ವಿ ಪಿ ಸಿಂಗ್, ಒಂದು ಕಾಲದಲ್ಲಿ ಭಾರತದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದವರು. ಮಂಡಲ್ ವರದಿ ಜಾರಿಯ ಮೂಲಕ ದೇಶದ ರಾಜಕಾರಣ ಮತ್ತು ಸಾಮಾಜಿಕ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣಕರ್ತರಾದವರು; ಹಿಂದುಳಿದ ವರ್ಗಗಳು ಯಾವತ್ತಿಗೂ ಮರೆಯಲಾಗದಂಥ ಕೊಡುಗೆ ಕೊಟ್ಟವರು; ಜೂನ್ 25 ಅವರ ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಅವರ ನೆನಪಿನ ಬರಹ.
ರಾಜಮನೆತನದಲ್ಲಿ ಹುಟ್ಟಿ ಭಾರತದ ಪ್ರಧಾನಿ ಪಟ್ಟವೇರಿದ ಏಕೈಕ ವ್ಯಕ್ತಿ ವಿಶ್ವನಾಥ್ ಪ್ರತಾಪ್ ಸಿಂಗ್. ವಿ ಪಿ ಸಿಂಗ್ ಎಂದೇ ಹೆಸರಾದ ಅವರು ಉತ್ತರ ಪ್ರದೇಶದ ಮಾಣಿಕ್ಪುರ್ ರಾಜ್ಯವನ್ನಾಳುತ್ತಿದ್ದ ಮಂಡಾ ಮನೆತನದ 41ನೇ ರಾಜ. ಡೆಹ್ರಾಡೂನ್ನ ಪ್ರತಿಷ್ಠಿತ ಶಾಲೆಯಲ್ಲಿ, ಅಲಹಾಬಾದ್ ವಿಶ್ವವಿದ್ಯಾಲಯ ಹಾಗೂ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿ ಪಿ ಸಿಂಗ್, ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣ ಮೈಗೂಡಿಸಿಕೊಂಡಿದ್ದರು. ನಂತರ ಸಹಜವಾಗಿಯೇ ಚುನಾವಣಾ ರಾಜಕಾರಣಕ್ಕಿಳಿದರು. ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ನ ಕಡುವಿರೋಧಿಯೆಂದೇ ಹೆಸರಾಗಿರುವ ವಿ ಪಿ ಸಿಂಗ್, ರಾಜಕಾರಣ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದೊಂದಿಗೆ. ಮೊದಲಿಗೆ 1969ರಲ್ಲಿ ಶಾಸಕರಾದ ವಿ ಪಿ ಸಿಂಗ್, ನಂತರ 1971ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ವಿ ಪಿ ಸಿಂಗ್ ಉತ್ತರ ಪ್ರದೇಶದ ಪ್ರಭಾವಿ ರಜಪೂತ ಸಮುದಾಯಕ್ಕೆ ಸೇರಿದವರು; ರಾಜಮನೆತನದ ಅವರು ತಮ್ಮ ರಾಜಕೀಯ ಜೀವನದ ಆರಂಭದಲ್ಲೇ ಹಲವು ಅಧಿಕಾರ ಪದವಿಗಳನ್ನು ಪಡೆದರು. ಅವರು 1977ರವರೆಗೆ ಇಂದಿರಾ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು.
1980ರಲ್ಲಿ ವಿ ಪಿ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗುವ ಮೂಲಕ ತವರು ರಾಜ್ಯದಲ್ಲೇ ಅತ್ಯುನ್ನತ ಪದವಿಗೇರಿದರು. ಡಕಾಯಿತರನ್ನು ಸದೆಬಡಿಯಲು ಮುಂದಾದ ವಿ ಪಿ ಸಿಂಗ್, ಫೂಲನ್ ದೇವಿ ಮಾಡಿದ ಬೆಹಮಾಯಿ ಹತ್ಯಾಕಾಂಡದ ಕಾರಣಕ್ಕೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಿದ್ದರು. ಮುಂದೆ ರಾಜ್ಯಸಭೆಗೆ ಹೋದ ವಿ ಪಿ ಸಿಂಗ್, 1983ರಲ್ಲಿ ಇಂದಿರಾಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾದರು.
