ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ಅಶ್ಲೀಲ ವಿಡಿಯೋ ಸಂಗ್ರಹದ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ನ ಮಹಾನ್ ನಾಯಕನ ಕೈವಾಡವಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಇಡೀ ಪ್ರಕರಣದ ಮೂಲ ಪ್ರಜ್ವಲ್ ರೇವಣ್ಣನವರ ಕಾರ್ ಡ್ರೈವರ್ ಕಾರ್ತಿಕ್. ಅವರು ಏಕೆ ಪೆನ್ ಡ್ರೈವ್ ನಲ್ಲಿ ಪ್ರಜ್ವಲ್ ವಿಡಿಯೋಗಳನ್ನು ಹಾಕಿಕೊಂಡರು? ಆನಂತರ ಅವರು ಯಾರನ್ನು ಸಂಪರ್ಕಿಸಿದರು ಎಂಬಿತ್ಯಾದಿ ಮಾಹಿತಿ ಕೆದಕಿದರೆ ಅದರ ಹಿಂದೆ ದೊಡ್ಡ ಕಥೆಯೇ ಇದೆ. ಇದು ಕೂಡ ಎಸ್ಐಟಿ ತನಿಖೆಯಿಂದ ತಿಳಿದುಬರಲಿ” ಎಂದರು.
“ಪ್ರಜ್ವಲ್ ವಿರುದ್ಧ ದೇವರಾಜೇಗೌಡರು ಕೇಸ್ ಹಾಕಿದ್ದು ಅದಕ್ಕಾಗಿ ವರ್ಷಗಟ್ಟಲೆ ಹೋರಾಟ ಮಾಡಿದ್ದಾರೆ. ಹಾಗಾಗಿ, ಕಾರ್ತಿಕ್ ಅವರು ದೇವರಾಜೇ ಗೌಡರ ಬಳಿಗೆ ಹೋಗಿದ್ದಾರೆ. ಅದಕ್ಕೂ ಮೊದಲು ಅವರು ಕಾಂಗ್ರೆಸ್ಸಿನ ಆ ಮಹಾನ್ ನಾಯಕನಿಗೆ ಪೆನ್ ಡ್ರೈವ್ ಮುಟ್ಟಿಸಿ, ಅವರಿಗೆ ವಿಷಯ ತಿಳಿಸಿದ್ದರು” ಎಂದರು.
“ಕಾರ್ತಿಕ್ ಎಂಬ ಕಾರು ಚಾಲಕನಿಗೂ, ಪ್ರಜ್ವಲ್ ರೇವಣ್ಣನವರಿಗೂ ಮೊದಲೇ ದ್ವೇಷವಿತ್ತು. ಆ ಹಿನ್ನೆಲೆಯಲ್ಲಿ ಕಾರ್ತಿಕ್ ಅವರು ಹಳೆಯ ವಿಡಿಯೋಗಳನ್ನು ಪೆನ್ ಡ್ರೈವ್ ನಲ್ಲಿ ಇಟ್ಟಿದ್ದರು. ಆ ಪೆನ್ ಡ್ರೈವ್ ಅವರನ್ನು ಹಾಸನದಲ್ಲಿರುವ ಬಿಜೆಪಿ ನಾಯಕ ದೇವರಾಜೇಗೌಡರಿಗೆ ತೋರಿಸಿದ್ದರು” ಎಂದು ಹೇಳಿದರು.
“ಕಾಂಗ್ರೆಸ್ನ ಆ ಮಹಾನ್ ನಾಯಕ ಪೆನ್ ಡ್ರೈವ್ ನಲ್ಲಿರುವ ಎಲ್ಲಾ ವಿಡಿಯೋಗಳನ್ನು ಗಮನಿಸಿ ಸಮಯ ಬಂದಾಗ ಅದನ್ನು ಹೊರತರಲು ಪ್ಲ್ಯಾನ್ ಮಾಡಿದ್ದರು. ಅದರಂತೆ, ಚುನಾವಣೆ ಬಂದಾಗ ಅದನ್ನು ರಿಲೀಸ್ ಮಾಡಿದ್ದಾರೆ. ಅದಕ್ಕಾಗಿ ಬಾರೀ ಹಣವನ್ನೂ ಖರ್ಚು ಮಾಡಿದ್ದಾರೆ” ಎಂದು ಕಿಡಿಕಾರಿದರು.
“ಆ ಮಹಾನ್ ನಾಯಕ ಹೀಗೆ ಸಂತ್ರಸ್ತ ಮಹಿಳೆಯರ ವಿಡಿಯೋಗಳನ್ನು ಹಂಚುವ ಮೂಲಕ ಆ ಮಹಿಳೆಯರಿಗೆ ಎಂಥ ಗೌರವ ಕೊಟ್ಟಿದ್ದಾರೆ ಎಂಬುದು ಇಲ್ಲೇ ಗೊತ್ತಾಗುತ್ತೆ. ಪೆನ್ ಡ್ರೈವ್ ಗಳನ್ನು ಯಾವ ರೀತಿ ಹಾಸನದಲ್ಲಿ ಚರ್ಚೆ ಮಾಡಿದರು, ಇಂತಹ ಎಲ್ಲಾ ವಿಚಾರಗಳನ್ನು ಎಸ್ ಐಟಿ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
“ಪ್ರಜ್ವಲ್ ರೇವಣ್ಣ ಅವರ ಸಂಗತಿಯನ್ನು ಅಮಿತ್ ಶಾ ಅವರು ನಮಗೆ ಬಿಟ್ಟಿದ್ದಾರೆ. ಈ ಬಗ್ಗೆ ಗೊಂದಲ ಬೇಡ. ಕಾಂಗ್ರೆಸ್ನವರು ನಮ್ಮ ಮನೆ ಮುಂದೆ ಬಂದು ಯಾಕೆ ಪ್ರತಿಭಟಿಸ್ತಾರೆ? ಮಹಾನ್ ನಾಯಕನ ಮುಂದೆ ಹೋಗಿ ಪ್ರತಿಭಟಿಸಲಿ. ನಾವು ಸಂತ್ರಸ್ತ ಮಹಿಳೆಯರ ಪರವಾಗಿ ಇದ್ದೇನೆ. ನರೇಂದ್ರ ಮೋದಿ ಅವರನ್ನು ಸುಮ್ಮನೇ ಯಾಕೆ ಎಳೆದು ತರುತ್ತೀರಿ?” ಎಂದು ಪ್ರಶ್ನಿಸಿದರು.
