ಮುಂದಿನ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಣೆಗೂ ಮುನ್ನವೇ ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ತಿಕ್ಕಾಟ ಏರ್ಪಟ್ಟಿದೆ.
“ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನೊಂದಿಗೆ ನಾವು ಮೈತ್ರಿ ಮಾಡುವುದಿಲ್ಲ. ಟಿಎಂಸಿಯು ಏಕಾಂಗಿಯಾಗಿಯೇ ಸ್ಪರ್ಧೆ ಮಾಡಲಿದೆ” ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಹಿರಂಗವಾಗಿಯೇ ಘೋಷಿಸಿದ್ದಾರೆ.
“ನಾವು ಬಂಗಾಳದಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತೇವೆ. ನಾವು ಸೀಟು ಹಂಚಿಕೆಯ ಪ್ರಸ್ತಾಪವನ್ನು ಮಾಡಿದ್ದೆವು. ಆದರೆ ಅವರು ತಿರಸ್ಕರಿಸಿದರು ಮತ್ತು ನಂತರ ಯಾವುದೇ ಮಾತುಕತೆ ನಡೆಯಲಿಲ್ಲ. ಬಂಗಾಳಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ” ಎಂದು ತಿಳಿಸಿದ್ದಾರೆ.
#BigBreaking : #MamataBanerjee confirms no alliance with #Congress in #Bengal. “We will go solo in Bengal. We had proposed seat sharing but they had rejected and there after no further talks have happened. No alliance as gas as Bengal is concerned”. Mamata Banerjee laments “no… pic.twitter.com/x8Cx4iVpqC
— Tamal Saha (@Tamal0401) January 24, 2024
“ಭಾರತ್ ಜೋಡೊ ನ್ಯಾಯ ಯಾತ್ರೆಗೆ ಆಹ್ವಾನಿಸುವಲ್ಲಿ ಅಥವಾ ಯಾತ್ರೆಯು ಬಂಗಾಳದಲ್ಲಿ ಸಾಗುವ ಬಗ್ಗೆ ತಿಳಿಸುವಲ್ಲಿ ನಮಗೆ ಯಾವುದೇ ಮಾಹಿತಿ ನೀಡುವ ಸೌಜನ್ಯ ಕೂಡ ನೀಡಲಿಲ್ಲ” ಎಂದು ಇದೇ ವೇಳೆ ದೀದಿ ಬೇಸರ ಹೊರಹಾಕಿದ್ದಾರೆ.
“ಇಂಡಿಯಾ ಮೈತ್ರಿಕೂಟದೊಂದಿಗಿನ ಸಂಬಂಧದ ಬಗ್ಗೆ ಏನು ಮಾಡಬೇಕೆಂಬುದನ್ನು ಚುನಾವಣೆಯ ನಂತರ ತಿಳಿಸುತ್ತೇವೆ. ನಾವು ಜಾತ್ಯತೀತ ಪಕ್ಷವಾಗಿದ್ದು, ಬಿಜೆಪಿಯನ್ನು ಸೋಲಿಸಲು ಎಲ್ಲ ಶ್ರಮವನ್ನು ಹಾಕುತ್ತೇವೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಮಮತಾ ಬ್ಯಾನರ್ಜಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇವೆ. ಬಂಗಾಳದಲ್ಲಿ ಸೀಟು ಹಂಚಿಕೆಯ ಮಾತುಕತೆ ನಡೆಯುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ ಒಂದು ದಿನದ ನಂತರ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಮಮತಾ ಬ್ಯಾನರ್ಜಿ ಸಹಾಯ ನಮಗೆ ಬೇಡ ಎಂದಿದ್ದ ಅಧೀರ್ ರಂಜನ್ ಚೌಧರಿ
ಪಶ್ವಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಮಮತಾ ಅವರನ್ನು ಅವಕಾಶವಾದಿ ಎಂದು ಕರೆದಿದ್ದರು.
ಮಾಧ್ಯಮಗಳೊಂದಿಗೆ ನಿನ್ನೆ ಮಾತನಾಡಿದ್ದ ಅಧೀರ್ ರಂಜನ್ ಚೌಧರಿ, “ಮಮತಾ ಬ್ಯಾನರ್ಜಿ ಸಹಾಯದೊಂದಿಗೆ ನಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತನ್ನ ಸ್ವಂತ ಬಲದೊಂದಿಗೆ ಹೇಗೆ ಸ್ಪರ್ಧಿಸಬೇಕೆಂದು ಕಾಂಗ್ರೆಸ್‌ಗೆ ಗೊತ್ತಿದೆ. ಬಂಗಾಳದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಟಿಎಂಸಿ ಅಧಿಕಾರಕ್ಕೆ ಬಂದಿದ್ದು ಎಂಬುದನ್ನು ಮಮತಾ ಬ್ಯಾನರ್ಜಿ ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಸೋಲಿಸುವ ನಿಟ್ಟಿನಲ್ಲಿ ವಿಪಕ್ಷಗಳೇ ಸೇರಿಕೊಂಡು ‘ಇಂಡಿಯಾ ಒಕ್ಕೂಟ’ವನ್ನು ರಚಿಸಿತ್ತು. ಇದರ ಸಂಚಾಲಕರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇತ್ತೀಚಿಗಷ್ಟೇ ಆಯ್ಕೆ ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ: ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದವರ ಅಂಗಡಿಗಳನ್ನು ಧ್ವಂಸಗೊಳಿಸಿದ ಪಾಲಿಕೆ
ಇದರ ನಡುವೆಯೇ ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ತಿಕ್ಕಾಟ ಏರ್ಪಟ್ಟಿದೆ. ಈ ನಡುವೆಯೇ ಮಮತಾ ಬ್ಯಾನರ್ಜಿಯವರ ಈ ಬಹಿರಂಗ ಘೋಷಣೆಯು ಮತ್ತಷ್ಟು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಲಿದೆ.
‘ಇಂಡಿಯಾ ಒಕ್ಕೂಟ’ದಲ್ಲಿ ಮಮತಾ ಬ್ಯಾನರ್ಜಿಯೇ ಮುಂಚೂಣಿಯಲ್ಲಿದ್ದ ನಾಯಕಿಯಾಗಿದ್ದರು. ಅಲ್ಲದೇ, ಮಲ್ಲಿಕಾರ್ಜುನ ಖರ್ಗೆ ಅವರೇ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ತಿಳಿಸಿದ್ದ ಪ್ರಮುಖರಲ್ಲೋರ್ವರಾಗಿದ್ದರು. ಇಂಡಿಯಾ ಒಕ್ಕೂಟವು ಈವರೆಗೆ ಒಟ್ಟು ಐದು ಸಭೆಗಳನ್ನು ನಡೆಸಿತ್ತು.