ಮೋದಿಯವರ ಹೊಸ ಭಾರತವೆಂದರೆ, ಪ್ರಜಾತಾಂತ್ರಿಕ ಮೌಲ್ಯಗಳಿಗೆ ಬೆಲೆಯಿಲ್ಲದ ಭಾರತ

Date:

ಬಂಡವಾಳಶಾಹಿಗಳಿಗೆ ನೇರವಾಗಿ ಬೇಕಾದ ಬದಲಾವಣೆಗಳ ಜೊತೆಗೆ ಬಿಜೆಪಿ ತನ್ನ ಸಿದ್ಧಾಂತವಾದ ಹಿಂದುತ್ವವನ್ನು ಕೂಡ ಜೊತೆಜೊತೆಗೆ ತೂರಿಸಿಕೊಂಡಿದೆ. ದೇಶದ ಹೆಸರನ್ನು ಭಾರತವೆಂದು ಮಾತ್ರ ಕರೆದು ವಸಾಹತುಶಾಹಿ ಗುಲಾಮಗಿರಿ ಮನೋಭಾವದಿಂದ ನಾವು ದೇಶವನ್ನು ಸ್ವತಂತ್ರಗೊಳಿಸಿದ್ದೇವೆ ಎಂದು ಕೊಚ್ಚಿಕೊಳ್ಳುವುದೂ ಇಂತಹ ಒಂದು ತಂತ್ರ ಅಷ್ಟೇ. 

ಭಾರತದಲ್ಲಿ ನಡೆಯುತ್ತಿರುವ ಶೃಂಗಸಭೆಗೆ ಆಗಮಿಸಿದ ಜಿ 20ರ ಅತಿಥಿಗಳಿಗೆ ಏರ್ಪಡಿಸಿದ್ದ ಭೋಜನಕೂಟಕ್ಕೆ ರಾಷ್ಟ್ರಪತಿಗಳು ಕಳುಹಿಸಿದ ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ನಮೂದಿಸಿರುವುದು ದೇಶದ ಹೆಸರಿನ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ. ಇದುವರೆಗೆ ಇಂಡಿಯಾ ಮತ್ತು ಭಾರತ ಎಂಬ ಎರಡೂ ಹೆಸರುಗಳನ್ನು ಅಧಿಕೃತವಾಗಿ ಬಳಸಲು ಅವಕಾಶವಿತ್ತು. ಸಾಮಾನ್ಯವಾಗಿ ಭಾರತೀಯ ಭಾಷೆಗಳಲ್ಲಿ ಭಾರತ ಎಂದೂ, ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ ಎಂದೂ ಬಳಸಲಾಗುತ್ತದೆ. ಈಗ ಭಾರತ ಎಂಬ ಹೆಸರು ಮಾತ್ರವೇ ಅಧಿಕೃತಗೊಳಿಸಲು ಕೇಂದ್ರದ ಮೋದಿ ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆ ದೇಶದ ಮುಂದೆ ಬಂದಿದೆ. ಅಂತಹ ಉದ್ದೇಶವೇನೂ ಇಲ್ಲ ಎಂದು ಕೆಲವು ಕೇಂದ್ರ ಸಚಿವರು ಸ್ಪಷ್ಟೀಕರಣ ನೀಡಿದ್ದರೂ, ಅದರ ಬಗ್ಗೆ ನಂಬಿಕೆ ಬಂದಿಲ್ಲ. ಈ ಕ್ರಮದ ಸಾಂವಿಧಾನಿಕ ಮಾನ್ಯತೆಯ ಕುರಿತೂ ಚರ್ಚೆ ನಡೆಯುತ್ತಿದೆ.

ನಮಗೆ ಬೇಕಾದ ಪರಂಪರೆ ಯಾವುದು?

