ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಎಂಬ ಕೋಲ್ಮಿಂಚು: ಬದಲಾಗುವುದೇ ಭಾರತ ರಾಜಕಾರಣ?

Date:

Advertisements
ಪ್ರಿಯಾಂಕಾ ಉಟ್ಟ ಸೀರೆಯ ಶೈಲಿ, ಮುಖದ ಮೇಲಿನ ಮಂದಹಾಸ, ಹಿರಿಯರಿಗೆ ವಂದಿಸುವ ವಿನಯವಂತಿಕೆ, ಯಾರನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ, ಜೊತೆಗೆ ತಾನಾಗಿಯೇ ಒಲಿದು ಬಂದಿರುವ ವರ್ಚಸ್ಸು- ಇಂದಿರಾ ಗಾಂಧಿಯನ್ನು ಕಣ್ಮುಂದೆ ಕಡೆದು ನಿಲ್ಲಿಸಿದಂತಿತ್ತು. 

ಕೇರಳದ ಕಸುವಾ ಸೀರೆಯುಟ್ಟು ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ, ಒಂದು ಕ್ಷಣ ನೋಡುಗರನ್ನು ನಿಬ್ಬೆರಗಾಗಿಸಿದರು. ಆ ಗತ್ತು ಮತ್ತು ಗಾಂಭೀರ್ಯ ಕಂಡವರು, ಥೇಟ್ ಇಂದಿರಾ ಗಾಂಧಿಯೇ ಸಂಸತ್ತಿನೆಡೆಗೆ ನಡೆದು ಬರುತ್ತಿದ್ದಾರೇನೋ ಎನಿಸಿ, ತಮ್ಮ ಕಣ್ಣನ್ನು ತಾವೇ ನಂಬದಾದರು.

ಹೌದು, ಇಂದಿರಾ ಗಾಂಧಿಯವರು ಕೂಡ ಪ್ರಧಾನಮಂತ್ರಿಯಾಗಿದ್ದ ಆ ದಿನಗಳಲ್ಲಿ- ಆ ರಾಜಕೀಯ ಕಾಲಘಟ್ಟದಲ್ಲಿ- ಇದೇ ರೀತಿ ಸರಳವಾಗಿ ಸೀರೆಯನ್ನುಟ್ಟು, ನಗುಮುಖದೊಂದಿಗೆ ಸಂಸತ್ತಿಗೆ ಪ್ರವೇಶಿಸುತ್ತಿದ್ದರು. ಇಡೀ ಸದನ ಮೂಕವಿಸ್ಮಿತಗೊಂಡು ಇಂದಿರಾ ಅವರನ್ನು ನೋಡುತಿತ್ತು.

ಇಂದು, ಆ ಚಿತ್ರಣ ಮರುಕಳಿಸಿತ್ತು. ಪ್ರಿಯಾಂಕಾ ಉಟ್ಟ ಸೀರೆಯ ಶೈಲಿ, ಮುಖದ ಮೇಲಿನ ಮಂದಹಾಸ, ಹಿರಿಯರಿಗೆ ವಂದಿಸುವ ವಿನಯವಂತಿಕೆ, ಯಾರನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ, ಜೊತೆಗೆ ತಾನಾಗಿಯೇ ಒಲಿದು ಬಂದಿರುವ ವರ್ಚಸ್ಸು- ಇಂದಿರಾ ಗಾಂಧಿಯನ್ನು ಕಣ್ಮುಂದೆ ಕಡೆದು ನಿಲ್ಲಿಸಿದಂತಿತ್ತು. ಪ್ರಿಯಾಂಕಾ ಉಟ್ಟಿದ್ದ ಕಸುವಾ ಸೀರೆ ಕೇರಳದ, ಅದರಲ್ಲೂ ವಯನಾಡಿನ ಸಾಮಾನ್ಯರು ಉಡುವ ಸೀರೆಯಾಗಿತ್ತು. ಆ ಸೀರೆಯನ್ನು ಉಡುವ ಮೂಲಕ, ತಮ್ಮನ್ನು ಗೆಲ್ಲಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ರೀತಿ ಅದಾಗಿತ್ತು. ಇಂದಿರಾ ಗಾಂಧಿಯ ಪ್ರತಿರೂಪವೇ ಅಲ್ಲಿತ್ತು. ಸಹೋದರಿಯಲ್ಲಿ ಅಜ್ಜಿ ಕಂಡ ರಾಹುಲ್ ಗಾಂಧಿ, ಸಂಸತ್ತಿನಿಂದ ಹೊರಬಂದ ಪ್ರಿಯಾಂಕಾಳನ್ನು ಕ್ಷಣ ಕಾಲ ನಿಲ್ಲಿಸಿ, ತನ್ನ ಮೊಬೈಲ್‌ನಿಂದ ಫೋಟೋ ಕ್ಲಿಕ್ಕಿಸಿದ್ದು ವಿಶೇಷವಾಗಿತ್ತು.