ಕೇಂದ್ರ ಸಚಿವ, ಉತ್ತರ ಪ್ರದೇಶದ ಮುಖ್ಯಮಂತ್ರಿ ಹೀಗೆ ಹಲವು ಹುದ್ದೆ ಅಲಂಕರಿಸಿದ ನಂತರವೂ ವಿ ಪಿ ಸಿಂಗ್ ‘ಮಿ ಕ್ಲೀನ್’ ಎಂದೇ ಹೆಸರಾಗಿದ್ದರು. ಅದು ಸಿಂಗ್ ಅವರ ರಾಜಕೀಯ ಜೀವನದ ದೊಡ್ಡ ಸ್ಥಿತ್ಯಂತರಕ್ಕೆ ಕಾರಣವಾಯಿತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಿಂಗ್ ತೆರಿಗೆ ಕಳ್ಳ ಉದ್ಯಮಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದರು. ಇದು ಪ್ರಧಾನಿ ರಾಜೀವ್ ಗಾಂಧಿಯವರಿಗೆ ಇಷ್ಟವಾಗಲಿಲ್ಲ. ಅಂಬಾನಿಗಳು ಹಾಗೂ ಕಪ್ಪು ಹಣದ ವಿರುದ್ಧ ವಿ ಪಿ ಸಿಂಗ್ ಆರಂಭಿಸಿದ ಅಭಿಯಾನ ರಾಜೀವ್ ಗಾಂಧಿ ಅವರನ್ನು ಕೆರಳಿಸಿತ್ತು ಎಂದು ಪತ್ರಕರ್ತ ದೇಬಾಶಿಶ್ ಮುಖರ್ಜಿಯವರ ‘ದಿ ಡಿಸ್ರಪ್ಟರ್: ಹೌ ವಿಶ್ವನಾಥ್ ಪ್ರತಾಪ್ ಸಿಂಗ್ ಶುಕ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ: ಎಚ್.ಡಿ ದೇವೇಗೌಡರ `ನೇಗಿಲ ಗೆರೆಗಳು’ ಕೃತಿ ಕುರಿತು ರಾಜಾರಾಂ ತಲ್ಲೂರ್ ಬರೆಹ
ರಾಜೀವ್ ಗಾಂಧಿ ವಿ ಪಿ ಸಿಂಗ್ ಅವರನ್ನು ರಕ್ಷಣಾ ಖಾತೆಯ ಸಚಿವರನ್ನಾಗಿಸಿದರು. ಅಲ್ಲಿಗೆ ಹೋದರೂ ಸುಮ್ಮನಿರದ ವಿ ಪಿ ಸಿಂಗ್, ಬೋಫೋರ್ಸ್ ಹಗರಣದ ಬೆನ್ನು ಹತ್ತಿದರು. ಇದು ರಾಜೀವ್ ಹಾಗೂ ವಿ ಪಿ ಸಿಂಗ್ ಅವರ ನಡುವಿನ ಒಡಕಿಗೆ ಕಾರಣವಾಯಿತು. ಪರಿಣಾಮವಾಗಿ ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿದ ವಿ ಪಿ ಸಿಂಗ್, ಕಾಂಗ್ರೆಸ್ ಪಕ್ಷದಿಂದಲೂ ಹೊರಬಂದರು. ಅರುಣ್ ನೆಹರು ಮತ್ತು ಆರಿಫ್ ಮೊಹಮ್ಮದ್ ಖಾನ್ ಅವರ ಜೊತೆಗೂಡಿ ‘ಜನಮೋರ್ಚಾ’ ಎನ್ನುವ ಹೊಸ ಪಕ್ಷ ಸ್ಥಾಪಿಸಿದರು. ನಂತರ ಜನಮೋರ್ಚಾ, ಲೋಕದಳ, ಜನತಾ ಪಕ್ಷ, ಕಾಂಗ್ರೆಸ್ ಎಸ್ ಹೀಗೆ ಹಲವು ಪಕ್ಷಗಳನ್ನು ಸೇರಿಸಿ, ಹರಿದು ಹಂಚಿಹೋಗಿದ್ದ ಜನತಾ ಪರಿವಾರವನ್ನು ಒಂದುಗೂಡಿಸಿ ಜನತಾ ದಳದ ಹೆಸರಿನಲ್ಲಿ 1988ರ ಅಕ್ಟೋಬರ್ 11ರಂದು ಜನತಾ ದಳವನ್ನು ಹುಟ್ಟು ಹಾಕಿದರು. ಅವತ್ತು ಜಯಪ್ರಕಾಶ್ ನಾರಾಯಣ್ ಅವರ ಹುಟ್ಟಿದ ದಿನ. ಜನತಾ ದಳದ ಮೊದಲ ಅಧ್ಯಕ್ಷರಾಗಿದ್ದವರು ವಿ ಪಿ ಸಿಂಗ್. ಮುಂದೆ ದೇಶದಲ್ಲಿ ಎರಡನೇ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣವಾದ ಜನತಾ ದಳ, ಹಲವು ರಾಜ್ಯಗಳಲ್ಲಿಯೂ ಅಧಿಕಾರ ಹಿಡಿದು ರಾಜಕಾರಣದಲ್ಲಿ ಮಹತ್ವದ ಬೆಳೆವಣಿಗೆಗಳಿಗೆ ಕಾರಣವಾಯಿತು.
ವಿ ಪಿ ಸಿಂಗ್, ನ್ಯಾಷನಲ್ ಫ್ರಂಟ್ ಹೆಸರಿನಲ್ಲಿ ತೆಲುಗು ದೇಶಂ, ಡಿಎಂಕೆ, ಅಸ್ಸಾಂ ಗಣಪರಿಷತ್ ಮುಂತಾದ ಪಕ್ಷಗಳನ್ನು ಒಂದುಗೂಡಿಸಿದರು. ಅದನ್ನು ಎಡಪಕ್ಷಗಳು ಮತ್ತು ಬಿಜೆಪಿ ಕೂಡ ಬೆಂಬಲಿಸಿದವು. ಇವರೆಲ್ಲರ ಶ್ರಮ ಮತ್ತು ಕಾಣ್ಕೆಯಿಂದ 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನ್ಯಾಷನಲ್ ಫ್ರಂಟ್ ಸೋಲುಣಿಸಿತು. ಕಾಂಗ್ರೆಸ್ ವಿರೋಧಿ ಬಣದ ನೇತೃತ್ವ ವಹಿಸಿದ್ದ ವಿ ಪಿ ಸಿಂಗ್ 1989ರ ಡಿಸೆಂಬರ್ನಲ್ಲಿ ಭಾರತದ ಏಳನೇ ಪ್ರಧಾನಿಯಾದರೆ, ದೇವಿಲಾಲ್ ಉಪಪ್ರಧಾನಿಯಾಗಿದ್ದರು.
