ಇಸ್ರೇಲ್ ಹಾಗೂ ಹಮಸ್ ನಡುವಿನ ಸಂಘರ್ಷದ ನಡುವೆಯೇ ಅಮೆರಿಕದ ಚಿಕಾಗೋದಲ್ಲಿ ಪ್ಯಾಲೆಸ್ತೀನ್ ಮೂಲದ ಆರು ವರ್ಷದ ಮುಸ್ಲಿಂ ಬಾಲಕನಿಗೆ 71 ವರ್ಷದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ 26 ಬಾರಿ ಚಾಕು ಇರಿದು ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.
ಅಮೆರಿಕಾದ ಚಿಕಾಗೋದ ನೈರುತ್ಯಕ್ಕೆ ಸರಿಸುಮಾರು 65 ಕಿಮೀ ದೂರದಲ್ಲಿರುವ ಇಲಿನಾಯ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಬಾಲಕನ ತಾಯಿಗೂ ವ್ಯಕ್ತಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆಗೈಯ್ಯಲ್ಪಟ್ಟ ಬಾಲಕನನ್ನು ಆರು ವರ್ಷದ ಪ್ಯಾಲೆಸ್ತೀನಿಯನ್-ಅಮೆರಿಕನ್ ಬಾಲಕ ವಾದಿಯಾ ಅಲ್ ಫಯೋಮಿ ಎಂದು ಗುರುತಿಸಲಾಗಿದ್ದು, ಕೊಲೆಗೈದ ವ್ಯಕ್ತಿಯನ್ನು 71 ವರ್ಷದ ಜೋಸೆಫ್ ಝೂಬಾ ಎಂದು ಗುರುತಿಸಲಾಗಿದೆ. ಆರೋಪಿಯು ಬಾಲಕನ ಕುಟುಂಬ ವಾಸವಿದ್ದ ಮನೆಯ ಮಾಲೀಕನಾಗಿದ್ದು, ಮನೆಯ ನೆಲಮಹಡಿಯಲ್ಲಿ ಕುಟುಂಬ ಬಾಡಿಗೆಗೆ ವಾಸವಿದ್ದರು ಎಂದು ಚಿಕಾಗೋದ ಮಾಧ್ಯಮಗಳು ವರದಿ ಮಾಡಿದೆ.
We are shocked and disturbed to learn that a landlord in Chicago expressing anti-Muslim and anti-Palestinian views broke into a Muslim family’s apartment and attacked them with a knife, injuring the mother and killing her 6-year-old son, Wadea Al-Fayoume. @cairchicago will hold a… pic.twitter.com/N0ILuevq4n
— CAIR National (@CAIRNational) October 15, 2023
26 ಬಾರಿ ಇರಿತಕ್ಕೊಳಗಾದ ಬಾಲಕ ವಾದಿಯಾ ಅಲ್ ಫಯೋಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆತನ ತಾಯಿ (32) ಮೇಲೂ ಕೂಡ ಹಲ್ಲೆ ನಡೆಸಲಾಗಿದೆ. ಬದುಕುಳಿಯುವ ನಿರೀಕ್ಷೆಯಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವಿಲ್ ಕೌಂಟಿ ಶೆರಿಫ್ ಕಚೇರಿಯ ಹೇಳಿಕೆ ತಿಳಿಸಿದೆ.
ಮೃತಪಟ್ಟ ಬಾಲಕ ಎರಡು ವಾರಗಳ ಹಿಂದಷ್ಟೇ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದ ಎಂದು ತಿಳಿದುಬಂದಿದೆ.
ಬಾಲಕ ಮತ್ತು ಕುಟುಂಬ ವಾಸವಿದ್ದ ಮನೆ
ಕೊಲೆಗೈದ 71 ವರ್ಷದ ಜೋಸೆಫ್ ಝೂಬಾ ಮೇಲೆ ಭಾನುವಾರ ದ್ವೇಷದ ಅಪರಾಧದ ಆರೋಪ ಹೊರಿಸಲಾಯಿತು. ಇಸ್ಲಾಮಿಕ್ ನಂಬಿಕೆ ಮತ್ತು ಇಸ್ರೇಲ್ ಮತ್ತು ಹಮಸ್ ನಡುವಿನ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಮರೆಂಬ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಮನೆಯಲ್ಲೇ ಈ ದಾಳಿ ನಡೆದಿದ್ದು, ಎದೆ, ತಲೆ ಸೇರಿದಂತೆ ಹಲವು ಕಡೆ ಚಾಕುವಿನಿಂದ ಇರಿಯಲಾಗಿತ್ತು. ಶವ ಪರೀಕ್ಷೆಯ ಸಮಯದಲ್ಲಿ ಬಾಲಕನ ಹೊಟ್ಟೆಯಿಂದ 7 ಇಂಚಿನ ಬ್ಲೇಡ್ ಮಾದರಿಯ ಚಾಕುವನ್ನು ಹೊರ ತೆಗೆಯಲಾಗಿದೆ. ಇರಿತಕ್ಕೆ ಬಳಸಿದ್ದ ಚಾಕು ಮಿಲಿಟರಿಯವರು ಬಳಸುತ್ತಿರುವ ಚಾಕುವಿನ ಮಾದರಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
911 ತುರ್ತು ನಂಬರಿಗೆ ಬಾಲಕನ ತಾಯಿಯೇ ಕರೆ ಮಾಡಿದ್ದರಿಂದ ಕೂಡಲೇ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಬರುವ ವೇಳೆ ಮಹಿಳೆಯ ಮೇಲೂ 12 ಬಾರಿ ಇರಿಯಲಾಗಿತ್ತು. ಗಂಭೀರವಾಗಿ ಗಾಯವಾಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ಕೊಲೆಗೈದ ಆರೋಪಿ ಜೋಸೆಫ್ ಝೂಬಾ(71)
ಹುಡುಗ ಮತ್ತು ತಾಯಿ ಕಳೆದ ಎರಡು ವರ್ಷಗಳಿಂದ ಜೋಸೆಫ್ ಝೂಬಾ ಮನೆಯ ನೆಲಮಹಡಿಯನ್ನು ಬಾಡಿಗೆಗೆ ಪಡೆದು ವಾಸವಿದ್ದರು. ಈ ಘಟನೆ ನಡೆದ ಶನಿವಾರದವರೆಗೆ ಯಾವುದೇ ಸಮಸ್ಯೆಗಳು ಉದ್ಭವಿಸಿರಲಿಲ್ಲ ಎಂದು ಬಾಲಕ ವಾದಿಯಾ ತಂದೆ ತಿಳಿಸಿದ್ದಾರೆ.
