- ಸಿದ್ಧಲಿಂಗಪುರದಲ್ಲಿ ಕನಕ ಭವನ ನೂತನ ಕಟ್ಟಡ ಉದ್ಘಾಟಿಸಿ ಸಿಎಂ ಹೇಳಿಕೆ
- ಸಿದ್ಧಲಿಂಗಪುರ ಜನತೆಗೆ ನಾನು ಋಣಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ಬಾರಿ ಗೆಲ್ಲಿಸಿದ್ದೀರಿ. ಆದರೆ ಮೂರು ಬಾರಿ ಸೋಲಿಸಿದ್ದೂ ಇದೆ. ತಮಾಷೆಗೆ ಈ ಮಾತು ಹೇಳಿದ್ದೇನೆ. ರಾಜಕೀಯದಲ್ಲಿ ಗೆಲುವು, ಸೋಲು ಸಾಮಾನ್ಯ. ಚುನಾವಣೆಗೆ ನಿಂತವರೆಲ್ಲ ಗೆಲ್ಲಲು ಆಗುವುದಿಲ್ಲ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಸೋಲುವ ವಾಸನೆ ಕಂಡು ದೂರದ ಬಾದಾಮಿಯಿಂದ ಸ್ಪರ್ಧಿಸಿದೆ. ಅಲ್ಲಿಯ ಜನ ಕೈಹಿಡಿದರು, ನೀವು ಕೈಬಿಟ್ಟಿರಿ. ಕೆಲವೊಮ್ಮೆ ಕೆಲಸಕ್ಕೆ ಬಾರದವರನ್ನು ಆರಿಸುತ್ತೀರಿ. ಏನೇ ಆಗಲಿ ಗೆಲ್ಲಿಸಿದವರಿಗೂ ಮತ್ತು ಸೋಲಿಸಿದವರಿಗೂ ಧನ್ಯವಾದ ತಿಳಿಸುವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಸಿದ್ಧಲಿಂಗಪುರದಲ್ಲಿ ಆಯೋಜಿಸಿರುವ ಬೀರೇಶ್ವರ ಕುರುಬರ ಸಂಘ (ರಿ) ವತಿಯಿಂದ ಕನಕ ಭವನದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನನ್ನ ರಾಜಕೀಯ ಜೀವನದಲ್ಲಿ ಸಿದ್ಧಲಿಂಗಪುರ ಜನತೆ ನನ್ನ ಪರವಾಗಿ ನಿಂತಿದೆ. ನಾನು ಈ ಗ್ರಾಮಕ್ಕೆ ಋಣಿಯಾಗಿದ್ದೇನೆ” ಎಂದರು.
“ಸಮಾಜದಲ್ಲಿ ಸಂಘಟನೆ ಬಹಳ ಮುಖ್ಯ. ಎಲ್ಲ ಜನಾಂಗದವರಿಗೂ ಸಂಘಟನೆ ಅಗತ್ಯವಾಗಿ ಬೇಕು. ಬರೀ ಕುರುಬ ಸಮುದಾಯ ಅಂತಲ್ಲ, ಎಲ್ಲರೂ ಸಂಘಟನೆಯಾದಾಗ ತಮ್ಮ ಹಕ್ಕುಗಳನ್ನು ಕೇಳಿ ಪಡೆಯಬಹುದು. ಜನರ ಪರವಾಗಿ ಧ್ವನಿ ಎತ್ತಲು ಸಂಘಟನೆ ಬೇಕು. ಈ ನಿಟ್ಟಿನಲ್ಲಿ ನಮ್ಮದೇ ಆದಂತಹ ಒಂದು ಕಟ್ಟಡ ಕಟ್ಟಿಕೊಂಡು ಸಂಘಟಿತರಾಗಿದ್ಡಿದೀರಿ ಬಹಳ ಸಂತೋಷ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಗೆ 9 ವರ್ಷಗಳಿಂದ ಕಾಣದ ಅಕ್ಕತಂಗಿಯರ ಸಂಕಟ ಈಗ ಕಂಡಿದ್ದು ಹೇಗೆ?
“ದಾನ ಇತ್ತೀಚೆಗೆ ಕಡಿಮೆ ಆಗಿದೆ. ಶಾಲೆ, ಆಸ್ಪತ್ರೆ, ಸಂಘ ಸಂಸ್ಥೆಗಳಿಗೆ ಮೊದಲು ದಾನವಾಗಿ ಜಾಗ ಕೊಡುತ್ತಿದ್ದರು. ಸಿದ್ಧಲಿಂಗಪುರದ ಮಾದೇಗೌಡರು ಬೆಲೆ ಬಾಳುವ ತಮ್ಮ ಜಾಗವನ್ನು ಕನಕ ಭವನ ನಿರ್ಮಾಣಕ್ಕೆ ಕೊಟ್ಟಿದ್ದಾರೆ. ಅದು ಅವರ ದೊಡ್ಡಗುಣ ಎಂದು ಭಾವಿಸುವೆ. ಎಲ್ಲರಿಗೂ ದಾನ ಕೊಡಬೇಕು ಎನ್ನುವ ಯೋಚನೆ ಬರಲ್ಲ. ಮೀಗಿಲಾಗಿ ಸ್ವಂತ ಖರ್ಚಿನಲ್ಲೇ ಜಾಗವನ್ನು ನೋಂದಣಿ ಕೂಡ ಮಾಡಿಸಿಕೊಟ್ಟಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಇಂದು ಬೆಳಿಗ್ಗೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. 1.26 ಕೋಟಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ಸರ್ಕಾರ ಕೊಡುತ್ತಿದೆ. ಬೆಲೆ ಏರಿಕೆ ಆಗಿದ್ದರಿಂದ ನಮ್ಮ ಪಕ್ಷ ಈ ತೀರ್ಮಾನ ಮಾಡಿತ್ತು. ಜನರ ಕೈಯಲ್ಲಿ ದುಡ್ಡು ಇದ್ದರೆ ಕೊಂಡುಕೊಳ್ಳುತ್ತಾರೆ. ಈ ಒಂದೇ ಕಾರ್ಯಕ್ರಮಕ್ಕೆ 32 ಸಾವಿರ ಕೋಟಿ ರೂ. ವರ್ಷಕ್ಕೆ ಖರ್ಚಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಯೋಜನೆ ಕರ್ನಾಟಕದಲ್ಲಿ ಈವರೆಗೂ ಆಗಿಲ್ಲ” ಎಂದು ತಿಳಿಸಿದರು.