ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಖಂಡಿಸಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ನಾಯಕರು ಶನಿವಾರ ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಖರ್ಗೆ ನಿವಾಸಕ್ಕೆ ಮುತ್ತಿಗೆ ಹೋರಾಟ ಹಮ್ಮಿಕೊಂಡರು.
ಪ್ರತಿಭಟನೆಯಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ, ಸುನಿಲ್ ವಲ್ಯಾಪುರೆ, ಶಶೀಲ್ ಜಿ.ನಮೋಶಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಶಾಸಕರಾದ ಬಸವರಾಜ ಮತ್ತಿಮಡು, ಶರಣು ಸಲಗಾರ, ಮಾಜಿ ಸಂಸದ ಡಾ.ಉಮೇಶ ಜಾಧವ, ಮುಖಂಡರಾದ ಪಿ.ರಾಜೀವ್, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ ಸೇರಿ ಹಲವರು ಪಾಲ್ಗೊಂಡಿದ್ದರು.
ಜಗತ್ ವೃತ್ತದಲ್ಲಿ ಬೃಹತ್ ವೇದಿಕೆಯಲ್ಲಿ ಮಾತನಾಡಿದ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪಾಂಚಾಳ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಡೆತ್‌ನೋಟ್ ಓದಿ ಮಾತನಾಡಿದ ಎನ್ ಮಹೇಶ್, “ಡೆತ್ ನೋಟ್‌ನಲ್ಲಿ ಪ್ರಿಯಾಂಕ್ ಅವರ ಹೆಸರು ಬಂದಿದೆ. ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ’ ಎಂದು ಸವಾಲು ಹಾಕಿದರು. ‘ಪಾಂಚಾಳ್ ಕುಟುಂಬಸ್ಥರನ್ನು ನಿಮ್ಮ ಮನೆ ಮುಂದೆ ನಿಲ್ಲಿಸುತ್ತೇವೆ ಅವರಿಗೆ ಎಳನೀರು, ಚಹಾ ಕೊಡ್ತೀರಾ? ಬಿಜೆಪಿಗೆ ಸಂಸ್ಕಾರವಿದೆ, ನೈತಿಕವಾಗಿ ಜನ ಕೇಳುತ್ತಿದ್ದಾರೆ ಎಂದು ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು. ನಿಮ್ಮದೇ ಪಕ್ಷದ ನಾಗೇಂದ್ರ ಅವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಲಿಲ್ಲವಾ? ಅವರ ಹಿಂದೆ ರಾಜಕೀಯ ಒತ್ತಡ ಇಲ್ಲ ಎಂದು ರಾಜೀನಾಮೆ ಕೊಡಿಸಿದ್ದೀರಾ? ಖರ್ಗೆ ಮತ್ತು ಕುಟುಂಬಸ್ಥರ ನಿಜಾಮರಾಗಿ, ಇಲ್ಲಿನ ಪೊಲೀಸರು ರಜಾಕಾರರಾ” ಎಂದು ಪ್ರಶ್ನಿಸಿದರು.

ಖರ್ಗೆಯಿಂದ ತಂಪು ಪಾನೀಯ ವ್ಯವಸ್ಥೆ
ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಶನಿವಾರ ಪ್ರಿಯಾಂಕ್ ಖರ್ಗೆ ಅವರ ಮನಗೆ ಮುತ್ತಿಗೆ ಹಾಕಲು ಬರುವ ಬಿಜೆಪಿಯ ಮುಖಂಡರಿಗೆ ಎಳನೀರು, ಮಜ್ಜಿಗೆ, ನೀರು ವಿತರಣೆ ವ್ಯವಸ್ಥೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ತಂಪು ಪಾನೀಯ ವ್ಯವಸ್ಥೆ ಮಾಡುವ ಮೂಲಕ ಪ್ರತಿಭಟನೆ ಆಧಾರ ರಹಿತವಾಗಿದೆ ಎಂದು ತಿರುಗೇಟು ನೀಡಿದ್ದಾರೆ. ‘ಬಿಜೆಪಿ ಗುಂಡಾಗಿರಿಗೆ ನಮ್ಮ ಗಾಂಧಿಗಿರಿ’ ಹೆಸರಿನಲ್ಲಿ ಮುತ್ತಿಗೆ ಹಾಕಲು ಹೊರಟ ಬಿಜೆಪಿ ನಾಯಕರಿಗೆ ಕೈ ಮುಖಂಡರು, ಎಳನೀರು, ಶುಗರ್ ಲೆಸ್ ಕಾಫಿ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
“ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಸ್ತಕ್ಷೇಪ ಇಲ್ಲದಿದ್ದರೂ ಸಹ ಬಿಜೆಪಿ ನಾಯಕರು ರಾಜಕಾರಣ ಮಾಡುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನ ಟಾರ್ಗೆಟ್ ಮಾಡಿಕೊಂಡು ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ, ಹೋರಾಟ ಮಾಡುವುದಾದರೆ ಉಸ್ತುವಾರಿ ಸಚಿವರ ಕಚೇರಿಗೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕು, ಅದನ್ನು ಬಿಟ್ಟು ಮನೆಗೆ ಮುತ್ತಿಗೆ ಹಾಕಲು ಹೊರಟಿರುವುದು ಖಂಡನಾರ್ಹ. ಬಿಜೆಪಿ ಅವರದ್ದು ಗುಂಡಾಗಿರಿ, ನಮ್ಮದು ಗಾಂಧಿಗಿರಿ” ಎಂದು ಕಿಡಿಕಾರಿದರು.