ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಮಾರ್ಚ್ 4ರಂದು ರಾಜ್ಯಾದ್ಯಂತ ನೂತನ ಕಾನೂನು ಜಾರಿಗೆ ಬರಲಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಹೇಳಿದರು.
ಗದಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಡವರ, ಸಣ್ಣ ರೈತರ ಪ್ರಕರಣಗಳು ಕೋರ್ಟ್‌ಗಳಲ್ಲಿ ವಿಳಂಬವಾಗದ ರೀತಿಯಲ್ಲಿ ಆದ್ಯತೆ ಮೇರೆಗೆ ಪ್ರಕರಣ ನಡೆಸಬೇಕು. ಆ ಮೂಲಕ 6 ತಿಂಗಳೊಳಗಾಗಿ ಪ್ರಕರಣಗಳು ಪರಿಹರಿಸಬೇಕು ಎಂಬ ಮಸೂದೆಯನ್ನು ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಮಸೂದೆಗೆ ರಾಜ್ಯಪಾಲರು ಅಂಕಿತವನ್ನೂ ಹಾಕಿದ್ದಾರೆ” ಎಂದು ಹೇಳಿದ್ದಾರೆ.
“ಫೆಬ್ರವರಿ 18ರಂದು ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ್ದು, ಸರ್ಕಾರ ರಾಜ್ಯಪತ್ರದಲ್ಲಿ ಫೆಬ್ರವರಿ 29ರಂದು ಮಸೂದೆ ಜಾರಿಗೆ ಬರುವಂತೆ ಗೆಜೆಟ್ ನೊಟಿಫಿಕೇಶನ್ ಜಾರಿ ಮಾಡಿದೆ. ಮಾರ್ಚ್ 4ರಿಂದ ಹೊಸ ಕಾನೂನು ಜಾರಿಗೆ ಬರಲಿದೆ. ಈ ಕಾನೂನು ಬಡವರಿಗೆ ನ್ಯಾಯಾಲಯದಲ್ಲಿ ವಿಶೇಷ ಆದ್ಯತೆ ಮಾಡುವ ದೇಶದ ಮೊದಲ ಕಾನೂನು ಆಗಿದೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ್, ವಾರ್ತಾಧಿಕಾರಿ ವಸಂತ ಮಡ್ಲೂರ, ತಹಶಿಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹಾಜರಿದ್ದರು.