ಇಂಡಿಯಾ ಎಂಬುದು ಬ್ರಿಟಿಷರು ಕೊಟ್ಟ ಹೆಸರು, ನಮಗೆ ವಸಾಹತುಶಾಹಿ ಪರಂಪರೆ ಬೇಡ ಎಂದು ಬಿಜೆಪಿ ನಾಯಕರು ವಾದಿಸುತ್ತಿದ್ದಾರೆ. ಆದರೆ ಇಂಡಿಯಾ ಎಂಬ ಹೆಸರು ಅಲೆಗ್ಸಾಂಡರನ ಕಾಲದಿಂದಲೂ ಇತ್ತು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅದೇನೇ ಇರಲಿ, ಬಿಜೆಪಿ ಪ್ರತಿಪಾದಿಸುವ ಪರಂಪರೆ ಯಾವುದು? ಭರತ ವರ್ಷ, ಭರತ ಖಂಡ ಇತ್ಯಾದಿ ಬಳಕೆ ಸಾವಿರಾರು ವರ್ಷಗಳಿಂದ ಇದೆ, ಪುರಾಣಗಳಲ್ಲೂ ಈ ಪ್ರಸ್ತಾಪ ಇದೆ ಎಂಬುದು ನಿಜ. ಇಲ್ಲಿ ಎರಡು ಪ್ರಶ್ನೆ ಬರುತ್ತವೆ. ಅವೆಂದರೆ, 1947ಕ್ಕೆ ಮೊದಲು ಭಾರತ ಎಂಬ ದೇಶ ಇತ್ತೇ ಮತ್ತು ನಮಗೆ ಬೇಕಾಗಿರುವ ಪರಂಪರೆ ಯಾವುದು ಎಂಬ ಪ್ರಶ್ನೆಗಳು. 1947ಕ್ಕೆ ಮೊದಲು ಇಂದಿನ ಭಾರತದ ಭೂಭಾಗವೇನೋ ಖಂಡಿತಾ ಇತ್ತು, ಸಂಶಯವಿಲ್ಲ. ಆದರೆ ರಾಷ್ಟ್ರವೆಂದರೆ ಅದೊಂದು ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಕಲ್ಪನೆ. ಇದು ಬಂಡವಾಳಶಾಹಿ ಆರ್ಥಿಕತೆಯೊಂದಿಗೆ ಮೂಡಿಬಂದಂಥದ್ದು. ಬ್ರಿಟಿಷರು ಇಲ್ಲಿಗೆ ಬಂದು ಈ ಇಡೀ ಭೂಭಾಗವನ್ನು ತಮ್ಮ ಆಡಳಿತದ ತೆಕ್ಕೆಗೆ ತೆಗೆದುಕೊಂಡ ಮೇಲೆಯೇ ಇಲ್ಲಿ ರಾಷ್ಟ್ರವಾದದ ಮನೋಭಾವ ಮೂಡಿಬಂದಿದೆ. ಅದೂ ಕೂಡ ಆಧುನಿಕ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ. ಹಾಗಾಗಿ ಪುರಾಣಗಳ ಭರತ ವರ್ಷವೆಂಬುದು ಖಂಡಿತ ಭಾರತ ದೇಶವಲ್ಲ.

ಪ್ರಜಾಸತ್ತಾತ್ಮಕ ಭಾರತಕ್ಕೆ ಬೇಕಾಗಿರುವ ಪರಂಪರೆ ಯಾವುದು? ಒಂದು ನೈಜ ಪ್ರಜಾಪ್ರಭುತ್ವ ದೇಶವನ್ನು ಕಟ್ಟಲು ಬಯಸಿದ ಮಹನೀಯರ ಪರಂಪರೆಯಲ್ಲವೇ? ನವೋದಯದ ಸೆಕ್ಯುಲರ್ ಮಾನವತಾವಾದಿ ಪರಂಪರೆಯಲ್ಲವೇ? ಸಮಾನತೆ,ಸ್ವಾತಂತ್ರ್ಯ, ಸಹೋದರತೆಯ ಭಾವನೆಗಳನ್ನು ಬೆಳೆಸುವ ಪರಂಪರೆಯಲ್ಲವೇ? ಜ್ಯೋತಿಬಾ ಫುಲೆ, ಈಶ್ವರಚಂದ್ರ ವಿದ್ಯಾಸಾಗರ, ಸಾವಿತ್ರಿ ಬಾಯಿ ಫುಲೆ ಮುಂತಾದ ಸಮಾಜ ಸುಧಾರಕರ, ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಅಲ್ಲವೇ? ಈ ಪರಂಪರೆ ಜನತಂತ್ರದ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ಆದರೆ ಬಲಪಂಥೀಯ ಹಿಂದುತ್ವವಾದಿ ಪಕ್ಷವಾದ ಬಿಜೆಪಿ ನಂಬಿರುವುದು ರಾಜ ಮಹಾರಾಜರ ಕಾಲದ ಊಳಿಗಮಾನ್ಯ, ಧಾರ್ಮಿಕ ಪರಂಪರೆಯಲ್ಲಿ. ಪ್ರಗತಿ ವಿರೋಧಿ ಸನಾತನವಾದದಲ್ಲಿ. ಬಿಜೆಪಿ ಪ್ರತಿಪಾದಿಸುವ ಕಲ್ಚರಲ್ ನ್ಯಾಷನಲಿಸಂ ಅಂದರೆ ಇದೇ.

ಮೋದಿ ಸರ್ಕಾರದ ಉದ್ದೇಶವಾದರೂ ಏನು?

ಮೊದಲಿಗೆ ನಾವು ಭಾರತದ ಬೆಳವಣಿಗೆಯ ಐತಿಹಾಸಿಕ ಮಜಲುಗಳನ್ನು ಗುರುತಿಸಬೇಕು. ವಸಾಹತುಶಾಹಿ ಆಳ್ವಿಕೆಯಿಂದ ಬಿಡುಗಡೆ ಹೊಂದಿದ ಭಾರತ ಒಂದು ಉದಯೋನ್ಮುಖ ಬಂಡವಾಳಶಾಹಿ ದೇಶವಾಗಿ, ತನ್ನ ದೇಶೀಯ ಮಾರುಕಟ್ಟೆಯನ್ನು ತೆರಿಗೆ ಗೋಡೆಗಳಿಂದ ರಕ್ಷಿಸಿಕೊಂಡು ಬೆಳೆಯುತ್ತಾ ಹೋಯಿತು. ಸಾರ್ವಜನಿಕ ಉದ್ದಿಮೆ ಆಧಾರಿತ ಮಿಶ್ರ ಆರ್ಥಿಕತೆಯನ್ನು ಖಾಸಗಿ ಬಂಡವಾಳದ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಯಿತು. ಜಂಟಿ ಸಹಭಾಗಿತ್ವ, ತಂತ್ರಜ್ಞಾನ ವರ್ಗಾವಣೆಯಂತಹ ರೂಪದಲ್ಲಿ ಜಾಗತಿಕ ಸಾಮ್ರಾಜ್ಯಶಾಹಿಗಳ ಕಿರಿಯ ಪಾಲುದಾರಿಕೆಯಲ್ಲಿ ತನ್ನ ಮಾರುಕಟ್ಟೆ ಮೌಲ್ಯವನ್ನು ವೃದ್ಧಿಸಿಕೊಂಡಿತು. ಅಲಿಪ್ತ ನೀತಿಯ ಮೂಲಕ ಸಮಾಜವಾದಿ ರಷ್ಯಾ ಮತ್ತು ಸಾಮ್ರಾಜ್ಯಶಾಹಿ ಅಮೆರಿಕಾಗಳೆರಡರಿಂದಲೂ ನೆರವು ಪಡೆದುಕೊಂಡಿತು. ಭಾರತದ ಸಂಪನ್ಮೂಲಗಳು ಮತ್ತು ಜನಸಂಖ್ಯೆ ಅನುಕೂಲಕರ ಅಂಶಗಳಾದವು. ಈ ಪ್ರಕ್ರಿಯೆಯಲ್ಲಿ ಬೆಳೆದ ಭಾರತದ ಬಂಡವಾಳ, ಜಾಗತಿಕ ಸ್ಪರ್ಧೆಗೆ ಸಿದ್ಧವಾದಾಗ, ತನ್ನನ್ನು ಜಾಗತಿಕ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿತು. ಕಳೆದ ಮೂರು ದಶಕಗಳ ಜಾಗತೀಕರಣದ ಅವಧಿಯಲ್ಲಿ, ಆಳುವ ಸರ್ಕಾರಗಳ ಬೆಂಬಲದೊಂದಿಗೆ ಭಾರತದ ಖಾಸಗಿ ಬಂಡವಾಳ ಬೃಹದಾಕಾರವಾಗಿ ಬೆಳೆದಿದೆ. ಅಂಬಾನಿ-ಅದಾನಿಗಳು ಮೂಡಿ ಬಂದಿರುವುದು ಈ ದಾರಿಯಲ್ಲಿ.

