- ‘ಓಮ್ನಿಯಲ್ಲಿ ಬಂದಿದ್ದವರು ದಾವಣಗೆರೆ ನ್ಯಾಮತಿಯ ಹಿಂದೂ-ಮುಸ್ಲಿಂ ಸ್ನೇಹಿತರು’ ಎಂದ ಶಿವಮೊಗ್ಗ ಎಸ್ಪಿ
- ಸಾರ್ವಜನಿಕರು ಯಾವುದೇ ಅಪಪ್ರಚಾರ, ವದಂತಿಗಳಿಗೆ ಕಿವಿಗೊಡಬಾರದು ಎಂದ ಪೊಲೀಸ್ ಇಲಾಖೆ
ಮೀಲಾದುನ್ನಬಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಘಟನೆಯ ಬಳಿಕ ಉಂಟಾದ ಪ್ರಕ್ಷುಬ್ಧ ವಾತಾವರಣದ ಬಳಿಕ, ‘ರಾಗಿಗುಡ್ಡದಲ್ಲಿ ಪೊಲೀಸ್ ಎನ್ಕೌಂಟರ್ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ’ ಹರಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, “ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸ್ ಎನ್ಕೌಂಟರ್ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ರೀತಿ ಘಟನೆಯು ನಡೆದಿಲ್ಲ. ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಪೊಲೀಸ್ ಎನ್ ಕೌಂಟರ್ ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ರೀತಿ ಘಟನೆಯು ನಡೆದಿಲ್ಲ. ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಸಿಇಎನ್ ಠಾಣೆ ಗುನ್ನೆ ಸಂಖ್ಯೆ 98/2023 ರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ @DgpKarnataka pic.twitter.com/40VZSIzfAm
— SP Shivamogga (@Shivamogga_SP) October 3, 2023
ಓಮ್ನಿಯಲ್ಲಿ ಬಂದವರು ದಾವಣಗೆರೆ ಜಿಲ್ಲೆಯವರು
ರಾಗಿಗುಡ್ಡದಲ್ಲಿ ಮೀಲಾದ್ ಮೆರವಣಿಗೆ ವೇಳೆ ಓಮ್ನಿ ವಾಹನಗಳಲ್ಲಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, “ಓಮ್ನಿಯಲ್ಲಿ ಬಂದವರು ದಾವಣಗೆರೆ ಜಿಲ್ಲೆ ನ್ಯಾಮತಿಯವರು. ವಾಹನದಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಇದ್ದರು. ಎಲ್ಲರೂ ಸ್ನೇಹಿತರು. ಶಿವಮೊಗ್ಗದಲ್ಲಿ ಮೀಲಾದ್ ಮೆರವಣಿಗೆ ನೋಡಲು ಬಂದವರು ರಾಗಿಗುಡ್ಡಕ್ಕೂ ಬಂದಿದ್ದಾರೆ. ಅಲ್ಲಿ ಗಲಾಟೆ ಆರಂಭವಾಗುತ್ತಿದ್ದಂತೆಯೇ ಅವರೆಲ್ಲರೂ ತಮ್ಮೂರಿಗೆ ಮರಳಿದ್ದಾರೆ” ಎಂದು ತಿಳಿಸುವ ಮೂಲಕ ಕಲ್ಲೆಸೆತ ಘಟನೆಯ ಹಿಂದಿರುವವರು ಅವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಗಲಭೆಯ ವೇಳೆ ಹಿಂದೂಗಳ ಮನೆ ಮೇಲೆ ಗುರಿಯಿಟ್ಟು ದಾಳಿ ಮಾಡಿದ್ದಾರೆ.
— BJP Karnataka (@BJP4Karnataka) October 2, 2023
ಪ್ರಚೋದನಕಾರಿ ಬ್ಯಾನರ್ ಮೂಲಕ ಮತಾಂಧರು ಶಾಂತಿ ಕದಡಿದ್ದಾರೆ. ತಲ್ವಾರ್ ಇಡುವುದಕ್ಕೆ ಪರ್ಮಿಷನ್ ಬೇಡವೇ? ಮತಾಂಧರ ಬೆನ್ನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಂತಂತಿದೆ.
– ಶ್ರೀ ಎಸ್.ಎನ್. ಚೆನ್ನಬಸಪ್ಪ, ಶಿವಮೊಗ್ಗ ಶಾಸಕರು
ಪೂರ್ಣ ವಿಡಿಯೋ… pic.twitter.com/K8Rt0y41TG
“ನಾವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ವಾಹನವನ್ನು ಪತ್ತೆ ಮಾಡಿದ್ದೇವೆ. ತನಿಖೆಯ ವೇಳೆ ಓಮ್ನಿಯಲ್ಲಿ ಬಂದಿದ್ದವರು ನ್ಯಾಮತಿಯವರು ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಸಾರ್ವಜನಿಕರು ಯಾವುದೇ ಅಪಪ್ರಚಾರ, ವದಂತಿಗಳಿಗೆ ಕಿವಿಗೊಡಬಾರದು” ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.
“ರಾಗಿಗುಡ್ಡಕ್ಕೆ ಕಾರಿನಲ್ಲಿ ಹೊರಗಿನವರು ಬಂದು ಗಲಾಟೆ ಮಾಡಿದ್ದಾರೆ” ಎಂದು ಕಲ್ಲು ತೂರಾಟದ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ಮುಖಂಡರು ಆರೋಪಿಸಿದ್ದರು. ಅಲ್ಲದೇ, ಕೆಲವೊಂದು ಮಾಧ್ಯಮಗಳು ಕೂಡ ಇದನ್ನು ವರದಿ ಮಾಡಿದ್ದವು. ಆದರೆ, ಈ ಆರೋಪವನ್ನು ಸ್ವತಃ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ತಳ್ಳಿ ಹಾಕಿದ್ದಾರೆ.
ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣ ಸಂಬಂಧ 60 ಮಂದಿಯನ್ನು ಬಂಧಿಸಲಾಗಿದ್ದು, 24 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.