃ ಅವರ ಪರಿಸ್ಥಿತಿ ಬೀದಿ ಪಾಲಾದಂತಾಗಿದೆ. ಮಂಡ್ಯ ಬಿಡಲ್ಲ ಎನ್ನುತ್ತಿರುವ ಸುಮಲತಾ, ಬಿಜೆಪಿ ಟಿಕೆಟ್ ಕೊಡದೆ ಕೇಸರಿ ಶಾಲನ್ನು ಕೈಗಿಟ್ಟಿದೆ. ಟಿಕೆಟ್ ಸಿಗದೆ ಅತಂತ್ರವಾಗಿರುವ ಸುಮಲತಾ, ತಮ್ಮ ಮುಂದಿನ ನಿರ್ಧಾರವನ್ನು ಏಪ್ರಿಲ್ 3ರಂದು ಬೆಂಬಲಿಗರ ಸಭೆ ನಡೆಸಿದ ಬಳಿಕ ಘೋಷಿಸುವುದಾಗಿ ಹೇಳಿದ್ದಾರೆ.
ಸದ್ಯ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವು ಜೆಡಿಎಸ್ ಪಾಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೇ ಚುನಾವಣಾ ಅಖಾಡಕ್ಕೆ ಇಳಿದಿದ್ದು, ತಾವೇ ಅಭ್ಯರ್ಥಿಯಾಗಿದ್ದಾರೆ. ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿಯಲ್ಲಿರುವ ಮಾಜಿ ಸಚಿವ ಕೆ.ಸಿ ನಾರಾಯಣಗೌಡ, ಶಿವರಾಮೇಗೌಡ ಸೇರಿದಂತೆ ಹಲವರು ಕುಮಾರಸ್ವಾಮಿ ವಿರುದ್ಧ ಬಂಡಾಯದ ಬಾವುಟ ಬೀಸಿದ್ದಾರೆ. ಅವರೆಲ್ಲರ ಮನವೊಲಿಸಲು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ.
ಇನ್ನು, ಸುಮಲತಾ ಅವರ ಬೆಂಬಲ ಪಡೆಯುವುದಾಗಿ ಕುಮಾರಸ್ವಾಮಿ ವೇದಿಕೆಯಲ್ಲಿಯೇ ಹೇಳಿದ್ದಾರೆ. ವಿಜಯೇಂದ್ರ ಕೂಡ ಸುಮಲತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಯಾವುದಕ್ಕೂ ಸುಮಲತಾ ಬಗ್ಗುತ್ತಿಲ್ಲ. ಈ ನಡುವೆ, ಅವರ ಬೆಂಬಲಿಗರೂ ಕೂಡ ಅವರ ನಿವಾಸದ ಎದುರು ಜಮಾಯಿಸಿದ್ದು, ಬೆಂಬಲಿಗರನ್ನು ನೋಯಿಸುವುದಿಲ್ಲ. ಸಭೆ ನಡೆಸಿ ನಿರ್ಧಾರ ತಿಳಿಸುತ್ತೇನೆಂದು ಸುಮಲತಾ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಸುಮಲತಾ, ಬಿಜೆಪಿ ಸೇರುವುದಾಗಿ ಘೋಷಿಸಿದ್ದರು. ಈ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇರಾದೆಯನ್ನೂ ಹೊಂದಿದ್ದರು. ಮಂಡ್ಯದ ಮೊದಲ ಬಿಜೆಪಿ ಸಂಸದೆಯಾಗಬೇಕೆಂಬ ಆಸೆಯಿರುವುದಾಗಿಯೂ ಹೇಳಿಕೊಂಡಿದ್ದರು. ಬಿಜೆಪಿ ಟಿಕೆಟ್‌ಗಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾರನ್ನು ಆಗ್ಗಾಗ್ಗೆ ಭೇಟಿ ಮಾಡಿದ್ದರು. ಬಿಜೆಪಿ ನಾಯಕರು ಕೂಡ ಸುಮಲತಾಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದೆ ಎಂದೂ ಹೇಳಲಾಗಿತ್ತು.
