- ಏಕವಚನದಲ್ಲೇ ಬೈದಾಡಿಕೊಂಡ ಬಿಜೆಪಿ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ
- ಉಸ್ತುವಾರಿ ಸಚಿವರ ಎದುರಲ್ಲೇ ನಡೆದ ಕಾರ್ಯಕ್ರಮದಲ್ಲಿ ನಡೆದ ಘಟನೆ; ವಿಡಿಯೋ ವೈರಲ್
ಜನತಾ ದರ್ಶನ ಕಾರ್ಯಕ್ರಮವು ಸಂಸದ-ಶಾಸಕರ ನಡುವೆ ‘ಪೌರುಷ ದರ್ಶನ’ಕ್ಕೆ ಸಾಕ್ಷಿಯಾದ ಘಟನೆ ಕೋಲಾರದಲ್ಲಿ ನಡೆದಿದೆ.
ಇಂದು ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲಾರದಲ್ಲೂ ಕೂಡ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ನಡುವೆ ವೇದಿಕೆಯ ಮೇಲೆಯೇ ಮಾತಿನ ಚಕಮಕಿ ನಡೆದಿದ್ದು, ಬಹಿರಂಗವಾಗಿಯೇ ಕೈ – ಕೈ ಮಿಲಾಯಿಸುವ ಹಂತಕ್ಕೆ ಜನಪ್ರತಿನಿಧಿಗಳು ಮುಂದಾಗಿದ್ದರು. ಸಕಾಲಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿದ್ದರಿಂದ ಜಗಳ ತಪ್ಪಿದೆ.
ಕೋಲಾರ | 'ಜನತಾ ದರ್ಶನ'ದಲ್ಲಿ ಸಂಸದ-ಶಾಸಕನ 'ಪೌರುಷ ದರ್ಶನ'
— eedina.com (@eedinanews) September 25, 2023
ಬಿಜೆಪಿ ಸಂಸದ ಎಸ್ ಮುನಿಸ್ವಾಮಿ, ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ನಡುವೆ ಜಗಳ#JanathaDarshan #Kolar #MPMuniswamy #MLANarayanaswamy @CMofKarnataka @INCKarnataka @siddaramaiah @byrathi_suresh pic.twitter.com/wNoiOcPwhQ
ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ತಮ್ಮ ಭಾಷಣದ ವೇಳೆ ಅರಣ್ಯ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ಭೂಗಳ್ಳರನ್ನು ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದೀರಾ ಎಂದು ಕುಟುಕಿದರು.
ಇದರಿಂದ ಬೈರತಿ ಸುರೇಶ್ ಅವರ ಪಕ್ಕದಲ್ಲಿ ಕುಳಿತಿದ್ದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಕೆರಳಿದರು.
ಇಂದು ಕೋಲಾರ ಜಿಲ್ಲೆಯ ಸಾರ್ವಜನಿಕರಿಂದ ಕುಂದುಕೊರತೆಗಳು ಮತ್ತು ಅಹವಾಲನ್ನು ಸ್ವೀಕರಿಸುವ ಮೂಲಕ ಜಿಲ್ಲಾ ಜನತಾ ದರ್ಶನವನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಸಲಾಯಿತು. pic.twitter.com/GhgZ2TWfdO
— Byrathi Suresh (@byrathi_suresh) September 25, 2023
‘ನಿಮ್ಮಪ್ಪ ಭೂಗಳ್ಳ, ಯಾರಿಗೆ ಹೇಳ್ತಿಯಾ? ನಿಮ್ಮಪ್ಪನಿಗೆ ಹುಟ್ಟಿದ್ದರೆ ಸಾಬೀತು ಮಾಡು’ ಎಂದು ಸಂಸದ ಎಸ್ ಮುನಿಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಏಕವಚನದಲ್ಲಿಯೇ ಸವಾಲು ಹಾಕಿದರು. ಇದರಿಂದ ಕೆರಳಿದ ಸಂಸದ ಎಸ್ ಮುನಿಸ್ವಾಮಿ ಭಾಷಣ ಪೀಠವನ್ನು ಬಿಟ್ಟು ಶಾಸಕರತ್ತ ನುಗ್ಗಿ ಬಂದರು. ಈ ವೇಳೆ ಅಲ್ಲಿಯೇ ಇದ್ದ ಪೊಲೀಸರು ಸಂಸದರನ್ನು ತಡೆದು, ವೇದಿಕೆಯಿಂದ ಹೊರಕ್ಕೆ ಎಳೆದೊಯ್ದರು.
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಜನಪ್ರತಿನಿಧಿಗಳ ಈ ರೀತಿಯ ನಡೆಯನ್ನು ಖಂಡಿಸಿದ್ದಾರೆ.