1979ರಲ್ಲಿ ಉತ್ತರ ಪ್ರದೇಶದ ಪ್ರಬಲ ಯಾದವರ ಒತ್ತಾಸೆಗೆ ಮಣಿದು ಅಂದಿನ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿಯವರು ಬಿ ಪಿ ಮಂಡಲ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದ್ದರು. ಅದುವರೆಗೆ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಶೇ.22.5ರ ಮೀಸಲಾತಿ ಜಾರಿಯಲ್ಲಿತ್ತು. ಅವರಂತೆಯೇ ಒಬಿಸಿ ಸಮುದಾಯಗಳಿಗೂ ಶೇ.27ರ ಮೀಸಲಾತಿ ನೀಡುವಂತೆ ಮಂಡಲ್ ಸಮಿತಿ ವರದಿ ನೀಡಿತು. 1979ರಲ್ಲಿ ನೀಡಿದ್ದ ಆ ವರದಿಯನ್ನು ಒಂದು ದಶಕವಾದರೂ ಯಾವ ಸರ್ಕಾರವೂ ಜಾರಿಗೆ ತಂದಿರಲಿಲ್ಲ. ಹಲವು ಪಕ್ಷಗಳ ಸರ್ಕಾರದ ಸಾರಥ್ಯ ವಹಿಸಿದ್ದ ವಿ ಪಿ ಸಿಂಗ್ ಕೊನೆಗೂ ಮಂಡಲ್ ವರದಿ ಜಾರಿ ಮಾಡುವ ಐತಿಹಾಸಿಕ ನಿರ್ಣಯ ಕೈಗೊಂಡರು; ಅದರಂತೆ ಮಂಡಲ್ ಕಮಿಷನ್ ಆಯೋಗದ ಶಿಫಾರಸುಗಳನ್ನು ಆಗಸ್ಟ್ 7, 1990ರಂದು ಜಾರಿಗೆ ತಂದರು.
ಮಂಡಲ್ ವರದಿ ಜಾರಿಯಾದ ತಕ್ಷಣ ದೇಶದ ಹಲವೆಡೆ ಹಿಂಸಾಚಾರ ಭುಗಿಲೆದ್ದಿತು. ವರದಿ ಜಾರಿ ವಿರೋಧಿಸಿ ಹಲವು ಮೇಲ್ಜಾತಿ ವಿದ್ಯಾರ್ಥಿಗಳು ತಮ್ಮ ಜೀವವನ್ನೇ ನೀಗಿಕೊಂಡರು. ವಿಚಿತ್ರವೆಂದರೆ, ಮೇಲ್ಜಾತಿಗಳು ವರದಿ ಜಾರಿ ವಿರೋಧಿಸಿದರೆ, ಅದರ ಫಲಾನುಭವಿಗಳಾಗಿದ್ದ ಹಿಂದುಳಿದ ವರ್ಗಗಳ ಮುಖಂಡರು ಮೌನ ತಾಳಿದರು. ಲಾಲು ಪ್ರಸಾದ್ ಯಾದವ್ರಂಥ ಹಿಂದುಳಿದ ವರ್ಗಗಳ ನಾಯಕರು ಕೂಡ ವಿ ಪಿ ಸಿಂಗ್ ಬೆಂಬಲಕ್ಕೆ ನಿಲ್ಲದೇ ಹೋದರು. ಮಂಡಲ್ ಸಂಘರ್ಷದಲ್ಲಿ ವಿ ಪಿ ಸಿಂಗ್ ಏಕಾಂಗಿಯಾಗಿಯೇ ಸೆಣಸಿದರು; ಎಲ್ಲ ರೀತಿಯ ವಿರೋಧ, ಅಡೆತಡೆ, ಹಿಂಸಾಚಾರ, ಅಪಪ್ರಚಾರಗಳ ನಡುವೆಯೂ ವಿ ಪಿ ಸಿಂಗ್ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು. ಅದೇ ಹೊತ್ತಿಗೆ ಬಿಜೆಪಿ ಮಂಡಲ್ಗೆ ವಿರುದ್ಧವಾಗಿ ಅಯೋಧ್ಯೆ ರಾಮಮಂದಿರ, ರಥಯಾತ್ರೆಗಳ ಮೂಲಕ ‘ಕಮಂಡಲ್’ ವಿಚಾರ ತಂದು ತನ್ನ ಹಿಂದೂ ಮತ ಧ್ರುವೀಕರಣದ ತಂತ್ರಗಾರಿಕೆಯನ್ನು ಪ್ರಯೋಗಿಸತೊಡಗಿತು. ಮಂಡಲ್ ವಿರುದ್ಧದ ಕಮಂಡಲ್ ರಾಜಕಾರಣ ಎಂದೇ ಅದನ್ನು ವಿಶ್ಲೇಷಿಸಲಾಗಿತ್ತು.
