ಉ. ಪ್ರದೇಶ | ಮುಸ್ಲಿಂ ಪ್ರಯಾಣಿಕರ ನಮಾಝ್‌ಗೆ ಅವಕಾಶ ನೀಡಿ ಅಮಾನತಾಗಿದ್ದ ಬಸ್ ಕಂಡಕ್ಟರ್ ಆತ್ಮಹತ್ಯೆ

Date:

  • ಮೋಹಿತ್ ಯಾದವ್, ಆತ್ಮಹತ್ಯೆಗೆ ಶರಣಾದ ಯುಪಿಎಸ್‌ಆರ್‌ಟಿಸಿಯ ಬಸ್ ಕಂಡಕ್ಟರ್
  • ಕಂಡಕ್ಟರ್ ಮತ್ತು ಚಾಲಕನ ಅಮಾನತು ಮಾಡಿದ್ದ ಸಾರಿಗೆ ಇಲಾಖೆ

ಇಬ್ಬರು ಮುಸ್ಲಿಂ ಪ್ರಯಾಣಿಕರಿಗೆ ನಮಾಝ್ ಮಾಡಲು ಬಸ್‌ ನಿಲ್ಲಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೈನ್‌ಪುರಿ ಬಳಿ ತನ್ನ ನಿವಾಸದ ಪಕ್ಕದಲ್ಲಿ ರೈಲ್ವೆ ಹಳಿಯಲ್ಲಿ ಕಂಡಕ್ಟರ್ ಮೋಹಿತ್ ಯಾದವ್ (32) ಅವರ ಮೃತದೇಹ ಪತ್ತೆಯಾಗಿದೆ. ಇದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಬಸ್ ಕಂಡಕ್ಟರ್ ಸಾವನ್ನು ಖಂಡಿಸಿ ಬರೇಲಿಯಲ್ಲಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಮೋಹಿತ್ ಯಾದವ್ ಕೌಶಂಬಿಯಿಂದ ದೆಹಲಿಗೆ ತೆರಳುತ್ತಿದ್ದ ಉತ್ತರ ಪ್ರದೇಶದ ಸಾರಿಗೆ ಇಲಾಖೆ (ಯುಪಿಎಸ್‌ಆರ್‌ಟಿಸಿ)ಯ ಬಸ್‌ನ ಕಂಡಕ್ಟರ್ ಆಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೆಹಲಿಯಿಂದ ಕೌಶಂಬಿಗೆ ತೆರಳುವಾಗ ರಾಂಪುರ ಬಳಿ ಇತರೆ ಪ್ರಯಾಣಿಕರಿಗೆ ಮೂತ್ರ ವಿಸರ್ಜಿಸಲು ನಿಲ್ಲಿಸಿದ್ದರು. ಇದೇ ವೇಳೆ, ಇಬ್ಬರು ಮುಸ್ಲಿಂ ಪ್ರಯಾಣಿಕರು ನಮಾಝ್ ಮಾಡಲು ಅವಕಾಶ ಕೇಳಿದ್ದರು. ಕಂಡಕ್ಟರ್ ಮೋಹಿತ್ ಯಾದವ್ ಅವರು ಚಾಲಕ ಕೆ ಪಿ ಸಿಂಗ್ ಅವರಿಗೆ ಎರಡು ನಿಮಿಷಗಳ ಕಾಲ ಬಸ್ ನಿಲ್ಲಿಸುವಂತೆ ಹೇಳಿದ್ದರು ಮತ್ತು ಇಬ್ಬರು ಪ್ರಯಾಣಿಕರಿಗೆ ನಮಾಝ್ ಮಾಡಲು ಅವಕಾಶ ನೀಡಿದ್ದರು.

ಕೆಲವು ಪ್ರಯಾಣಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ವಿಡಿಯೋ ಕೂಡ ಮಾಡಿದ್ದರು. ಜೂನ್ 3, 2023ರಂದು ಈ ಘಟನೆ ಸಂಭವಿಸಿದ್ದು, ವಿಡಿಯೋ ದೂರಿನ ಆಧಾರದ ಮೇಲೆ ಕಂಡಕ್ಟರ್ ಮತ್ತು ಚಾಲಕನನ್ನು ಉತ್ತರ ಪ್ರದೇಶದ ಸಾರಿಗೆ ಇಲಾಖೆ (ಯುಪಿಎಸ್‌ಆರ್‌ಟಿಸಿ) ಅಧಿಕಾರಿಗಳು ಅಮಾನತು ಮಾಡಿದ್ದರು.

