ಪ್ರಜ್ವಲ್ ರೇವಣ್ಣ ಪ್ರಕರಣ | ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲರ ಪರಿಷತ್‌ಗೆ ದೂರು

Date:

Advertisements

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಹೇಳಿಕೆ ನೀಡಿರುವ ವಕೀಲ ದೇವರಾಜೇಗೌಡ ನಿಯಮಾವಳಿಗಳ ವಿರುದ್ಧವಾಗಿ ನಡೆದುಕೊಂಡಿದ್ದು, ವಕೀಲ ವೃತ್ತಿಗೆ ಅಗೌರವ ತಂದಿದ್ದಾರೆ. ಕಕ್ಷಿದಾರ ನೀಡಿದ ಮಾಹಿತಿ ಮತ್ತು ದಾಖಲೆಗಳನ್ನು ಸಾರ್ವಜನಿಕಗೊಳಿಸಿ ಸಮಾಜದಲ್ಲಿ ಅಶಾಂತಿಯುಂಟು ಮಾಡಿರುವುದರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಲಾಗಿದೆ.

ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಟಿ.ಎಸ್. ಸತ್ಯಾನಂದ ಎಂಬುವವರು ರಾಜ್ಯ ವಕೀಲರ ಪರಿಷತ್ತಿಗೆ ದೇವರಾಜೇಗೌಡರ ವಿರುದ್ಧ ದೂರು ನೀಡಿದ್ದಾರೆ.

ತಮ್ಮ ದೂರಿನಲ್ಲಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ಘನತೆ ಮತ್ತು ಗೌರವವಿದೆ. ವಕೀಲ ವೃತ್ತಿ ಸದರಿ ವ್ಯವಸ್ಥೆಯ ಭಾಗವಾಗಿ ತನ್ನದೇ ಆದ ವೃತ್ತಿ ಗಾಂರ್ಭೀಯತೆಯನ್ನು ಹೊಂದಿದೆ. ವಕೀಲರಾದ ನಾವುಗಳು ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಾಂವಿಧಾನಿಕವಾಗಿ ಹಲವು ನಿಯಮಗಳನ್ನು ರೂಪಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಸಮಾಜದಲ್ಲಿ ಅತ್ಯಂತ ತಲೆತಗ್ಗಿಸುವ ಅಶ್ಲೀಲ ಪ್ರಕರಣವೊಂದು ಸಾರ್ವಜನಿಕವಾಗಿ ಬಹು ಚರ್ಚಿತವಾಗಿದೆ. ದಿನಂಪ್ರತಿ ಈ ವಿಚಾರ ಜನಮಾನಸದಲ್ಲಿ ತಲೆ ತಗ್ಗಿಸುವ ರೀತಿ ವರದಿಯಾಗುತ್ತಿದೆ. ಈ ಸಂಬಂಧ ಸದರಿ ಪ್ರಕರಣದ ಕೂಲಂಕಷ ತನಿಖೆಗೆ ಘನ ಸರ್ಕಾರ ವಿಶೇಷ ತನಿಖಾ ತಂಡವನ್ನು ರೂಪಿಸಿ ವಿಸ್ತೃತವಾದ ತನಿಖೆಯನ್ನು ಕೈಗೊಂಡಿದೆ” ಎಂದು ತಿಳಿಸಿದ್ದಾರೆ.

Advertisements

“ಈ ಪ್ರಕರಣಕ್ಕೆ ತಳಕು ಹಾಕಿಕೊಂಡ ಹಾಗೆ ಈ ಹಿಂದೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣರವರು ಹೂಡಿದ್ದ ಅಸಲು ದಾವೆಯಲ್ಲಿ ಎದುರುದಾರರಾಗಿರುವ ಕಾರ್ತಿಕ್ ಎಂಬುವವರ ಪರವಾಗಿ ವಕಾಲತ್ತಿನ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ, ದಾಖಲೆ ಹಾಗೂ ಕೆಲವು ಡಿಜಿಟಲ್ ಪೆನ್‌ಡ್ರೈವ್, ಸಿ.ಡಿಗಳನ್ನು ಪಡೆದು ಎಲ್ಲ ವಿಚಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪಡೆದುಕೊಂಡಿದ್ದ ಪ್ರಕರಣದ ಎದುರುದಾರರ ವಕೀಲರಾದ ದೇವರಾಜೇಗೌಡರು ತಮ್ಮ ಕಕ್ಷಿದಾರರು ನೀಡಿದ ಮಾಹಿತಿಗಳನ್ನು, ದಾಖಲಾತಿಗಳನ್ನು ಹಾಗೂ ಡಿಜಿಟಲ್ ಸಾಕ್ಷಿಗಳಲ್ಲಿ ದಾಖಲಾಗಿದ್ದ ವೀಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ವಕೀಲರ ವೃತ್ತಿಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು, ಘೋರ ಅಪರಾಧವೆಸಗಿದ್ದಾರೆ” ಎಂದು ತಿಳಿಸಿದ್ದಾರೆ.

