ಹವಾಮಾನ ಬದಲಾಗುತ್ತಿದೆ. ಅರಣ್ಯ ನಶಿಸುತ್ತಿದೆ. ತಾಪಮಾನ ಏರುತ್ತಿದೆ. ಈ ನಡುವೆ, ಭೂ ಸವಕಳಿಯೂ ಹೆಚ್ಚುತ್ತಿದೆ. ಭಾರತದ ಭೌಗೋಳಿಕ ಪ್ರದೇಶದ 29.77% ಭೂಮಿಯು ಸವಕಳಿವನ್ನು ಎದುರಿಸುತ್ತಿದೆ. ಹೀಗಾಗಿ, ದೇಶದಲ್ಲಿ ಭೂ ಸವಕಳಿ ತಟಸ್ಥತೆಯನ್ನು (ಎಲ್ಡಿಎನ್) ಸಾಧಿಸಲು ಮಣ್ಣಿನ ಸವೆತದ ವಿಧ, ವ್ಯಾಪ್ತಿ ಮತ್ತು ಕಾರಣವಾಗುವ ಅಂಶಗಳ ಕುರಿತು ಆಗಾಗ್ಗೆ ಮೌಲ್ಯಮಾಪನ ನಡೆಸಬೇಕು. ಜೊತೆಗೆ ಹಲವು ಕ್ರಮಗಳನ್ನು ಅನುಸರಿಸಬೇಕು ಎಂದು ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ (ಐಸಿಎಫ್ಆರ್ಇ) ಅಧ್ಯಯನವೊಂದು ಹೇಳಿದೆ.
‘ಐಸಿಎಫ್ಆರ್ಇ’ನ ಸುಸ್ಥಿರ ಭೂ ನಿರ್ವಹಣೆ ಶ್ರೇಷ್ಠತೆ ಕೇಂದ್ರದ ಸಂಶೋಧಕರು ಸಿದ್ಧಪಡಿಸಿದ ಎಲ್ಡಿಎನ್ ಸಾಧಿಸುವ ಕುರಿತ ಮಾರ್ಗಸೂಚಿಯು ಹಲವಾರು ಸಮಗ್ರ ಯೋಜನಾ ವಿಧಾನಗಳನ್ನು ಸೂಚಿಸಿದೆ. ಮಣ್ಣು ಮತ್ತು ಭೂ ಸವಕಳಿಯು ನೈಸರ್ಗಿಕ ಅಂಶಗಳು ಮತ್ತು ಮಾನವ ಚಟುವಟಿಕೆಗಳಿಂದ ವ್ಯಾಪಕವಾಗಿ ಪ್ರಭಾವಿತವಾಗಿದೆ. ಈ ಅವನತಿ ಪ್ರಕ್ರಿಯೆಗಳನ್ನು ನಿಲ್ಲಿಸಲು ಮತ್ತು ನಶಿಸಿರುವ ಭೂಮಿಯನ್ನು ಮರುಸ್ಥಾಪಿಸಲು ತಕ್ಷಣದ ಕ್ರಮವನ್ನು ಕೈಗೊಳ್ಳುವುದು ಕಡ್ಡಾಯವೆಂದು ಅಧ್ಯಯನ ಹೇಳಿದೆ.
ಭೂ ಸವಕಳಿ ಪ್ರಕ್ರಿಯೆಗಳನ್ನು ನಿರ್ಬಂಧಿಸಲು ದೀರ್ಘಾವಧಿಯ ಬದ್ಧತೆಗಳು ಬೇಕಾಗುತ್ತವೆ. ಅದಕ್ಕಾಗಿ ಪರಿಸರ-ಮರುಸ್ಥಾಪನೆ ಮತ್ತು ಅರಣ್ಯೀಕರಣಕ್ಕೆ ಸೂಕ್ತವಾದ ಪ್ರದೇಶಗಳ ಗುರುತಿಸುವಿಕೆಯ ಅಗತ್ಯವಿದೆ. ವಿವಿಧ ಜಾತಿಯ ಮರಗಳನ್ನು ಬೆಳೆಸುವುದು; ಸರಿಯಾದ ಕೃಷಿ ಮತ್ತು ಭೂ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು; ಅರಣ್ಯೀಕರಣ ಯೋಜನೆಯ ಮೂಲಕ ಮಣ್ಣಿನ ಸವೆತವನ್ನು ತಡೆಯಬಹುದು ಎಂದು ಅಧ್ಯಯನ ಹೇಳಿದೆ.
