- ಬಿಜೆಪಿ ಸದಸ್ಯರಿಂದ ಮೊಂಡು ಹಠ ಬೇಡ ಎಂದ ಸಿದ್ದರಾಮಯ್ಯ
- ಸಿಎಂ ಮಾತಿಗೆ ಚೇಳು ಕಡಿದಂತೆ ಆಡಿದ ಬಿಜೆಪಿ ಸದಸ್ಯರು
16ನೇ ವಿಧಾನಸಭೆಯ ಎರಡನೇ ದಿನದ ಅಧಿವೇಶನ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಿದ ಬಿಜೆಪಿ ಸದಸ್ಯರು ಗಲಾಟೆ ನಡೆಸಿ, ಕೊನೆಗೆ ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರು ಸದನದ ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ಅವಧಿಗೆ ಅವಕಾಶ ಮಾಡಿಕೊಟ್ಟರು. ಶಾಸಕ ಶಿವಲಿಂಗೇಗೌಡ ಅವರು ಗೃಹ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದರು. ಗೃಹ ಸಚಿವರು ಉತ್ತರಿಸಲು ಎದ್ದು ನಿಂತರು.
ವಿರೋಧ ಪಕ್ಷದಲ್ಲಿ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, “ಸಭಾಧ್ಯಕ್ಷರೇ, ನಾವು ನಿಲುವಳಿ ಸೂಚನೆ ಕೊಟ್ಟಿದ್ದೇವೆ. ಅದನ್ನು ಮೊದಲು ಚರ್ಚಿಸಿ. ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ಸದನದ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ಅವಧಿಯನ್ನು ಎತ್ತಿಕೊಂಡಿರುವೆ. ನಂತರ ಶೂನ್ಯ ವೇಳೆ ಇರುತ್ತದೆ. ನಂತರ ನಿಮ್ಮ ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡುವೆ” ಎಂದರು.
ವಿ ಸುನಿಲ್‌ಕುಮಾರ್ ಮಧ್ಯಪ್ರವೇಶಿಸಿ, “ಸಭಾಧ್ಯಕ್ಷರು ತಮ್ಮ ಪೀಠಕ್ಕೆ ನ್ಯಾಯ ಕೊಡುತ್ತಿಲ್ಲ. ಮೊದಲು ವಿರೋಧ ಪಕ್ಷಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು. ಆರ್ ಅಶೋಕ, ಅಶ್ವತ್ಥ ನಾರಾಯಣ ಕೂಡ ತಮ್ಮ ನಾಯಕರ ಮಾತಿಗೆ ಧ್ವನಿಗೂಡಿಸಿದರು.
ಬಿಜೆಪಿ ಸದಸ್ಯರನ್ನು ಕುಟುಕಿದ ಸಿಎಂ, ಡಿಸಿಎಂ
ಡಿಸಿಎಂ ಡಿಕೆ ಶಿವಕುಮಾರ್ ಎದ್ದು ನಿಂತು, “ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ನೋಡಿ ಅವರ ಹೊಟ್ಟೆಯೊಳಗೆ ಸಂಕಟವಾಗುತ್ತಿದೆ. ಹೇಗಾದರೂ ಮಾಡಿ ಸದನ ನಡೆಯದಂತೆ ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ. ಅವರು ಕೇಳುವ ಪ್ರತಿ ಪ್ರಶ್ನೆಗೂ ನಾವು ಉತ್ತರಿಸುತ್ತೇವೆ” ಎಂದರು.
ಡಿಕೆ ಶಿವಕುಮಾರ್ ಮಾತಿನ ನಡುವೆ ಮಧ್ಯ ಪ್ರವೇಶಿಸಿದ ಅಶ್ವತ್ಥನಾರಾಯಣ, “ನಿಮ್ಮ ಮನೆಯಿಂದ ಹಣ ಹಾಕಿ ಎಂದು ನಾವು ಕೇಳುತ್ತಿಲ್ಲ. ಸರ್ಕಾರದ ಹಣ ಹಾಕಿ ಎಂದು ಕೇಳುತ್ತಿದ್ದೇವೆ” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, “ಸದನದ ನಿಯಮ 60 ಮೇರೆಗೆ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯ ಅವಧಿ ನಂತರ ನಿಲುವಳಿ ಸೂಚನೆ ಚರ್ಚೆಗೆ ಅವಕಾಶವಿದೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಇದೇ ಪ್ರಕಾರವೇ ನೀವು ನಡೆದುಕೊಂಡಿದ್ದೀರಿ. ಯಾವತ್ತೂ ನಮಗೆ ಸದನದ ಆರಂಭದಲ್ಲೇ ನಿಲುವಳಿ ಸೂಚನೆಗೆ ಅವಕಾಶ ಕೊಟ್ಟಿಲ್ಲ. ಈಗ ನೀವು ಸದನದ ನಿಯಮ ಬಿಟ್ಟು ಕೇಳಿದರೆ ಹೇಗೆ? ನಿಯಮಾವಳಿ ಬಿಟ್ಟು ಕಲಾಪ ಮಾಡಲು ಆಗಲ್ಲ” ಎಂದು ಪ್ರತಿಪಕ್ಷದ ನಾಯಕರಿಗೆ ಮನವರಿಕೆ ಮಾಡಿದರು.