1990ರ ನವೆಂಬರ್ನಲ್ಲಿ ಲಾಲು ಪ್ರಸಾದ್ ಯಾದವ್ ಎಲ್ ಕೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದರು. ಅಂಥ ಸಂದರ್ಭಕ್ಕಾಗಿ ಕಾಯುತ್ತಿದ್ದ ಬಿಜೆಪಿ, ಕೇಂದ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಿತು. ಅದರ ಪರಿಣಾಮವಾಗಿ ವಿ ಪಿ ಸಿಂಗ್ ಸರ್ಕಾರ ಪತನಗೊಂಡಿತು. ವಿ ಪಿ ಸಿಂಗ್ ಪ್ರಧಾನಿ ಅವಧಿ ಕೇವಲ 11 ತಿಂಗಳಲ್ಲಿ ಕೊನೆಗೊಂಡಿತ್ತು. ಜನತಾ ದಳದಲ್ಲೇ ಇದ್ದ ಚಂದ್ರಶೇಖರ್ ದಳದಿಂದ ಹೊರಬಂದು ಕಾಂಗ್ರೆಸ್ ನೆರವಿನೊಂದಿಗೆ ಪ್ರಧಾನಿಯಾದರು. ಕೆಲವೇ ತಿಂಗಳಲ್ಲಿಅವರ ಸರ್ಕಾರವೂ ಪತನ ಹೊಂದಿತು. ಬಳಿಕ ನಡೆದ 1991ರ ಚುನಾವಣೆಯಲ್ಲಿ ದಳ ಪಡೆದದ್ದು ಕೇವಲ 69 ಸ್ಥಾನಗಳನ್ನು ಮಾತ್ರ. 1988ರಿಂದ 1999ರವರೆಗೆ ಜನತಾ ದಳ ಕೇಂದ್ರದಲ್ಲಿ ಅಸ್ತಿತ್ವ ಕಾಪಾಡಿಕೊಂಡಿತ್ತು. ಮುಂದಿನ ದಿನಗಳಲ್ಲಿ ಜನತಾ ದಳವು ಬಿಜು ಜನತಾ ದಳ, ರಾಷ್ಟ್ರೀಯ ಜನತಾ ದಳ, ಜೆಡಿಎಸ್, ಜೆಡಿಯು ಹೀಗೆ ಹಲವು ಟಿಸಿಲೊಡೆದು ಪ್ರಾದೇಶಿಕ ಪಕ್ಷಗಳಾಗಿ ಅಸ್ತಿತ್ವ ಉಳಿಸಿಕೊಂಡಿತು. ವಿ ಪಿ ಸಿಂಗ್ ಅವರ ಕನಸು, ಶ್ರಮ ಎಲ್ಲವೂ ಹಿಂದುಳಿದ ವರ್ಗಗಳ ನಾಯಕರ ಸ್ವಾರ್ಥ, ಹುಂಬತನ, ಸ್ವಜನಪಕ್ಷಪಾತಗಳಲ್ಲಿ ಕೊನೆಗೊಂಡಿದ್ದವು.
