ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಧ್ವನಿ ಪರೀಕ್ಷೆಗಾಗಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಮೊಹಮ್ಮದ್ ಶಫಿಯನ್ನು ಕರೆಸಿಕೊಂಡಿದ್ದಾರೆ.
ಎಫ್‌ಎಸ್‌ಎಲ್ ತಂಡದ ಅಧಿಕಾರಿಗಳು ಮೊಹಮ್ಮದ್ ಶಫಿ ನಾಶಿಪುಡಿಯವರನ್ನು ಹಾವೇರಿಯಿಂದ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ ತಡ ರಾತ್ರಿಯೇ ಶಫಿಯನ್ನು ಬೆಂಗಳೂರಿಗೆ ತರಲಾಗಿದ್ದು ಧ್ವನಿಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈ ಕುರಿತು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸಹ ಮಾಹಿತಿ ನೀಡಿದ್ದು,’ ಬುಧವಾರ ರಾತ್ರಿ ವಿಧಾನಸೌಧ ಪೊಲೀಸರು ಹಾವೇರಿಗೆ ಬಂದಿದ್ದರು. ಶಫಿ ನಾಶಿಪುಡಿ ಎಂಬ ವ್ಯಕ್ತಿಯನ್ನು ವಿಚಾರಣೆ ಮತ್ತು ಧ್ವನಿ ಪರೀಕ್ಷೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆರೋಪಿಯು ಯಾವುದೇ ಸಂಘಟನೆಗೆ ಸೇರಿದ ಮಾಹಿತಿ ಇಲ್ಲ’ ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಶಫಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ಕ್ರಮಕ್ಕೆ ಅಗ್ರಹಿಸಿದ್ದರು. ಈ ಆರೋಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮೊಹಮ್ಮದ್ ಶಫಿ, ಈ ಆರೋಪವನ್ನು ಅಲ್ಲಗಳೆದಿದ್ದರು. ನಾನು ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ತಾಯಿ ಆಣೆಗೂ ದೇಶದ್ರೋಹಿ ಘೋಷಣೆ ಕೂಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಶಫಿ ನಾಶಿಪುಡಿ ಯಾರು?
ಕಾಂಗ್ರೆಸ್ ಪಕ್ಷದ ನೂತನ ರಾಜ್ಯಸಭಾ ಸಂಸದ ನಾಸಿರ್ ಹುಸೇನ್ ಬೆಂಬಲಿಗ ಮೊಹಮ್ಮದ್ ಶಫಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಮೆಣಸಿನಕಾಯಿ ವ್ಯಾಪಾರಸ್ಥರು. ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಇದೇ ವ್ಯಕ್ತಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನೇ ಬಿಜೆಪಿ ನಾಯಕರು ವಿವಾದವನ್ನಾಗಿಸಿದ್ದಾರೆ. ಆದರೆ, ಕೆಲವೊಂದು ವಿಡಿಯೋಗಳಲ್ಲಿ ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿರುವುದು ಸ್ಪಷ್ಟವಾಗಿ ತಿಳಿದುಬಂದಿತ್ತು.