Jill and I were sickened to learn of the brutal murder of a child and the attempted murder of the child’s mother yesterday in Illinois. Our condolences and prayers are with the family.
This act of hate against a Palestinian Muslim family has no place in America.
— President Biden (@POTUS) October 16, 2023
ಇನ್ನು ಘಟನೆಯ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್, ಇಲಿನಾಯ್ಸ್‌ನಲ್ಲಿ ಮಗುವಿನ ಕ್ರೂರ ಹತ್ಯೆ ಮತ್ತು ಮಗುವಿನ ತಾಯಿಯ ಹತ್ಯೆಯ ಪ್ರಯತ್ನದ ಬಗ್ಗೆ ತಿಳಿದು ಆಘಾತವಾಯಿತು. ಪ್ಯಾಲೆಸ್ತೀನ್ ಮುಸ್ಲಿಂ ಕುಟುಂಬದ ವಿರುದ್ಧದ ಇಂತಹ ದ್ವೇಷದ ಕೃತ್ಯಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ. ಇಸ್ಲಾಮೋಫೋಬಿಯಾ ಹಾಗೂ ಎಲ್ಲ ರೀತಿಯ ಧರ್ಮಾಂಧತೆ, ದ್ವೇಷವನ್ನು ತಿರಸ್ಕರಿಸಲು ಅಮೆರಿಕನ್ನರು ಒಗ್ಗೂಡಬೇಕು ಎಂದು ಪದೇ ಪದೇ ಹೇಳುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಚಿಕಾಗೋದಲ್ಲಿನ ಅಮೆರಿಕನ್-ಇಸ್ಲಾಮಿಕ್ ಸಂಬಂಧಗಳ ಮಂಡಳಿಯ ಅಧ್ಯಕ್ಷ ಅಹ್ಮದ್ ರೆಹಾಬ್ ಮಾತನಾಡಿದ್ದು, ಮನೆಯ ಮಾಲೀಕ ಮನೆಯ ಬಾಗಿಲು ತಟ್ಟಿದ್ದರಿಂದ ಹುಡುಗನ ತಾಯಿ ತೆರೆದಿದ್ದಾರೆ. ಮೊದಲು ಆಕೆಯನ್ನು ಉಸಿರುಗಟ್ಟಿಸಲು ಪ್ರಯತ್ನಿಸುತ್ತಾ, ‘ನೀವು ಮುಸ್ಲಿಮರು. ಹಾಗಾಗಿ ಸಾಯಬೇಕು’ ಎಂದು ಹೇಳಿದ್ದಾನೆ. ಆ ಬಳಿಕ ಚಾಕುವಿನಿಂದ ಇರಿದಿದ್ದಾನೆ. ಆ ಬಳಿಕ ಶೌಚಾಲಯಕ್ಕೆ ಹೋಗಿ 911 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಘಟನೆ ದ್ವೇಷ ಹರಡುತ್ತಿರುವ ಪರಿಣಾಮ ನಡೆದಿದೆ. ಇಂತಹ ಘಟನೆಯನ್ನು ಕೇವಲ ಖಂಡಿಸಿದರೆ ಸಾಕಾಗದು. ತಮ್ಮ ಮೇಲೂ ಈ ರೀತಿ ಆಗಬಹುದು ಎಂದು ಪ್ಯಾಲೆಸ್ತೀನ್ ಮೂಲದ ಅಮೆರಿಕನ್ನರು ಈ ಘಟನೆಯಿಂದ ಭಯಭೀತರಾಗಿದ್ದಾರೆ. ಇನ್ನು ಮುಂದೆ ನಡೆಯದಂತೆ ಅಮೆರಿಕನ್ನರು ಒಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.