ಇತ್ತೀಚೆಗೆ, ಪ್ರಧಾನಿ ಮೋದಿಯವರನ್ನು ‘ಚೌಕೀದಾರ್ ಚೋರ್ ಹೈ’ ಎಂದಿದ್ದಕ್ಕಾಗಿ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಕೋರ್ಟ್ಗೆ ಎಳೆದಿತ್ತು. ಭಾರತದ ಜನಪ್ರಿಯ ಪ್ರಧಾನ ಮಂತ್ರಿಯೊಬ್ಬರ ವಿರುದ್ಧ ಮೂವತ್ತೈದು ವರ್ಷಗಳ ಹಿಂದೆಯೇ ಇಂಥದ್ದೊಂದು ಘೋಷಣೆಯನ್ನು ಮೊಳಗಿಸಿದ್ದವರು ವಿ ಪಿ ಸಿಂಗ್. ಅದೂ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಕಾಲದಲ್ಲಿ; 514 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 414 ಸ್ಥಾನಗಳನ್ನು ಗೆದ್ದಿತ್ತು. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ವಿ ಪಿ ಸಿಂಗ್ ಅವರ ಜನತಾ ದಳ ‘ಚೋರ್’ ಎಂದು ಕರೆದಿತ್ತು. 1989ರ ಲೋಕಸಭಾ ಚುನಾವಣೆ ವೇಳೆ ‘ಗಲಿ ಗಲಿ ಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ’ ಎನ್ನುವುದು ಅತ್ಯಂತ ಜನಪ್ರಿಯ ಚುನಾವಣಾ ಪ್ರಚಾರವಾಗಿತ್ತು. ವಿ ಪಿ ಸಿಂಗ್ ಮರೆಯಲ್ಲಿ ನಿಂತು ರಾಜೀವ್ ಗಾಂಧಿಯನ್ನು ‘ಚೋರ್’ ಎಂದಿದ್ದ ಬಿಜೆಪಿಯೇ ಇಂದು ಮೋದಿಯವರನ್ನು ‘ಚೋರ್’ ಎಂದಿದ್ದಕ್ಕಾಗಿ ರಾಹುಲ್ ವಿರುದ್ಧ ಬೊಬ್ಬೆ ಹೊಡೆದಿದ್ದು ಚರಿತ್ರೆಯ ಒಂದು ವ್ಯಂಗ್ಯವಾಗಿದೆ.
ರಾಜಮನೆತನದಿಂದ ಬಂದಿದ್ದರೂ ವಿ ಪಿ ಸಿಂಗ್ ಎಳವೆಯಲ್ಲಿಯೇ ಗಾಂಧಿ ಚಿಂತನೆಗಳತ್ತ ಆಕರ್ಷಿತರಾಗಿದ್ದರು. ವಿನೋಬಾ ಭಾವೆಯವರ ಭೂದಾನ ಚಳವಳಿಯ ಪ್ರಭಾವಕ್ಕೊಳಗಾಗಿ ತಮ್ಮ ನೂರಾರು ಎಕರೆ ಜಮೀನನ್ನು ಬಡಬಗ್ಗರಿಗೆ ದಾನ ಮಾಡಿದ್ದರು. ರಾಜಕಾರಣಕ್ಕೆ ಬಂದ ನಂತರ ರಾಮಮನೋಹರ ಲೋಹಿಯಾ ಮತ್ತು ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು.
ಈ ಸುದ್ದಿ ಓದಿದ್ದೀರಾ: ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಹೇಗೆ?
