- ಎರಡು ಅವಧಿಗೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಕಟೀಲ್
- ಚುನಾವಣಾ ಸೋಲಿನ ಹೊಣೆ ಹೊತ್ತ ಬಿಜೆಪಿ ಅಧ್ಯಕ್ಷ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿಲ್ಲ. ರಾಜೀನಾಮೆ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದಾಗಿ ಹೇಳಿದ್ದೆ ಎಂದಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಸುದ್ದಿ ಬಿತ್ತರಿಸಲಾಗುತ್ತಿದೆ ಎಂದವರು ಹೇಳಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಕಟೀಲ್ ಹೇಳಿದ್ದು
ಬಳ್ಳಾರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಹುದ್ದೆಗೆ ಹಲವರು ಇಟ್ಟಿರುವ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ತಮ್ಮ ಅಧಿಕಾರ ಅವಧಿಯ ಬಗೆಗೂ ಮಾಹಿತಿ ಹಂಚಿಕೊಂಡ ಅವರು ಅಧ್ಯಕ್ಷ ಪದವಿ ಬದಲಾವಣೆ ಸಹಜವಾಗಿ ನಡೆಯುತ್ತದೆ. ಅದಕ್ಕೆ ಪಕ್ಷ ತಯಾರಾಗುತ್ತಿದೆ ಎಂದಿದ್ದರು.
ನಾನೀಗ ರಾಜ್ಯಾಧ್ಯಕ್ಷನಾಗಿ ಎರಡು ಅವಧಿಯನ್ನು ಪೂರ್ಣಗೊಳಿಸಿದೆ. ಅನಿರೀಕ್ಷಿತ ಫಲಿತಾಂಶದಿಂದ ಪಕ್ಷ ವಿಚಲಿತವಾಗಿದೆ. ಒಂದಷ್ಟು ಕಾರ್ಯಕರ್ತರನ್ನು ಮತ್ತೊಮ್ಮೆ ಗಟ್ಟಿಗೊಳಿಸಬೇಕಿದೆ ಎಂದು ಕಟೀಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಲೋಕಸಭೆ ಚುನಾವಣೆ : ಜೆಡಿಎಸ್ ಜೊತೆ ಹೊಂದಾಣಿಕೆ ಸುಳಿವು ನೀಡಿದ ಸಿಪಿವೈ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಹಾಗೂ ಅರ್ಹರನ್ನು ಪಕ್ಷ ನೇಮಕ ಮಾಡುತ್ತದೆ. ನಮ್ಮ ಪಕ್ಷದಲ್ಲೂ ಅನುಭವಿ ನಾಯಕರ ದಂಡೇ ಇದೆ. ಹೊಸ ಜವಾಬ್ದಾರಿ ಹೊರಲು ಹಲವರು ಸಿದ್ದರಿದ್ದಾರೆ ಎಂದರು.
ಹಾಗೆಯೇ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟಿರುವ ಮಾಜಿ ಸಚಿವ ಸೋಮಣ್ಣ ಅವರ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್
ಪ್ರಸ್ತುತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಕೃಷಿಕ ಹಾಗೂ ವೃತ್ತಿಯಿಂದ ಸಿವಿಲ್ ಕಾಂಟ್ರಾಕ್ಟರ್ ಆಗಿರುವ ಕಟೀಲ್ ರಾಜಕೀಯದಲ್ಲಿ ಹೆಸರು ಮಾಡಿದ್ದು, 2009ರಲ್ಲಿ ಅಂದಿನ ಲೋಕಸಭ ಚುನಾವಣೆಯಲ್ಲಿ ಮಾಜಿ ಗೃಹ ಮಂತ್ರಿ, ಕಾಂಗ್ರೆಸ್ಸಿನ ಜನಾರ್ಧನ ಪೂಜಾರಿ ಅವರನ್ನು 1,43,709 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿದ್ದರು. ಇದಾದ ಬಳಿಕ ಕಟೀಲ್ ಮುಂದಿನ ಸತತ ಎರಡು ಅವಧಿಗಳಲ್ಲೂ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.