ಆದರೆ, ಮಂಡ್ಯಕ್ಕಾಗಿ ಜೆಡಿಎಸ್ ಪಟ್ಟು ಹಿಡಿದ ಪರಿಣಾಮ, ಸುಮಲತಾ ಅವರ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಬಿಜೆಪಿ ನಾಯಕರನ್ನು ನಂಬಿ ಹೋಗಿದ್ದಕ್ಕೆ, ಸುಮಲತಾ ಅತಂತ್ರರಾಗಿ ನಿಂತಿದ್ದಾರೆ.
“ನನ್ನ ರಾಜಕೀಯ ಏನೇ ಇದ್ದರೂ ಮಂಡ್ಯದಲ್ಲಿಯೇ. ಮಂಡ್ಯವನ್ನು ಬಿಡುವುದಿಲ್ಲ. ಮಂಡ್ಯದೊಂದಿಗೆ ನನಗಿರುವುದು ಕೇವಲ ರಾಜಕೀಯ ಸಂಬಂಧವಲ್ಲ. ಅದು ಭಾವನೆ, ಪ್ರೀತಿ. ನಾನು ಮಂಡ್ಯದಲ್ಲಿದ್ದಾಗ ಅಂಬರೀಶ್ ನನ್ನ ಜೊತೆ ಇದ್ದಂತೆಯೇ ಭಾವನೆ. ನನಗೆ ಮಂಡ್ಯವೇ ಬೇಕು” ಎಂದು ಸುಮಲತಾ ಈಗಲೂ ಹೇಳುತ್ತಿದ್ದಾರೆ.
ಅಂದಹಾಗೆ, ಸಂಸದೆಯಾಗಿ ಸುಮಲತಾ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ. ಈ ಬಾರಿ ಸುಮಲತಾ ಸ್ಪರ್ಧಿಸಿದರೂ ಸೋಲುತ್ತಾರೆ. ಅಷ್ಟೇ ಅಲ್ಲ, ಒಂದು ವೇಳೆ, ಸುಮಲತಾ ಸ್ಪರ್ಧಿಸದೆ, ಅವರು ಬೇರೆ ಯಾರಿಗೇ ಬೆಂಬಲ ಕೊಟ್ಟರೂ, ಅವರು ಬೆಂಬಲಿಸುವ ಅಭ್ಯರ್ಥಿಯೂ ಸೋಲುತ್ತಾರೆ ಎಂಬ ಮಾತುಗಳು ಮಂಡ್ಯ ನೆಲದಲ್ಲಿ ಕೇಳಿಬರುತ್ತಿವೆ.
ಈ ಸುದ್ದಿ ಓದಿದ್ದೀರಾ?: ಮಂಡ್ಯ ಕ್ಷೇತ್ರ ಬಿಟ್ಟು ಹೋಗುತ್ತೇನೆಂದು ಎಲ್ಲೂ ಹೇಳಿಲ್ಲ; ವಿಜಯೇಂದ್ರ ಭೇಟಿ ಬಳಿಕ ಸುಮಲತಾ ಹೇಳಿಕೆ
ಇದೆಲ್ಲದರ ನಡುವೆ, ಸುಮಲತಾ ಬೆನ್ನಿಗೆ ನಿಂತಿರುವುದಾಗಿ ಹೇಳಿಕೊಂಡಿರುವ ಕೆ.ಸಿ ನಾರಾಯಣಗೌಡ, ಸಚ್ಚದಾನಂದ ಸೇರಿದಂತೆ ಹಲವು ಬಿಜೆಪಿಗರು ಸುಮಲತಾರನ್ನು ಸ್ವತಂತ್ರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಸಬೇಕೆಂಬ ತಂತ್ರ ಹೆಣೆಯುತ್ತಿದ್ದಾರೆ ಎಂಬ ವದಂತಿಗಳೂ ಹರಡುತ್ತಿವೆ.
ಸದ್ಯ, ಸುಮಲತಾ ಏನು ಮಾಡುತ್ತಾರೆ. ಅವರ ಮುಂದಿನ ನಡೆ ಏನಾಗಲಿದೆ ಎಂಬುದು ಅವರೇ ಹೇಳುವಂತೆ, ಏಪ್ರಿಲ್ 3ರಂದು ತಿಳಿಯಲಿದೆ.