ಸಂಸತ್ತಿನ ಮುಂಗಾರು ಅಧಿವೇಶನವು ಕಳೆದ ಜುಲೈ 20ರಂದು ಆರಂಭವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಣಿಪುರದ ಬಗ್ಗೆ ಮಾತನಾಡುವಂತೆ ವಿಪಕ್ಷಗಳ ಮೈತ್ರಿಕೂಟವು ಅವಿಶ್ವಾಸ ನಿರ್ಣಯ ಮಂಡಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲು ಲೋಕಸಭೆಗೆ ಆಗಮಿಸಿದ್ದಾರೆ.
ಈ ವೇಳೆ ಎನ್ಡಿಎ ಸದಸ್ಯರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿದರೆ, ವಿಪಕ್ಷಗಳ ಸದಸ್ಯರು ‘ಇಂಡಿಯಾ, ಇಂಡಿಯಾ’ ಎಂದರು.
ಪ್ರಧಾನಿ ಮೋದಿ ಆಗಮಿಸಿದ ವೇಳೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮಾತನಾಡುತ್ತಿದ್ದರು.
ಮೋದಿ ಆಗಮಿಸಿದ ಬಳಿಕ ಮಾತು ಮುಂದುವರಿಸಿದ ಅವರು, ನಮ್ಮ ಪ್ರಧಾನಿಯವರು ಮಾತನಾಡುವಂತೆ ಇಲ್ಲಿಗೆ ಕರೆಸಿದ್ದು ವಿಪಕ್ಷಗಳ ಅವಿಶ್ವಾಸ ನಿರ್ಣಯವಾಗಿತ್ತು. ಇದು ಪ್ರಜಾಪ್ರಭುತ್ವದ ಶಕ್ತಿ. ಪ್ರಧಾನಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ನಾವು ಯೋಚನೆ ಕೂಡ ಮಾಡಿರಲಿಲ್ಲ. ಆದರೆ ಮಣಿಪುರದ ಬಗ್ಗೆ ಒಂದು ಮಾತನಾಡಬೇಕೆಂಬುದಷ್ಟೇ ನಮ್ಮ ಆಗ್ರಹವಾಗಿತ್ತು. ಈ ಆಗ್ರಹ ಬಿಜೆಪಿ ನಾಯಕ ಮಾತನಾಡಬೇಕು ಎಂಬುದಲ್ಲ, ಬದಲಾಗಿ ದೇಶದ ಪ್ರಧಾನಿಯಾಗಿ ಅವರು ಮಾತನಾಡಬೇಕು ಎಂಬುದಾಗಿತ್ತು’ ಎಂದರು.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ದಿನದಿಂದಲೂ ಮಣಿಪುರ ವಿಚಾರವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಸದನದಲ್ಲಿ ಪ್ರಧಾನಿ ಹೇಳಿಕೆ ನೀಡಬೇಕೆಂದು ಬಿಗಿಪಟ್ಟು ಹಿಡಿದು ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಅವಿಶ್ವಾಸ ನಿರ್ಣಯವನ್ನು ಮಂಡಿಸಿತ್ತು.
ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ವಿಪಕ್ಷಗಳ ಪರವಾಗಿ ಆರಂಭಿಕ ಭಾಷಣಗೈದು, ಪ್ರಧಾನಿ ನರೇಂದ್ರ ಮೋದಿಯವರ ಮೌನವ್ರತವನ್ನು ಪ್ರಶ್ನಿಸಿದ್ದರು.