ಇದೀಗ ಭಾರತದ ಬಂಡವಾಳಶಾಹಿಗಳಲ್ಲಿ ಮುಂದುವರಿದ ದೇಶಗಳ ಸಾಲಿನಲ್ಲಿ ಕೂರುವ ಹಂಬಲ ಕಾಣಿಸುತ್ತಿದೆ. ಮಿಲಿಟರಿ ವೆಚ್ಚದಲ್ಲಿ ಭಾರತವು ಹಲವು ಮುಂದುವರಿದ ದೇಶಗಳನ್ನು ಈಗಾಗಲೇ ಹಿಂದಿಕ್ಕಿದೆ. ಜಿಡಿಪಿಯಲ್ಲೂ ಮೇಲಿನ ಐದು ದೇಶಗಳ ಪಟ್ಟಿಯಲ್ಲಿದೆ. ಏಷ್ಯಾದ ನೆರೆಯ ದೇಶಗಳಲ್ಲಿ, ಆಫ್ರಿಕಾದ ದೇಶಗಳಲ್ಲಿ ಭಾರತದ ಮಾರುಕಟ್ಟೆ ಮತ್ತು ಬಂಡವಾಳದ ಹಿಡಿತ ಹೆಚ್ಚುತ್ತಲೇ ಇದೆ. ಅಮೆರಿಕಾ, ಯುರೋಪು ಗಳು ಕೂಡ ಭಾರತದ ಶಕ್ತಿಯನ್ನು ಗುರುತಿಸುವ ಅನಿವಾರ್ಯತೆ ಬಂದಿದೆ. ಭಾರತದ ಬಂಡವಾಳಶಾಹಿಗಳ ಇಂತಹ ಜಾಗತಿಕ ಮಹತ್ವಾಕಾಂಕ್ಷೆಗೆ ಬಿಜೆಪಿ ಮತ್ತು ಮೋದಿಯವರ ಸರ್ಕಾರ ಪೂರಕವಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪಾಶ್ಚಾತ್ಯ ದೇಶಗಳ ಒತ್ತಡಕ್ಕೆ ಮಣಿಯದೆ ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಂಡೂ, ಆರ್ಥಿಕ ದಿಗ್ಬಂಧನಕ್ಕೆ ಒಳಗಾಗದೆ ಉಳಿದಿರುವುದು ಕೂಡ ಗಮನಿಸಬೇಕಾದ ಅಂಶ.

ಮೋದಿ ಹೇಳುತ್ತಿರುವ ನವಭಾರತ, ಅಮೃತ ಕಾಲ ಇದುವೇ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳದ ಸಂಘ ಪರಿವಾರ, ಬಿಜೆಪಿ ಇದೀಗ ಮುಂದುವರಿದ ಭಾರತ ರೂಪುಗೊಂಡಿದ್ದು ನಮ್ಮಿಂದಲೇ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲು ತವಕ ಪಡುತ್ತಿದೆ. ಹಿಂದಿನ ಕಾಂಗ್ರೆಸ್ ಕಾಲದ ರಾಜಕೀಯ, ಆರ್ಥಿಕ, ನ್ಯಾಯಿಕ, ಸಾಂಸ್ಕೃತಿಕ ಸಂಕೇತಗಳನ್ನು ಅಳಿಸಿ ಹಾಕುತ್ತಿದೆ. ಯೋಜನಾ ಆಯೋಗ ಈಗ ನೀತಿ ಆಯೋಗ. ಹೊಸ ಸಂಸತ್ ಭವನ. ಹೊಸ ನ್ಯಾಯ ಸಂಹಿತೆ. ಹೊಸ ಕಾರ್ಮಿಕ ಸಂಹಿತೆ. ಇಂತಹ ಹಲವು ಬದಲಾವಣೆಗಳನ್ನು ಕಾಣಬಹುದು. ಊರು, ರಸ್ತೆ, ಇಲಾಖೆ, ಸಂಸ್ಥೆ ಎಲ್ಲದಕ್ಕು ಹೊಸ ಹೆಸರು.

