ರಾಜಕಾರಣದಲ್ಲಿ ಸದಾ ದ್ವೇಷದ ಕುದುರೆಯೇರಿ ದಿಬ್ಬಣ ಹೊರಡುವ ಮದುಮಗನಂತೆ ಕಾಣುವ ಪ್ರಧಾನಿ ಮೋದಿಗೂ, ಪ್ರಜಾಪ್ರಭುತ್ವವೇ ಮುಖ್ಯವೆಂದು ಭಾವಿಸಿ, ಬಸವಣ್ಣವರ ಸಮಸಮಾಜ ನಿರ್ಮಾಣದ ಆಶಯದೊಂದಿಗೆ ಹೆಜ್ಜೆ ಹಾಕುತ್ತಿರುವ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೂ ಅಜಗಜಾಂತರವಿದೆ.
ಹೇಗೆ ಜೀವಪರ ಚಿಂತನೆಯನ್ನು ಜೀವ-ವಿರೋಧಿ ಚಿಂತನೆಗಳನ್ನು ಒಟ್ಟುಗೂಡಿಸಿ ತುಲನೇ ಮಾಡಲು ಸಾಧ್ಯವಿಲ್ಲವೋ ಹಾಗೇ ಮೋದಿ ವ್ಯಕ್ತಿತ್ವ ಮತ್ತು ಸಿದ್ದರಾಮಯ್ಯ ವ್ಯಕ್ತಿತ್ವವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ. ಇಬ್ಬರದೂ ಪ್ರತ್ಯೇಕ ದಡ.
ಆದರೂ ರಾಜಕಾರಣದಲ್ಲಿ ಮೋದಿ-ಸಿದ್ದರಾಮಯ್ಯ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ರಾಜ್ಯದ ವಿಚಾರಕ್ಕೆ ಬಂದರೆ ಈ ಇಬ್ಬರು ನಾಯಕರನ್ನು ಹೊತ್ತು ಮರೆಸುವ ಅವರದೇ ಆದ ಅಭಿಮಾನಿ ವರ್ಗ ಕರ್ನಾಟಕದಲ್ಲಿದೆ.
ವಿಷಪೂರಿತ ಫಸಲು ಕಟಾವು ಮಾಡಿಕೊಂಡು ಜನರ ಕಷ್ಟ ಕಣ್ಣೀರಿನ ಸಮಾಧಿಗಳ ಮೇಲೆ ಸಿಂಹಾಸನ ಇರಿಸಿ ಗಹಗಹಿಸುವ ಕಟುಕ ರಾಜಕಾರಣದ ಕೃಷಿಕರು ಇತಿಹಾಸದಲ್ಲಿ ಕಂಡುಬರುತ್ತಾರೆ. ಮೋದಿ ಇದ್ಯಾವುದಕ್ಕೂ ಹೊರತಾಗಿಲ್ಲ. ದ್ವೇಷ, ಹಗೆತನ, ನಿಂದನೆ, ಪೂರ್ವಗ್ರಹಗಳನ್ನೇ ಬಿತ್ತಿ ಬೆಳೆದು ತಮ್ಮ ಅಧಿಕಾರ ಗದ್ದುಗೆಯನ್ನು ಗಟ್ಟಿ ಮಾಡಿಕೊಂಡವ ಸಾಲಿನಲ್ಲಿ ಮೋದಿ ಮೊದಲಿಗರಾಗಿ ಗುರುತಿಸಿಕೊಳ್ಳುತ್ತಾರೆ.