ವಿ ಪಿ ಸಿಂಗ್ ತಮ್ಮ ಆಡಳಿತದಲ್ಲಿ ಸಮಾಜವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಮೊದಲಿಗೆ ಕಾರ್ಪೊರೇಟ್ ಪ್ರಾಬಲ್ಯದ ವಿರುದ್ಧ ಕಠೋರ ಕ್ರಮಗಳಿಗೆ ಮುಂದಾದ ಅವರು, ನಂತರ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರು. ಅದು ತನ್ನ ಅಧಿಕಾರಕ್ಕೇ ಕಂಟಕ ತಂದರೂ ಎದೆಗುಂದಲಿಲ್ಲ. ಹಲವು ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಹೊಸ ರಾಜಕೀಯ ಪರಂಪರೆಗೆ ಅಡಿಪಾಯ ಹಾಕಿದರು. ಪ್ರಧಾನಿಯಾದಾಗ ತಮ್ಮ ರಾಜಕೀಯ ಭವಿಷ್ಯವನ್ನೇ ಒತ್ತೆಯಿಟ್ಟು ಮಂಡಲ್ ವರದಿಯನ್ನು ಜಾರಿಗೊಳಿಸಿದರು. ಸಂವಿಧಾನ ರಚನೆಯ ಮೂಲಕ ಸೆಕ್ಯುಲರ್ ಭಾರತವನ್ನು ಕಟ್ಟಲು ಶ್ರಮಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ದೊರಕಿದ್ದು ವಿ ಪಿ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿಯೇ. ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರ್ ತತ್ವಗಳಿಗೆ ವಿ ಪಿ ಸಿಂಗ್ ಅವರ ಬದ್ಧತೆ ಎಂಥದ್ದೆಂದರೆ, ಕೋಮು ಹಿಂಸಾಚಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರಿಂದ ಅವರು ತಮ್ಮ ಕಿಡ್ನಿಗಳನ್ನೇ ಕಳೆದುಕೊಳ್ಳುವಂತಾಯಿತು. ಕವನ ಬರೆಯುತ್ತಿದ್ದ, ವ್ಯಂಗ್ಯ ಚಿತ್ರ ಗೀಚುತ್ತಿದ್ದ ವಿ ಪಿ ಸಿಂಗ್ ಮಹಾ ಜೀವನ ಪ್ರೇಮಿಯಾಗಿದ್ದರು.
ಇತಿಹಾಸ ಚಕ್ರ ಒಂದು ಸುತ್ತು ಕ್ರಮಿಸಿದೆ. ಇಂದು ಭಾರತದ ರಾಜಕಾರಣ ಮತ್ತೊಮ್ಮೆ ‘ಕಮಂಡಲ’ ರಾಜಕಾರಣವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿ, ಅದನ್ನು 2024ರ ಲೋಕಸಭಾ ಚುನಾವಣೆಗೆ ಮುಂಚೆ ಉದ್ಘಾಟಿಸಿ, ಅದರ ಹೆಸರಿನಲ್ಲೆ ಚುನಾವಣೆ ಎದುರಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಅಂದು ವಿ ಪಿ ಸಿಂಗ್ ಅವರಿಂದ ಹೊಸ ಚೈತನ್ಯ ಪಡೆದ ಹಿಂದುಳಿದ ವರ್ಗದಿಂದ ಬಂದಿರುವ ನರೇಂದ್ರ ಮೋದಿ ಬಿಜೆಪಿ ಪಕ್ಷದಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ವಿ ಪಿ ಸಿಂಗ್ ವಿರೋಧಿಸಿದ್ದ ಕಾರ್ಪೊರೇಟ್ ಕುಳಗಳು, ಸಂಘ ಪರಿವಾರದವರು ಸರ್ಕಾರದ ಚಾಲಕ ಶಕ್ತಿಗಳಾಗಿವೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ಮೂಲಕ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಯನ್ನು ಅಪ್ರಸ್ತುತಗೊಳಿಸಲಾಗಿದೆ. ಒಂದು ಕಾಲದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ವಿ ಪಿ ಸಿಂಗ್, ನಂತರ ಅದರ ಮುಸ್ಲಿಂ ದ್ವೇಷವನ್ನು ಒಂದು ಕಾಯಿಲೆ ಎಂದು ಬಣ್ಣಿಸಿದ್ದರು. ಅಂಥ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕಾಗಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಇಂದು ಕಾಂಗ್ರೆಸ್ ಶ್ರಮಿಸುತ್ತಿದೆ. ಈ ಹೊತ್ತಿನಲ್ಲಿ ವಿ ಪಿ ಸಿಂಗ್ ಅವರ ನೆನಪು ನಮ್ಮ ಹಿಂದುಳಿದ ವರ್ಗದ ನಾಯಕರಲ್ಲಿ, ರಾಜಕೀಯ ಪಕ್ಷಗಳಲ್ಲಿ ಹೊಸ ಸ್ಫೂರ್ತಿ, ಬದ್ಧತೆ ತುಂಬಬೇಕಿದೆ.