ಬಂಡವಾಳಶಾಹಿಗಳಿಗೆ ನೇರವಾಗಿ ಬೇಕಾದ ಬದಲಾವಣೆಗಳ ಜೊತೆಗೆ ಬಿಜೆಪಿ ತನ್ನ ಸಿದ್ಧಾಂತವಾದ ಹಿಂದುತ್ವವನ್ನು ಕೂಡ ಜೊತೆಜೊತೆಗೆ ತೂರಿಸಿಕೊಂಡಿದೆ. ದೇಶದ ಹೆಸರನ್ನು ಭಾರತವೆಂದು ಮಾತ್ರ ಕರೆದು ವಸಾಹತುಶಾಹಿ ಗುಲಾಮಗಿರಿ ಮನೋಭಾವದಿಂದ ನಾವು ದೇಶವನ್ನು ಸ್ವತಂತ್ರಗೊಳಿಸಿದ್ದೇವೆ ಎಂದು ಕೊಚ್ಚಿಕೊಳ್ಳುವುದೂ ಇಂತಹ ಒಂದು ತಂತ್ರ ಅಷ್ಟೇ. ಇಂತಹ ಕ್ರಮಗಳಿಂದ ಬಂಡವಾಳಶಾಹಿಗಳಿಗೆ ಎಲ್ಲಿಯವರೆಗೆ ಉಪಯೋಗವಿದೆಯೋ ಅಥವಾ ತೊಂದರೆ ಇಲ್ಲವೋ ಅಲ್ಲಿಯವರೆಗೆ ಅವರೂ ಸುಮ್ಮನಿರುತ್ತಾರೆ. 2024ರ ಹೊತ್ತಿಗೆ ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕೆಂಬ ಆರ್ ಎಸ್ಎಸ್ ಅಜೆಂಡಾವನ್ನು ಸ್ವಲ್ಪ ಮಟ್ಟಿಗೆ ತೃಪ್ತಿಪಡಿಸಿದಂತಾಗುತ್ತದೆ. ಇವೆಲ್ಲ ಬಿಟ್ಟು, ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿದ್ದೇ ಈ ಹೆಸರು ಬದಲಾವಣೆಗೆ ಕಾರಣ ಎಂಬುದು ನಿಜವೇ ಆಗಿದ್ದರೆ ಅದರಷ್ಟು ಬಾಲಿಶ, ಚಿಲ್ಲರೆ ಸಂಗತಿ ಇನ್ನೊಂದಿಲ್ಲ.

ಇದನ್ನು ಓದಿ ಜಿ20 ಶೃಂಗಸಭೆ | ಪ್ರಧಾನಿ ಮೋದಿ ಕುಳಿತ ಸ್ಥಳದಲ್ಲಿ ಪ್ರತ್ಯಕ್ಷಗೊಂಡ ‘ಭಾರತ್’ ಹೆಸರು

ಹಾಗಾಗಿ ಮೋದಿಯವರ ಹೊಸ ಭಾರತವೆಂದರೆ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಬೆಲೆಯಿಲ್ಲದ ಭಾರತ. ಕಾರ್ಪೊರೇಟ್ ಬಂಡವಾಳಶಾಹಿಗಳ ಕ್ರೂರ ಶೋಷಣೆಗೆ ಯಾವುದೇ ತಡೆಯಿಲ್ಲದ ಭಾರತ. ಸಹಿಷ್ಣುತೆ, ಶಾಂತಿ- ಯುದ್ಧ ವಿರೋಧಿ ನಿಲುವಿಗೆ ಬೆನ್ನು ತೋರಿಸುವ ಭಾರತ. ಕೋಟ್ಯಂತರ ಜನರನ್ನು ಹಸಿವು, ಬಡತನಗಳಲ್ಲಿ ಉಳಿಸಿ, ಅಸಮಾನತೆ, ಲಿಂಗ ತಾರತಮ್ಯ, ಜಾತಿ ದೌರ್ಜನ್ಯಗಳು ಕಾಣದಂತೆ ಹಸಿರು ಪರದೆಯೆಳೆವ ಭಾರತ.