ಇಸ್ರೋದ ಬಾಹ್ಯಾಕಾಶ ಕೇಂದ್ರದಿಂದ ದೇಶದಲ್ಲಿ ಕ್ಷೀಣಿಸಿದ ಭೂಮಿಯನ್ನು ಮ್ಯಾಪಿಂಗ್ ಮಾಡಲಾಗಿದ್ದು, ದೇಶದ ಒಟ್ಟು ಭೌಗೋಳಿಕ ಪ್ರದೇಶ 97.85 ಮಿಲಿಯನ್ ಹೆಕ್ಟೇರ್ ಪೈಕಿ ಸುಮಾರು 29.77% ನಷ್ಟು ಪ್ರದೇಶವು 2018-19ರ ಹೊತ್ತಿಗೆ ಭೂಕುಸಿತ, ಸವಕಳಿಯನ್ನು ಎದುರಿಸುವ ಹಂತದಲ್ಲಿತ್ತು ಎಂದು ಹೇಳಲಾಗಿದೆ.
ದತ್ತಾಂಶದ ವಿಶ್ಲೇಷಣೆಯು 2003-05 ಮತ್ತು 2018-19ರ ನಡುವೆ ಭೂ ಸವಕಳಿ ಪ್ರಮಾಣವು ಸುಮಾರು 3.32 ಮಿಲಿಯನ್ ಹೆಕ್ಟೇರ್ನಷ್ಟು ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣ– ನೀರಿನಿಂದ ಸವೆತ (11.01%) ಎಂದು ಗುರುತಿಸಲಾಗಿದೆ; ಇನ್ನು, ಸಸ್ಯವರ್ಗದ ಅವನತಿ (9.15%) ಮತ್ತು ಗಾಳಿಯ ಸವೆತ (5.46%)ವೂ ನಂತರದ ಪ್ರಮುಖ ಕಾರಣಗಳಾಗಿವೆ.
ಭೂ ಸವಕಳಿ ಮತ್ತು ಅದರ ಪ್ರಮುಖ ಕಾರಣಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಭೂ ಅವನತಿ ತಟಸ್ಥತೆಯನ್ನು ಸಾಧಿಸಲು ನಿರ್ದಿಷ್ಟ ಸೂಕ್ತವಾದ ಸುಸ್ಥಿರ ಭೂ ನಿರ್ವಹಣಾ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಐಸಿಎಫ್ಆರ್ಇ ಹೇಳಿದೆ. ಜೊತೆಗೆ, ಭೂ ಸವಕಳಿಯ ಹಾಟ್ಸ್ಪಾಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಆ ಪ್ರದೇಶದ ಬಗ್ಗೆ ಮೇಲ್ವಿಚಾರಣೆ, ಅಧ್ಯಯನಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
“1,32,371.6 ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಹಾಟ್ಸ್ಪಾಟ್ಗಳನ್ನು ಗುರುತಿಸಲಾಗಿದೆ. ಆ ಪೈಕಿ, ಸರಿಸುಮಾರು 4% ಭೂಮಿಯಲ್ಲಿ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಹಾಗೂ ಭೂಮಿಯ ಪ್ರಮಾಣವನ್ನು ಮರುಸ್ಥಾಪಿಸಲು ಸಾಧ್ಯವಿದೆ” ಎಂದು ಅಧ್ಯಯನ ಒತ್ತಿ ಹೇಳಿದೆ.
ಅಧ್ಯಯನದ ಪ್ರಕಾರ, ದೇಶದ ಅರಣ್ಯೇತರ ಭೂಮಿಯಲ್ಲಿ ಸುಮಾರು 76.87% ರಷ್ಟು ನಾಶವಾದ ಪ್ರದೇಶಗಳನ್ನು ಪುನಃಸ್ಥಾಪಿಸುವುದು ಮಾತ್ರವಲ್ಲದೆ, ಪರಿಸರ ಪುನಃಸ್ಥಾಪನೆ ಮತ್ತು ನಿರ್ದಿಷ್ಟ ಕ್ರಮಗಳ ಮೂಲಕ ಸಾಂಪ್ರದಾಯಿಕ ಅರಣ್ಯ ಪ್ರದೇಶಗಳ ಹೊರಗೆ ಮರದ ಹೊದಿಕೆಯನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ.
ಈ ಸುದ್ದಿ ಓದಿದ್ದೀರಾ?: ಮೋದಿಯವರ ಹೊಸ ಭಾರತವೆಂದರೆ, ಪ್ರಜಾತಾಂತ್ರಿಕ ಮೌಲ್ಯಗಳಿಗೆ ಬೆಲೆಯಿಲ್ಲದ ಭಾರತ
ಭಾರತೀಯ ಅರಣ್ಯ ಸಮೀಕ್ಷೆ (ಎಫ್ಎಸ್ಐ) ಕಾರ್ಬನ್ ಸಿಂಕ್ಗಳು ಮತ್ತು ಅರಣ್ಯವನ್ನು ಹೆಚ್ಚಿಸಲು 10 ಕಾರ್ಯಕ್ರಮಗಳನ್ನು ಗುರುತಿಸಿದೆ. ಮರುಭೂಮಿ ಅಥವಾ ಭೂ ಅವನತಿ ಸವಾಲುಗಳನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಸಕ್ರಿಯ ಸಮುದಾಯ ಭಾಗವಹಿಸುವಿಕೆ ಮತ್ತು ಕೃಷಿ ಅರಣ್ಯ ವಿಸ್ತರಣೆ ಅಳವಡಿಕೆಯೊಂದಿಗೆ ಉದ್ದೇಶಿತ ಚಟುವಟಿಕೆಗಳ ಅಗತ್ಯವಿದೆ. ಆ ಮೂಲಕ ಭೂದೃಶ್ಯ ಮತ್ತು ಸಮುದಾಯದ ದುರ್ಬಲತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯಯನ ಸೂಚಿಸುತ್ತದೆ.
ಕನಿಷ್ಠ 15 ರಾಜ್ಯಗಳು – ಆಂಧ್ರಪ್ರದೇಶ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ತಮಿಳುನಾಡು, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ – ರಾಷ್ಟ್ರೀಯ ಕ್ರಿಯಾ ಯೋಜನೆ-2023ರ ಪ್ರಕಾರ ಪರಿಸರ ಮತ್ತು ಭೌಗೋಳಿಕ ಪರಿಸ್ಥಿತಿಗಳು ಮತ್ತು ಅವನತಿಯ ವ್ಯಾಪ್ತಿಯ ಆಧಾರದ ಮೇಲೆ ಎಲ್ಡಿಎನ್ ಸಾಧಿಸಲು ಆದ್ಯತೆ ನೀಡಬಹುದು. ಈ ರಾಜ್ಯಗಳು ರಾಷ್ಟ್ರದ ಭೌಗೋಳಿಕ ಪ್ರದೇಶದ 25% ರಷ್ಟು ಭಾಗವನ್ನು ಹೊಂದಿವೆ ಎಂದು ಅಧ್ಯಯನ ಹೇಳಿದೆ.