“ಎಲ್ಲ ಮಾಹಿತಿಗಳನ್ನು ಸ್ವತಃ ವಕೀಲರಾದ ದೇವರಾಜೇಗೌಡರವರು ಮಾಧ್ಯಮಗಳಲ್ಲಿ ತಿಳಿಸಿರುವಂತೆ ಕಳೆದ ಒಂದೂವರೆ ವರ್ಷಗಳಿಂದ ತಮ್ಮ ಬಳಿ ಇಟ್ಟುಕೊಂಡಿದ್ದು, ಯಾವುದೇ ನ್ಯಾಯಾಲಯಕ್ಕೆ ಸದರಿ ಮಾಹಿತಿಗಳನ್ನು ಸಲ್ಲಿಸದೇ ಕಕ್ಷಿದಾರರ ಗಮನಕ್ಕೆ ತಾರದೇ ತಾವು ಪ್ರತಿನಿಧಿಸುವ ರಾಜಕೀಯ ಪಕ್ಷದ ಮುಖಂಡರುಗಳಿಗೆ ಪತ್ರ ಮುಖೇನ ಹಂಚಿಕೊಂಡು ರಾಜಕೀಯ ಲಾಭಗಳಿಸಲು ಪ್ರಯತ್ನಿಸಿದ್ದಾರೆ. ಹಲವು ಮಾಧ್ಯಮಗೋಷ್ಠಿಗಳಲ್ಲಿ ಸದರಿ ಡಿಜಿಟಲ್ ಮಾಹಿತಿಗಳನ್ನು ಮಾಧ್ಯಮದ ಮೂಲಕ ಬಹಿರಂಗಗೊಳಿಸುತ್ತಾ ವಕೀಲ ವೃತ್ತಿಯ ಪಾವಿತ್ರತೆಯನ್ನು ಹಾಳುಗೆಡವಿದ್ದಾರೆ” ಎಂದು ದೂರಿದ್ದಾರೆ.

Surya Mukund Raj and satyananda
ಪರಿಷತ್‌ಗೆ ದೂರು ಸಲ್ಲಿಸಿದ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಟಿ.ಎಸ್. ಸತ್ಯಾನಂದ

“ಭಾರತೀಯ ಸಾಕ್ಷಿ ಅಧಿನಿಯಮದ ಕಲಂ 126ರಂತೆ ಕಕ್ಷಿದಾರ ಮತ್ತು ವೃತ್ತಿಪರ ವಕೀಲರ ನಡುವೆ ನಡೆದ ಸಂಭಾಷಣೆ, ಸ್ವೀಕರಿಸಿದ ದಾಖಲೆ ಹಾಗೂ ಇನ್ನಿತರೆ ಮಾಹಿತಿಗಳನ್ನು ಕಕ್ಷಿದಾರನ ಒಪ್ಪಿಗೆ ಇಲ್ಲದೇ ಅದನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ ಹಾಗೂ ಸಾರ್ವಜನಿಕಗೊಳಿಸುವಂತಿಲ್ಲ. ಇದರ ಸ್ಪಷ್ಟ ಅರಿವು ವಕೀಲರಾದ ದೇವರಾಜೇಗೌಡರವರಿಗೆ ಇದ್ದರೂ, ಎಲ್ಲ ಮಾಹಿತಿಯನ್ನು ಹೊರಗೆಡವಿ ಹಲವು ಮಹಿಳೆಯರ ಮಾನಹಾನಿಗೆ ಪ್ರೇರಣೆ ನೀಡಿದ್ದಾರೆ. ಇದರ ಜೊತೆಗೆ ತನಿಖಾ ಸಂಸ್ಥೆಗಳ ಮೇಲೆ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡುತ್ತಾ ರಾಜಕೀಯ ದುರುದ್ದೇಶ ವ್ಯಕ್ತಪಡಿಸುತ್ತಿದ್ದಾರೆ” ಎಂದು ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಟಿ.ಎಸ್. ಸತ್ಯಾನಂದ ಪರಿಷತ್‌ಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ದೇವರಾಜೇಗೌಡರು ತಮ್ಮ ಕಕ್ಷಿದಾರ ಕಾರ್ತಿಕ್ ನೀಡಿದ ದಾಖಲಾತಿ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಅವರು ಸ್ವೀಕರಿಸಿದ ಮರು ಕ್ಷಣವೇ ನ್ಯಾಯಾಲಯಕ್ಕೆ ಅಥವಾ ಸಂಬಂಧಪಟ್ಟ ತನಿಖಾ ಸಂಸ್ಥೆಗೆ ಕಾನೂನು ರೀತಿ ಹಸ್ತಾಂತರಿಸಿ ಕ್ರಮ ಕೈಗೊಂಡಿದ್ದರೆ ಇಂದು ರಾಜ್ಯದಲ್ಲಿ ನಡೆಯುತ್ತಿರುವ ಅಶ್ಲೀಲ ಪ್ರಕರಣದ ಘಟನಾವಳಿಗಳು ಗೌಪ್ಯತೆಯಿಂದ ಕೂಡಿದ್ದು, ನ್ಯಾಯಾಲಯದ ಪರಿಧಿಯಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುತ್ತಿತ್ತು. ಸಿಆರ್‌ಪಿಸಿ ಕಲಂ 200ರಡಿ ಖಾಸಗಿ ದೂರು ದಾಖಲಿಸಿ ಆರೋಪಿಗೆ ನ್ಯಾಯಾಲಯದ ಮೂಲಕ ಸಮನ್ಸ್ ಜಾರಿಗೊಳಿಸಿ ಸೂಕ್ತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೆ ಈ ಪ್ರಕರಣದಲ್ಲಿ ಮಹಿಳೆಯ ಮಾನಹಾನಿಯನ್ನು ತಪ್ಪಿಸಬಹುದಿತ್ತು. ಆದರೆ ಇದೆಲ್ಲವನ್ನು ಮೀರಿ ತಮ್ಮ ರಾಜಕೀಯ ಎದುರಾಳಿಯಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣರವರ ವಿರುದ್ಧ ಅವರ ವಿರೋಧಿಗಳ ಜೊತೆ ಕೈಜೋಡಿಸಿ ತನ್ನ ಕಕ್ಷಿದಾರ ನೀಡಿದ ಡಿಜಿಟಲ್ ಮಾಹಿತಿಗಳನ್ನು ಪೆನ್‌ಡ್ರೈವ್ ಮೂಲಕ ಸಾರ್ವತ್ರಿಕಗೊಳಿಸಿ ಅಪರಾಧವೆಸಗಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಯನ್ನು ದುರುಪಯೋಗಪಡಿಸಿಕೊಂಡು ಇಂತಹ ದುಷ್ಟಕೃತ್ಯ ಎಸಗಿರುವ ದೇವರಾಜೇಗೌಡರವರು ವಕೀಲ ವೃತ್ತಿಯ ಪ್ರಾವಿತ್ರ್ಯತೆಗೆ ಧಕ್ಕೆಯನ್ನು ತಂದಿದ್ದಾರೆ” ಎಂದು ತಿಳಿಸಿದ್ದಾರೆ.

Devarajegowda Press Meet
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮೇ 6ರಂದು ಪತ್ರಿಕಾಗೋಷ್ಠಿ ನಡೆಸಿದ್ದ ವಕೀಲ ದೇವರಾಜೇಗೌಡ

“ಮೇ 6, 2024ರಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ವಕೀಲರ ವಸ್ತ್ರಸಂಹಿತೆಯ ದ್ಯೋತಕವಾದ ಕಪ್ಪು ಕೋಟ್ ಧರಿಸಿ ಸುದ್ದಿಗೋಷ್ಟಿ ನಡೆಸಿರುವ ದೇವರಾಜೇಗೌಡರವರು ಸ್ಪಷ್ಟವಾಗಿ ಮಾಧ್ಯಮಗಳ ಮುಂದೆ ತನ್ನ ಬಳಿ ಕಾರ್ತಿಕ್ ನೀಡಿದ್ದ ಡಿಜಿಟಲ್ ದಾಖಲಾತಿಗಳಲ್ಲಿ 2856 ಮಹಿಳೆಯರ ಅಶ್ಲೀಲ ಚಿತ್ರಗಳಿದೆ. ನನಗೆ ಕಾರ್ತಿಕ್‌ರವರು ವಕಾಲತ್ತು ನೀಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಸದರಿ ದೃಶ್ಯಾವಳಿಗಳು ತನ್ನ ಕಛೇರಿಯಲ್ಲಿ ತನ್ನನ್ನು ಭೇಟಿ ಮಾಡಲು ಬಂದಿದ್ದ ಕಕ್ಷಿದಾರರು ನೀಡುವ ಮಾಹಿತಿಯ ಸಂದರ್ಭದ ದೃಶ್ಯಾವಳಿಗಳು ಎಂಬುದನ್ನು ತಿಳಿಸಿರುತ್ತಾರೆ. ಅದೇ ರೀತಿ ಕೆಲವು ರಾಜಕಾರಣಿಗಳ ಜೊತೆ ತಾವು ನಡೆಸಿದ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಬಿಡುಗಡೆಗೊಳಿಸಿರುತ್ತಾರೆ. ಈ ಸಂಭಾಷಣೆಯಲ್ಲೂ ಕಾರ್ತಿಕ್‌ರವರು ಕಕ್ಷಿದಾರರಾಗಿ ಇವರಿಗೆ ನೀಡಿದ್ದ ಮಾಹಿತಿಗಳ ಸ್ಪಷ್ಟ ನಮೂದನ್ನು ತಿಳಿಸಿದ್ದು, ಅದನ್ನು ಉಪಯೋಗಿಸಿಕೊಂಡು ಪ್ರಕರಣಕ್ಕೆ ಸಂಬಂಧವಿಲ್ಲದ ಅಧಿಕಾರಸ್ತ ರಾಜಕಾರಣಿಗಳಿಂದ ಅನುಚಿತ ಲಾಭ ಪಡೆಯಲು ಅವಣಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

