- 23 ಕೋಟಿ ಆಸ್ತಿಯ ವಿಚಾರ ಮುಚ್ಚಿಟ್ಟಿದ್ದಲ್ಲದೇ, ಆದಾಯ ತೆರಿಗೆ ಕಟ್ಟದೇ ವಂಚಿಸಿದ್ದಾರೆ
- ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವೆ, ಖುಷಿಯಾಗಿದೆ ಎಂದ ಜೆಡಿಎಸ್ ಶಾಸಕ ಮಂಜು!
ನಾವು ಮಾಡಿದ ಎಲ್ಲ ಆರೋಪಗಳಿಗೂ ಪೂರಕ ದಾಖಲಾತಿಗಳನ್ನು ಒದಗಿಸಿ ಸಾಬೀತುಪಡಿಸಿದ್ದೆವು. ನಮ್ಮ ಹೋರಾಟಕ್ಕೆ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಮಂಜು ಅವರಿಗೂ ನೋಟಿಸ್ ನೀಡುವ ಮೂಲಕ ಪಕ್ಷಾಂತರಿಗಳಿಗೆ ಹೈಕೋರ್ಟ್ ಆದೇಶ ಸ್ಪಷ್ಟ ಸಂದೇಶ ನೀಡಿದೆ ಎಂದು ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹಗೊಂಡ ಪ್ರಕರಣದ ದೂರುದಾರ ವಕೀಲ ಜಿ ದೇವರಾಜೇಗೌಡ ಹೇಳಿದರು.
ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚುನಾವಣೆಯಲ್ಲಿ ನಿಲ್ಲಬೇಕಾದ ವ್ಯಕ್ತಿ ಸ್ವಚ್ಛವಾಗಿ ಇರಬೇಕು ಎಂಬ ಸಂದೇಶವನ್ನು ಕೋರ್ಟ್ ತನ್ನ ತೀರ್ಪಿನ ಮೂಲಕ ನೀಡಿದೆ. 23 ಕೋಟಿ ಆಸ್ತಿಯ ವಿಚಾರ ಮುಚ್ಚಿಟ್ಟಿದ್ದರು. ಬ್ಯಾಂಕಿನಲ್ಲಿದ್ದ ಹಣದ ವಿವರವನ್ನೂ ತಪ್ಪಾಗಿ ಚುನಾವಣಾ ಆಯೋಗಕ್ಕೆ ಕೊಟ್ಟಿದ್ದರು” ಎಂದು ತಿಳಿಸಿದರು.
“23 ಕೋಟಿ ಆಸ್ತಿಯ ವಿಚಾರ ಮುಚ್ಚಿಟ್ಟಿದ್ದಲ್ಲದೇ, ಆದಾಯ ತೆರಿಗೆ ಸರಿಯಾಗಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದರು. ಇದೆಲ್ಲವನ್ನು ನಾವು ಸಾಬೀತುಪಡಿಸಿದ್ದೇವೆ. ಅಷ್ಟೇ ಅಲ್ಲದೇ ಚುನಾವಣಾ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಅವರ ತಂದೆ 200ಕ್ಕೂ ಹೆಚ್ಚು ಕಳ್ಳ ವೋಟುಗಳನ್ನು ಹಾಕಿಸಿದ್ದರು. ಅವರು ಜನರಿಗೆ ಹಣ ಹಂಚುವ ದೃಶ್ಯವೂ ಸೆರೆಯಾಗಿತ್ತು. ಇದರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಬಾವಿಕೆರೆ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ನೋಂದಣಿ ಮಾಡಿಕೊಂಡಿದ್ದರು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಅಕ್ರಮ | ಪ್ರಜ್ವಲ್ ಜೊತೆಗೆ ಎಚ್ ಡಿ ರೇವಣ್ಣ, ದೂರುದಾರ ಎ ಮಂಜುಗೂ ಶಾಕ್ ಕೊಟ್ಟ ಹೈಕೋರ್ಟ್!
“ನನ್ನ ಜೊತೆಗೆ ದೂರುದಾರರಾಗಿದ್ದ ಆಗಿನ ಬಿಜೆಪಿಯ ಪರಾಜಿತ ಅಭ್ಯರ್ಥಿ, ಈಗಿನ ಅರಕಲಗೂಡು ಜೆಡಿಎಸ್ ಶಾಸಕ ಎ ಮಂಜು ಅವರ ವಿರುದ್ಧ ಪ್ರಜ್ವಲ್ ರೇವಣ್ಣ ಅವರು ಪ್ರತಿದೂರು ನೀಡಿದ್ದರು. ಅದಕ್ಕೆ ಭಯಬಿದ್ದು, ಬಳಿಕ ರಾಜಿಯಾಗಿ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದರು. ಆಗ ಈ ಪ್ರಕರಣ ವಜಾ ಆಗುತ್ತೆ ಎಂದು ಎಲ್ಲರೂ ಹೇಳಿದ್ದರು. ಆದರೆ ಈಗ ರಾಜ್ಯದ ಜನರಿಗೆ ಎಲ್ಲವೂ ಗೊತ್ತಾಗಿದೆ. ಪ್ರಜ್ವಲ್ ರೇವಣ್ಣ ನೀಡಿದ್ದ ಪ್ರತಿದೂರು ಈಗ ಎ ಮಂಜು ಅವರಿಗೇ ಕಂಟಕವಾಗಿದೆ. ಅವರನ್ನೂ ಅನರ್ಹಗೊಳಿಸಲು ಹೈಕೋರ್ಟ್ ಆದೇಶದ ಪ್ರತಿ ಸಹಿತ ಚುನಾವಣಾ ಆಯೋಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುತ್ತೇವೆ” ಎಂದು ದೂರುದಾರ ವಕೀಲ ಜಿ ದೇವರಾಜೇಗೌಡ ತಿಳಿಸಿದರು.