Advertisements
GddiMWtXAAAJrLx

ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದಾಗ, ಅವರ ಸಹಾಯಕರಾಗಿದ್ದ ಮಖನ್ ಲಾಲ್ ಫೋತೆದಾರ್, ತಮ್ಮ ಆತ್ಮಚರಿತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಬಗ್ಗೆ ಇಂದಿರಾ ಗಾಂಧಿಯವರ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಇಂದಿರಾ ಗಾಂಧಿಯವರು ಮಾತನಾಡುತ್ತಾ, ‘ಜನರು ನನ್ನನ್ನು ಅವಳಲ್ಲಿ ನೋಡುತ್ತಾರೆ’ ಎಂದಿದ್ದು, ಇಂದು ನಿಜವಾಗಿದೆ.

ವಯನಾಡು ಕ್ಷೇತ್ರದಿಂದ ದಾಖಲೆ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಪಾರ್ಲಿಮೆಂಟ್ ಪ್ರವೇಶ ಪಡೆದ ಪ್ರಿಯಾಂಕಾ ಗಾಂಧಿ, ಕೈಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದ ಪ್ರತಿ ಹಿಡಿದುಕೊಂಡು ಬರುವ ಮೂಲಕ, ತಮ್ಮ ಪ್ರವೇಶವನ್ನು ಕೇವಲ ಒಂದು ರಾಜಕೀಯ ಕ್ಷಣವನ್ನಾಗಿಸದೆ ಅದೊಂದು ವಿಶೇಷ ಹೆಗ್ಗುರುತನ್ನಾಗಿ ಮಾಡಿದ್ದಾರೆ. ಒಂದು ದಿಟ್ಟ, ಸ್ಪಷ್ಟ ಸಂದೇಶವನ್ನು, ತಲುಪಿಸಬೇಕಾದವರಿಗೆ ತಲುಪಿಸಿದ್ದಾರೆ.

ಪ್ರಿಯಾಂಕಾ ಗಾಂಧಿ, ಭಾರತದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬದಲ್ಲಿ- ನೆಹರೂ-ಗಾಂಧಿಗಳ ಕುಟುಂಬದಲ್ಲಿ ಜನಿಸಿದವರು. ಇದು 1947ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಸಾಧಿಸಿದಾಗಿನಿಂದ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಕುಟುಂಬ. ಪ್ರಿಯಾಂಕಾರ ಮುತ್ತಜ್ಜ ಜವಹರಲಾಲ್ ನೆಹರೂ ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದರು(1947-64), ಮತ್ತು ಅವರ ಅಜ್ಜಿ ಇಂದಿರಾ ಗಾಂಧಿ, ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದರು(1966-77, 1980–84). ಆಕೆಯ ತಂದೆ, ರಾಜೀವ್ ಗಾಂಧಿ, ಒಂದು ಅವಧಿಗೆ (1984-89) ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವನ್ನು ತಾಯಿ ಸೋನಿಯಾ ಗಾಂಧಿಯವರು ಮತ್ತು ಸಹೋದರ ರಾಹುಲ್ ಗಾಂಧಿಯವರು ಮುನ್ನಡೆಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ

ಗಾಂಧಿ ಕುಟುಂಬದ ಇತಿಹಾಸವು ರಾಜಕೀಯವಾಗಿ ಪ್ರಕ್ಷುಬ್ಧ ಮತ್ತು ಆತಂಕದ ನೆರಳಿನಲ್ಲಿಯೇ ನಡೆದುಬಂದಿದೆ. 1984ರಲ್ಲಿ ಇಂದಿರಾ ಗಾಂಧಿಯವರು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. 1991ರಲ್ಲಿ ರಾಜೀವ್ ಗಾಂಧಿಯವರು ಚುನಾವಣಾ ರ್‍ಯಾಲಿಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಬಾಂಬ್ ದಾಳಿಗೆ ಸಿಲುಕಿ ಹತರಾದರು. ಅಜ್ಜಿ ಹತ್ಯೆಯಾದಾಗ ಪ್ರಿಯಾಂಕಾ ಗಾಂಧಿಗೆ ಕೇವಲ 12 ವರ್ಷ. ಆ ಆಘಾತದಿಂದ ಚೇತರಿಸಿಕೊಂಡು ಹೊರಬರುವಷ್ಟರಲ್ಲಿ, ತಮ್ಮ 19ನೇ ವಯಸ್ಸಿನಲ್ಲಿ ತಂದೆಯ ಭೀಕರ ಹತ್ಯೆಯನ್ನು ನೋಡಬೇಕಾಯಿತು.

ಅದಾದ ನಂತರ, ಪ್ರಿಯಾಂಕಾ ಗಾಂಧಿ ಮುಂದಿನ ಕೆಲವು ದಶಕಗಳವರೆಗೆ ರಾಜಕೀಯ ಜೀವನದಿಂದ ಹಿಂದೆ ಸರಿದರು. ಆ ಸಮಯದಲ್ಲಿ ಅವರು ಮನೋವಿಜ್ಞಾನ ಮತ್ತು ಬೌದ್ಧ ಅಧ್ಯಯನದಲ್ಲಿ ತೊಡಗಿಕೊಂಡರು. ಪದವಿಗಳನ್ನು ಪೂರ್ಣಗೊಳಿಸಿದರು. 1997ರಲ್ಲಿ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ವಿವಾಹವಾದರು.

ಹಾಗೆ ನೋಡಿದರೆ, ಪ್ರಿಯಾಂಕಾಗೆ ಅಜ್ಜಿಯ ವರ್ಚಸ್ಸಿದ್ದರೂ, ಅದನ್ನು ಹಲವರು ಖುದ್ದಾಗಿ ಹೇಳಿದ್ದರೂ ರಾಜಕಾರಣದತ್ತ ಮುಖ ಮಾಡಲು ಹೆದರಿದ್ದರು. ಮನೆ, ಪತಿ, ಮಕ್ಕಳ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡಿ, ರಾಜಕಾರಣವನ್ನು ತಾಯಿ ಮತ್ತು ಅಣ್ಣನಿಗೆ ಬಿಟ್ಟಿದ್ದರು. ಆದರೆ, 2004ರ ಲೋಕಸಭಾ ಚುನಾವಣೆಯಲ್ಲಿ, ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ಮತ್ತು ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಿದಾಗ, ಚುನಾವಣಾ ರ್‍ಯಾಲಿಗಳಲ್ಲಿ, ಬಹಿರಂಗ ಪ್ರಚಾರ ಭಾಷಣಗಳಲ್ಲಿ ಕಾಣಿಸಿಕೊಂಡಿದ್ದರು.