ಈಗ ಇಂಡಿಯಾದ ಸಾಮಾನ್ಯ ಪ್ರಜೆಗಳಾದ ನಾವು ಕೇಳಲೇಬೇಕಾದ ಮಾತು, ನಮ್ಮ ಬದುಕು ಬದಲಾಯಿಸದೆ, ದೇಶದ ಹೆಸರು ಬದಲಾಯಿಸುವುದಕ್ಕೆ ಏನರ್ಥವಿದೆ? ಅಷ್ಟಕ್ಕೂ ಹೆಸರಿನಲ್ಲೇನಿದೆ?

ಬಿ ರವಿ
+ posts

ಜನಪರ ಹೋರಾಟಗಾರ, ಬರಹಗಾರ

ಪೋಸ್ಟ್ ಹಂಚಿಕೊಳ್ಳಿ:

ಬಿ ರವಿ
ಬಿ ರವಿ
ಜನಪರ ಹೋರಾಟಗಾರ, ಬರಹಗಾರ

1 COMMENT

  1. ಹಸಿದವನಿಗೆ ಅನ್ನ – ಸಾರು ಮುಖ್ಯ. ಬಟ್ಟೆ – ಬರೆಗಳು ಬಳಿಕ.

    ಅನ್ನ – ಸಾರು ಬಡಿಸದೆ , ಬಟ್ಟೆ – ಬರೆಗಳನ್ನು ಮಾತ್ರ ಕೊಟ್ಟರೆ ಹಸಿದವನ ಹಸಿವು ನೀಗುತ್ತದೆಯೆ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂದಾಯ ಕರ್ಮಕಾಂಡ-2 | ಶಾನುಭೋಗರ ಕೈಬರಹ, ರೈತರ ಹಣೆಬರಹ!

ಕಂದಾಯ ದಾಖಲೆಗಳಲ್ಲಿ ತಪ್ಪುಗಳದೇ ರಾಜ್ಯಭಾರ. ಶೇ.75ಕ್ಕೂ ಹೆಚ್ಚು ರೈತರ ಭೂ ದಾಖಲೆಗಳು...

ಸಂವಿಧಾನ ಕಗ್ಗೊಲೆ ಮಾಡುತ್ತಿರುವ ಕೊಲೆಗಡುಕರು : ವಿ ಎಲ್ ನರಸಿಂಹಮೂರ್ತಿ ಬರೆಹ

ಸಂವಿಧಾನವನ್ನು ಗೌರವಿಸುವ ನಾಟಕವಾಡುತ್ತಲೇ ದೇಶ ಒಪ್ಪಿಕೊಂಡಿರುವ ಸಂವಿಧಾನದ ಮೌಲ್ಯಗಳನ್ನು ಮತ್ತು ದೇಶ...

ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಕಂದಾಯ ಇಲಾಖೆ ಕೆಲಸ ಎಂದರೆ ರೈತರು ಬೆಚ್ಚಿಬೀಳುತ್ತಾರೆ. ಸಕಾಲದಡಿ ಇಂತಿಷ್ಟೇ ಅವಧಿಯಲ್ಲಿ...

ಮಹಿಳಾ ಮೀಸಲಾತಿ | 15 ವರ್ಷಗಳಿಂದ ಮಂಡನೆಯಾಗದ ಮಸೂದೆ; ವಿರೋಧಿಗಳು ಯಾರು?

ಮಹಿಳಾ ಮೀಸಲಾತಿಯ ಚರ್ಚೆ ಮತ್ತೆ ಮುನ್ನೆಲೆಯಲ್ಲಿದೆ. ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು...