ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದಡಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿರುವುದು ಮಹಿಳಾ ಅಧಿಕಾರಿಗಳು ಎಂಬುದು ವಿಶೇಷ.
ಪ್ರಜ್ವಲ್ ರೇವಣ್ಣಗೆ ಸ್ಪಷ್ಟ ಸಂದೇಶ ತಿಳಿಸಲೆಂದೇ ಎಸ್‌ಐಟಿ ಅಧಿಕಾರಿಗಳು ಮಹಿಳಾ ಪೊಲೀಸರನ್ನೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಕಳುಹಿಸಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಪ್ರಜ್ವಲ್ ಬಂಧಿಸಲು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಸೇರಿದಂತೆ ಐದು ಮಂದಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸಂತ್ರಸ್ತೆಯರಲ್ಲಿ ಧೈರ್ಯ ತುಂಬಲು ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ.
ಎಪ್ರಿಲ್ 28ರಂದು ದೇಶಬಿಟ್ಟು ಪಲಾಯನಗೈದಿದ್ದ ಪ್ರಜ್ವಲ್ 35 ದಿನಗಳ ಬಳಿಕ ಜರ್ಮನಿಯಿಂದ ನಗರದ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ 12.50 ಗಂಟೆಗೆ ಸುಮಾರಿಗೆ ಬಂದಿಳಿದಿದ್ದರು. ಕೂಡಲೇ ಇಮಿಗ್ರೇಶನ್ ಅಧಿಕಾರಿಗಳು ಮತ್ತು ಸಿಐಎಸ್‌ಎಫ್ ಪಡೆಗಳು ಆತನನ್ನು ಬಂಧಿಸಿ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿದೆ.
ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೆ ಎಸ್‌ಐಟಿ ತಂಡದಲ್ಲಿರುವ ಐಪಿಎಸ್ ಅಧಿಕಾರಿಗಳಾದ ಸುಮನ್ ಪನ್ನೇಕರ್ ಹಾಗೂ ಸೀಮಾ ಲಾಟ್ಕರ್ ಅವರ ಮುಂದಾಳತ್ವದ ಮಹಿಳಾ ತಂಡ ಅರೆಸ್ಟ್ ವಾರೆಂಟ್ ನೀಡಿ ಬಂಧಿಸಿತು. ನಂತರ ಮಹಿಳಾ ಪೊಲೀಸರು ತಮ್ಮ ವಾಹನದಲ್ಲಿ ಎಸ್‌ಐಟಿ ಕಚೇರಿಗೆ ಪ್ರಜ್ವಲ್ ರೇವಣ್ಣ ಅವರನ್ನು ಕರೆತಂದರು.