2008ರಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ, ತಮ್ಮ ತಂದೆ ರಾಜೀವ್ ಗಾಂಧಿ ಹತ್ಯೆಯ ಸಂಚುಕೋರ ನಳಿನಿ ಶ್ರೀಹರನ್ ಅವರನ್ನು ಭೇಟಿ ಮಾಡಲು ತಮಿಳುನಾಡಿನ ವೆಲ್ಲೂರಿನಲ್ಲಿರುವ ಜೈಲಿಗೆ ಹೋಗುವ ಮೂಲಕ ಪ್ರಿಯಾಂಕಾ ಸುದ್ದಿಯ ಕೇಂದ್ರಬಿಂದುವಾದರು. ರಾಜೀವ್ ಗಾಂಧಿ ಮತ್ತು ಇತರ 15 ಜನರನ್ನು ಹತ್ಯೆಗೈದ ಬಾಂಬ್ ದಾಳಿಯಲ್ಲಿ ನಳಿನಿ ಭಾಗಿಯಾಗಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಆಕೆಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ಅದಕ್ಕೆ ಕಾರಣ ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿಯವರು. ನಳಿನಿಯ ಮಗುವಿನ ಸಲುವಾಗಿ ಸೋನಿಯಾ ಮಧ್ಯಸ್ಥಿಕೆ ವಹಿಸಿದ್ದರು. ಅಮ್ಮನ ಮಾನವೀಯ ಮಾರ್ಗದಲ್ಲಿಯೇ ಪ್ರಿಯಾಂಕಾ ಕೂಡ ಹೆಜ್ಜೆ ಹಾಕಿ, ನಳಿನಿಯವರನ್ನು ಭೇಟಿ ಮಾಡಿದ್ದರು. ಸಂಚಲನ ಸೃಷ್ಟಿಸಿದ್ದರು. ಅಲ್ಲಿಂದ ಸಾರ್ವಜನಿಕ ಬದುಕಿಗೆ ತೆರೆದುಕೊಂಡರು.

2014ರಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷವನ್ನು ಭಾರತೀಯ ಜನತಾ ಪಕ್ಷ ಸೋಲಿಸಿತು. 543ರಲ್ಲಿ ಬಿಜೆಪಿ 282 ಸ್ಥಾನಗಳ ಗೆಲ್ಲುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೇರಿತು. ಮೋದಿ ಪ್ರಧಾನ ಮಂತ್ರಿಯಾದರು. ಕಾಂಗ್ರೆಸ್ ಪಕ್ಷಕ್ಕಾದ ಆ ಹೀನಾಯ ಸೋಲಿನ ನಂತರ, ಪ್ರಿಯಾಂಕಾ ಮನೆ-ಮಕ್ಕಳಿಂದ ಬಿಡಿಸಿಕೊಂಡು ಹೊರಬಂದರು. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಜನವರಿ 2019ರಲ್ಲಿ, ಸಾರ್ವತ್ರಿಕ ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮೊದಲು, ಪ್ರಿಯಾಂಕಾ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತರು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಆದರೆ ಪ್ರಿಯಾಂಕಾರ ಪ್ರಭಾವ ಮತ್ತು ವರ್ಚಸ್ಸು ಮತದಾರರ ಮೇಲೆ ಪರಿಣಾಮ ಬೀರಲು ಸಮಯ ಸಾಕಾಗಲಿಲ್ಲ. ಕೇವಲ 52 ಸ್ಥಾನಗಳನ್ನು ಗೆಲ್ಲುವ ಮೂಲಕ, ಕಾಂಗ್ರೆಸ್ ಪಾತಾಳಕ್ಕೆ ಕುಸಿಯಿತು. ಅಷ್ಟೇ ಅಲ್ಲ, ರಾಯ್ ಬರೇಲಿಯಲ್ಲಿ ಸೋನಿಯಾ ಗೆದ್ದರೆ, ಅಮೇಥಿಯಲ್ಲಿ ರಾಹುಲ್ ಸೋಲನುಭವಿಸಬೇಕಾಯಿತು.

ಇದನ್ನು ಓದಿದ್ದೀರಾ?: ಪತ್ರಕರ್ತ ಝುಬೈರ್ ವಿರುದ್ಧ ‘ದೇಶದ್ರೋಹ ಸಮಾನ’ ಪ್ರಕರಣ ದಾಖಲು; ಜೈಲಿಗೆ ತಳ್ಳುವ ಸಂಚು

ಅಷ್ಟೇ ಅಲ್ಲ, 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಮುಗ್ಗರಿಸಿತು. ಆ ಸೋಲಿನಿಂದ ಪ್ರಿಯಾಂಕಾ ಹೊಸ ರೀತಿಯ ರಾಜಕಾರಣಕ್ಕೆ ತೆರೆದುಕೊಳ್ಳುವತ್ತ ಮನಸ್ಸು ಮಾಡಿದರು. ಅದಕ್ಕೆ ಪೂರಕವಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ್ ಯಾತ್ರೆ ಕೈಗೊಂಡರು. ರಾಹುಲ್ ಯಾತ್ರೆಯೊಂದಿಗೆ ಹೆಜ್ಜೆ ಹಾಕಿದ ಪ್ರಿಯಾಂಕಾರಿಗೆ, ಆ ಯಾತ್ರೆ ಜನರನ್ನು ಮುಟ್ಟಿ ಮಾತನಾಡಿಸಲು, ಅವರ ದುಃಖ-ದುಮ್ಮಾನಗಳನ್ನು ಕಣ್ಣಾರೆ ಕಾಣಲು ಅನುವು ಮಾಡಿಕೊಟ್ಟಿತು. ಇದು ಕಾಂಗ್ರೆಸ್ ಪಕ್ಷವನ್ನು 2024ರ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಲು ನೆರವು ನೀಡಿತು. ಅಜ್ಜಿಯಂತೆ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವ ಪ್ರಿಯಾಂಕಾ ಸ್ಟಾರ್ ಪ್ರಚಾರಕಿಯಾದರು.

ಅದರ ಫಲವಾಗಿ, ಸೋತು ಸೊರಗಿದ್ದ ಕಾಂಗ್ರೆಸ್, 99 ಸ್ಥಾನಗಳನ್ನು ಗೆಲ್ಲುವ ಮೂಲಕ, ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸುವಂತಾಯಿತು. ಅದಕ್ಕಿಂತಲೂ ಹೆಚ್ಚಾಗಿ, ಮೂರನೇ ಬಾರಿಗೆ ಪ್ರಧಾನಿಯಾಗಲು ತುದಿಗಾಲ ಮೇಲೆ ನಿಂತಿದ್ದ, ಚಾರ್ ಸವ್ ಪಾರ್ ಎಂದು ಹೂಂಕರಿಸುತ್ತಿದ್ದ ಮೋದಿಯನ್ನು ಮತ್ತವರ ಪಕ್ಷವನ್ನು 242 ಸ್ಥಾನಗಳಿಗೆ ಇಳಿಸಿ, ಭಾರೀ ಆಘಾತವನ್ನುಂಟುಮಾಡಿತ್ತು. ಹಾಗೆಯೇ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಸುಧಾರಿಸಿಕೊಂಡಿತ್ತು.