“ನಿಮ್ಮ ಸರ್ಕಾರದ ಅವಧಿಯಲ್ಲಿ ನಿಲುವಳಿ ಸೂಚನೆಗೆ ಮೊದಲ ಅವಕಾಶಕೊಟ್ಟ ನಿದರ್ಶನವಿದ್ದರೆ ತೋರಿಸಿ. ನಾನು ಮಾತೇ ಆಡುವುದಿಲ್ಲ. ನಿಮಗೆ ಮಾತನಾಡಲು ಅವಕಾಶ ಕೊಟ್ಟು ಸುಮ್ಮನೇ ಕುಳಿತುಕೊಳ್ಳುವೆ. ನೀವು ಕೊಟ್ಟ ನಿಲುವಳಿ ಸೂಚನೆಯನ್ನು ಸಭಾಧ್ಯಕ್ಷರು ಚರ್ಚೆಗೆ ಎತ್ತಿಕೊಳ್ಳುತ್ತಾರೆ. ಆವಾಗ ನಾವು ಉತ್ತರಿಸುತ್ತೇವೆ. ಸುಮ್ಮನೇ ಮೊಂಡು ಹಠ ಮಾಡಬೇಡಿ. ನಿಮ್ಮ ನಡವಳಿಕೆ ಅನ್ ಪಾರ್ಲಿಮೆಂಟರಿ ಆಗುತ್ತದೆ. ನಿಯಮಾವಳಿ ಪ್ರಕಾವೇ ಸದನ ನಡೆಯಲಿ” ಎಂದು ಉತ್ತರಿಸಿದರು.
ಸಿದ್ದರಾಮಯ್ಯ ಅವರ ಮಾತಿನಲ್ಲಿ ಮೊಂಡಾಟ ಪದ ಕೇಳಿದ ತಕ್ಷಣ ಚೇಳು ಕಡಿದಂತೆ ಆಡಿದ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಸಭಾಧ್ಯಕ್ಷರು ಮಧ್ಯಪ್ರವೇಶಿಸಿ, “ಪ್ರತಿಪಕ್ಷದ ನಾಯಕರು ಅನುಚಿತವಾಗಿ ವರ್ತಿಸುವುದು ಸರಿಯಲ್ಲ. ರಾಜ್ಯದ ಜನತೆ ಸದನ ನೋಡುತ್ತಿದೆ. ನಿಯಮ ಬಿಟ್ಟು ನಾನು ಹೋಗುವುದಿಲ್ಲ. ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ನಂತರ ನಿಮ್ಮ ನಿಲುವಳಿ ಸೂಚನೆ ಕೈಗೆತ್ತಿಕೊಳ್ಳುವೆ. ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಹಾಗೇ ನೀವು ವರ್ತಿಸುತ್ತಿದ್ದೀರಿ. ಇದು ಸರಿಯಲ್ಲ” ಎಂದು ಹೇಳಿದರು.
ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಕೂಗಾಟ ಜೋರಾಯಿತು. “ಧಮ್ಮು ತಾಕತ್ತು ಇದ್ದರೆ ಮೊದಲು ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿ” ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಪರಸ್ಪರ ಕೂಗಾಟ ಹೆಚ್ಚಾಗುತ್ತಿದ್ದಂತೆ ಸಭಾಧ್ಯಕ್ಷರು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಅದೂ ಮಾಡದಿದ್ದರೆ ಅವರಿಗೆ ಅಲ್ಲಿ ಮತ್ತೆ ಏನು ಕೆಲಸ.