ಬಸ್‌ ನಿಲ್ಲಿಸಿ ಅಮಾನತಾಗಿದ್ದ ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮಾನತುಗೊಂಡ ನಂತರ ಬೇಸರದಿಂದಿದ್ದ ಕಂಡಕ್ಟರ್ ಮೋಹಿತ್ ಯಾದವ್, ಮಾನವೀಯತೆ ಮೆರೆದಿದ್ದಕ್ಕೆ ಈ ರೀತಿಯ ಶಿಕ್ಷೆಯೇ ಎಂದು ಯೋಚಿಸಿ, ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.

ಮೋಹಿತ್ ಭಾನುವಾರ (ಆಗಸ್ಟ್ 27) ರಾತ್ರಿ ನಾಪತ್ತೆಯಾಗಿದ್ದರು. ಅವರ ಮೃತದೇಹ ಆಗಸ್ಟ್ 28 ರಂದು ಅವರ ಮನೆ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊ ಆಧಾರದ ಮೇಲೆ ಮೋಹಿತ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಿಲ್ಲ. ಅಲ್ಲದೆ ಮೋಹಿತ್ ಯಾದವ್ ಮತ್ತು ಚಾಲಕ ಕೆ ಪಿ ಸಿಂಗ್ ತಮ್ಮ ಅಮಾನತು ವಿರುದ್ಧ ಮೇಲ್ಮನವಿ ಸಲ್ಲಿಸಿರಲಿಲ್ಲ. ಮೋಹಿತ್ ಯಾದವ್ ಮತ್ತು ಕೆ ಪಿ ಸಿಂಗ್ ವಿರುದ್ಧ ಅಧಿಕಾರಿಗಳು ತೆಗೆದುಕೊಂಡ ಕ್ರಮ ಸಮರ್ಥನೀಯವಲ್ಲ ಎಂದು ಯುಪಿಎಸ್‌ಆರ್‌ಟಿಸಿ ನೌಕರರ ಸಂಘ ಹೇಳಿದೆ.

ಮೋಹಿತ್​ ಸಾವಿನ ಸುದ್ದಿ ಈಗ ಉತ್ತರ ಪ್ರದೇಶದಲ್ಲಿ ವಿವಾದಕ್ಕೆಡೆ ಮಾಡಿಕೊಟ್ಟಿದೆ. ‘ಅಮಾನತು ಮಾಡಿದ್ದರಿಂದ ನನ್ನ ಪತಿ ತೀವ್ರ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೋಹಿತ್​ ಪತ್ನಿ ರಿಂಕಿ ಆರೋಪಿಸಿದ್ದಾರೆ.

“ಐದು ವರ್ಷಗಳ ಹಿಂದೆ ನಮ್ಮ ಮದುವೆಯಾಗಿತ್ತು. ಮದುವೆಯಾದಾಗಿನಿಂದ ನಾವು ಸಂತೋಷದಿಂದ ಇದ್ದೆವು. ಆದರೆ ಕೆಲಸದಿಂದ ತೆಗೆದು ಹಾಕಿದ್ದರಿಂದ ನನ್ನ ಪತಿ ದುಃಖದ ಮನಸ್ಥಿತಿಯಲ್ಲಿದ್ದರು. ಅವರು ಒತ್ತಡಕ್ಕೆ ಒಳಗಾಗಿದ್ದರು. ಭಾನುವಾರ ಸಂಜೆ ಮನೆಯಿಂದ ಹೊರಗೆ ಹೋಗಿದ್ದ ಅವರು ಮತ್ತೆ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಅವರ ಸಾವಿನ ಸುದ್ದಿ ನಮ್ಮ ಮನೆ ತಲುಪಿತ್ತು. ನಮಗೆ 4 ವರ್ಷದ ಮಗನಿದ್ದಾನೆ. ಮಾನವೀಯತೆ ಮೆರೆದಿದ್ದಕ್ಕೆ ಕೆಲಸ ಕಳೆದುಕೊಂಡಿದ್ದರು. ಇದರಿಂದಾಗಿ ಪತಿ ಪ್ರಾಣ ತೆತ್ತಿದ್ದಾರೆ” ಎಂದು ಮೋಹಿತ್ ಪತ್ನಿ ರಿಂಕಿ ಅಳಲು ತೋಡಿಕೊಂಡಿದ್ದಾರೆ.