2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಮತ್ತು ವಯನಾಡು- ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದರು. ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಕೊಡುವ ಮೂಲಕ, ಈಗ ಅದೇ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ಚುನಾವಣಾ ರಾಜಕಾರಣಕ್ಕಿಳಿದರು. ಕೇರಳದ ಜನರನ್ನು ಆತ್ಮೀಯವಾಗಿ ಅಪ್ಪಿಕೊಳ್ಳುವ ಮೂಲಕ ಮನ ಗೆದ್ದರು. ಅತ್ಯಧಿಕ ಮತಗಳಿಂದ ಜಯಶಾಲಿಯಾದರು. ಈಗ, ಕೇರಳಿಗರ ಸಂಸ್ಕೃತಿ ಸಾರುವ ಕಸುವಾ ಸೀರೆಯುಟ್ಟು ಸಂಸತ್ ಪ್ರವೇಶಿಸಿದ್ದಾರೆ. ಪ್ರವೇಶಿಸುತ್ತಲೇ ಇಂದಿರಾ ಗಾಂಧಿಯವರನ್ನೇ ಸಂಸತ್ತಿಗೆ ಕರೆದುಕೊಂಡು ಬಂದಿದ್ದಾರೆ.

GddiMWuXIAAb3sU

ಪ್ರಿಯಾಂಕಾರ ಪಾದಾರ್ಪಣೆಯಿಂದ ಆಡಳಿತ ಪಕ್ಷವಾದ ಬಿಜೆಪಿ ಎದ್ದು ಕುಳಿತಿದೆ. ನೆಹರೂ, ಇಂದಿರಾ ಮತ್ತು ರಾಜೀವ್ ಗಾಂಧಿಯವರ ವ್ಯಕ್ತಿತ್ವಹರಣಕ್ಕೆ ಪ್ರಯತ್ನಿಸಿ, ಆ ಹಾದಿಯಲ್ಲಿ ಸಫಲರಾಗಿರುವ ಸಂಘ ಪರಿವಾರ ಮತ್ತು ಬಿಜೆಪಿ, ಈಗ ಪ್ರಿಯಾಂಕಾರ ಮೇಲೆ ಮುಗಿಬೀಳಲು ಸಿದ್ಧವಾಗಿದೆ. ಅದರಲ್ಲೂ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಅವರ ವ್ಯವಹಾರವನ್ನು ಕೆದಕುತ್ತಿದೆ. ಈಗಾಗಲೇ ವಾದ್ರಾರನ್ನು ದರೋಡೆಕೋರನಂತೆ ಚಿತ್ರಿಸಿ, ರಾಡಿ ಎಬ್ಬಿಸಿ, ದೇಶದಾದ್ಯಂತ ಬಿತ್ತಿರುವ ಬಿಜೆಪಿ ಐಟಿ ಸೆಲ್, ಇನ್ನುಮುಂದೆ ಅದನ್ನು ಅತಿರೇಕಕ್ಕೆ ಕೊಂಡೊಯ್ಯಬಹುದು. ಅದಕ್ಕೆ ಮಾಧ್ಯಮಗಳೂ ಕೈ ಜೋಡಿಸಬಹುದು.

ಆದರೆ ಪ್ರಿಯಾಂಕಾಳ ಸರಳ ಸಜ್ಜನಿಕೆಯನ್ನು, ಅಪಾರ ಗಾಂಭೀರ್ಯ ಮತ್ತು ಅಪರಂಜಿಯಂಥ ಪರಿಶುದ್ಧ ವ್ಯಕ್ತಿತ್ವವನ್ನು ಕೊಂಚ ಕೂಡ ಕದಲಿಸುವುದು, ಸಂಘಿಗಳಿಗೆ ಸಾಧ್ಯವೇ ಇಲ್ಲ ಎಂಬುದಂತೂ ಸತ್ಯ. ಹಾಗೇನಾದರೂ ಸಂಘ ಪರಿವಾರ ಮತ್ತು ಬಿಜೆಪಿ, ಕುತಂತ್ರಗಳಿಗೆ ಕೈ ಹಾಕಿದರೆ, 2029ರ ಚುನಾವಣೆಯಲ್ಲಿ ಭಾರೀ ರಾಜಕೀಯ ಬದಲಾವಣೆಗೆ ಅವರೇ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. 

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರದುರ್ಗ ನಗರದ ಹೊರವಲಯದ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X