ಕೋವಿಡ್‌ನಂತಹ ಕೆಟ್ಟ ದಿನಗಳಲ್ಲಿ ಜನಸಾಮಾನ್ಯರ ಸುಖ ದುಃಖಗಳಿಗೆ ಮೂರು ಕಾಸಿನ ಕಿಮ್ಮತ್ತನ್ನೂ ಕೊಡದ ಪ್ರಧಾನಿ ಮೋದಿ ಅವರನ್ನು ರಾಜ್ಯದಲ್ಲಿ ಈಗಲೂ ಶೇ.40.81ರಷ್ಟು ಜನರು ಇಷ್ಟ ಪಡುತ್ತಾರೆ ಎಂದರೆ ನಂಬಲೇಬೇಕು. ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರಾರುವಕ್ಕಾದ ಸಮೀಕ್ಷೆಯನ್ನು ರಾಜ್ಯದ ಮುಂದಿಡುವ ಮೂಲಕ ದೇಶದ ಗಮನ ಸೆಳೆದಿದ್ದ ಈ ದಿನ.ಕಾಮ್ ಈ ಬಾರಿ ಕೂಡ ಲೋಕಸಭಾ ಚುನಾವಣೆಯ ಸಮೀಕ್ಷೆಯನ್ನು ರಾಜ್ಯದ ಮುಂದಿಟ್ಟಿದೆ. ಈ ಸಮೀಕ್ಷೆಯ ಭಾಗವಾಗಿ ಪ್ರಧಾನಿ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಬ್ಬರಲ್ಲಿ ಯಾರು ಹೆಚ್ಚು ಇಷ್ಟ ನಿಮಗೆ ಎಂದು ರಾಜ್ಯದ ಮತದಾರರನ್ನು ಕೇಳಿದಾಗ, ಮೋದಿ ಅವರನ್ನು ಶೇ.40.81ರಷ್ಟು ಇಷ್ಟ ಪಡುತ್ತೇವೆ ಎಂದು ರಾಜ್ಯದ ಮತದಾರರು ತಿಳಿಸಿದ್ದಾರೆ.
ಮೋದಿಗಿಂತಲೂ ಹೆಚ್ಚು ಸಿದ್ದರಾಮಯ್ಯ ಇಷ್ಟ
ಸಿಎಂ ಸಿದ್ದರಾಮಯ್ಯ ಅವರನ್ನು ಮೋದಿಗಿಂತಲೂ ಶೇ.2ರಷ್ಟು ಹೆಚ್ಚು ಜನ ಇಷ್ಟಪಡುವವರು ರಾಜ್ಯದಲ್ಲಿದ್ದಾರೆ. ಅಂದರೆ ಶೇ.42.27ರಷ್ಟು ರಾಜ್ಯದ ಮತದಾರರಿಗೆ ಸಿದ್ದರಾಮಯ್ಯ ಎಂದರೆ ಬಹಳ ಅಚ್ಚುಮೆಚ್ಚು. ಸಿದ್ದರಾಮಯ್ಯ ಅವರು ಹೇಗೆ ಅವರ ಅಭಿಮಾನಿ ವರ್ಗದಲ್ಲಿ ನೆಲೆಯೂರಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ 2022ರಲ್ಲಿ ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮೋತ್ಸವ’ ಹೊಸ ದಾಖಲೆಯನ್ನೇ ನಿರ್ಮಿಸಿದೆ.
ಯುವ ಸಮೂಹವೇ ಹೆಚ್ಚು
ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸುಮಾರು 20 ಲಕ್ಷ ಜನ ಪಾಲ್ಗೊಂಡಿರುವ ಸಾಧ್ಯತೆ ಇತ್ತು ಎಂದು ಆಗ ಪೊಲೀಸ್ ಮೂಲಗಳು ತಿಳಿಸಿವೆ. ಮುಖ್ಯವಾಗಿ 18-30 ವರ್ಷದೊಳಗಿನ ಯುವ ಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಗಮನಾರ್ಹ. ಸಿದ್ದರಾಮಯ್ಯ ಅವರ ವರ್ಚಸ್ಸು ಕೂಡ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಲು ಮುಖ್ಯ ಮೆಟ್ಟಿಲಾಯಿತು.
ಮೋದಿ-ಸಿದ್ದರಾಮಯ್ಯ ಇಬ್ಬರೂ ಇಷ್ಟವಿಲ್ಲ ಎಂದು ಹೇಳುವ ಸಂಖ್ಯೆ ರಾಜ್ಯದಲ್ಲಿ ಶೇ.4.17ರಷ್ಟಿದ್ದರೆ, ಈ ಬಗ್ಗೆ ಪ್ರತಿಕ್ರಿಯೆ ಕೊಡದೇ ಇರುವವರ ಸಂಖ್ಯೆ ಶೇ.5.01ರಷ್ಟು.