“ನನಗೆ ಪ್ರಾಣ ಬೆದರಿಕೆ ಇತ್ತು. ಎಸ್ಪಿ ಅವರು ರಕ್ಷಣೆ ನೀಡುವ ಉದ್ದೇಶದಿಂದ ನನಗೆ ಗನ್ಮ್ಯಾನ್ ಕೂಡ ಕೊಟ್ಟಿದ್ದರು. ಒಬ್ಬ ವಕೀಲನನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ ಎಂಬ ನಂಬಿಕೆ ನನಗಿತ್ತು. ವಕೀಲನ ಮೇಲೆ ಹಲ್ಲೆ ನಡೆಸಿದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸ್ನೇಹಿತರು, ವಕೀಲ ಮಿತ್ರರು ನನ್ನ ಬೆಂಬಲಕ್ಕೆ ನಿಂತಿದ್ದರು. ರಾಜ್ಯದ ಪೊಲೀಸ್ ಇಲಾಖೆಗೆ ನಾನು ವಿಶೇಷ ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.
ಇದನ್ನು ಓದಿ: ಜೆಡಿಎಸ್ಗೆ ಬಿಗ್ ಶಾಕ್ : ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ
“ರೇವಣ್ಣ ಅವರ ಕುಟುಂಬ ಎಷ್ಟು ಅಕ್ರಮ, ಭ್ರಷ್ಟಾಚಾರ ಎಸಗಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಸಾಬೀತುಪಡಿಸುತ್ತೇನೆ. ನನ್ನ ಹೋರಾಟ ಮುಂದುವರಿಸುತ್ತೇನೆ. ರೇವಣ್ಣ ಅವರ ಕುಟುಂಬದಿಂದಾಗಿ ಎಷ್ಟು ಕುಟುಂಬಗಳ ಜೀವನ ಹಾಳಾಗಿದೆ. ಯಾರ್ಯಾರಿಗೆ ಅನ್ಯಾಯ ಆಗಿದೆ ಎಂಬ ಬಗ್ಗೆ ರಾಜ್ಯದ ಜನತೆ ಮುಂದೆ ಹೇಳುತ್ತೇನೆ” ಎಂದು ಜಿ ದೇವರಾಜೇಗೌಡ ತಿಳಿಸಿದರು.

ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಸಂದರ್ಭ ಎ.ಮಂಜು
ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವೆ, ಖುಷಿಯಾಗಿದೆ ಎಂದ ಜೆಡಿಎಸ್ ಶಾಸಕ ಎ ಮಂಜು!
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ್ದು, ಈ ವಿಚಾರವಾಗಿ ಜೆಡಿಎಸ್ ಶಾಸಕ, ದೂರುದಾರರೂ ಆಗಿರುವ ಎ.ಮಂಜು ಪ್ರತಿಕ್ರಿಯಿಸಿದ್ದು, ‘ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ’ ಎಂದು ಹೇಳಿದ್ದಾರೆ.
“ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವೆ. ಆದೇಶ ಖುಷಿ ನೀಡಿದೆ. ಸುಳ್ಳು ಮಾಹಿತಿ ನೀಡಿದ್ದರಿಂದ ಹೈಕೋರ್ಟ್ ಅವರನ್ನು ಅನರ್ಹಗೊಳಿಸಿದೆ” ಎಂದು ಮಂಜು ತಿಳಿಸಿದ್ದಾರೆ.
“ಅವರು ಸರಿಯಿದ್ದೇವೆ ಅನ್ನುವುದಾದರೆ ಕಾನೂನು ಹೋರಾಟ ಮಾಡಲಿ. ಸುಪ್ರೀಂನಲ್ಲಿ ಕಾನೂನು ಹೋರಾಟ ಮಾಡಿ ಸಮರ್ಥಿಸಿಕೊಳ್ಳಲಿ. ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರೆ ಶಿಕ್ಷೆ ಅನುಭವಿಸಲಿ. ಯಾರೇ ಆದರೂ ಸರಿ, ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು” ಎಂದು ಅರಕಲಗೂಡು ಶಾಸಕ ಎ ಮಂಜು ಹೇಳಿಕೆ ನೀಡಿದ್ದಾರೆ.