“ಒಬ್ಬ ವಕೀಲರಾಗಿ ತನ್ನ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ಕಾನೂನಿನಂತೆ ಕರ್ತವ್ಯ ನಿರ್ವಹಿಸಬೇಕಾದ ದೇವರಾಜೇಗೌಡರವರು, ತನ್ನ ಕಕ್ಷಿದಾರರ ಮಾಹಿತಿಗಳನ್ನು ಸಾರ್ವಜನಿಕಗೊಳಿಸಿ ಹಲವು ಕುಟುಂಬಗಳ ಮಹಿಳೆಯರ ಮಾನಹಾನಿ ಮಾಡುವುದರ ಜೊತೆಗೆ ಸದರಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾದಳದ ಅಧಿಕಾರಿಗಳ ವಿರುದ್ಧವೇ ಗುರುತರ ಆರೋಪಗಳನ್ನು ವ್ಯಕ್ತಪಡಿಸುತ್ತಾ ವಕೀಲ ವೃತ್ತಿಗೆ ಕಳಂಕ ತಂದಿದ್ದಾರೆ. ವಕೀಲ ವೃತ್ತಿಯನ್ನು ನಿರ್ವಹಿಸಲು ಮತ್ತು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ವಕೀಲರು ಬದ್ಧರಾಗಿ ಕರ್ನಾಟಕ ವಕೀಲರ ಪರಿಷತ್ತಿನಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳುವಾಗ ಪ್ರಮಾಣ ಮಾಡಿರುತ್ತೇವೆ. ಆದರೆ ವೃತ್ತಿಪರತೆಯನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಂಡು ಕಕ್ಷಿದಾರನ ಮಾಹಿತಿಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿರುವುದು ಕಾನೂನಿಗೆ ವಿರುದ್ಧವಾಗಿದೆ” ಎಂದು ವಕೀಲರ ಪರಿಷತ್‌ಗೆ ಸಲ್ಲಿಸಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿದ್ದೀರಾ? ಬೆಂಗಳೂರು | ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ವಿಜಯೇಂದ್ರ, ಮಾಳವಿಯಾಗೆ ನೋಟಿಸ್‌

“ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆದ್ಯತೆ ಮೇಲೆ ಪ್ರಕರಣವನ್ನು ನಿರ್ವಹಿಸಿ, ವಕೀಲ ದೇವರಾಜೇಗೌಡ ಹಾಗೂ ಅವರ ಕಕ್ಷಿದಾರರಾದ ಕಾರ್ತಿಕ್‌ರವರುಗಳ ಹೇಳಿಕೆಗಳನ್ನು ಪಡೆದು ವಿಚಾರಣೆ ನಡೆಸಿ, ಕಾನೂನು ರೀತಿಯ ಕ್ರಮ ಕೈಗೊಂಡು ವಕೀಲ ವೃತ್ತಿಯ ಪಾವಿತ್ರ್ಯತೆಯನ್ನು ಎತ್ತಿಹಿಡಿದು ಸಮಾಜದಲ್ಲಿ ವಕೀಲ ವೃತ್ತಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಿ” ಎಂದು ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಟಿ.ಎಸ್. ಸತ್ಯಾನಂದ ರಾಜ್ಯ ಪರಿಷತ್‌ಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X