1995 ರಿಂದ ಗುಜರಾತ್‌ನಲ್ಲಿ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿಲ್ಲ ಎಂದು ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ. ಆದರೆ, ಕಳೆದ ವರ್ಷ (2023) ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ, ಎರಡು ವರ್ಷಗಳಲ್ಲಿ ಸ್ಥಾಪಿಸಲಾದ 508 ಹೊಸ ನರ್ಸಿಂಗ್ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಒಂದು ಮಾತ್ರ ಸರ್ಕಾರಿ ಸ್ವಾಮ್ಯದ್ದಾಗಿದೆ ಎಂದು ಸರ್ಕಾರ ತಿಳಿಸಿದೆ.
ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಮಿತ್ ಚಾವ್ಡಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ಕಾರ, “ರಾಜ್ಯದಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 1871ರಲ್ಲಿ ಅಹಮದಾಬಾದ್‌ನಲ್ಲಿ ಮೊದಲನೆಯ ಕಾಲೇಜು ತೆರೆಯಲಾಗಿತ್ತು. 1995ರಲ್ಲಿ ಭಾವನಗರದಲ್ಲಿ ಕೊನೆಯದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗಿತ್ತು” ಎಂದು ಲಿಖಿತ ಉತ್ತರದಲ್ಲಿ ಹೇಳಿದೆ. 1995ರ ನಂತರ ಈವರೆಗೆ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಗುಜರಾತ್ ಸರ್ಕಾರ ನಿರ್ಮಿಸಿಲ್ಲ.
2022 ಅಥವಾ 2023ರಲ್ಲಿ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಅನುಮೋದಿಸದಿದ್ದರೂ, 2023ರಲ್ಲಿ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. 2022 ರಲ್ಲಿ, ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ (ನೋಂದಾಯಿತ ಟ್ರಸ್ಟ್) ನಡೆಸುತ್ತಿರುವ ಐದು ವೈದ್ಯಕೀಯ ಕಾಲೇಜುಗಳು ಸರ್ಕಾರದ ಅನುಮೋದನೆ ಪಡೆದಿವೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಪದವಿಗಾಗಿ ಯಾವುದೇ ಹೊಸ ಸರ್ಕಾರಿ ಅಥವಾ ಅನುದಾನಿತ ಕಾಲೇಜು ಮಂಜೂರಾಗಿಲ್ಲ ಎಂಬುದು ಸದನ ಮತ್ತು ಆ ರಾಜ್ಯದ ಗಮನ ಸೆಳೆದಿದೆ.
ಕಾಂಗ್ರೆಸ್ ಶಾಸಕ ಗನಿಬೆನ್ ಠಾಕೂರ್ ಅವರು ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರವಾಗಿ, “ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 508 ಹೊಸ ನರ್ಸಿಂಗ್ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ರಾಜ್ಯ ಸರ್ಕಾರವು ಕೇವಲ ಒಂದನ್ನು (ಸರ್ಕಾರಿ MSC ನರ್ಸಿಂಗ್ ಕಾಲೇಜು) ಮಾತ್ರ ಸ್ಥಾಪಿಸಿದೆ. ಉಳಿದ ಎಲ್ಲ 507 ಖಾಸಗಿ ಕಾಲೇಜುಗಳಾಗಿವೆ. ಅವುಗಳಲ್ಲಿ 315 ಖಾಸಗಿ ಸಂಸ್ಥೆಗಳು 2023ರಲ್ಲಿ ಅರಂಭವಾಗಿವೆ” ಎಂದು ಸರ್ಕಾರ ಹೇಳಿದೆ.
ಒಂದೆಡೆ, ಕಳೆದ 30 ವರ್ಷಗಳಲ್ಲಿ ಗುಜರಾತ್‌ನಲ್ಲಿ ಯಾವುದೇ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆದಿಲ್ಲ; ಮತ್ತೊಂದೆಡೆ, ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಹೇಳಿಕೊಳ್ಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಗುಜರಾತ್ | 2 ವರ್ಷದಿಂದ 3.8 ಲಕ್ಷ ಅರ್ಹ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ
“2027ರ ವೇಳೆಗೆ, ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು 12,200ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಆರೋಗ್ಯ ಸಚಿವ ಅಮಿತ್ ಚಾವ್ಡಾ ಹೇಳಿದ್ದಾರೆ.
“ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವೈದ್ಯರಾಗಲು ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳ ಶುಲ್ಕ ಕಡಿಮೆ ಇರಬೇಕು. ಆದರೆ, ಗುಜರಾತ್ ಸರ್ಕಾರವು ಕಳೆದ 29 ವರ್ಷಗಳಲ್ಲಿ ಯಾವುದೇ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿಲ್ಲ. ಈ ಸರ್ಕಾರವು ಶ್ರೀಮಂತರು ಮತ್ತು ಕೈಗಾರಿಯೋದ್ಯಮಿಗಳ ಪರವಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.