ಮಹಿಳೆಯರು ಕೂಡ ಸಿದ್ದರಾಮಯ್ಯಗೆ ಜೈ
ಸಿದ್ದರಾಮಯ್ಯ ಅವರನ್ನು ಶೇ.45.04ರಷ್ಟು ಮಹಿಳೆಯರು ಇಷ್ಟಪಟ್ಟರೆ, ಮೋದಿ ಅವರನ್ನು ಶೇ.36.65ರಷ್ಟು ಇಷ್ಟ ಪಡುತ್ತಾರೆ. ಇಬ್ಬರೂ ಇಷ್ಟವೆಂದು ಶೇ.8.54ರಷ್ಟು ಹೇಳಿದರೆ, ಶೇ.5.42ರಷ್ಟು ಗೊತ್ತಿಲ್ಲ ಎಂದಿದ್ದಾರೆ. ಇಬ್ಬರೂ ನಾಯಕರು ಇಷ್ಟವಿಲ್ಲ ಎಂದು ಶೇ.3.99 ರಷ್ಟು ಮಹಿಳೆಯರು ಹೇಳಿದ್ದಾರೆ.
ಪುರುಷ ಮತದಾರರ ಅಭಿಪ್ರಾಯವೇನು?
ನರೇಂದ್ರ ಮೋದಿ ಅವರನ್ನು ಶೇ.44.36ರಷ್ಟು ಮತ್ತು ಸಿದ್ದರಾಮಯ್ಯ ಅವರನ್ನು ಶೇ.39.59ರಷ್ಟು ಇಷ್ಟ ಪಡುತ್ತೇವೆ ಎಂದು ಪುರುಷ ಮತದಾರರು ಹೇಳಿದ್ದಾರೆ. ಇಬ್ಬರನ್ನೂ ಇಷ್ಟ ಪಡುವುದಾಗಿ ಶೇ.7.07ರಷ್ಟು, ಗೊತ್ತಿಲ್ಲ ಎಂದು ಶೇ.4.66ರಷ್ಟು ಹಾಗೂ ಇಬ್ಬರೂ ನಾಯಕರು ಇಷ್ಟವಿಲ್ಲ ಎಂದು ಶೇ.4.32ರಷ್ಟು ಪುರುಷ ಮತದಾರರು ಅಭಿಪ್ರಾಯಪಟ್ಟಿದ್ದಾರೆ.
ಯುವ ಮತದಾರರಿಗೆ ಮೋದಿ ಇಷ್ಟ
18-25 ವರ್ಷದೊಳಗಿವ ಯುವ ಮತದಾರರು ಮೋದಿ ಅವರನ್ನು ಹೆಚ್ಚು ಇಷ್ಟ ಪಟ್ಟಿದ್ದಾರೆ. ಶೇ.45.05ರಷ್ಟು ಮೋದಿಯನ್ನು ಇಷ್ಟ ಪಟ್ಟರೆ, ಸಿದ್ದರಾಮಯ್ಯರನ್ನು ಶೇ.38.42ರಷ್ಟು ಯುವ ಮತದಾರರು ಇಷ್ಟಪಟ್ಟಿದ್ದಾರೆ. ಇಬ್ಬರೂ ನಾಯಕರು ಇಷ್ಟವೆಂದು ಶೇ.6.97ರಷ್ಟು, ಇಬ್ಬರೂ ಇಷ್ಟವಿಲ್ಲವೆಂದು ಶೇ.4.38 ಹಾಗೂ ಈ ಬಗ್ಗೆ ಮಾತೇ ಬೇಡ ಎನ್ನುವವರು ಶೇ.5.18ರಷ್ಟು ಯುವ ಮತದಾರರಿದ್ದಾರೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.