“ನಮ್ಮ ಮನೆಯ ದೈನಂದಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನನಗೆ ಒಬ್ಬನೇ ಮಗನಿದ್ದ. ಈಗ ಮಾನವೀಯ ಕೆಲಸ ಮಾಡಿದ್ದಕ್ಕೆ ನನ್ನ ಮಗನನ್ನೂ ನನ್ನಿಂದ ಕಿತ್ತುಕೊಂಡಿದ್ದಾರೆ. ಕೆಲಸದಿಂದ ಅಮಾನತುಗೊಳಿಸಿದ ಮೇಲೆ ತುಂಬಾ ಬೇಸರದಲ್ಲಿದ್ದ’ ಎಂದು ಮೋಹಿತ್ ತಂದೆ ರಾಜೇಂದ್ರ ಯಾದವ್ ಕಣ್ಣೀರು ಸುರಿಸಿದ್ದಾರೆ.

ಈ ಘಟನೆಯನ್ನು ಖಂಡಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ‘ಧಾರ್ಮಿಕ ಪ್ರಾರ್ಥನೆಗಾಗಿ ಕೇವಲ ಎರಡು ನಿಮಿಷ ತಡ ಮಾಡಿದ ಕಾರಣಕ್ಕಾಗಿ ಯುಪಿ ಸಾರಿಗೆ ಸಂಸ್ಥೆಯು ಇಬ್ಬರು ನೌಕರರನ್ನು ಅಮಾನತುಗೊಳಿಸಿರುವುದು ಯಾವ ನ್ಯಾಯ. ಈ ಚಿತ್ರಹಿಂಸೆಯಿಂದ ಮನನೊಂದು ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಹಾರ್ದತೆಗೆ ಹೆಸರಾದ ಈ ದೇಶದಲ್ಲಿ ಸೌಹಾರ್ದತೆಗೆ ಜಾಗವಿಲ್ಲವೇ? ಇದು ದುರದೃಷ್ಟಕರ, ಖಂಡನೀಯ, ನಾಚಿಕೆಗೇಡಿನ ಸಂಗತಿ’ ಎಂದು ಟ್ವೀಟ್ ಮಾಡಿದ್ದಾರೆ.

ಈ ನಡುವೆ ಕೆಲವು ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಮೋಹಿತ್ ಯಾದವ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದು, ‘ಕ್ರೌಡ್ ಫಂಡಿಂಗ್’ ಮೂಲಕ ಜನರಿಂದ ನೆರವು ಯಾಚಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ಜಗತ್ತಿನಲ್ಲಿ ಇಂತಹ ಅಪರಾಧ ಭಾರತಕ್ಕೆ ಮಾತ್ರ ಸೀಮಿತ, ಕರುಣೆ ಇಲ್ಲದವರೀಗೆ ನಿಸರ್ಗವೇ
    ವೈರಿಯಾಗಿ ಬರಲೂಬಹುದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಚಿನ್ನಾಭರಣ: ಹಸ್ತಾಂತರ ಪ್ರಕ್ರಿಯೆಗೆ ನೀಡಿದ್ದ ತಡೆ ವಿಸ್ತರಿಸಿದ ಹೈಕೋರ್ಟ್‌

ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದ ಸುಪರ್ದಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ...

ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನೂ ಕೂಡ ಮರ್ಯಾದೆ ಕೊಡುವೆ: ಡಿ.ಕೆ. ಶಿವಕುಮಾರ್

"ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಈಗಲೂ ನೀಡುತ್ತಿದ್ದೇನೆ, ಮುಂದೆಯೂ...

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ಮೊದಲ ರ‍್ಯಾಂಕ್‌, 1016 ಮಂದಿ ತೇರ್ಗಡೆ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳನ್ನು...

‘ನಾನು ಭಯೋತ್ಪಾದಕನಲ್ಲ’; ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಸಂದೇಶ

ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ...